ಉಂಡವನೇ ಬಲ್ಲ ಕುಚ್ಚಲಕ್ಕಿ ಗಂಜಿಯ ರುಚಿ, ಸತ್ವ
Team Udayavani, Jul 25, 2021, 6:50 AM IST
ಬೇಸಾಯದ
ಹಂಗಿನರಮನೆಗಿಂತ ವಿಂಗಡದ ಗುಡಿಲೇಸು
ಭಂಗಬಟ್ಟುಂಬ ಬಿಸಿ ಅನ್ನಕ್ಕಿಂತಲೂ
ತಂಗುಳವೇ ಲೇಸು ಸರ್ವಜ್ಞ
ಇದು ಸ್ವಾಭಿಮಾನಿಗಳು ಬಾಯಿಪಾಠ ಮಾಡ ಬೇಕಾದ ಜೀವನತಣ್ತೀ. ಹಾಸಿಗೆ ಇದ್ದಷ್ಟೇ ಕಾಲು ಚಾಚು, ಇದ್ದುದರಲ್ಲೇ ತೃಪ್ತಿ ಪಡು ಎಂಬ ಗಾದೆಗಳನ್ನು ನಂಬಿ ಬದುಕಿದ ಮನುಜರಿಗೆ ಮೂಲಭೂತ ಆವಶ್ಯ ಕತೆಗಳಾಗಿ ತಲೆ ಮೇಲೊಂದು ಪುಟ್ಟ ಸೂರು, ಮೂರು ಹೊತ್ತು ಉಣ್ಣಲು ಇದ್ದರೆ ಸಾಕಿತ್ತು.
ಪರಶುರಾಮ ಸೃಷ್ಟಿ ಎಂದಿಗೂ ಫಲಭರಿತವೇ ಆಗಿತ್ತು. ಇಲ್ಲಿನ ಪ್ರಧಾನ ಬೆಳೆ ಭತ್ತ ಎಂಬುದು ಎಷ್ಟು ಸತ್ಯವೋ ಪ್ರಧಾನ ಆಹಾರ ಕುಚ್ಚಲಕ್ಕಿ ಅನ್ನ ಎಂಬುದು ಕೂಡ ಅಷ್ಟೇ ಸತ್ಯ. ಸಾಲುಸಾಲು ಗದ್ದೆಗಳು, ಅವುಗಳ ಒಂದು ತುದಿಯಲ್ಲಿ ಸಮಾನಾಂತರವಾಗಿ ಹರಿಯುವ ತೋಡುಗಳು, ಸಾಲು ತೆಂಗಿನಮರಗಳು, ಅಲ್ಲಲ್ಲಿ ಬಾಳೆಯ ತೋಟಗಳು, ಮಧ್ಯೆ ಮಧ್ಯೆ ತರಕಾರಿ ಗಿಡ ಬಳ್ಳಿಗಳು, ದ್ವಿದಳ ಧಾನ್ಯಗಳು, ವರ್ಷವಿಡೀ ನಡೆಯು ತ್ತಿದ್ದ ಕೃಷಿ ಚಟುವಟಿಕೆಗಳು ಮತ್ತು ಅವುಗಳೊಳಗೆ ಹಾಸುಹೊಕ್ಕಾದ ಸಂಗತಿಗಳು ಒಂದೇ ಎರಡೇ? ನೆನಪಾಯಿತಷ್ಟೇ!? ಹೌದು, ಖಂಡಿತಾ ಎಲ್ಲರೂ ಬಾಲ್ಯಕ್ಕೆ ಹೋಗುತ್ತೇವಲ್ಲವೆ? ಜೀರಸಾಲೆ, ಗಂಧಸಾಲೆ ಭತ್ತದ ತಳಿಗಳ ಘಮ್ಮೆನ್ನುವ ಪರಿಮಳ, ಹತ್ತಾರು ಕೃಷಿ ಸಲಕರಣೆಗಳು, ಅವುಗಳೊಂದಿಗೆ ಹುಟ್ಟಿಕೊಂಡ ಅಸಂಖ್ಯ ಜನಪದ ಹಾಡುಗಳು ಎಲ್ಲವೂ ಮಸುಕು ಮಸುಕಾಗಿ ಮನಸ್ಸಿಗಿಳಿದು ಉಲ್ಲಾಸ ನೀಡುತ್ತಿಲ್ಲವೆ?
ಕೆಲವು ದಶಕಗಳ ಹಿಂದೆ ಸರಿದರೆ ವಿಸ್ಮತಿಯಲ್ಲಿರುವ ಹಲವು ವಿಷಯಗಳು ಮುನ್ನೆಲೆಗೆ ಬರುತ್ತವೆ. ಬಹುತೇಕರ ಮನೆಯಲ್ಲಿ ಬೆಳಗ್ಗೆ ಇರುತ್ತಿದ್ದುದು ಗಂಜಿ ಊಟ. ಕುಚ್ಚಲಕ್ಕಿ ಬೆಂದು ಅನ್ನವಾಗಲು ಎರಡು ಮೂರು ಗಂಟೆಗಳೇ ಬೇಕು. ಬೆಳಗ್ಗೆಗೆ ಗಂಜಿಯಾದರೆ, ಅದರ ತಿಳಿಯನ್ನು ಬಗ್ಗಿಸಿ ಅನ್ನವನ್ನು ಮಧ್ಯಾಹ್ನ ಮತ್ತು ಸಂಜೆ ಉಣ್ಣಲಾಗುತ್ತಿತ್ತು. ಮನೆಯಲ್ಲೇ ಬೆಳೆಸಿದ ನಾನಾ ತರಕಾರಿಗಳ ನಾನಾ ನಮೂನೆಯ ಪದಾರ್ಥಗಳು ಜತೆಗಿರುತ್ತಿತ್ತು. ಅನ್ನ ಉಳಿದರೆ ಮಾರನೇ ದಿನ ಬೆಳಗ್ಗೆಯೂ ಬಳಕೆಯಾಗುತ್ತಿತ್ತು. ಅನ್ನವನ್ನು ಬಟ್ಟಲಿಗೆ ಹಾಕಿಕೊಂಡು ಬಿಸಾಡುವ ಕ್ರಮವಿರಲಿಲ್ಲ. ಹೆಚ್ಚೆಂದರೆ ದನಕರುಗಳಿಗೆ ಹಾಕಬಹುದಿತ್ತು. ಅದೂ ಕೂಡ ನಾವು ಉಂಡ ಎಂಜಲನ್ನು ಗೋವುಗಳಿಗೆ ಹಾಕಬಾರದು ಎಂದು ಹಿರಿಯರು ತಾಕೀತು ಮಾಡುತ್ತಿದ್ದರು. ಹಾಗಾಗಿ ಊಟದಲ್ಲೊಂದು ಶಿಸ್ತು ಇರುತ್ತಿತ್ತು.
ಹಬ್ಬ ಹರಿದಿನಗಳಿರುವಾಗ ಅಥವಾ ನೆಂಟರು ಬಂದಾಗಲೆಲ್ಲ ದೋಸೆ, ಇಡ್ಲಿ, ಕಡುಬು, ಶ್ಯಾಮಿಗೆ ಮೊದಲಾದ ತಿಂಡಿಗಳು, ಬೆಳ್ತಿಗೆ ಅಕ್ಕಿಯ ಅನ್ನ, ಟೊಮೆಟೊ ಸಾರು ಇತ್ಯಾದಿಗಳನ್ನೆಲ್ಲ ಮಾಡುತ್ತಿದ್ದರು. ಹಾಗಾಗಿ ಅವುಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತಿತ್ತು. ಆದರೂ ಅವೆಲ್ಲ ಒಂದೆರಡು ದಿನಕ್ಕಷ್ಟೆ. ಮತ್ತೆ ಮಾಮೂಲು. 2-3 ದಿನ ಬಿಡದೆ ಮದುವೆಯಂತಹ ಸಮಾರಂಭವಿದ್ದರೆ ಮೃಷ್ಟಾನ್ನ ಭೋಜನ ತಿಂದು ತಿಂದು ಸುಸ್ತಾಗುತ್ತದಲ್ಲ (ಹೊಟ್ಟೆ ಹಾಳಾಗುವುದೂ ಇದೆ), ಆಗೆಲ್ಲ ನಮ್ಮ ಕೈಹಿಡಿದು ನಡೆಸುವುದು ಈ ಗಂಜಿಯೇ. ತೀರಾ ಹುಷಾರಿಲ್ಲದಾಗ, ಮಾತ್ರೆಗಳನ್ನು ತಿಂದು ಬಾಯಿರುಚಿ ಇಲ್ಲದೆ ಊಟ ತಿಂಡಿ ಸೇರದೇ ಇದ್ದಾಗ ನೆನಪಿಗೆ ಬರುವುದು ಕೂಡ ಗಂಜಿಯೇ ತಾನೇ?
ಕರಾವಳಿ ಜಿಲ್ಲೆಗಳಲ್ಲಿನ ಧಗೆಗೆ ತಂಪಾದ ಗಂಜಿ ಊಟ ಹಿತಕರವಾದ ಅನುಭವವನ್ನು ಕೊಡುತ್ತದೆ. ಬೇಸಗೆಯ ರಣಬಿಸಿಲಿಗೆ ಉಪ್ಪು ಗಂಜಿಯೇ ಪರಮಾನ್ನವಾಗುವುದು ಸುಳ್ಳಲ್ಲ. ಹಳ್ಳಿಮನೆಗಳಲ್ಲಿ ದನಸಾಕಣೆ ಸಾಮಾನ್ಯದ ಸಂಗತಿ. ಹೀಗಿರುವಾಗ ಯಥೇತ್ಛವಾಗಿ ಬಳಸಲು ತುಪ್ಪ ಕೂಡ ಇದ್ದೇ ಇರುತ್ತದೆ. ಬಿಸಿ ಬಿಸಿ ಗಂಜಿಯನ್ನು ಸಾಕಷ್ಟು ತಿಳಿಯ ಜತೆ ಅಂಚಿರುವ ಹಿತ್ತಾಳೆಯ ಬಟ್ಟಲಿನಲ್ಲಿ ಹಾಕಿಕೊಂಡು ಕಂಚಿನಪಾತ್ರೆಯಿಂದ ತುಪ್ಪವನ್ನು ಸುರಿದುಕೊಂಡು ಉಪ್ಪನ್ನು ಸೇರಿಸಿ (ರುಚಿಗೆ ತಕ್ಕಷ್ಟು) ಅಪ್ಪೆ ಮಾವಿನ ಮಿಡಿ ಉಪ್ಪಿನಕಾಯಿಯನ್ನು ನೆಂಚಿಕೊಂಡು ಊಟ ಮಾಡಬೇಕು! ನೀರಿನಲ್ಲಿ ಹಾಕಿಟ್ಟ ಬೇಯಿಸಿದ ಮಾವಿನಕಾಯಿಯ ಬೆಳ್ಳುಳ್ಳಿ ಒಗ್ಗರಣೆಯ ಗೊಜ್ಜು ಕೂಡ ಅದಕ್ಕೆ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಇಡೀ ದಿನ ಅದರಲ್ಲೇ ಸುಧಾರಿಸಬಹುದು. ಸಂಜೆಯ ಹೊತ್ತು ಏನಾದರೂ ತಿನ್ನಬೇಕೆನಿಸಿದಾಗ ತಿನ್ನಲು ಏನೂ ಇಲ್ಲದಿದ್ದರೆ ಅಮ್ಮ ಬಟ್ಟಲಿಗೆ ಕುಚ್ಚಲಕ್ಕಿ ಅನ್ನ ಹಾಕಿ ನಾಲ್ಕಾರು ಚಮಚ ತೆಂಗಿನ ಎಣ್ಣೆ ಹಾಕಿ ಉಪ್ಪಿನಕಾಯಿ ರಸದೊಂದಿಗೆ ಕಲಸಿ ಉಂಡೆ ಮಾಡಿ ಒಬ್ಬೊಬ್ಬರ ಕೈಗೆ ಒಂದೊಂದು ತುತ್ತು ಹಾಕಿದ್ದನ್ನು ತಿನ್ನುತ್ತಿದ್ದ ಬಾಲ್ಯದ ಆ ನೆನಪುಗಳು ಇನ್ನೂ ಜೀವಂತ.
ಕೂಲಿ ಕೆಲಸಕ್ಕೆ ಬರುವವರು ಮುಂಚಿನ ದಿನದ ತಂಗೂಳನ್ನೇ (ತಣ್ಣನೆಯ ಕೂಳು)ತಿಂದು ಬರುವುದು. ಅಗ ಮಧ್ಯಾಹ್ನದವರೆಗೆ ಹೊಟ್ಟೆ ಗಟ್ಟಿ ಇರುತ್ತದೆ. ಅದಕ್ಕೆ ಉಪ್ಪಿನಹೊಡಿ ಎಂಬ ಹೆಸರಿರುವ ಉಪ್ಪು, ಮೆಣಸು, ಹುಣಸೆಹಣ್ಣು ಮುಂತಾದವುಗಳನ್ನು ಕುಟ್ಟಿ ತಯಾರಿಸಿದ ಹುಡಿ ಅಥವಾ ಗಟ್ಟಿ ಮೊಸರನ್ನು ಕಲಸಿ ತಿಂದರೂ ಹೊಟ್ಟೆ ಗಟ್ಟಿಯಿರುತ್ತದೆ ಎಂಬುದು ಹಿರಿಯರ ಅಂಬೋಣ. ಮುಂಚಿನ ದಿನದ ಅನ್ನ ಉಳಿದರೆ ಚುಂಯಿ ಅನ್ನ ಮಾಡಲಾಗುತ್ತದೆ. ಅದಕ್ಕೆ ಬೆಳ್ಳುಳ್ಳಿ ಅನ್ನ, ಒಗ್ಗರಣೆ ಅನ್ನ ಎನ್ನಲಾಗುತ್ತದೆ. ನೀರಿನಲ್ಲಿ ಹಾಕಿಟ್ಟ ಅನ್ನವನ್ನು ಹಿಂಡಿ ತೆಗೆದು ಬೆಳ್ಳುಳ್ಳಿ, ಉದ್ದಿನ ಬೇಳೆ ಉಪ್ಪು, ಮೆಣಸು, ಸಾಸಿವೆ, ಕರಿಬೇವಿನ ಸೊಪ್ಪು ಎಲ್ಲ ಹಾಕಿ ಮಾಡಿದ ಒಗ್ಗರಣೆ ಹಾಕಿದರಾಯಿತು. ಕೆಂಪು ಮೆಣಸಿನ ಬದಲಿಗೆ ಸಂಡಿಗೆಮೆಣಸು ಹಾಕಿದರೆ ರುಚಿ ಹೆಚ್ಚು.
ಮನೆಯಲ್ಲೇ ಬೆಳೆಯುತ್ತಿದ್ದ ಬಗೆಬಗೆಯ ತಳಿಗಳ ಭತ್ತವನ್ನು ದೊಡ್ಡ ಒಲೆಯ ಮೇಲೆ ತಾಮ್ರದ ಹರಿಯಲ್ಲಿ(ಹಂಡೆ) ಹದವಾಗಿ ಬೇಯಿಸಿದಾಗ ಬರುವ ಪರಿಮಳ ಮೊದಲ ಮಳೆ ಬಿದ್ದಾಗ ಮಣ್ಣಿನಿಂದ ಮೇಲೇಳುವ ಪರಿಮಳದಷ್ಟೇ ಸೊಗಸಾಗಿರುತ್ತದೆ. ಅನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಿ ಒರಳಿನಲ್ಲಿ ಹಾಕಿ ಕುಟ್ಟಬೇಕು (ಒರಳು ಎಂದರೆ ಒನಕೆಯಿಂದ ಭತ್ತವನ್ನು ಕುಟ್ಟಲು ಇರುವ ಕಲ್ಲಿನ ಗುಳಿ) ಹೆಚ್ಚು ಕುಟ್ಟಿದರೆ ಹುಡಿಯಾಗುವುದರಿಂದ ಅದನ್ನು ಹದವಾಗಿ ಕುಟ್ಟಬೇಕು. ಒಂದೇ ಒರಳಿನಲ್ಲಿ ಮೂರು ನಾಲ್ಕು ಜನ ಹೆಂಗಳೆಯರು ಒಟ್ಟಾಗಿ ಭತ್ತ ಕುಟ್ಟುವುದನ್ನು ನೋಡುವುದೇ ಸೊಗಸು. ಆಗೆಲ್ಲ ಜನಪದ ಹಾಡು, ತ್ರಿಪದಿಗಳನ್ನು ಹಾಡುತ್ತಾರೆ. “ಭತ್ತ ತೊಳು ಹಾಡು’ ಎಂದು ಅವುಗಳನ್ನು ಕರೆಯಲಾಗಿದೆ. ಬರಬರತ್ತಾ ಮನೆಯಲ್ಲೇ ಕೊಪ್ಪರಿಗೆಗಟ್ಟಲೆ ಭತ್ತ ಬೇಯಿಸುತ್ತಿದ್ದ ಪದ್ಧತಿ ಬದಿಗೆ ಸರಿಯಿತಲ್ಲದೆ, ಜನಪದ ಸಾಹಿತ್ಯ ಸಂಪತ್ತು ಮರೆಯಾಯಿತು. ಎರಡು ಮೂರು ಊರಿಗೊಂದರಂತೆ ಅಕ್ಕಿಯ ಮಿಲ್ಲುಗಳು ಹುಟ್ಟಿಕೊಂಡ ಮೇಲೆ ಭತ್ತ ಅಕ್ಕಿಯಾಗುವ ಪ್ರಕ್ರಿಯೆ ಸುಲಭವಾಯಿತು.
ಎಂತಹ ಮಳೆಗಾಲದಲ್ಲೂ ಮನೆಯಂಗಳದಲ್ಲಿ ಕಟ್ಟುತ್ತಿದ್ದ ತಿರಿಯು (ಭತ್ತದ ಹುಲ್ಲಿನಿಂದ ಕಟ್ಟುವ ಕಣಜ) ಒಂದು ಹನಿ ನೀರೂ ಒಳಗಿಳಿಯದಂತೆ ತಡೆಯಬಲ್ಲದು! ವರ್ಷವಿಡೀ ಭತ್ತವನ್ನು ಹಾಗೆ ರಕ್ಷಿಸಲು ಸಾಧ್ಯ. ಇದಲ್ಲದೆ ಭತ್ತ, ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು “ಮುಡಿ’ ಕಟ್ಟಿ ಇಡುವ ಕ್ರಮ ಈಗಲೂ ಇದೆ ತಾನೆ? ಅಲ್ಲದೆ, ಹತ್ತು ಮುಡಿ, ಇಪ್ಪತ್ತು ಮುಡಿ ಹಿಡಿಯುವಷ್ಟು ದೊಡ್ಡ ಮರದ ಪತ್ತಾಸುಗಳನ್ನು ಮನೆ ಮನೆಯಲ್ಲೂ ಕಾಣಬಹುದು. ಅಕ್ಕಿ ಹಳೆಯದಾದಷ್ಟು ಗಟ್ಟಿಯಾಗುತ್ತದೆ ಎಂಬುದು ಕೆಲವು ಹಿರಿಯರ ಅಂಬೋಣ. ಆದರೂ ಒಂದೊಮ್ಮೆ ಅಕ್ಕಿಯಲ್ಲಿ ಹುಳು ಅಥವಾ ಕುಟ್ಟೆ ಆಗುವುದುಂಟು. (ತುಂಬಾ ಹಳೆ ಅಕ್ಕಿಯಾದರೆ) ಆಗ ಅದನ್ನು ಬಿಸಿಲಲ್ಲಿ ಒಣಗಿಸಿ ಗೆರಸೆಯಲ್ಲಿ ಗೇರಿ ಶುಚಿಗೊಳಿಸಿ ಬಳಸಿಕೊಳ್ಳಬಹುದು. ಭತ್ತವನ್ನು ಒಂದೆರಡು ವರ್ಷಗಳ ಕಾಲ ಬೀಜಕ್ಕೆಂದು ಕಾದಿರಿಸುವುದೂ ಇದೆ. ಹೀಗಾಗಿ ಭತ್ತ, ಅಕ್ಕಿಗೆ ಕನಿಷ್ಠ ಮೂರು ವರ್ಷಗಳ ಬಾಳು ಇದ್ದೇ ಇದೆ. ಕೃಷಿ ಕೆಲಸಕ್ಕೆ ಬರುವ ಕೆಲಸದವರಿಗೆ ಭತ್ತ ಅಥವಾ ಅಕ್ಕಿಯನ್ನೇ ಕೊಚ್ಚು ಕೊಡುವ ಕ್ರಮ ಇತ್ತು. (ಕೂಲಿ ಕೊಡುವುದು). ಅಕ್ಕಿಯ ಎರಡು ಪಟ್ಟು ಭತ್ತ ಕೊಡಬೇಕು. ಅಂದರೆ ಅಕ್ಕಿಯಾದರೆ ಒಂದು ಸೇರು, ಭತ್ತವಾದರೆ ಎರಡು ಸೇರು. ಈಗೀಗ ಎಲ್ಲದಕ್ಕೂ ಹಣವೇ ಮಾನದಂಡವಾಗಿದೆ.
ಆದರೆ ಈಗೀಗ ಎಲ್ಲವೂ ಸರಿಯಾಗಿಲ್ಲ. ಕೃಷಿಕರು ಭತ್ತ ಬೆಳೆಸುವುದನ್ನು ಮರೆತಿದ್ದಾರೆ. ಕೃಷಿ ಸಲಕರಣೆಗಳು ಅಟ್ಟ ಏರಿ ಕುಳಿತಿವೆ. ಸ್ವಾವಲಂಬಿಯಾಗಿದ್ದ ಕೃಷಿಕನ ಮಕ್ಕಳು ಕಂಪೆನಿಯ ಕೂಲಿಯಾಳುಗಳಾಗಿದ್ದಾರೆ. ಭತ್ತ ಬೆಳೆಯುವುದು ಗಿಡದಲ್ಲೋ, ಮರದಲ್ಲೋ ಎಂಬಂತಹ ಪ್ರಶ್ನೆಗಳನ್ನು ಮಕ್ಕಳಿಗೆ ಪರೀಕ್ಷೆಗಳಲ್ಲಿ ಕೇಳಲಾಗುತ್ತಿವೆ. ಸಿಟಿಯಲ್ಲಿ ಬೆಳೆದ ಮೊಮ್ಮಕ್ಕಳು ಅಜ್ಜನೂರಿನ ಕಪ್ಪು ಅನ್ನವನ್ನು(ಕುಚ್ಚಲಕ್ಕಿ) ತಿರಸ್ಕರಿಸು ತ್ತಿದ್ದಾರೆ. ಅವರಿಗೆ ಮಲ್ಲಿಗೆಯಂತಹ ಬಿಳಿ ಬಣ್ಣದ ಬೆಳ್ತಿಗೆ ಅನ್ನ ಇಲ್ಲದಿದ್ದರೆ ಇನ್ನೊಮ್ಮೆ ಹಳ್ಳಿಗೆ ಕಾಲಿಡುವುದಿಲ್ಲ ಎಂಬ ಬೆದರಿಕೆ ಬರುತ್ತದೆ! ಇನ್ನು ಗಂಜಿ ತಿನ್ನು ಎಂದರೆ ಇಲ್ಲಿ ಯಾರೂ ರೋಗಿಗಳಿಲ್ಲ ಎಂಬ ಉತ್ತರ ಬರಬಹುದು. ಬೆಳ್ತಿಗೆ ಅನ್ನ ಸರಿಯಾಗಿ ಬೇಯದಿದ್ದರೂ ಅದೇ ಆಗಬೇಕು.
ಏನೇ ಆಗಲಿ ಸರಕಾರ ಕೃಷಿಕರಿಗೆ ಇನ್ನೊಂದಷ್ಟು ಸೌಲಭ್ಯಗಳನ್ನು ನೀಡಿ ಆಹಾರಧಾನ್ಯಗಳ ಉತ್ಪಾದನೆ ಯನ್ನು ಹೆಚ್ಚಿಸಲೇಬೇಕಾಗಿದೆ. ಈಗೀಗ ಕೊರೊನಾ ಕಾರಣದಿಂದ ಯುವ ತಲೆಮಾರು ಮರಳಿ ಮಣ್ಣಿಗೆ ಅಡಿಯಿಡುತ್ತಿದ್ದಾರೆ. ಅವರಿಗೆ ಕೃಷಿಯ ಕುರಿತು ಮಾಹಿತಿಯನ್ನೂ, ಪ್ರೋತ್ಸಾಹವನ್ನೂ ಕೊಡಬೇಕಾ ಗಿದೆ. ಗಂಜಿ ಕುಡಿದಾದರೂ ಬದುಕಬಹುದು, ಹಸಿವಿ ನಿಂದ ಸಾಯುವ ಸ್ಥಿತಿ ಯಾರಿಗೂ ಬರಬಾರದು. ಯಾಕೆಂದರೆ ಹಸಿವಾದಾಗ ಹಣವನ್ನು ತಿಂದು ಬದುಕಲು ಸಾಧ್ಯವಿಲ್ಲವಲ್ಲ!
– ಡಾ| ಗೀತಾ ಕುಮಾರಿ ಟಿ., ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.