ಮುಂಗಾರಿನಲ್ಲೇ ಕೆರೆಗಳಿಗೆ ಜೀವ ಕಳೆ
ಮತ್ತೆ ಮಳೆಯಾದರೆ ಇನ್ನುಳಿದ ಕೆರೆಗಳು ಸಹ ತುಂಬಿಕೊಳ್ಳಲಿವೆ.
Team Udayavani, Jul 27, 2021, 6:50 PM IST
ಬೀದರ: ಬಯಲುಸೀಮೆ ಪ್ರದೇಶ ಬೀದರನಲ್ಲಿ ಅಂತರ್ಜಲ ವೃದ್ಧಿಗೆ ಜೀವನಾಡಿ ಆಗಿರುವ ಕೆರೆಗಳಿಗೆ ಮುಂಗಾರು ಋತುವಿನಲ್ಲೇ ಜೀವ ಕಳೆ ಬಂದಿದೆ. ಜಿಲ್ಲೆಯ 124 ಕೆರೆಗಳ ಪೈಕಿ ಈಗಾಗಲೇ 38 ಕೆರೆಗಳು ಮೈದುಂಬಿಕೊಂಡು ಕಂಗೊಳಿಸುತ್ತಿರುವುದು ರೈತ ಸಮುದಾಯಕ್ಕೆ ನೆಮ್ಮದಿ ತಂದಿದೆ.
ಮುಂಗಾರು ಮಳೆ ಈ ಬಾರಿ ಗಡಿ ನಾಡು ಬೀದರನ ಗ್ರಾಮೀಣ ಪ್ರದೇಶದ ಜನರಿಗೆ ಅದರಲ್ಲೂ ಅನ್ನದಾತರಲ್ಲಿ ಸಂತಸ ಹೆಚ್ಚಿಸಿದೆ. ಮಳೆ ಆರ್ಭಟದಿಂದ ಕೆಲವೆಡೆ ಬೆಳೆಗಳು ನೀರು ಪಾಲಾಗಿದ್ದರೂ ಬರುವ ದಿನಗಳಲ್ಲಿ ಜೀವ ಜಲದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಅತ್ತ ಜಿಲ್ಲೆಯ ಏಕೈಕ ಕಾರಂಜಾ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಬಿಟ್ಟಿದ್ದರೆ ಇತ್ತ ಕೆರೆಗಳು ಸಹ ಮೈದುಂಬಿಕೊಳ್ಳುತ್ತಿರುವುದು ಗ್ರಾಮಗಳ ಚಿತ್ರಣ ಬದಲಾಯಿಸಿವೆ. ಬತ್ತಿ ಹೋಗಿದ್ದ ಕೊಳವೆಬಾವಿ ಮತ್ತು ಬಾವಿಗಳ ಅಂತರ್ಜಲಕ್ಕೆ ಜೀವ ನೀಡುವುದರ ಜತೆಗೆ ಮುಂದೆ ಬೆಳೆಗಳಿಗೆ ನೀರು, ಜನ- ಜಾನುವಾರುಗಳ ದಾಹ ನೀಗಿಸಲಿವೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಡಿ ಬೀದರ ಜಿಲ್ಲೆಯಲ್ಲಿ 124 ಕೆರೆಗಳಿದ್ದು, 2864 ಎಂಸಿಎಫ್‌ಟಿ ಗರಿಷ್ಠ ನೀರಿನ ಸಾಮರ್ಥ್ಯ (21,064 ಹೇಕ್ಟರ್) ವನ್ನು ಹೊಂದಿವೆ. ಇದರಲ್ಲಿ ಜುಲೈ 24ರವರೆಗೆ 38 ಕೆರೆಗಳು ನೀರಿನಿಂದ ಸಂಪೂರ್ಣ ಭರ್ತಿಯಾಗಿ ಕಣ್ಮನ ಸೆಳೆಯುತ್ತಿವೆ. ಔರಾದ ತಾಲೂಕಿನ 16 ಕೆರೆಗಳ ಪೈಕಿ 14 ಕೆರೆ, ಕಮಲನಗರದ 19 ಪೈಕಿ 7 ಕೆರೆ, ಬೀದರನ 34 ಪೈಕಿ 5 ಕೆರೆ, ಬಸವಕಲ್ಯಾಣದ 21 ಪೈಕಿ 7 ಕೆರೆ, ಹುಲಸೂರನ 2 ಪೈಕಿ 2 ಕೆರೆ ಮತ್ತು ಭಾಲ್ಕಿ ತಾಲೂಕಿನ 17 ಪೈಕಿ 3 ಕೆರೆಗಳು ಭರ್ತಿಯಾಗಿವೆ.
ಆದರೆ ಹುಮನಾಬಾದನ 7 ಮತ್ತು ಚಿಟಗುಪ್ಪದ 8 ಕೆರೆಗಳ ಪೈಕಿ ಒಂದೂ ಕೆರೆ ಸಹ ಪೂರ್ಣ ತುಂಬಿಲ್ಲ. ಇನ್ನೂ ಜಿಲ್ಲೆಯ ಒಟ್ಟು ಕೆರೆಗಳ ಪೈಕಿ ಶೇ.51ರಿಂದ 99ರವೆಗೆ 35 ಕೆರೆ, ಶೇ. 31ರಿಂದ 50ರವರೆಗೆ 32 ಕೆರೆ ಮತ್ತು ಶೇ. 30ರವರೆಗೆ 19 ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಹಿನ್ನೆಲೆ ಕೆರೆಗಳ ಸ್ಥಿತಿ ಉತ್ತಮವಾಗಿದ್ದು, ಇದರಿಂದ ಅನೇಕ ಗ್ರಾಮಗಳ ನೀರಿನ ಸಮಸ್ಯೆ ನಿವಾರಣೆ ಮಾಡುವುದರ ಜತೆಗೆ ಜಾನುವಾರುಗಳಿಗೆ ಸಹ ಸಾಕಷ್ಟು ಸಹಾಯವಾಗಿದೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಅಂತ್ಯಕ್ಕೆ ಇಲ್ಲವೇ ನಂತರ ಉತ್ತಮ ಮಳೆಯಾದರೆ ಕೆರೆಗಳು ತುಂಬಿಕೊಳ್ಳುತ್ತಿದ್ದವು. ಆದರೆ, ಈ ವರ್ಷ ಉತ್ತಮ ಮಾನ್ಸೂನ್ ಇದ್ದು, ಮುಂಗಾರು ಋತುವಿನಲ್ಲೇ ಮಳೆ ಆರ್ಭಟದಿಂದ ಭಾರಿ ಪ್ರಮಾಣದಲ್ಲಿ ಕೆರೆ-ಕಟ್ಟೆಗಳಿಗೆ ನೀರು ಹರಿದು ಬಂದಿವೆ. ಈಗಾಗಲೇ ಜಿಲ್ಲೆಯ ಶೇ.35ರಷ್ಟು ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಮತ್ತೆ ಮಳೆಯಾದರೆ ಇನ್ನುಳಿದ ಕೆರೆಗಳು ಸಹ ತುಂಬಿಕೊಳ್ಳಲಿವೆ. ಅತಿವೃಷ್ಟಿಯಿಂದ ಕೃಷಿಕರು ಬೆಳೆ ಕಳೆದುಕೊಂಡರು ಕೆರೆಗಳ ಭರ್ತಿ ನೆಮ್ಮದಿ ತಂದಿದೆ.
ಕಳೆದೆರಡು ವರ್ಷಗಳಿಂದ ಉತ್ತಮ ಮಳೆಯಿಂದಾಗಿ ಬೀದರ ಜಿಲ್ಲೆಯ ಕೆರೆಗಳು ಉತ್ತಮ ಸ್ಥಿತಿಯಲ್ಲಿವೆ. ಈ ವರ್ಷದ ಮುಂಗಾರು ಋತುವಿನಲ್ಲೇ 124 ಕೆರೆಗಳ ಪೈಕಿ 38 ಕೆರೆಗಳು ಈಗಾಗಲೇ ಸಂಪೂರ್ಣ ಭರ್ತಿಯಾಗಿವೆ. ಶೇ.51ರಿಂದ 99ರವೆಗೆ 35 ಕೆರೆಗಳು ತುಂಬಿವೆ. ಅಂತರ್ಜಲ ವೃದ್ಧಿ ಜತೆಗೆ ಮುಂದೆ ಬೆಳೆಗಳಿಗೆ ನೀರು, ಜನ- ಜಾನುವಾರುಗಳ ದಾಹ ನೀಗಿಸಲು ಸಹಕಾರಿಯಾಗಲಿದೆ.
ಸುರೇಶ ಮೇದಾ, ಇಇ,
ಸಣ್ಣ ನೀರಾವರಿ ಇಲಾಖೆ, ಬೀದರ.
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.