ಬಿಎಸ್‌ವೈ ಚಾಮರಾಜನಗರಕ್ಕೆ ಬರದಿದ್ದರೂ ಅಧಿಕಾರ ಪತನ!
ಕೆಲವು ರಾಜಕಾರಣಿಗಳು ವಿಶ್ವಾಸ ಇರಿಸಿರುವುದು ದುರಂತ ಎಂದು ಜಿಲ್ಲೆಯ ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.
Team Udayavani, Jul 29, 2021, 6:30 PM IST
ಚಾಮರಾಜನಗರ: ಚಾಮರಾಜನಗರ ಪಟ್ಟಣಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ 6 ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಮತ್ತೂಮ್ಮೆ ಸುಳ್ಳಾಗಿದೆ. ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ .ಯಡಿಯೂರಪ್ಪ ಒಮ್ಮೆಯೂ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಆದರೂ ಅವರು ಅಧಿಕಾರ ಕಳೆದುಕೊಂಡಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 12 ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಆದರೆ, ಅವರು ಪೂರ್ಣ ಅವಧಿ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದರು.
ಜಾಲತಾಣಗಳಲ್ಲಿ ವೈರಲ್: ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ, ಜಿಲ್ಲೆಯ ಜನತೆ ಇಂಥದೊಂದು ಪ್ರಶ್ನೆ ಮಾಡುತ್ತಿದ್ದಾರೆ. ಮೂಢನಂಬಿಕೆ ಬಿತ್ತುವವರು ಇದನ್ನು ಅರ್ಥ ಮಾಡಿಕೊಳ್ಳಿ. ಚಾಮರಾಜನಗರಕ್ಕೆ ಕಳಂಕ ತರಬೇಡಿ ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹರಿಯಬಿಟ್ಟಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡು ಅವಧಿ ತುಂಬಾ ಮೊಟಕಾಗಿತ್ತು. ಇನ್ನುಳಿದ ಎರಡು ಅವಧಿ (2008-2011 ಹಾಗೂ 2019-21)ಯಲ್ಲಿ ತಲಾ ಎರಡು ವರ್ಷ ಅಧಿಕಾರದಲ್ಲಿದ್ದರು. ಈ ಎರಡು ಅವಧಿಗಳಲ್ಲಿ ಚಾಮರಾಜನಗರ ಪಟ್ಟಣಕ್ಕೆ ಬರುವ ಸಂದರ್ಭ ಒದಗಿದರೂ ಅವರು ಬಾರದೇ ದೂರ ಉಳಿದರು.
ವಿಪರ್ಯಾಸ: 2008 ರಿಂದ 2011ರವರೆಗೆ ಮುಖ್ಯಮಂತ್ರಿಯಾಗಿ ದ್ದಾಗ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ, ಗುಂಡ್ಲುಪೇಟೆ, ಸಂತೆಮರಹಳ್ಳಿ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿದರೇ ಹೊರತು ಜಿಲ್ಲಾ ಕೇಂದ್ರಕ್ಕೆ ಬರಲಿಲ್ಲ. ಆ ಅವಧಿಯಲ್ಲಿ ಯಡಿಯೂರಪ್ಪ ಸಂಪುಟದ ಹಲವು ಸಚಿವರಿಗೂ ಈ ಮೂಢನಂಬಿಕೆ ಕಾಡ ತೊಡಗಿ ಅವರೂ ಬರಲಿಲ್ಲ. ಶೋಭಾ ಕರಂದ್ಲಾಜೆ ಅವರು ಜಿಲ್ಲೆಯ ಇತರ ಸ್ಥಳಗಳಿಗೆ ಬಂದರು. ಜಿಲ್ಲಾ ಕೇಂದ್ರಕ್ಕೆ ಬರಲಿಲ್ಲ. ಸಿ.ಎಚ್. ವಿಜಯಶಂಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿ, ಜಿಲ್ಲಾ ಕೇಂದ್ರಕ್ಕೆ ಬಾರದೇ ಹೋದದ್ದು ಮಾತ್ರ ವಿಪರ್ಯಾಸದ ಸಂಗತಿಯಾಗಿತ್ತು!. ಇನ್ನು ಬಿಎಸ್‌ವೈ 2019ರಿಂದ ಮೊನ್ನೆಯವರೆಗೆ ಮುಖ್ಯಮಂತ್ರಿಯಾಗಿದ್ದ2 ವರ್ಷಗಳಅವಧಿಯಲ್ಲಿ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಮಾತ್ರ ಬಂದಿದ್ದರು.
ಚಾಮರಾಜನಗರ ಪಟ್ಟಣದತ್ತ ಸುಳಿಯಲೇ ಇಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ತಮ್ಮ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯನ್ನು ನಂಬಿ ಬಿಎಸ್‌ವೈ ಚಾಮರಾಜನಗರ ಪಟ್ಟಣದಿಂದ ದೂರ ಉಳಿದರು. ಆದರೂ, ಅವರು ಅವಧಿಗೆ ಮುಂಚೆಯೇ ಅಧಿಕಾರಕಳೆದುಕೊಂಡಿದ್ದಾರೆ.
ನಾಗರಿಕರ ಬೇಸರ: ಇದಕ್ಕೆ ವ್ಯತಿರಿಕ್ತವಾಗಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬರೋಬ್ಬರಿ 12 ಬಾರಿ ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿ ಜಿಲ್ಲಾಕೇಂದ್ರದಲ್ಲಿ ಹಲವಾರು ಅಭಿವೃದ್ಧಿಕೆಲಸ ಮಾಡಿಸಿದರು. ಆದರೂ, ಅವರು ಮುಖ್ಯಮಂತ್ರಿಯಾಗಿ 5 ವರ್ಷ ಆಡಳಿತ ನಡೆಸಿದರು. ದೇವರಾಜ ಅರಸು ಅವರನ್ನು ಬಿಟ್ಟರೆ, ಅಧಿಕಾರಾವಧಿ ಪೂರ್ಣಗೊಳಿಸಿದ ಇನ್ನೋರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ. ಹೀಗಿರುವಾಗ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯಲ್ಲಿ ಕೆಲವು ರಾಜಕಾರಣಿಗಳು ವಿಶ್ವಾಸ ಇರಿಸಿರುವುದು ದುರಂತ ಎಂದು ಜಿಲ್ಲೆಯ ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.
ಮೂಢನಂಬಿಕೆ ಬಲವಾಗಿ ಬೇರೂರಿದ್ದು ಹೀಗೆ…
ಚಾಮರಾಜನಗರ ಪಟ್ಟಣಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ6 ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯನ್ನು ಬಿತ್ತಲಾಯಿತು . ಮುಖ್ಯಮಂತ್ರಿಗಳಾಗಿದ್ದ ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ವೀರೇಂದ್ರಪಾಟೀಲ್ ಚಾಮರಾಜನಗರಕ್ಕೆ ಭೇಟಿ ನೀಡಿದ ನಂತರ ಆರೇ ತಿಂಗಳಲ್ಲಿ ಅಧಿಕಾರಕಳೆದುಕೊಂಡರು ಎಂದುಕೆಲವರು ವದಂತಿ ಹಬ್ಬಿಸಿದರು. ಈ ವದಂತಿಯನ್ನೇ ನಂಬಿದ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ, ವೀರಪ್ಪಮೊಯ್ಲಿ, ಎಚ್.ಡಿ. ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರಂಸಿಂಗ್ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಹೀಗಾಗಿ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಹೊಸ ಮೂಢನಂಬಿಕೆಯೇ ಸೃಷ್ಟಿಯಾಗಿ ಬಲವಾಗಿ ಬೇರೂರಿತು. ಈ ಮೂಢನಂಬಿಕೆಯನ್ನು ಮೊದಲು ಮುರಿದವರು ಎಚ್.ಡಿ.ಕುಮಾರಸ್ವಾಮಿ .2006-07ರಲ್ಲಿ ಸಿಎಂ ಆಗಿದ್ದಾಗ20 ತಿಂಗಳ ತಮ್ಮ ಅಧಿಕಾರಾವಧಿ ಮುಗಿಸುವ ಹಂತದಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದರು.16 ವರ್ಷಗಳ ನಂತರ ಚಾಮರಾಜನಗರಕ್ಕೆ ಭೇಟಿ ನೀಡಿದ ಮೊದಲ ಸಿಎಂ ಎಂಬ ಶ್ರೇಯ ಅವರದಾಯಿತು. ಅದಾದ ಬಳಿಕ2013 ರಲ್ಲಿ
ವಿಧಾನಸಭಾ ಚುನಾವಣೆಗೆಕೆಲವೇ ದಿನಗಳಿರುವಾಗ ಜಗದೀಶ್ ಶೆಟ್ಟರು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದ್ದರು. 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತಾವು ಸಿಎಂ ಆದಕೆಲವೇ ತಿಂಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದರು. ಅದಾದ ಬಳಿಕ ಪಟ್ಟಣಕ್ಕೆ12 ಬಾರಿ, ಜಿಲ್ಲೆಗೆ20ಕ್ಕೂ ಹೆಚ್ಚು ಬಾರಿ ಭೇಟಿ ನೀಡಿ ಹಲವಾರು ಅಭಿವೃದ್ಧಿಕಾರ್ಯಗಳ ಕೊಡುಗೆ ನೀಡಿದರು.
ವೈಜ್ಞಾನಿಕವಾಗಿ ಚಿಂತನೆ ನಡೆಸಿ
ಸಾಮಾನ್ಯ ನಾಗರಿಕನೂ ವೈಜ್ಞಾನಿಕವಾಗಿ ಚಿಂತಿಸಬೇಕು. ಮೂಢನಂಬಿಕೆಗಳಲ್ಲಿ ವಿಶ್ವಾಸ ಇಡಬಾರದು. ಇಡೀ ರಾಜ್ಯವನ್ನೂ, ರಾಜ್ಯದ ಜನರನ್ನೂ ಸಮಾನವಾಗಿ ಕಾಣಬೇಕಾದ, ಮೂಢನಂಬಿಕೆ ತೊಡೆದು ಹಾಕಬೇಕಾದ ಮುಖ್ಯಮಂತ್ರಿಗಳೇ ಮೂಢನಂಬಿಕೆ ಪಾಲಿಸುವುದು ಖಂಡನೀಯ. ಯಡಿಯೂರಪ್ಪನವರು ಚಾ.ನಗರಕ್ಕೆ ಭೇಟಿ ನೀಡದಿದ್ದರೂ ಅಧಿಕಾರಕಳೆದುಕೊಂಡಿದ್ದಾರೆ. ಇಲ್ಲಿಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯನ್ನು ರಾಜಕಾರಣಿಗಳು ಇನ್ನಾದರೂ ಬಿಡಬೇಕು ಎಂದು ಸಾಹಿತಿ ಹಾಗೂ ರಂಗಕರ್ಮಿ ಕೆ.ವೆಂಕಟರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
*ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.