ದೊರೆ ಮೇಲೆ ಕಾಫಿನಾಡಿನ ನೀರೀಕ್ಷೆಯ ಹೊರೆ
Team Udayavani, Jul 29, 2021, 6:53 PM IST
ಸಂದೀಪ ಜಿ.ಎನ್.ಶೇಡ್ಗಾರ್.
ಚಿಕ್ಕಮಗಳೂರು: ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಳಿಕ ರಾಜ್ಯದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಉತ್ತರ ಕರ್ನಾಟಕದ ಬಿಜೆಪಿ ಮುಖಂಡ ಬಸವರಾಜ್ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸೀಕರಿಸಿದ್ದಾರೆ. ಸಿಎಂ ಬದಲಾವಣೆ ಬೆನ್ನಲ್ಲೇ ಕಾಫಿನಾಡಿನ ಜನರ ನಿರೀಕ್ಷೆಗಳು ಇಮ್ಮಡಿಗೊಂಡಿವೆ. ಜಿಲ್ಲೆ ಭೌಗೋಳಿಕವಾಗಿ ಬಯಲುಸೀಮೆ ಮತ್ತು ಮಲೆನಾಡು ಪ್ರದೇಶ ಹೊಂದಿದ್ದು, ರಾಜ್ಯದಲ್ಲೇ ಭಿನ್ನವಾಗಿರುವಂತಹ ಅನೇಕ ಸಮಸ್ಯೆಗಳು ಇಲ್ಲಿನ ಜನರನ್ನು ನಿರಂತರವಾಗಿ ಕಾಡುತ್ತಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ನೀರಿಕ್ಷೆ ಜಿಲ್ಲೆಯ ಜನರದ್ದು.
ನೀರಾವರಿ ಯೋಜನೆಗಳಿಗೆ ಬೇಕಿದೆ ವೇಗ: ತುಂಗಾ, ಭದ್ರಾ, ಹೇಮಾವತಿ, ಯಗಚಿ, ಸೋಮವಾಹಿನಿ ಪಂಚನದಿಗಳು ಜಿಲ್ಲೆಯಲ್ಲಿ ಜನ್ಮ ತಳೆದರೂ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ ಎಂಬ ಸ್ಥಿತಿ ಜಿಲ್ಲೆಯದು. ನೀರಾವರಿ ಸಮಸ್ಯೆ ಇಲ್ಲಿ ಬಹು ದೊಡ್ಡ ಸಮಸ್ಯೆ. ಅಂದಾಜು 1,240 ಕೋಟಿ ರೂ. ವೆಚ್ಚದ ಗೋಂದಿ ಯೋಜನೆಗೆ ಮೊದಲ ಹಂತದ 400 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ. ಬೆಳವಾಡಿ, ದೇವನೂರು ಕೆರೆ ತುಂಬಿಸುವ ರಣಘಟ್ಟ ಯೋಜನೆಗೆ ಮಂಜೂರಾತಿ ದೊರೆತಿದೆ. ಮಾದರಸನ ಕೆರೆಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ದೊರೆತಿದ್ದು, ಕಾಮಗಾರಿ ಪ್ರಾರಂಭವಾಗಬೇಕಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಬಿ.ಎಸ್. ಯಡಿಯೂರಪ್ಪರವರ ಸರ್ಕಾರದ ಅವ ಧಿಯಲ್ಲಿ ಒಂದು ಹಂತಕ್ಕೆ ತಲುಪಿದ್ದು, ಕೆಲವು ಯೋಜನೆಗಳು ಅನುಮೋದನೆ, ಟೆಂಡರ್ ಹಂತದಲ್ಲಿದೆ. ಈ ಯೋಜನೆಗಳಿಗೆ ವೇಗಕೊಡುವ ನಿರೀಕ್ಷೆ ಇದೆ. ಬಸವರಾಜ್ ಬೊಮ್ಮಾಯಿ ಅವರು ಈ ಹಿಂದೆ ನೀರಾವರಿ ಇಲಾಖೆ ಖಾತೆಯನ್ನು ಸಮರ್ಥ ವಾಗಿ ನಿಭಾಯಿಸಿದ್ದು, ನೀರಾವರಿ ಯೋಜನೆಗಳ ಆಳ ಅಗಲ ಅರಿತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ವೇಗ ಸಿಗಬಹುದು ಎಂಬುದು ಜಿಲ್ಲೆಯ ಜನರ ನಿರೀಕ್ಷೆ.
ಪ್ರವಾಸೋದ್ಯಮಕ್ಕೆ ಸಿಗಲಿದೆಯೇ ಒತ್ತು: ಜಿಲ್ಲೆಯ ಪ್ರಾಕೃತಿಕ ಸೌಂದರ್ಯ ಹಾಗೂ ಧಾರ್ಮಿಕ ಕೇಂದ್ರಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣಗುಂಡಿ ಸೇರಿದಂತೆ ಅನೇಕ ಪ್ರವಾಸಿತಾಣಗಳು ಜನರನ್ನು ಕೈಬೀಸಿ ಕರೆಯುತ್ತವೆ. ಜಿಲ್ಲೆಯ ಶೃಂಗೇರಿ, ಹೊರನಾಡು, ಕಳಸ, ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ರಾಜ್ಯ-ಹೊರರಾಜ್ಯದ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಜಿಲ್ಲೆಯ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಪ್ರವಾಸಿ ಕೇಂದ್ರಗಳು ಒಂದಷ್ಟು ಸುಧಾರಣೆ ಕಂಡಿದ್ದರೂ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಸಿಗಲಿದೆಯೇ ಎಂಬುದು ಜನರ ನೀರಿಕ್ಷೆಯಾಗಿದೆ. ಕೃಷಿಕರು-ಅರಣ್ಯ ಒತ್ತುವರಿ ಸಮಸ್ಯೆಗೆ ಬೇಕಿದೆ ಪರಿಹಾರ: ಜಿಲ್ಲೆಯಲ್ಲಿ ಕಾಫಿ ಮತ್ತು ಕಾಳುಮೆಣಸು ಯಥೇಚ್ಚವಾಗಿ ಬೆಳೆಯಲಾಗುತ್ತಿದೆ. ಬೆಲೆ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ಇದರೊಟ್ಟಿಗೆ ಕಾಫಿಯನ್ನು ಸಫರ್ಸಿ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ಇದರಿಂದ ವಿನಾಯಿತಿ ನೀಡಬೇಕೆಂಬ ಬೇಡಿಕೆ ಇದೆ.
ಈ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಾರೆಯೇ ಎಂಬುದನ್ನು ನೋಡಬೇಕಿದೆ. ಮಲೆನಾಡು ಭಾಗದಲ್ಲಿ ಅಡಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಅಡಕೆಗೆ ಹಳದಿ ಎಲೆ ರೋಗಬಾಧೆಯಿಂದ ತೋಟಗಳು ನಶಿಸುತ್ತಿವೆ. ಹೀಗಾಗಿ ಕೃಷಿ ಸಂಶೋಧನಾ ಕೇಂದ್ರ ತೆರೆಯಬೇಕೆಂಬ ಕೂಗು ಈ ಭಾಗದ ಜನರದ್ದಾಗಿದೆ. ಜಿಲ್ಲೆಯಲ್ಲಿ ಅರಣ್ಯಭೂಮಿ, ಕಂದಾಯ ಭೂಮಿ, ಡೀಮ್ಡ್ ಅರಣ್ಯ, ಒತ್ತುವರಿ ಸಮಸ್ಯೆ ದೀರ್ಘಕಾಲದಿಂದ ಇಲ್ಲಿನ ಜನರನ್ನು ಕಾಡುತ್ತಿದೆ. ಕಂದಾಯ ಭೂಮಿ ಮತ್ತು ಅರಣ್ಯಭೂಮಿ ಜಂಟಿ ಸರ್ವೇ ಕಾರ್ಯ ಅಗತ್ಯವಿದೆ.
ಪ್ರಕೃತಿ ವಿಕೋಪ-ಪ್ರಾಣಿ ಕಾಟ: ಜಿಲ್ಲೆಯ ಮಲೆನಾಡು ಪ್ರದೇಶ ಇತ್ತೀಚೆಗೆ ಪ್ರತಿ ವರ್ಷ ಅತಿವೃಷ್ಟಿಗೆ ಒಳಗಾಗುತ್ತಿದೆ. ಈ ಹಿಂದೆ ಅತಿವೃಷ್ಟಿಗೆ ಮನೆ, ಜಮೀನು ಕಳೆದುಕೊಂಡವರಿಗೆ ಸಮರ್ಪಕವಾಗಿ ಪರಿಹಾರ ದೊರೆತ್ತಿಲ್ಲ ಎಂಬ ದೂರು ಇದೆ. ಹಾಗೇ ಇಲ್ಲಿನ ಅತಿವೃಷ್ಟಿಗೆ ಒಳಗಾಗುವ ಜನರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ ಎಂಬ ನಿರೀಕ್ಷೆ ಇದೆ. ಅದೇ ರೀತಿ ಈ ಭಾಗದಲ್ಲಿ ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಕಡಿವಾಣ ಹಾಕಬೇಕೆಂಬುದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿದ್ದು ಈ ಬಗ್ಗೆ ನೂತನ ಸಿಎಂ ಗಮನಹರಿಸುವರೇ ನೋಡಬೇಕಿದೆ.
ಈ ಎಲ್ಲ ಅಂಶಗಳು ಸೇರಿದಂತೆ ಬಯಲುಸೀಮೆ ಭಾಗಕ್ಕೆ ಬೃಹತ್ ಕೈಗಾರಿಕೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ಸಿಗಲಿದೆ ಎಂಬ ಆಶಾಭಾವನೆಯೊಂದಿಗೆ ಜಿಲ್ಲೆ ಸರ್ವತೋಮುಖ ಅಭಿವೃದ್ಧಿಯತ್ತ ದಾಪುಗಾಲು ಇಡಲಿದೆ ಎಂಬ ನಿರೀಕ್ಷೆ ಜನರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.