ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಹೊಸ ಟೆಂಡರ್‌ಗೆ ಪಾಲಿಕೆ ನಿರ್ಧಾರ
Team Udayavani, Jul 30, 2021, 3:40 AM IST
ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪೆನಿಯ ಗುತ್ತಿಗೆ ಅವಧಿ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಹೀಗಾಗಿ, ಈ ಸಂಬಂಧ ಶೀಘ್ರದಲ್ಲೇ ವಿಸ್ತೃತ ಯೋಜನ ವರದಿ ಸಿದ್ಧಪಡಿಸಿ, ಆಗಸ್ಟ್ ತಿಂಗಳೊಳಗೆ ಹೊಸ ಟೆಂಡರ್ ಕರೆದು ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆ ಜರಗಿತು. ಈ ವೇಳೆ ಮಾಹಿತಿ ನೀಡಿದ ಆಯುಕ್ತರು, ಮೇ ತಿಂಗಳಿನಲ್ಲಿ ಶೇ.10ರಷ್ಟು ಕಸ ವಿಂಗಡಣೆಯಾಗಿ ಬರುತ್ತಿತ್ತು. ಸದ್ಯ ಶೇ. 65ರಿಂದ 70ರಷ್ಟು ಕಸ ವೈಜ್ಞಾನಿಕ ವಿಲೇವಾರಿ ನಡೆಯುತ್ತಿದೆ ಎಂದರು.
ಇದಕ್ಕೂ ಮುನ್ನ ಮನಪಾ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಮಾತನಾಡಿ, ನಗರದಲ್ಲಿ ಹಸಿ, ಒಣಕಸ ಪ್ರತ್ಯೇಕ ವಿಂಗಡಣೆಯ ಬಳಿಕ ಸಮರ್ಪಕ ಕಸ ವಿಲೇವಾರಿ ನಡೆಯುತ್ತಿಲ್ಲ. ರಸ್ತೆಗಳಲ್ಲಿ ಕಸ ರಾಶಿ ಬಿದ್ದಿರುತ್ತದೆ ಎಂದರು. ಮಾಜಿ ಮೇಯರ್ ಭಾಸ್ಕರ್ ಕೆ. ಮಾತನಾಡಿ, ಕಸ ವಿಲೇವಾರಿ ವೇಳೆ ತೆಂಗಿನ ಗರಿ ತೆಗೆದುಕೊಂಡು ಹೋಗುತ್ತಿಲ್ಲ. ರಸ್ತೆ ಬದಿಗಳಲ್ಲಿ, ಡಿವೈಡರ್‌ಗಳಲ್ಲಿ ಹುಲ್ಲು ಬೆಳೆದಿದ್ದು, ಕಟಾವು ಮಾಡುತ್ತಿಲ್ಲ ಎಂದರು. ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಸಮರ್ಪಕ ಕಸ ವಿಂಗಡಣೆ ಬಳಿಕ ಆರಂಭದಲ್ಲಿ ಕೆಲವೊಂದು ಸಮಸ್ಯೆ ಉಂಟಾಗುವುದು ಸಹಜ. ಪೂರಕ ವ್ಯವಸ್ಥೆ ಮಾಡಲಾಗುತ್ತಿದ್ದು, ಪರಿಹಾರದ ನಿಟ್ಟಿನಲ್ಲಿ ಚರ್ಚೆ ಮಾಡೋಣ ಎಂದರು. ಮೇಯರ್ ಮಾತನಾಡಿ, ವೈಜ್ಞಾನಿಕ ಕಸ ವಿಲೇವಾರಿಗೆ ನಿರ್ಧರಿಸಲಾಗಿದೆ. ಜನತೆ ಸಹಕಾರ ನೀಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸಮಸ್ಯೆ ಇದೆ. ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮಾಜಿ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ, ಕೆಲವು ಕಡೆಗಳಲ್ಲಿ ಶುಕ್ರವಾರ ಒಣ ಕಸ ವಿಲೇವಾರಿಗೆ ಬರುತ್ತಿಲ್ಲ. ಹಸಿ ಕಸಕ್ಕೆ ಒಂದು ವೇಳೆ ಶನಿವಾರವೂ ಬಾರದಿದ್ದರೆ ಮೂರು ದಿನಗಳ ಕಸ ಮನೆಯಲ್ಲೇ ಉಳಿಯುತ್ತದೆ. ಕಸ ವಿಲೇವಾರಿಗೆ ಸಂಬಂಧ ಪಟ್ಟಂತೆ ಆ್ಯಂಟನಿ ಸಂಸ್ಥೆ ಹೆಚ್ಚುವರಿ ವಾಹನ ಉಪಯೋಗಿಸಬೇಕು ಎಂದರು.
ಲಸಿಕೆ ಪೂರೈಕೆಗೆ ಆದ್ಯತೆ:
ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಪೂರೈಕೆ ಬೇಡಿಕೆ ಮಟ್ಟದಲ್ಲಿ ಸಿಗುತ್ತಿಲ್ಲ ಎಂದು ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಪ್ರಸ್ತಾವಿಸಿದರು. ಕಳೆದೊಂದು ವಾರದಿಂದ ಬೇಡಿಕೆಗೆ ತಕ್ಕಷ್ಟು ಲಸಿಕೆ ಪೂರೈಕೆಯಾಗುತ್ತಿಲ್ಲ. ಸದ್ಯ 13,000 ಮಂದಿ ಎರಡನೇ ಡೋಸ್ ಕೊವ್ಯಾಕ್ಸಿನ್ ಪಡೆಯಲು ಬಾಕಿ ಇದೆ ಎಂದು ತಾಲೂಕು ವೈದ್ಯಾಧಿಕಾರಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ, ಲಸಿಕೆ ಪೂರೈಕೆ ಹೆಚ್ಚಿಸುವ ಕುರಿತಂತೆ ಸಂಬಂಧಪಟ್ಟವರ ಗಮನ ಸೆಳೆಯುವುದಾಗಿ ಹೇಳಿದರು.
ಶಶಿಧರ ಹೆಗ್ಡೆ ಮಾತನಾಡಿ, ಕೆಲವು ದಿನಗಳ ಹಿಂದೆ ಸಿಟಿ ಬಸ್ ನಿಲ್ದಾಣವನ್ನು ಸರ್ವಿಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಮೂಲ ಸೌಕರ್ಯದ ಕೊರತೆ ಯಿಂದಾಗಿ ಪ್ರಯಾಣಿಕರಿಗೆ ತೊಂದರೆ ಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಈ ಕುರಿತಂತೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದೇನೆ. ಸಾರ್ವಜನಿಕರು, ಬಸ್ ಮಾಲಕರ ಕೋರಿಕೆ ಮೇರೆಗೆ ಪ್ರಾಯೋಗಿಕವಾಗಿ ಸ್ಥಳಾಂತರ ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಉಂಟಾ ದರೆ ಈ ನಿರ್ಧಾರ ಕೈಬಿಡುವುದಾಗಿ ಡಿಸಿ ತಿಳಿಸಿದ್ದಾರೆ ಎಂದರು.
ಪಾಲಿಕೆ ವ್ಯಾಪ್ತಿಯ ಲೇಡಿಹಿಲ್ ಶಾಲೆಯ ಬಳಿಯಿರುವ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವ ಕುರಿತು ಸರಕಾರದ ಅನುಮೋದನೆ ಕೋರುವ ಬಗ್ಗೆ ತೀರ್ಮಾನಕ್ಕಾಗಿ ಪರಿಷತ್‌ಗೆ ಮಂಡಿಸಲಾಯಿತು.
ಸೈಕಲ್ ಓಣಿ:
ಪಾಲಿಕೆ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ನಗರದಲ್ಲಿ ಸೈಕಲ್ ಓಣಿ ನಿರ್ಮಾಣ ಒಳ್ಳೆಯ ಯೋಜನೆ. ಸೈಕಲ್ ಟ್ರಾಕ್ ನಿರ್ಮಾಣದ ಬಳಿಕ ಪಾದಚಾರಿ ಗಳಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಬಾರದು. ಕಾಮಗಾರಿಗೂ ಮುನ್ನ ಅಗತ್ಯ ಸಲಹೆ ತೆಗೆದುಕೊಳ್ಳಬೇಕು ಎಂದರು. ಆಯುಕ್ತರು ಪ್ರತಿಕ್ರಿಯಿಸಿ, ಇದು ಪೈಲೆಟ್ ಪ್ರಾಜೆಕ್ಟ್ ಆಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಯೋಜನೆ ಅನುಷ್ಠಾನಿಸುವ ಮುನ್ನ ಮತ್ತೂಮ್ಮೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಐಟಿ ಪಾರ್ಕ್‌ಗೆ ಜಾಗ: ಕಾಂಗ್ರೆಸ್ ಆಕ್ಷೇಪ ಮನಪಾ ಸದಸ್ಯ ವಿನಯರಾಜ್ ಮಾತ ನಾಡಿ, ನಗರ ವ್ಯಾಪ್ತಿಯಲ್ಲಿ ಐಟಿ ಪಾರ್ಕ್ ನಿರ್ಮಾಣ ಕುರಿತಂತೆ ಕಾರ್ಯಸೂಚಿಯಲ್ಲಿ ಉಲ್ಲೇಖೀಸಲಾದ ಬೊಂದೇಲ್ ಬಳಿಯ 9.4 ಎಕರೆ ಜಮೀನನ್ನು ಟಿಡಿಆರ್ ನೀಡಿ ಪಡೆಯಲು ಮುಂದಾಗಿರುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಯಾವು ದೇ ನಿರ್ದಿಷ್ಟ ಜಾಗವನ್ನು ಟಿಡಿಆರ್ ಮೂಲಕ ಭೂಸ್ವಾಧೀನ ಮಾಡಲಾಗುವುದಿಲ್ಲ ಎಂದರು.
ಪಂಪ್‌ವೆಲ್ ಬಸ್ ನಿಲ್ದಾಣಕ್ಕೆ ಮರು ವಿನ್ಯಾಸ ! :
ಮನಪಾ ಸದಸ್ಯ ಕೇಶವ ಮಾತನಾಡಿ, ಪಂಪ್‌ವೆಲ್ ಬಳಿ ಬಸ್ ನಿಲ್ದಾಣಕ್ಕೆಂದು ಜಾಗ ಸ್ವಾಧೀನಪಡಿಸಿ ಅನೇಕ ತಿಂಗಳು ಕಳೆದರೂ ಕಾಮಗಾರಿ ಆರಂಭಗೊಂಡಿಲ್ಲ. ಇದರಿಂದ ಆ ಪ್ರದೇಶ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗುತ್ತಿದೆ ಎಂದರು. ಆಯುಕ್ತರು ಪ್ರತಿಕ್ರಿಯಿಸಿ, ಪಂಪ್‌ವೆಲ್ ಬಸ್ ನಿಲ್ದಾಣಕ್ಕೆ ಈಗಾಗಲೇ 3 ಬಾರಿ ಟೆಂಡರ್ ಕರೆಯಲಾಗಿದೆ. ಆದರೆ ಟೆಂಡರ್ ವಹಿಸಲು ಯಾರು ಕೂಡ ಮುಂದೆ ಬಂದಿಲ್ಲ. ಇದೀಗ ಮರು ವಿನ್ಯಾಸ ಮಾಡಲು ನಿರ್ಧರಿಸಿದ್ದು, ಮತ್ತೆ ಟೆಂಡರ್ ಕರೆಯುತ್ತೇವೆ ಎಂದರು.
ಪಾಲಿಕೆಯಿಂದ ಕೋವಿಡ್ ಸಮರ್ಥ ನಿರ್ವಹಣೆ:
ಕೊರೊನಾ ಎರಡನೇ ಅಲೆ ಎದುರಿಸಲು ಕೋವಿಡ್ ವಾರಿಯರ್, ಅಧಿಕಾರಿಗಳು, ಜನಪ್ರತಿನಿಧಿಗಳು ಉತ್ತಮ ಕೆಲಸ ನಿರ್ವಹಿಸಿದ್ದಾರೆ. ವರ್ಚುವಲ್ ಸಭೆ ನಡೆಸಿ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಾರ್ಡ್‌ಗೆ ಕೋವಿಡ್ ನೋಡಲ್ ಅಧಿಕಾರಿ ನೇಮಿಸಿದ್ದೇವೆ. ಟಾಸ್ಕ್ಪೋರ್ಸ್ ರಚನೆ ಮಾಡಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಕೊರೊನಾ ಜಾಗೃತಿ ಮೂಡಿಸಲಾಗಿದೆ. ನಗರದ ಅಭಿವೃದ್ಧಿಯ ಕಡೆಗೂ ಗಮನಹರಿಸಿದ್ದು, ಮಳೆಗಾಲಕ್ಕೂ ಮುನ್ನ ಚರಂಡಿ ಹೂಳೆತ್ತುವಿಕೆ, ಚರಂಡಿ ಕಾಮಗಾರಿ ನಡೆಸಲಾಗಿದೆ ಎಂದು ಮೇಯರ್ ಸಭೆಗೆ ತಿಳಿಸಿದರು.
25 ಲಕ್ಷ ರೂ. ಮಂಜೂರು:
2021-22ನೇ ಸಾಲಿನ ಪ್ರದೇಶಾಭಿವೃದ್ಧಿ ನಿಧಿಯ ಮೊದಲನೇ ಹಂತ 25 ಲಕ್ಷ ರೂ. ಹಣ ಮಂಜೂರು ಮಾಡಲಾಗುವುದು ಎಂದು ಮೇಯರ್ ಸಭೆಯಲ್ಲಿ ತಿಳಿಸಿದರು. ಇದಕ್ಕೆ ವಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, 50 ಲಕ್ಷ ರೂ. ನೀಡಬೇಕೆಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿ ಮೇಯರ್, ಡಿಸೆಂಬರ್ ಅಂತ್ಯಕ್ಕೆ ಬಜೆಟ್ ಪರಿಷ್ಕರಣೆ ವೇಳೆ ಮುಂದಿನ ಹಂತ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಉಪ ಮೇಯರ್ ಸುಮಂಗಲಾ ರಾವ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಸಂದೀಪ್, ಶೋಭಾ ರಾಜೇಶ್, ಲೀಲಾವತಿ ಉಪಸ್ಥಿತರಿದ್ದರು.
ಮೂರು ತಿಂಗಳ ಬಳಿಕ ಪಾಲಿಕೆ ಸಭೆ:
ಪಾಲಿಕೆಯ ಸಾಮಾನ್ಯ ಸಭೆ ಮೂರು ತಿಂಗಳ ಬಳಿಕ ಜು. 29ರಂದು ನಡೆದಿದೆ. ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ 2021ರ ಮಾರ್ಚ್ 31ರಂದು ಪಾಲಿಕೆ ಸಾಮಾನ್ಯ ಸಭೆ ನಡೆದಿತ್ತು. ಬಳಿಕ ಕೊರೊನಾ ಎರಡನೇ ಅಲೆ ಅಪ್ಪಳಿಸಿದ ಬಳಿಕ ಲಾಕ್‌ಡೌನ್, ಕೊರೊನಾ ಮಾರ್ಗಸೂಚಿ ಪಾಲನೆ ಸಹಿತ ವಿವಿಧ ಕಾರಣಗಳಿ ಂದಾಗಿ ಸಭೆ ನಡೆದಿರಲಿಲ್ಲ. ಆದರೆ ಆನ್‌ಲೈನ್ ಮುಖೇನ ವರ್ಚುವಲ್ ವಿಶೇಷ ಸಭೆ ನಡೆದಿತ್ತು.
ಇತರ ಚರ್ಚಿತ ವಿಷಯ :
- ನೀರಿನ ಅದಾಲತ್ ಪುನರಾರಂಭಿಸಬೇಕು
- ಉಲ್ಲಾಸ್‌ನಗರ, ಶಾಂತಿನಗರದಲ್ಲಿ ಸಮರ್ಪಕ ತಡೆಗೋಡೆ ವ್ಯವಸ್ಥೆ ಇಲ್ಲ
- ಗೈಲ್ ಗ್ಯಾಸ್ ಲೈನ್‌ಗಾಗಿ ರಸ್ತೆ ಅಗೆದು ಹಲವೆಡೆ ತೊಂದರೆ
- ಕೃಷ್ಣಾಪುರ ಮಾರುಕಟ್ಟೆ ಕಾಮಗಾರಿ ಅರ್ಧದಲ್ಲಿಯೇ ಬಾಕಿಯಾಗಿದೆ.
ತುಳು ಭಾಷೆಗೆ ಅಧಿಕೃತ ಸ್ಥಾನಮಾನ; ಸರಕಾರಕ್ಕೆ ಪ್ರಸ್ತಾವನೆ:
“ತುಳು ಭಾಷೆಯನ್ನು 8ನೇ ಪರಿಚ್ಛೇಕ್ಕೆ ಸೇರ್ಪಡೆಗೊಳಿಸಬೇಕೆಂಬುವುದು ದಶಕದ ಆಗ್ರಹ. ಆದರೆ ಈ ಹೋರಾಟಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಈಗಾಗಲೇ ಟ್ವಿಟ್ಟರ್ ಅಭಿಯಾನ ನಡೆದಿದೆ. ವಿಧಾನಸೌಧದಲ್ಲಿ ಕೂಡ ಜನಪ್ರತಿನಿಧಿಗಳು ಧ್ವನಿ ಎತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಈ ನಿಟ್ಟಿನಲ್ಲಿ ಪಾಲಿಕೆಯಿಂದ ಒತ್ತಾಯ ಮಾಡಬೇಕು’ ಎಂದು ಮನಪಾ ಸದಸ್ಯ ವರುಣ್ ಚೌಟ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಮೇಯರ್, ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ರಾಜ್ಯ ಸರಕಾರಕ್ಕೆ ಪ್ರ¤ಸ್ತಾವನೆ ಸಲ್ಲಿಸಲಾಗುವುದು ಎಂದರು. ಇದೇ ವೇಳೆ ವರುಣ್ ಚೌಟ ಅವರು ತುಳು ಬರೆಹಗಳಿರುವ ಶಾಲು ಹಾಕಿ ಸಭೆಯ ಗಮನಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.