ಕಾಲ್ಪನಿಕ ಕೋವಿಡ್ ಮೂರನೇ ಅಲೆಯಂತೆ ಧುಮುಕಿದ ಜನ : ಜೋಗ ‘ಜನಪಾತ’!
Team Udayavani, Aug 1, 2021, 4:05 PM IST
ಪ್ರಾತಿನಿಧಿಕ ಚಿತ್ರ
ಸಾಗರ : ಕೋವಿಡ್ 19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಕೋವಿಡ್ ಮಾರ್ಗಸೂಚಿಗಳ ಅನ್ವಯ ನಿಷೇಧ ಹೇರಿದ್ದರಿಂದ ಜನರಿಂದ ದೂರವುಳಿದಿದ್ದ ಜೋಗ ಜಲಪಾತದ ದರ್ಶನಕ್ಕೆ ಇಂದು(ಭಾನುವಾರ, ಆಗಷ್ಟ್ 1) ಜನಸಾಗರ ಹರಿದು ಬಂದಿದೆ.
ಪ್ರಕೃತಿ ಕೂಡ ಇಡೀ ದಿನ ಆಗೊಮ್ಮೆ ಈಗೊಮ್ಮೆ ಬಿಸಿಲು ತೋರಿ, ಮಳೆ ಸುರಿಸದೆ ಇದ್ದುದು ಪ್ರವಾಸಿಗರಿಗೆ ಭವ್ಯ ಜಲಪಾತದ ದರ್ಶನ ಒದಗಿಸಿತು. ಆದರೆ ಈವರೆಗೆ ಹೇಳಲಾಗುತ್ತಿರುವ ಕೋವಿಡ್ ನ ಮೂರನೇ ಅಲೆಯೂ ಇದೇ ರೀತಿ ಬರಬಹುದು ಎಂಬ ಕಲ್ಪನೆ ಮೂಡಿಸಿದೆ. ಜನ ಕೂಡ ಅದನ್ನು ಸ್ವಾಗತಿಸುವಂತೆ ಯಾವುದೇ ಭೌತಿಕ ಅಂತರ ಹಾಗೂ ಮುಖಕ್ಕೆ ಮಾಸ್ಕ್ ಧರಿಸುವ ಗೋಜಿಗೇ ಹೋಗದೆ ಜಲಪಾತ ವೀಕ್ಷಣೆ ಹಾಗೂ ಮೊಬೈಲ್ ಸೆಲ್ಫಿ ಫೋಟೋಗಳ ಗುಂಗಿನಲ್ಲಿ ಮುಳುಗಿದ್ದುದು ಕಂಡುಬಂದಿದೆ.
ಇದನ್ನೂ ಓದಿ : ಉಡುಪಿ: 1ಕಿಲೋ, 226 ಗ್ರಾಂ ಗಾಂಜಾ ವಶ; ಇಬ್ಬರು ಆರೋಪಿಗಳ ಬಂಧನ
ಪ್ರವೇಶ ಶುಲ್ಕ ಸಂಗ್ರಹ 2.2 ಲಕ್ಷ ರೂ..!
ಖಾಸಗಿ ಕಾರು, ಪ್ರವಾಸಿ ವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜೋಗದತ್ತ ಪಯಣಿಸಿದ್ದರಿಂದ ಎನ್ ಎಚ್ 206ನಲ್ಲಿ ಕಾರುಗಳ ರ‍್ಯಾಲಿ ನಡೆಯುತ್ತಿದೆಯೇನೋ ಎಂಬ ದೃಶ್ಯ ಸಾಗರ ಜೋಗದ ನಡುವೆ ಕಂಡುಬಂದಿತು. ಜೋಗ ಅಭಿವೃದ್ಧಿ ಪ್ರಾಧಿಕಾರದ ಪ್ರವೇಶ ಶುಲ್ಕ ಸಂಗ್ರಹ ಎರಡೂವರೆ ಲಕ್ಷ ರೂ. ದಾಟಬಹುದು ಎಂದು ಅಂದಾಜಿಸಲಾಗಿದೆ. ಶನಿವಾರ ಈ ಪ್ರವೇಶ ಶುಲ್ಕ ಸಂಗ್ರಹ 2.2 ಲಕ್ಷ ರೂ. ಆಗಿತ್ತು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಹೆಚ್ಚಿದ್ದರಿಂದ ಮೈಸೂರು ಬಂಗ್ಲೋ ಭಾಗದಲ್ಲಿ ಪ್ರವಾಸಿ ವಾಹನಗಳು ತುಂಬಿ ತುಳುಕಿದವು. ಜಾತ್ರೆಯ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಕ್ಯೂ ನಿಂತ ಸ್ಥಿತಿ ನಿರ್ಮಾಣವಾಗಿತ್ತು. ಅರ್ಧದಿಂದ ಮುಕ್ಕಾಲು ಘಂಟೆ ಕ್ಯೂನಲ್ಲಿ ನಿಂತ ನಂತರವೇ ಜಲಪಾತ ದರ್ಶನಕ್ಕೆ ಪ್ರವೇಶ ಸಿಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ನಿಯಂತ್ರಣ ವ್ಯವಸ್ಥೆ ನಿರ್ವಹಿಸಲಾಗದ ಪೊಲೀಸರು ಸಂಪೂರ್ಣವಾಗಿ ಕೈಚೆಲ್ಲಿದರು. ಇದೇ ವೇಳೆ ತಾಲೂಕಿನ ಧಾರ್ಮಿಕ ಕ್ಷೇತ್ರಗಳಾದ ವರದಪುರ, ಸಿಗಂದೂರಿನಲ್ಲಿಯೂ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು.
ಇದನ್ನೂ ಓದಿ : ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿಯಾದ ಸಿಎಂ ಬಸವರಾಜ್ ಬೊಮ್ಮಾಯಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.