ಶಂಕರಗೆ ಪೇಡಾ; ಬೆಲ್ಲದಗೆ ಬೇವು
ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಅರವಿಂದಗೆ ಸಚಿವ ಸ್ಥಾನವೂ ದಕ್ಕದ ಕಹಿ
Team Udayavani, Aug 5, 2021, 1:06 PM IST
ವರದಿ: ಅಮರೇಗೌಡ ಗೋನವಾರ
ಹುಬ್ಬಳ್ಳಿ: ಮುಖ್ಯಮಂತ್ರಿ ಆಗುವವರ ಪಟ್ಟಿಯಲ್ಲಿ ರಾರಾಜಿಸಿ ಕೊನೆಗೆ ಸಚಿವ ಸ್ಥಾನ ಪಡೆಯದೆ ಶಾಸಕ ಅರವಿಂದ ಬೆಲ್ಲದ ಅವರು ರಾಜಕೀಯವಾಗಿ ತೀವ್ರ ಹಿನ್ನಡೆ ಜತೆಗೆ, ಹಲವು ಹಿರಿಯರ ಕೆಂಗಣ್ಣಿಗೂ ಗುರಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವುದೇ ಲಾಬಿಯ ಗೋಜಿಗೂ ಹೋಗದೆ, ಶಂಕರ ಪಾಟೀಲ ಮುನೇನಕೊಪ್ಪ ಅವರು ಸಚಿವ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಒಂದು ರೀತಿಯಲ್ಲಿ ಬಹಿರಂಗ ಸಮರ ಸಾರಿದ್ದ ಬಿಜೆಪಿಯ ಕೆಲವೇ ಕೆಲವು ರೆಬೆಲ್‌ಗಳಲ್ಲಿ ಅರವಿಂದ ಬೆಲ್ಲದ ಕೂಡ ಒಬ್ಬರಾಗಿದ್ದರು. ಯಡಿಯೂರಪ್ಪ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಲೇಬೇಕೆಂಬ ನಿಟ್ಟಿನಲ್ಲಿ ನಡೆದ ವಿದ್ಯಮಾನಗಳಲ್ಲಿ ಅರವಿಂದ ಬೆಲ್ಲದ ಸಹ ಕಾಣಿಸಿಕೊಂಡಿದ್ದರು. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಂದಿನ ಮುಖ್ಯಮಂತ್ರಿ ಯಾರೆಂಬ ಮುಖಂಡರ ಪಟ್ಟಿಯಲ್ಲಿ ಅರವಿಂದ ಬೆಲ್ಲದ ಅವರ ಹೆಸರು ಪ್ರಮುಖವಾಗಿ ಬಿಂಬಿತವಾಗಿತ್ತು. ಸಿಎಂ ಪಟ್ಟವಂತೂ ಸಿಗಲಿಲ್ಲ, ಹೋಗಲಿ ಸಚಿವ ಸ್ಥಾನವೂ ಖಚಿತ ಎಂಬಂತೆ ಬಿಂಬಿಸಲಾಗಿತ್ತಾದರೂ, ಅದು ದಕ್ಕದಾಗಿದೆ.
ಒಂದು ಕಡೆ ಪಕ್ಷದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದ್ದರೆ, ಇನ್ನೊಂದು ಕಡೆ ಯಡಿಯೂರಪ್ಪ ಕೆಳಗಿಳಿಯುವಂತೆ ಮಾಡಿದವರಲ್ಲಿ ಇವರು ಒಬ್ಬರೆಂದು ಲಿಂಗಾಯತ ಸಮಾಜದಲ್ಲೂ ಅಸಮಾಧಾನಕ್ಕೆ ಬೆಲ್ಲದ ಗುರಿಯಾಗುವ ಸಾಧ್ಯತೆ ಇಲ್ಲದಿಲ್ಲ ಎಂಬುದು ಹಲವರ ಅನಿಸಿಕೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿಸಿತ್ತು. ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ತಾವು ಸಚಿವರಾಗಲ್ಲ ಎಂದು ಜಗದೀಶ ಶೆಟ್ಟರ ಅವರು ಹೇಳಿದ ನಂತರದಲ್ಲಿ ಧಾರವಾಡ ಜಿಲ್ಲೆಯಿಂದ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಖಚಿತ ಎಂಬ ಅನಿಸಿಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಪೂರಕ ಎನ್ನುವಂತೆ ಅರವಿಂದ ಬೆಲ್ಲದ ಅವರು ದೆಹಲಿಗೆ ತೆರಳಿ ತಮ್ಮದೇ ಯತ್ನ ಕೈಗೊಂಡಿದ್ದರು. ಮುಖ್ಯಮಂತ್ರಿ ಪಟ್ಟಿಯಲ್ಲಿದ್ದರಂತೆ ಸಂಭಾವ್ಯ ಸಚಿವರ ಪಟ್ಟಿಯಲ್ಲೂ ಬೆಲ್ಲದ ಹೆಸರು ಸುಳಿದಾಡಿತ್ತಾದರೂ ಸಚಿವ ಸ್ಥಾನ ದೊರೆಯಲೇ ಇಲ್ಲ.
ಬೆಲ್ಲದ ಲೆಕ್ಕಾಚಾರ ತಪ್ಪಿದ್ದೆಲ್ಲಿ?: ಅರವಿಂದ ಬೆಲ್ಲದ ಅವರು ಯುವ ರಾಜಕಾರಣಿಯಾಗಿದ್ದು, ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ರಾಜಕೀಯವಾಗಿ ಉತ್ತಮ ಭವಿಷ್ಯ ಇದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಹೈಕಮಾಂಡ್ ಒಂದು ಹಂತದಲ್ಲಿ ಒಂದಿಷ್ಟು ಯೋಚನೆ ಮಾಡಿತ್ತೆನ್ನಲಾಗಿದೆ. ಆದರೆ, ಇದೇ ಲೆಕ್ಕಾಚಾರದಲ್ಲಿ ಅರವಿಂದ ಬೆಲ್ಲದ ಅವರು ನಿರೀಕ್ಷೆಗೆ ಮೀರಿದ ವೇಗದಲ್ಲಿ ಸಾಗಿದ್ದೇ ಅವರಿಗೆ ಮುಳುವಾಯಿತೆಂದು ಹೇಳಲಾಗುತ್ತಿದೆ. ಬಿಜೆಪಿಯ ಕೆಲ ಮೂಲಗಳ ಪ್ರಕಾರ ಒಂದು ಅರವಿಂದ ಬೆಲ್ಲದ ಅವರು ಯಡಿಯೂರಪ್ಪ ಅವರ ವಿರುದ್ಧ ಸಮರ ಸಾರಿರುವುದು, ಮತ್ತೂಂದು ಮಗ್ಗಲಿನಲ್ಲಿ ಹೈಕಮಾಂಡ್‌ನಲ್ಲಿ ಸ್ಪಷ್ಟ ಭರವಸೆ, ಬಲ-ಬೆಂಬಲ ಇಲ್ಲದೆಯೇ ಅಗತ್ಯಕ್ಕಿಂತ ಹೆಚ್ಚು ಎನ್ನುವ ರೀತಿಯಲ್ಲಿ ಸಿಎಂ ಪಟ್ಟಕ್ಕೆ ಬಿಂಬಿಸಿಕೊಂಡಿದ್ದು, ದೆಹಲಿ ಮಟ್ಟದಲ್ಲಿ ತಿರುಗಾಡಿದ್ದು, ಕಾಶಿಗೆ ತೆರಳಿದ್ದು ಎಲ್ಲವೂ ಅವರ ರಾಜಕೀಯ ನಡೆಗೆ ವ್ಯತಿರಿಕ್ತ ಪರಿಣಾಮ ಬೀರಿದವೆಂದು ಹೇಳಲಾಗುತ್ತಿದೆ.
ರಾಜ್ಯಮಟ್ಟದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗ ಹೇಳಿಕೆಗಳ ಜತೆಗೆ ಸ್ಥಳೀಯವಾಗಿಯೂ ಹಿರಿಯ ನಾಯಕರನ್ನು ಬದಿಗಿರಿಸುವ ನಿಟ್ಟಿನಲ್ಲಿ ಸಾಗಿದ್ದು, ಸಚಿವ ಸ್ಥಾನಕ್ಕೆ ಅವಕಾಶ ದೊರೆಯದಂತೆ ಮಾಡಿತೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಸ್ಥಳೀಯವಾಗಿಯೂ ಪಕ್ಷದ ಒಲವು ಪಡೆಯದೆ, ಹೈಕಮಾಂಡ್ ಮಟ್ಟದಲ್ಲೂ ಮಹತ್ವದ ಬಲ ಹೊಂದದೆ ಏನೋ ಮಾಡಲು ಹೋಗಿ ಇನ್ನೇನೋ ಆದ ಸ್ಥಿತಿಗೆ ಬೆಲ್ಲದ ಸಿಲುಕಿದರೆನ್ನಲಾಗಿದೆ.
ಉತ್ತಮ ಶಿಕ್ಷಣ ಪಡೆದವರು, ಯಶಸ್ವಿ ಉದ್ಯಮಿಯೂ ಆಗಿರುವ ಅರವಿಂದ ಬೆಲ್ಲದ ಅವರು ಅಗತ್ಯಕ್ಕಿಂತ ಹೆಚ್ಚಿನ ರೀತಿಯಲ್ಲಿ ಬಿಂಬಿಸಿಕೊಂಡು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರೆ?, ಭವಿಷ್ಯದಲ್ಲಿ ರಾಜಕೀಯವಾಗಿ ಹಲವು ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆಯೇ ಎಂಬುದು ಹಲವರ ಅನಿಸಿಕೆಯಾಗಿದೆ.
“ರಾಜಕೀಯದಲ್ಲಿ ತಾಳ್ಮೆ ಇರಬೇಕು, ತರಾತುರಿಗೆ ಮುಂದಾದರೆ, ಅಧಿಕಾರಕ್ಕಾಗಿ ಏನೇನೋ ಮಾಡಲು ಹೋದರೆ, ರಾಜಕೀಯ ಭವಿಷ್ಯವೇ ಮಂಕಾಗುವ ಸಾಧ್ಯತೆ ಇದೆ’ ಎಂಬ ಬಿಜೆಪಿ ಹಿರಿಯ ನಾಯಕರೊಬ್ಬರ ಅನಿಸಿಕೆ ಶಾಸಕ ಅರವಿಂದ ಬೆಲ್ಲದ ಅವರಿಗೆ ಅಕ್ಷರಶಃ ಅನ್ವಯವಾದಂತೆ ಭಾಸವಾಗುತ್ತಿದೆ. ತಾಳ್ಮೆ ತಂದು ಕೊಟ್ಟ ಸಚಿವ ಸ್ಥಾನ: ಶಾಸಕ ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿ, ಸಚಿವ ಸ್ಥಾನಕ್ಕೆ ಓಡಾಟ ಅರ್ಭಟದೊಂದಿಗೆ ಮಾಧ್ಯಮಗಳಲ್ಲಿ, ಜನರ ಚರ್ಚೆಯಲ್ಲಿ ಸುಳಿದಾಡಿ ಏನೊಂದು ಸಿಗದೆ ಮೌನಕ್ಕೆ ಜಾರಿದ್ದರೆ, ಸಚಿವ ಸ್ಥಾನ ವಿಚಾರದಲ್ಲಿ ಏನೊಂದು ಹೇಳಿಕೆ ನೀಡದೆ ಮೌನವಾಗಿಯೇ ಇದ್ದ, ಇತರರಂತೆ ಲಾಬಿಗೂ ಮುಂದಾಗದೆ ಸಚಿವ ಸ್ಥಾನ ಪಡೆಯುವಲ್ಲಿ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಯಶಸ್ವಿಯಾಗಿದ್ದು, ಸಂತಸದ ನಗೆ ಬೀರಿದ್ದಾರೆ.
ಶಂಕರ ಪಾಟೀಲ ಮುನೇನಕೊಪ್ಪ ಅವರು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಯಾಗಿ, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರೂ, ಸಚಿವ ಸ್ಥಾನಕ್ಕೆ ಓಡಾಡಲಿಲ್ಲ, ಗದ್ದಲ ಮಾಡಲಿಲ್ಲ. ಅರವಿಂದ ಬೆಲ್ಲದ ಅವರು ತಾವಾಗಿಯೇ ಮಾಡಿಕೊಂಡ ರಾಜಕೀಯ ಹಿನ್ನಡೆ ಸಹಜವಾಗಿಯೇ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ವರವಾಗಿ ಪರಿಣಮಿಸಿ ಇದ್ದಲ್ಲಿಗೆ ಸಚಿವ ಸ್ಥಾನ ತಂದು ಕೊಟ್ಟಿದೆ ಎನ್ನುವುದರ ಜತೆಗೆ, ಹಿರಿಯ ನಾಯಕರೊಂದಿಗಿನ ಉತ್ತಮ ಸಂಬಂಧ ಇದಕ್ಕೆ ತನ್ನದೇ ಬಲ ನೀಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Maharashtra Poll: ವಿಪಕ್ಷಗಳ ದೂರವಾಣಿ ಕದ್ದಾಲಿಕೆ-ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ!
Maharashtra Election:ಕೈತಪ್ಪಿದ ಟಿಕೆಟ್-ಶಿಂಧೆ ಸೇನಾ ಶಾಸಕ ವಂಗಾ ನಾಪತ್ತೆ, ಪೊಲೀಸರ ಶೋಧ!
Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Zeeshan Siddique: ಬಾಬಾ ಸಿದ್ದಿಕಿ ಪುತ್ರ ಝೀಶಾನ್ ಸಿದ್ದಿಕಿ ಎನ್‌ಸಿಪಿಗೆ ಸೇರ್ಪಡೆ…
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.