ಅಭಿವೃದ್ಧಿಯಾಗದ ರಸ್ತೆ; ಸಂಚಾರಕ್ಕೆ ತೊಂದರೆ
Team Udayavani, Aug 9, 2021, 4:45 AM IST
ತಾಲೂಕು ಕೇಂದ್ರ ಕಡಬದಿಂದ ಅನತಿ ದೂರದಲ್ಲಿರುವ ಕುಟ್ರಾಪ್ಪಾಡಿಯಲ್ಲೂ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಅಸಮರ್ಪಕ ರಸ್ತೆ, ನೆಟ್‌ವರ್ಕ್ ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದೆ. ವಿದ್ಯುತ್ ತಂತಿ ಅರಣ್ಯದ ಮಧ್ಯೆ ಹಾದು ಹೋಗುವುದರಿಂದ ಮಳೆಗಾಲದಲ್ಲಿ ಪವರ್ ಕಟ್ ಇಲ್ಲಿ ಮಾಮೂಲಿ ಎಂಬಂತಾಗಿದೆ. ಇಂದಿನ “ಒಂದು ಊರು, ಹಲವು ದೂರು’ ಸರಣಿಯಲ್ಲಿ ಈ ಎಲ್ಲ ಕೊರತೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.
ಕಡಬ: ಕುಟ್ರಾಪ್ಪಾಡಿ ತಾಲೂಕು ಕೇಂದ್ರವಾಗಿರುವ ಕಡಬಕ್ಕೆ ಹೊಂದಿಕೊಂಡಿರುವ ಗ್ರಾಮವಾದರೂ ಮೂಲ ಸೌಕರ್ಯದ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿದೆ. ಅಭಿವೃದ್ಧಿಯಾಗದ ಗ್ರಾಮೀಣ ರಸ್ತೆಗಳು ಹಾಗೂ ನಿಲುಕದ ಮೊಬೈಲ್ ನೆಟ್‌ವರ್ಕ್ ಇಲ್ಲಿನ ಪ್ರಮುಖ ಸಮಸ್ಯೆಗಳು.
ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯು ಕುಟ್ರಾಪ್ಪಾಡಿ ಗ್ರಾಮದ ಮಧ್ಯದಲ್ಲಿ ಹಾದುಹೋಗುತ್ತಿದ್ದು, ಒಂದು ಪಾರ್ಶ್ವದಲ್ಲಿನ ಕೇಪು, ಕುಂಟೋಡಿ, ಕಾರ್ಕಳ, ನಂದಗುರಿ, ಹಳೆಸ್ಟೇಶನ್, ಕಾಯರಡ್ಕ ಮುಂತಾದ ಪ್ರದೇಶಗಳು ಸ್ವಲ್ಪಮಟ್ಟಿಗೆ ಅಭಿವೃದ್ಧಿಯಾಗಿದ್ದರೂ ಇನ್ನೊಂದು ಭಾಗದಲ್ಲಿರುವ ಅಲಾರ್ಮೆ, ಉಳಿಪ್ಪು, ವಾಳ್ಯ, ನಾಡೋಳಿ, ಕೂಡಿಗೆ ಮುಂತಾದ ಪ್ರದೇಶಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಆ ಭಾಗದಲ್ಲಿ ಅರಣ್ಯ ಭೂಮಿಯ ನಡುವೆ ಜನ ವಸತಿ ಪ್ರದೇಶಗಳಿರುವುದು ಮೂಲ ಸೌಕರ್ಯಗಳ ಅಭಿವೃದ್ಧಿಗೂ ತೊಡಕಾಗಿದೆ. ಇಲ್ಲಿನ ಜನರು ಗ್ರಾಮದ ಮುಖ್ಯಪೇಟೆ ಹೊಸಮಠವನ್ನು ತಲುಪಲು ಸುಮಾರು 7ರಿಂದ 8 ಕಿ.ಮೀ. ದೂರವನ್ನು ಕಾಲ್ನಡಿಯಲ್ಲೇ ಸಾಗಬೇಕು ಅಥವಾ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಿದೆ. ಮಳೆಗಾಲದಲ್ಲಂತೂ ಇಲ್ಲಿನ ಜನರ ಸಮಸ್ಯೆ ಹೇಳತೀರದು. ಕಿರಿಯ ಪ್ರಾಥಮಿಕ ಶಿಕ್ಷಣದ ಬಳಿಕ ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ಹೊಸಮಠಕ್ಕೆ ಹೋಗಬೇಕು. ಪ್ರೌಢ ಹಾಗೂ ಪ.ಪೂ. ಶಿಕ್ಷಣಕ್ಕೆ ತಾಲೂಕು ಕೇಂದ್ರ ಕಡಬವನ್ನು ಆಶ್ರಯಿಸಬೇಕಿದೆ.
ರಸ್ತೆ ಅಭಿವೃದ್ಧಿಗೆ ಹಲವು ತೊಡಕು :
ಹೊಸಮಠದಿಂದ ವಾಳ್ಯ, ಉಳಿಪ್ಪು, ಕೂಡಿಗೆ ಪ್ರದೇಶವನ್ನು ಸಂಪರ್ಕಿಸುವ ಸುಮಾರು 6 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಯಾಗದ ಹೊರತು ಇಲ್ಲಿನ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ. ಆ ಪೈಕಿ ಕ್ಷೇತ್ರದ ಶಾಸಕ, ಪ್ರಸ್ತುತ ಸಚಿವರಾಗಿರುವ ಎಸ್.ಅಂಗಾರ ಅವರ ಮುತುವರ್ಜಿಯಿಂದ ಸುಮಾರು 1.5 ಕಿ.ಮೀ. ರಸ್ತೆ 45 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಯಾಗಿದೆ. ಉಳಿದ 4.5 ಕಿ.ಮೀ. ಉದ್ದದ ಕಚ್ಛಾ ರಸ್ತೆಯಲ್ಲಿ ಜನರು ಸಂಚರಿಸಲು ಪಡುವ ಪಾಡು ಅಷ್ಟಿಷ್ಟಲ್ಲ. ಮಳೆಗಾಲದಲ್ಲಿ ಕೆಸರಿನ ಸಮಸ್ಯೆಯಾದರೆ, ಬೇಸಗೆಯಲ್ಲಿ ಕಲ್ಲುಮಣ್ಣಿನ ರಸ್ತೆಯಲ್ಲಿ ಧೂಳಿನ ಸಮಸ್ಯೆ. ಮುಖ್ಯ ಕಚ್ಛಾ ರಸ್ತೆಯಿಂದ ಟಿಸಿಲೊಡೆದು ಗ್ರಾಮದೊಳಗಿನ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಮಣ್ಣಿನ ರಸ್ತೆಗಳಲ್ಲಿ ಸಂಚರಿಸುವುದು ಕೂಡ ಸಾಹಸದ ಕೆಲಸ. ಈ ರಸ್ತೆ ಯಾವುದೇ ಇತರ ಪ್ರಮುಖ ರಸ್ತೆ ಅಥವಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸದೇ ಹೊಳೆಯ ಬದಿಯಲ್ಲಿ ಕೊನೆಯಾಗುವುದರಿಂದ ರಸ್ತೆ ಅಭಿವೃದ್ಧಿಗೆ ಗ್ರಾಮ ಸಡಕ್‌ನಂತಹ ಯೋಜನೆಗಳ ದೊಡ್ಡ ಮೊತ್ತದ ಅನುದಾನ ಲಭಿಸಲು ತೊಡಕಾಗಿದೆ.
ಕಾಡುವ ವಿದ್ಯುತ್ ಸಮಸ್ಯೆ:
ಅರಣ್ಯದ ನಡುವೆ ವಿದ್ಯುತ್ ಮಾರ್ಗ ಹಾದು ಹೋಗುತ್ತಿರುವುದರಿಂದ ಮರದ ಕೊಬೆಗಳು ವಿದ್ಯುತ್ ಲೈನ್‌ನ ಮೇಲೆ ಮುರಿದುಬಿದ್ದು ಇಲ್ಲಿ ಪದೇ ಪದೆ ವಿದ್ಯುತ್ ಸಮಸ್ಯೆ ಕಾಡುತ್ತಿರುತ್ತದೆ. ಮಳೆಗಾಲದಲ್ಲಂತೂ ಮುರಿದು ಬಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಿ ಮತ್ತೆ ವಿದ್ಯುತ್ ಸಂಪರ್ಕ ನೀಡಬೇಕಿದ್ದರೆ 3-4 ದಿನಗಳೇ ಬೇಕಾಗುತ್ತದೆ.
ಕೈ ಕೊಡುವ ನೆಟ್‌ವರ್ಕ್ :
ವಾಳ್ಯ, ಉಳಿಪ್ಪು, ಬೈತನೆ, ನಾಡೋಳಿ, ಕಂಪತಡ್ಡ, ಕೂಡಿಗೆ ಮುಂತಾದ ಪ್ರದೇಶಗಳ ಸುಮಾರು 130 ಮನೆಗಳಿಗೆ ಮೊಬೈಲ್ ಸಂಪರ್ಕ ಇಲ್ಲವೇ ಇಲ್ಲ. ಅದರಿಂದಾಗಿ ಇಲ್ಲಿನ ಮಕ್ಕಳು ಆನ್‌ಲೈನ್ ತರಗತಿಗಳಿಂದಲೂ ವಂಚಿತರಾಗಿದ್ದಾರೆ. ಮೊಬೈಲ್ ನೆಟ್‌ವರ್ಕ್ ಇಲ್ಲದೇ ಇರುವುದರಿಂದ ಆರೋಗ್ಯ ಸಮಸ್ಯೆ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಹೊರ ಪ್ರಪಂಚವನ್ನು ಸಂಪರ್ಕಿಸಲು ಇಲ್ಲಿನ ಜನರಿಗೆ ಸಾಧ್ಯವಾಗುತ್ತಿಲ್ಲ. ಕೋವಿಡ್ ಲಸಿಕೆ ಕ್ಯಾಂಪ್, ಆಧಾರ್ ಕ್ಯಾಂಪ್ ಮುಂತಾದವುಗಳನ್ನೂ ಹಮ್ಮಿಕೊಳ್ಳಲು à ಕೊರತೆ ತೊಡಕಾಗುತ್ತಿದೆ.
ಭೂಮಿಯ ಹಕ್ಕುಪತ್ರ ಪಡೆಯಲೂ ಸಮಸ್ಯೆ:
ಇಲ್ಲಿ ಜನವಸತಿ ಪ್ರದೇಶಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ 94 ಸಿ ಹಾಗೂ ಅಕ್ರಮ-ಸಕ್ರಮ ಮೂಲಕ ಭೂಮಿಯ ಹಕ್ಕುಪತ್ರ ಪಡೆಯುವ ಅವಕಾಶದಿಂದಲೂ ಹೆಚ್ಚಿನ ಜನರು ವಂಚಿತರಾಗಿದ್ದಾರೆ. ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ಬಹುತೇಕ ಕಡತಗಳು ವಿಲೇವಾರಿಯಾಗದೆ ಬಾಕಿಯಾಗಿವೆ.
ಇತರ ಸಮಸ್ಯೆಗಳೇನು?
- ಸಾರ್ವಜನಿಕ ರುದ್ರಭೂಮಿ ಇಲ್ಲದಿರುವುದು
- ಘನ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿರುವುದು
- ಅನುಷ್ಠಾನವಾಗದ ಶಾಶ್ವತ ಕುಡಿಯುವ ನೀರಿನ ಯೋಜನೆ
- ಗ್ರಾಮೀಣ ರಸ್ತೆಗಳಲ್ಲಿ ವಾಹನ ಸೌಕರ್ಯ ಇಲ್ಲದಿರುವುದು.
-ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.