![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 10, 2021, 9:30 PM IST
ಬೆಂಗಳೂರು: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಒತ್ತಾಯಕ್ಕೆ ಮಣಿದು ಶ್ರಮಿಕ ವರ್ಗದವರಿಗೆ ಘೋಷಿಸಿದ ಪ್ಯಾಕೇಜ್ ಇನ್ನೂ ತಲುಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಮಂಗಳವಾರ ಶಿವನಗರ ಹಾಗೂ ರಾಜಾಜಿನಗರದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಘೋಷಣೆ ಮಾಡಿದ್ದು ಬಿಟ್ಟರೆ ಯಾರಿಗೂ ಪರಿಹಾರ ತಲುಪಿಲ್ಲ. ಇದು ಸುರೇಶ್ ಕುಮಾರ್, ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರಿಗೆ ಗೊತ್ತಾಗಬೇಕು ಎಂದು ಹೇಳಿದರು.
ರೈತರಿಗೆ ಘೋಷಿಸಿರುವ ಪರಿಹಾರವೂ ಸಿಕ್ಕಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ, ಹಾಸಿಗೆ, ಆಕ್ಸಿಜನ್ ಕೊಡಲು ಆಗಲಿಲ್ಲ. ಈ ಸರ್ಕಾರ ಯಾಕಿರಬೇಕು. ನಾನು- ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದು ಬಿಜೆಪಿಗೆ ತಕ್ಕ ಉತ್ತರ ನೀಡಲು ಜನ ಕಾಯುತ್ತಿದ್ದಾರೆ ಎಂದು ತಿಳಿಸಿದರು.
ಸುರೇಶ್ ಕುಮಾರ್ ಅವರ ಮೇಲೆ ನಾನು ಬಹಳ ವಿಶ್ವಾಸ ಇಟ್ಟಿದ್ದೆ. ಚಾಮರಾಜನಗರ ಜನರಿಗೆ ಸಹಾಯ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 36 ಜನ ಸತ್ತರೂ ಒಬ್ಬರ ಮನೆಗೂ ಹೋಗಲಿಲ್ಲ. ಯಾರಿಗೂ ನೆರವಾಗಲಿಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಕ್ಸಿಜನ್ ಕೊರತೆಯಿಂದ ಒಬ್ಬರೂ ಸತ್ತಿಲ್ಲ ಎಂದು ಹೇಳುತ್ತಾರೆ. ನಾನು ಮನೆ ಮನೆಗೂ ಹೋಗಿ ಪ್ರತಿ ಮನೆಗೂ 1 ಲಕ್ಷ ನೆರವು ನೀಡಿ ಬಂದೆ ಎಂದು ಹೇಳಿದರು.
ಇದನ್ನೂ ಓದಿ:ಮನೆ ಇದೆ ಕೋಣೆಗಳಿಲ್ಲ ಇಲ್ಲೂ ನೆಮ್ಮದಿಯ ಬದುಕು ಕಾಣಬಹುದಲ್ಲಾ?
ಮಾಜಿ ಮೇಯರ್ ಪದ್ಮಾವತಿ ಈ ಭಾಗದಲ್ಲಿ ನಮ್ಮ ಪಕ್ಷದ ಮುಖಂಡರು ಬಡವರಿಗೆ ನೆರವಾಗುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆಯವರು ದುಡಿದ ದುಡ್ಡಲ್ಲಿ ನಿಮಗೆ ನೆರವಾಗುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶಿವನಹಳ್ಳಿ ವಾರ್ಡ್‌ನಲ್ಲಿ ನಮ್ಮ ಮುಖಂಡರಾದ ವಿಜಯ್ ಕುಮಾರ್ ಹಾಗೂ ಮಂಜುಳಾ ವಿಜಯ್ ಕುಮಾರ್ ಅವರು 4 ಸಾವಿರ ಜನರಿಗೆ ಆಹಾರ ಕಿಟ್ ನೀಡುತ್ತಿದ್ದಾರೆ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜಾಜಿನಗರ ಕ್ಷೇತ್ರದ ಪ್ರತಿ ಗಲ್ಲಿಯೂ ನನಗೆ ಗೊತ್ತಿದೆ. ನಾನು ಮಂತ್ರಿಯಾಗುವವರೆಗೂ ಇಲ್ಲೇ ಇದ್ದೆ. ನಂತರ ಬೇರೆ ಕಡೆ ಹೋಗಿದ್ದೇನೆ, ಆದರೂ ಈ ಕ್ಷೇತ್ರದ ಜೊತೆಗಿನ ಪ್ರೀತಿ, ಸಂಬಂಧ ಬಿಟ್ಟಿಲ್ಲ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಮೇಯರ್ ಪದ್ಮಾವತಿ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಜಮೀರ್ ಅಹಮದ್ ನಮ್ಮ ಪಕ್ಷದ ನಾಯಕರು. ಅವರ ಮನೆ ಮೇಲೆ ಇಡಿ ದಾಳಿ ಬಗ್ಗೆ ನನಗೆ ಇರುವ ಕಾನೂನು ಅರಿವಿನ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನಾನು ಈ ಬಗ್ಗೆ ವೈಯಕ್ತಿಯವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಖಾಸಗಿಯಾಗಿ ನನ್ನ ಅನುಭವವನ್ನು ಅವರೊಟ್ಟಿಗೆ ಹಂಚಿಕೊಳ್ಳಲು ಸಿದ್ಧನಿದ್ದೇನೆ. ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುರಿತಾಗಿ ಜಮೀರ್ ಅವರು ಮಾಡಿರುವ ಆರೋಪಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ.
– ಡಿ.ಕೆ.ಶಿವಕುಮಾರ್
You seem to have an Ad Blocker on.
To continue reading, please turn it off or whitelist Udayavani.