ಆ ಅಮೃತ ಘಳಿಗೆಯೇ ಚಿರಂಜೀವಿ
Team Udayavani, Aug 15, 2021, 6:20 AM IST
1947 ಆಗಸ್ಟ್ 14ರ ಮಧ್ಯರಾತ್ರಿ ; ಅಮೃತ ಮಹೋತ್ಸವಕ್ಕೆ ಸಂದೇಶ :
ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲ. ದುಶ್ಚಟಗಳಿಗೆ ಬಲಿಯಾಗದೆ ದೇಶಾಭಿಮಾನದಿಂದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು. ವಿದ್ಯಾರ್ಥಿಗಳು ಬುದ್ಧಿವಂತರಾದರೆ ಸಾಲದು. ವಿನಯವಂತರೂ ಆಗಿ ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು. ತಾಯಿ ತಂದೆಯನ್ನು ಗೌರವದಿಂದ ಕಂಡು, ಅವರ ಇಳಿ ವಯಸ್ಸಿನಲ್ಲಿ ಆರೈಕೆ ಮಾಡಬೇಕು. ಎಲ್ಲರೂ ತಮ್ಮ ತಮ್ಮ ಕರ್ತವ್ಯವನ್ನು ದಕ್ಷತೆ ಮತ್ತು ಬದ್ಧತೆಯಿಂದ ಮಾಡಿದರಷ್ಟೇ ದೇಶದ ಪ್ರಗತಿ ಸಾಧ್ಯ.-ಪಡಂಗಡಿ ಭೋಜರಾಜ ಹೆಗ್ಡೆ
ಭಾರತ್ ಮಾತಾ ಕೀ ಜೈ…
ನನಗೆ 12 ವರ್ಷ. 6ನೇ ತರಗತಿ. ಆ. 14ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತೆಂದು ಶಾಲೆಯಲ್ಲಿ ಶಿಕ್ಷಕರು ಹೇಳಿದ್ದರು. ಊರಿನ ಸ್ವಾತಂತ್ರ್ಯ ಹೋರಾಟ ಗಾರರೆಲ್ಲ ಸಭೆ ಸೇರಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದರು. ತಡರಾತ್ರಿ ಗಂಟೆ 12 ಆಗುತ್ತಿದ್ದಂತೆ ಗರ್ನಾಲ್, ಕದನಿಗಳ ಸದ್ದು. ಬಾಣ, ದುರ್ಸುಗಳ ಬೆಳಕು ಕಣ್ಣು ಕೋರೈಸಿತು. ಲಾಟೀನು, ಗ್ಯಾಸ್ ಲೈಟುಗಳ ಬೆಳಕು ಝಗಮಗಿಸುತ್ತಿತ್ತು. ಇವೆಲ್ಲವನ್ನೂ ಮೀರಿ ಭಾರತ ಮಾತಾ ಕೀ ಜೈ ಘೋಷಣೆ ಮೊಳಗುತ್ತಿತ್ತು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನದ ಎದುರಿನ ಜಾಗದಲ್ಲಿ ಎಲ್ಲಿಂದಲೋ ಕಡಿದು ತಂದ ಮರದ ಕಂಬ ನೆಟ್ಟು ಧ್ವಜಾರೋ ಹಣ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟ ಗಾರ ಗಾಂಧಿ ರಾಮಣ್ಣ ಶೆಟ್ಟರು ಧ್ವಜದ ಹಗ್ಗವನ್ನು ಎಳೆಯುತ್ತ, ಅದು ಒಂದೊಂದೇ ಅಂಗುಲ ಮೇಲೇರುತ್ತಿದ್ದಂತೆ ಸೇರಿದ್ದ ಜನರ ಕಂಗಳಲ್ಲಿ ಆನಂದಾಶ್ರು. ಜೈಕಾರ ಮುಗಿಲು ಮುಟ್ಟಿತ್ತು. ಈ ಸಂಭ್ರಮವನ್ನು ಹೆಚ್ಚಿಸಲೆಂದೋ ವರುಣದೇವ ಮಳೆ ಸುರಿಸಿದ. ಭಾರತಾಂಬೆಯೇ ಪುಳಕಗೊಂಡು ಸುರಿಸಿದ ಆನಂದಭಾಷ್ಪ ದಂತೆ ನಮಗೆಲ್ಲ ಮೈ ಮನಗಳಲ್ಲಿ ಪುಳಕ. ಈ ಖುಷಿಗೆ ಸಾಥಿ ಯಾಗಿ ಎರಡೆರಡು ಸಿಹಿ-ನನಗಿನ್ನೂ ನೆನಪಿದೆ; ಮೈಸೂರು ಪಾಕ್ ಮತ್ತು ಲಾಡು!
“ಸ್ವಾತಂತ್ರ್ಯ ಲಭಿಸುವ ಕುರಿತು ಮೊದಲೇ ಹೇಳಲಾಗಿತ್ತಷ್ಟೆ. ಶಾಲೆ ಬಿಟ್ಟು ಮನೆಗೆ ಹೋದ ನಮಗೆ ಎಂದಿನಂತೆ ರಾತ್ರಿ ನಿದ್ರೆ ಬರಲೇ ಇಲ್ಲ. ಯಾವಾಗ ಗಂಟೆ 12 ಆಗಲಿದೆ ಎಂಬ ಕುತೂಹಲ. ತಾಸಿಗೂ ಮುನ್ನ ಮೈದಾನ ಸೇರಿದ್ದೆವು. ಆಗಲೇ ಮೈದಾನದ ತುಂಬಾ ಜನ ಸೇರಿದ್ದರು. ಅನಂತರ ನಡೆದದ್ದೆಲ್ಲ ಅವರ್ಣನೀಯ. ಭಾರತಾಂಬೆಯ ದಾಸ್ಯ ಶೃಂಖಲೆ ಹರಿದುದರ ದ್ಯೋತಕ. ಭಾಷಣದ ನೆನಪಿಲ್ಲ. ಮರುದಿನ ಕಂಡ್ಲೂರು ಉರ್ದು ಶಾಲೆ, ಯುಬಿಎಂ ಹಾಗೂ ಹಿಂದೂ ಶಾಲೆ, ಆರ್.ಸಿ. ಸ್ಕೂಲ್ (ಚರ್ಚ್ ಶಾಲೆ), ಬಳ್ಕೂರು ಹಿ.ಪ್ರಾ. ಶಾಲೆ-ಹೀಗೆ ಎಲ್ಲೆಡೆ ಧ್ವಜಾರೋಹಣ, ದೇಶಭಕ್ತಿಗೀತೆ ಇತ್ಯಾದಿಗಳಿದ್ದವು. ಒಟ್ಟು ದೊಡ್ಡ ತಪಸ್ಸಿನ ಫಲ ಈಡೇರಿದಂತೆ ತೋರುತ್ತಿತ್ತು. ಅದು ಅವಿಸ್ಮರಣೀಯ. -ಬಿ. ಅಪ್ಪಣ್ಣ ಹೆಗ್ಡೆ ಕುಂದಾಪುರ
ಕಾಲ್ನಡಿಗೆಯ ಮೆರವಣಿಗೆ :
ಬ್ರಿಟಿಷರ ಪಾರತಂತ್ರ್ಯಕ್ಕೆ ಸಿಲುಕಿ, ನಲುಗಿ ಹೋಗಿದ್ದ ಭಾರತೀಯರಿಗೆ ಸ್ವಾತಂತ್ರ್ಯ ಸಿಕ್ಕಿ ಸಂಭ್ರಮ ಪಟ್ಟ ಮೊದಲ ದಿನ ಎಂದಿಗೂ ಮರೆಯಲಾಗದ್ದು. ಅಂದು ಮಧ್ಯರಾತ್ರಿಯಿಂದಲೇ ನಮ್ಮೂರಿನ ಎಲ್ಲೆಡೆ ಸಂಭ್ರಮ ಕುಣಿಯುತ್ತಿತ್ತು. ಆ. 15ರ ಬೆಳಗ್ಗೆ ಬೇಳಂಜೆಯಿಂದ ದೂಪದಕಟ್ಟೆಯವರೆಗೆ ನಡೆದ ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದೆ. ಬೇಳಂಜೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಊರಿನ ಶಾನು ಭೋಗರಾಗಿದ್ದ ವಿಠ್ಠಲ ಹೆಗ್ಡೆಯವರು ಧ್ವಜಾರೋಹಣ ನೆರವೇರಿಸಿ ದ್ದರು. ಅವರಿಗೆ ಊರಿನ ಗಣ್ಯರಾಗಿದ್ದ ಬೂತ್‌ಗುಂಡಿ ಸೋಮಯ್ಯ ಶೆಟ್ಟಿ ಸಾಥ್ ನೀಡಿದ್ದರು. ಬಳಿಕ ದೇವಸ್ಥಾನದಿಂದ ದೂಪದಕಟ್ಟೆಯ ಶ್ರೀ ಮಹಿಷಮರ್ದಿನಿ ಅಮ್ಮನವರ ದೇವಸ್ಥಾನದ ವರೆಗೆ ಸುಮಾರು 2.5 ಕಿ.ಮೀ. ದೂರ ವಿಠuಲ ಹೆಗ್ಡೆಯವರ ನೇತೃತ್ವದಲ್ಲಿ ಕಾಲ್ನಡಿಗೆಯ ಮೆರವಣಿಗೆ ನಡೆಯಿತು. ಸುಮಾರು 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮೆರವಣಿಗೆ ಸಮಾಪನಗೊಂಡ ಅಮ್ಮನವರ ದೇವಸ್ಥಾನದಲ್ಲಿ ಬೃಹತ್ ಸಭಾಕಾರ್ಯಕ್ರಮ ನಡೆಯಿತು. ನಾವೆಲ್ಲ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಗತ್ತಿನಿಂದ, ಸಂಭ್ರಮದಿಂದ ಭಾಗಿಯಾಗಿದ್ದೆವು.
ಹಂತಹಂತವಾಗಿ ಬ್ರಿಟಿಷರ ವಿರುದ್ಧ ಭಾರತೀಯರ ಹೋರಾಟ ಹೆಚ್ಚಾಗುತ್ತ ಸಾಗಿತ್ತು. ಪ್ರತೀ ಹಳ್ಳಿ, ಗ್ರಾಮ, ಪಟ್ಟಣದ ತುಂಬಾ ಸ್ವಾತಂತ್ರ್ಯದ ವಿಚಾರಧಾರೆಯೇ ಹರಿದಿತ್ತು. ಸಹಸ್ರಾರು ಮಂದಿ ಮಹನೀಯರ ತ್ಯಾಗ-ಬಲಿದಾನದಿಂದ ನಾವಿಂದು ಸ್ವತಂತ್ರರಾಗಿದ್ದೇವೆ. ಇದರ ಹಿಂದಿನ ತ್ಯಾಗ- ಬಲಿದಾನವನ್ನು ಪ್ರತಿಯೊಬ್ಬ ಭಾರತೀಯನೂ ಮರೆಯಬಾರದು . - ರಾಮ ಪೂಜಾರಿ ಬೆಳ್ವೆ
ಊರಿನ ಹಬ್ಬದಂತೆ ಆಚರಣೆ :
ಪ್ರಥಮ ಸ್ವಾತಂತ್ರ್ಯ ಉತ್ಸವವನ್ನು ಊರಿನ ಹಬ್ಬದಂತೆ ಆಚರಿಸಲಾಗಿತ್ತು. ನಾನು ಆರನೆಯ ತರಗತಿಯಲ್ಲಿ ಓದುತ್ತಿದ್ದೆ. ಇಡೀ ಊರಿನವರು ಸ್ವಾತಂತ್ರ್ಯವನ್ನು ಸ್ವಾಗತಿಸಿದ ಪರಿಯೇ ಅದ್ಭುತ. ಜಿಲ್ಲೆಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಅಗ್ರಗಣ್ಯ ಮನೆತನದಲ್ಲಿ ಪಾಂಗಾಳ ನಾಯಕ್ ಕುಟುಂಬವೂ ಒಂದು. ಪಾಂಗಾಳ ಮಂಜುನಾಥ ನಾಯಕ್, ಲಕ್ಷ್ಮೀನಾರಾಯಣ ನಾಯಕ್, ಮನೋರಮಾ ನಾಯಕ್ ಮತ್ತಿತರರು ಜೈಲು ವಾಸ ಅನುಭವಿಸಿದ್ದರು. ಆ ರಾತ್ರಿ ಉಡುಪಿ ರಥಬೀದಿಯಲ್ಲಿ ಸ್ವಾತಂತ್ರ್ಯೋತ್ಸವ ನಡೆದರೆ, ಆ. 15ರಂದು ನಾನಿದ್ದ ನಗರದ ಪ್ರಮುಖ ಶಾಲೆಗಳಲ್ಲಿ ಒಂದಾದ ಬೋರ್ಡ್ ಹೈಸ್ಕೂಲಿನಲ್ಲಿ ಮತ್ತು ಇತರ ಶಾಲೆಗಳಲ್ಲಿ, ಅಜ್ಜರಕಾಡಿನಲ್ಲಿ ಮೆರವಣಿಗೆ, ರಾಷ್ಟ್ರಧ್ವಜಾ ರೋಹಣ ನಡೆದವು. ಆಗಿನ ಉಡುಪಿಯ ಜನಸಂಖ್ಯೆ 11,000. ಇದಕ್ಕೆ ತಕ್ಕಂತೆ ಸಾಕಷ್ಟು ಜನರು ಸೇರಿದ್ದರು.
ನನ್ನ ತಂದೆ ಮಲ್ಪೆ ವಾಮನ ಭಟ್ ಗಾಂಧೀವಾದಿಯಾಗಿದ್ದರು. ಅವರು ಖದ್ದರ್ ಬಟ್ಟೆಯಿಂದ ತಯಾರಿಸಿದ ಶಾಲು, ಮುಂಡು(ಪಂಚೆ),ಅಂಗಿ ಧರಿಸುತ್ತಿದ್ದರು. ಗಾಂಧೀ ಹತ್ಯೆಯಾದ ಬಳಿಕ ಭಸ್ಮವನ್ನು ಎಲ್ಲ ಕಡೆ ತಂದಿ ದ್ದರು. ಉಡುಪಿಗೂ ಬಂದಿತ್ತು. ಆಗ ಉಡುಪಿಯಿಂದ ಮಲ್ಪೆಯವರೆಗೆ ಮೆರವಣಿಗೆ ಹೋಗಿ ಸಮುದ್ರದಲ್ಲಿ ಭಸ್ಮವನ್ನು ವಿಸರ್ಜಿಸಲಾಯಿತು. ಆ ಮೆರವಣಿಗೆಯಲ್ಲೂ ನಾನೂ ಪಾಲ್ಗೊಂಡಿದ್ದೆ.-ಎಂ. ಸೋಮಶೇಖರ ಭಟ್ ಉಡುಪಿ
ಬಾಂಬ್ ಬೀಳುವ ಘೋಷಣೆಗೆ ಹೆದರಿ ಹೊಂಡದಲ್ಲಿ ಅಡಗಿ ಕೂರುವ ಸ್ಥಿತಿ :
ಸ್ವಾತಂತ್ರ್ಯ ಪಡೆಯುವ ಒಂದೆರಡು ವರ್ಷಗಳ ಹಿಂದಿನ ಮಾತು ಮೊದಲು ಹೇಳುವೆ. ಅಂದು ಭಯದಲ್ಲೇ ಜೀವನ ಕಳೆಯಬೇಕಾದ ಸ್ಥಿತಿ. ಮಂಗಳೂರಿನ ಬೊಕ್ಕಪಟ್ಣ ಶಾಲೆಯಲ್ಲಿ ಕಲಿಯುತ್ತಿದ್ದೆ. ಬಾಂಬ್ ಬೀಳುತ್ತದೆ ಎಲ್ಲರೂ ಅಡಗಿಕೊಳ್ಳಿ ಎಂಬ ಘೋಷಣೆ ಆಗಾಗ ಮೈಕ್ ಮೂಲಕ ಮೊಳಗು ತ್ತಿತ್ತು. ಆಗ ನಾವೆಲ್ಲರೂ ಎದ್ದು ಬಿದ್ದು ಓಡಿ ಹೋಗಿ ಶಾಲಾ ಮೈದಾನ ದಲ್ಲಿ ಅಗೆದ ಹೊಂಡ ದಲ್ಲಿ ಕುಳಿತುಕೊಳ್ಳುತ್ತಿದ್ದೆ ವು. ಶಿಕ್ಷಕರೂ ಅದನ್ನೇ ಮಾಡುತ್ತಿದ್ದರು. ಸ್ವಾತಂತ್ರ್ಯ ಲಭಿಸಿದಾಗ ನಮ ಗೆಲ್ಲ ಸಂಭ್ರಮ. ಆಗ ಎಲ್ಲರಿಗೂ ಮಹಾತ್ಮಾ ಗಾಂಧೀಜಿಯವರೇ ಪ್ರೇರಣೆ, ಅವರು ಹೇಳಿ ದಂತೆ ಎಲ್ಲರೂ ಕೇಳುತ್ತಿದ್ದರು. ನಮ್ಮ ಶಾಲೆಯಲ್ಲೂ ಮೊದಲ ಸ್ವಾತಂತ್ರ್ಯದಿನಾಚರಣೆ ನಡೆದಿತ್ತು. ಸಹಬಾಳ್ವೆ, ಸಹಿಷ್ಣುತೆ, ಸಮಭಾವ, ಸಮಬಾಳು ಈ ದೇಶದ ಸಂವಿಧಾನ ದ ಆಶಯ ಮತ್ತು ಅದು ಈ ನೆಲದ ಗುಣ. ಅಂತಹ ಶ್ರೇಷ್ಠ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ಇದು ನಮ್ಮೆಲ್ಲರ ಕರ್ತವ್ಯ. ದೇಶದ ಅಭಿವೃದ್ಧಿ, ಬಡವರ ಪರ ಕಾಳಜಿಯ ಮನೋಭೂಮಿಕೆ ಮತ್ತಷ್ಟು ಗಟ್ಟಿಯಾಗಲಿ. -ಬಿ. ಜನಾರ್ದನ ಪೂಜಾರಿ ಬಂಟ್ವಾಳ
ದೇಶಾಭಿಮಾನ ಉಕ್ಕಿ ಹರಿದ ದಿನ :
ಪ್ರಥಮ ಸ್ವಾತಂತ್ರ್ಯ ಆಚರಣೆ ಸಂಭ್ರಮದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲ ; ಅದಾದ ಬಳಿಕ ಅದೆಷ್ಟು ಸ್ವಾತಂತ್ರ್ಯ ಸಂಭ್ರಮಗಳಲ್ಲಿ ಪಾಲ್ಗೊಂಡಿದ್ದೆ. ಅದೆಷ್ಟೋ ಕಡೆ ಭವ್ಯ ಭಾರತದ ತ್ರಿವರ್ಣ ಧ್ವಜ ಏರಿಸಿದ್ದೇನೆ.
ಸ್ವಾತಂತ್ರ್ಯ ದೊರೆತಾಗ ನನಗೆ 18ರ ಹರಯ. ಉತ್ಸಾಹ, ಹುರುಪು ಎಲ್ಲ ಇದ್ದಿತ್ತು. ವಕೀಲ ಕಲಿಕೆ ಸಂದರ್ಭ. ಸಹಜವಾಗಿ ಹಿರಿಯರಿಂದ ಮೈಗೂ ಡಿದ ಭಾರತೀಯತೆ, ದೇಶಪ್ರೇಮ ನನ್ನಲ್ಲೂ ಸೇರಿತ್ತು. ಹಾಗಾಗಿ ಹಲವು ದಿನಗಳಿಂದ ಸ್ವಾತಂತ್ರ್ಯದ ಆಚರಣೆ ಗಾಗಿ ನಡೆದ ಸಿದ್ಧತೆ ಯಂತೆಯೇ ನಾನೂ ಧ್ವಜಾರೋಹಣದಲ್ಲಿ ಭಾಗವಹಿಸಿದ್ದೆ. ಆದರೆ ಈಗ ವಯೋಸಹಜ ವಾಗಿ ಆ ನೆನಪುಗಳೆಲ್ಲಾ ಅಸ್ಪಷ್ಟವಾಗಿವೆ. ನೆನಪುಗಳು ಕೈಹಿಡಿದು ಹಿಂದಕ್ಕೆ ಜಗ್ಗುತ್ತವೆ. ಹಿಂದಿನಂತೆ ಅವುಗಳೆಲ್ಲ ಸುರುಳಿ ಯಂತೆ ಬಿಚ್ಚಿಕೊಳ್ಳುವುದಿಲ್ಲ. ಆದರೆ ಆ ದಿನದ ಸಂಭ್ರಮ, ದೇಶಭಕ್ತಿಯ ವಾತಾವರಣ ಎಂದಿಗೂ ಮರೆತಿಲ್ಲ. ಅಂದಿನ ದಿನಾಚರಣೆಯ ಕೆಲವು ವಿವರಗಳು ಅಸ್ಪಷ್ಟವಾಗಿರಬಹುದಷ್ಟೇ. ಅದು ದೇಶಾಭಿಮಾನ ಉಕ್ಕಿ ಹರಿದ ದಿನ. ಅದರಲ್ಲಿ ಯಾವುದೇ ಸಂಶಯವಿಲ್ಲ. ಎ.ಜಿ. ಕೊಡ್ಗಿ ಅಮಾಸೆಬೈಲು
ಊರಲ್ಲೆಲ್ಲಾ ಸಿಹಿ ಹಂಚಿಕೆ :
ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ವಿದ್ಯಾರ್ಥಿ. ನಮ್ಮ ಕಾಲೇಜಿನಲ್ಲಿಯೂ ಸ್ವಾತಂತ್ರ್ಯ ಸಂಭ್ರಮ ಬಿರುಸಾಗಿತ್ತು. ಹಬ್ಬದ ವಾತಾವರಣ. ಮಂಗಳೂರು ನಗರದಲ್ಲಿ ಸಂಭ್ರಮವೋ ಸಂಭ್ರಮ.
ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮ ಮಂಗಳೂರಿ ನಲ್ಲೂ ಮನೆ ಮಾಡಿತ್ತು. ಆ ದಿನ ಬೆಳಗ್ಗೆ ನಗರ ಶೃಂಗಾರಗೊಂಡು, ರಸ್ತೆಯುದ್ದಕ್ಕೂ ಜಯ ಘೋಷ ಮೊಳಗಿತ್ತು. ಆ. 15ರ ಸಂಜೆ ಮಂಗಳೂರಿನ ನೆಹರೂ ಮೈದಾನ (ಆಗ ಕೇಂದ್ರ ಮೈದಾನ)ದಲ್ಲಿ ಬೃಹತ್ ಸಭೆ, ಧ್ವಜಾ ರೋಹಣ ನಡೆದಿತ್ತು. ಊರ, ಪರವೂರಿನ ನೂರಾರು ಮಂದಿ ಅದಕ್ಕೆ ಸಾಕ್ಷಿಯಾಗಿದ್ದರು.
ಆ ದಿನ ಬೆಳಗ್ಗೆ 9 ಕ್ಕೆ ಕಾಲೇಜಿನಲ್ಲಿ ಕಾರ್ಯಕ್ರಮವಿತ್ತು. ಎನ್.ಎಸ್. ಕಿಲ್ಲೆ, ಕಾರಂತರು ಇದರ ಮುಖ್ಯ ರೂವಾರಿಗಳು. ಕಾರ್ಯಕ್ರಮದ ಬಳಿಕ ನಾವೆಲ್ಲ ಲಾರಿ, ಬಸ್‌ಗಳಲ್ಲಿ ಹತ್ತಿ ಜಯ ಘೋಷದೊಂದಿಗೆ ನಗರದೆಲ್ಲೆಡೆ ಸುತ್ತಾಡಿದೆವು. ಆ ವೇಳೆ ಮುಖ್ಯವಾಗಿ ಕೆ.ಕೆ. ಶೆಟ್ಟಿ, ಲೋಕಯ್ಯ ಶೆಟ್ಟಿ, ಭಾಸ್ಕರ ರೈಗಳು ಮುಂಚೂಣಿಯಲ್ಲಿದ್ದರು. ಅಂಗಡಿಗಳಲ್ಲಿ, ರಸ್ತೆ ಬದಿಗಳಲ್ಲಿ ತಿಂಡಿ ತಿನಿಸುಗಳನ್ನು ಹಂಚಲಾಗುತ್ತಿತ್ತು. ಆ ದಿನ ಮಳೆ ಇಲ್ಲದ ಕಾರಣ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. -ಪ್ರೊ| ಜಿ.ಆರ್. ರೈ ಮಂಗಳೂರು
ದೇಶಭಕ್ತಿಯ ಬಗ್ಗೆ ಮಾತನಾಡಿದ್ದೆ :
“ಪ್ರಥಮ ಸ್ವಾತಂತ್ರ್ಯ ದಿನ. ದೇಶಭಕ್ತಿಯಲ್ಲಿ ಮಿಂದೆದ್ದ ವಾತಾವರಣವಿತ್ತು. ನಾನು ಬೈಲೂರು, ಹಿರಿಯಡಕ, ಪೆರ್ಡೂರಿನಲ್ಲಿ ನಡೆದ ಆಚರಣೆಯಲ್ಲಿ ಪಾಲ್ಗೊಂಡು ದೇಶಭಕ್ತಿಯ ಸಂದೇಶ ಕೊಟ್ಟಿದ್ದೆ. ಆಗಷ್ಟೇ ಸಿಂಡಿಕೇಟ್ ಬ್ಯಾಂಕ್‌ಗೆ ಸೇರಿದ್ದವ. ಆಗ ಮೆನೇಜರ್‌ರನ್ನು ಏಜೆಂಟ್ ಎಂದು ಕರೆಯುವ ಕ್ರಮ ಬ್ಯಾಂಕ್‌ನಲ್ಲಿತ್ತು. ಪ್ರಥಮ ಸ್ವಾತಂತ್ರೊéàತ್ಸವದಲ್ಲಿ ಭಾಗಿಯಾಗುವ ಭಾಗ್ಯ ನನಗೆ ಸಿಕ್ಕಿದ್ದೇ ಅಚ್ಚರಿ. ಜತೆಗೆ ದೇಶದ ಕುರಿತು ಮಾತನಾಡಲು ಸಿಕ್ಕಿದ್ದು ದೊಡ್ಡ ಅವಕಾಶ’
ಸ್ವಾತಂತ್ರ್ಯ ಸಿಕ್ಕಿದ ಸಂದರ್ಭ ಮಣಿಪಾಲದ ಟಿ.ಎ. ಪೈಯವರ ಚಿಂತನೆಯನುಸಾರ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅವಲಕ್ಕಿ ಉತ್ಪಾದಿಸಿ ಬಡವರಿಗೆ ಸಿಗುವಂತೆ ಮಾಡಿದೆ. ಆಗ ಎಲ್ಲೆಡೆ ಬಡತನವಿತ್ತು. ಅವಲಕ್ಕಿಯಾ ದರೂ ಸಿಗಬೇಕೆಂಬುದು ಟಿ.ಎ. ಪೈಯವರ ಆಶಯ. ಆ ಸಂಪರ್ಕಜಾಲದ ಕಾರ್ಯದರ್ಶಿ ಯಾಗಿ ಕೆಲಸವನ್ನು ನಿರ್ವಹಿಸಿದ್ದೆ ಎನ್ನುವ ಅವರು, ಗಾಂಧೀಜಿಯವರು ಉಡುಪಿಗೆ ಬಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ.
ಆ ಕಾಲದ ಪ್ರಭಾವದ ಕಾರಣದಿಂದ ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಬೇಕೆಂದು ಪರ್ಕಳದ ನಿವಾಸಿ ಮಾಣೆಬೆಟ್ಟು ನಾಗಪ್ಪ ಶಾನುಭಾಗರು ತಮ್ಮ ಮಕ್ಕಳಿಗೂ ಹೇಳುತ್ತಾರೆ. ಸಿಂಡಿಕೇಟ್ ಬ್ಯಾಂಕ್‌ನಲ್ಲಿ ವಿಭಾಗೀಯ ಪ್ರಬಂ ಧಕರಾಗಿ ನಿವೃತ್ತಿಯಾಗಿರುವ 94 ರ ವಯಸ್ಸಿನ ಇವರು, ಸೇವಾವಧಿ ಯಲ್ಲಿ ಸಿಂಡಿಕೇಟ್ ಬ್ಯಾಂಕ್ ಸ್ಥಾಪಕ ಡಾ| ಟಿ.ಎಂ.ಎ. ಪೈ ಯವರ ಆಪ್ತ ಕಾರ್ಯ ದರ್ಶಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಡಾ| ಟಿ.ಎಂ.ಎ. ಪೈ, ಟಿ.ಎ. ಪೈಯವರಲ್ಲದೆ ಉಪೇಂದ್ರ ಪೈಯವರಿಗೂ ನಿಕಟ ಸಂಪರ್ಕ ಹೊಂದಿದ್ದರು. -ಎಂ.ಎನ್. ಶಾನುಭಾಗ್ ಪರ್ಕಳ
ಸ್ವಾತಂತ್ರ್ಯ ಲಭಿಸಿದಾಗ ಸಣ್ಣ ಬಾಲಕನಾಗಿದ್ದೆ :
ಸ್ವಾತಂತ್ರ್ಯ ಬಂದಾಗ ನಾನು 2ನೇ ಅಥವಾ 3ನೇ ತರಗತಿಯಲ್ಲಿ ಇದ್ದಿರಬಹುದು. ಬೆಳ್ಮಣ್ ಶಾಲೆಯಲ್ಲಿ ಮೊದಲ ಸ್ವಾತಂತ್ರ್ಯೋತ್ಸವ ದಿನಾಚರಣೆ. ಧ್ವಜಾರೋಹ ಣದಲ್ಲಿ ಭಾಗವಹಿಸಿದ್ದೆ. ಕಷ್ಟ ಕಾಲದ ಆ ದಿನ ಸ್ವಾತಂತ್ರ್ಯ ದಿನಾಚರಣೆಗೆ ಚಡ್ಡಿ ಮತ್ತು ಅಂಗಿ ಧರಿಸಿ ಹೋಗಿದ್ದೆ. ನನಗೂ ಅದರ ಮಹತ್ವ ಅಷ್ಟೊಂದು ತಿಳಿದಿರಲಿಲ್ಲ. ಮನೆಯಿಂದ ಅಪ್ಪ ಅಮ್ಮ ಶಾಲೆಗೆ ಹೋಗಲು ಕಳಿಸಿದ್ದರು, ನಾನು ಹೋಗಿದ್ದೆ. ಧ್ವಜಾರೋಹಣ ವೇಳೆ ಜನಗಣಮನ ಅಂತ ಗೀತೆ ಹಾಡಿದ್ದರು. ಕೊಟ್ಟಿದ್ದ ಚಾಕಲೇಟು ತಿಂದು ಸಂಭ್ರಮಿಸಿದ್ದೆ. ಆಗ 10-20 ವಿದ್ಯಾ ರ್ಥಿಗಳಷ್ಟೇ ಶಾಲೆಯಲ್ಲಿದ್ದರು. ಒಬ್ಬರೇ ಶಿಕ್ಷಕರು.
ಆಗ ಅವೆಲ್ಲವೂ ಅಷ್ಟೊಂದು ಅರ್ಥವಾಗಿಲ್ಲದಿರ ಬಹುದು. ಆದರೆ ಅಂದಿನ ದೇಶಪ್ರೇಮವೇ ನನ್ನನ್ನು ಹುರಿದುಂ ಬಿಸಿತು. ಸೈನಿಕನಾಗಿ ಸೇನೆ ಸೇರಿ ದೇಶ ಸೇವೆ ಮಾಡಿದೆ. ನಿಜ, ಮೊದಲ ಸ್ವಾತಂತ್ರ್ಯ ದಿನಾಚರಣೆಯ ಬಾಲ್ಯದ ನೆನಪುಗಳು ಸರಿಯಾಗಿ ಇಲ್ಲದೇ ಇದ್ದರೂ ಅಮೃತ ಮಹೋತ್ಸವದ ಸಂದರ್ಭ ನಾನು ಇದ್ದೇನೆ ಎನ್ನುವುದೂ ಸಂತೋಷದ ವಿಷಯ. ಈ ಬಾರಿಯೂ ಸ್ವಾತಂತ್ರಯೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದಿದ್ದೇನೆ.
ನಾನು ಹುಟ್ಟಿದ ದಿನಾಂಕದ ಬಗ್ಗೆ ನನಗೆ ಸ್ಪಷ್ಟ ದಾಖಲೆಗಳಿಲ್ಲ. 5ನೇ ತರಗತಿ ಕಲಿತು ಮುಂಬಯಿಗೆ ಕೆಲಸಕ್ಕೆಂದು ತೆರಳಿದ್ದೆ. ಅಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಒಂದು ದಿನ ಮೈದಾನದಲ್ಲಿದ್ದ ಸಮವಸ್ತ್ರ ಧರಿಸಿದ್ದ ಅಧಿಕಾರಿಯೊಬ್ಬ ಕರೆದು, “ಕೆಲಸ ಬೇಕಾ, ಭಾರತೀಯ ಸೇನೆ ಸೇರುತ್ತೀಯಾ’ ಎಂದು ಕರೆದರು. ಹೋದೆ, ನೇಮಕವಾದೆ. ಸೇನೆ ಸೇರಿ ಒಂದು ವರ್ಷದ ಬಳಿಕ ಮನೆಗೆ ತೆರಳಿ ತಿಳಿಸಿದೆ. ನಾನು ಸೇನೆ ಸೇರಿದ್ದು ಮನೆಯವರಿಗೆ ತಿಳಿದದ್ದು ಆಗಲೇ. ನಾನು ರಜಪೂತ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದೆ. ಅವೆಲ್ಲವೂ ಅವಿಸ್ಮರಣೀಯ ದಿನಗಳು. –ಸಂಕಪ್ಪ ಪೂಜಾರಿ ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.