ಕಾವೇರಿ ತೀರದ ಸಾಂಸ್ಕೃತಿಕ ಇತಿಹಾಸದ ದಾಖಲೆ
Team Udayavani, Aug 15, 2021, 1:14 PM IST
‘ಕಾವೇರಿ ತೀರದ ಪಯಣ’ ಹೆಸರೇ ಸೂಚಿಸುವಂತೆ ಕನ್ನಡನಾಡು ಮತ್ತು ತಮಿಳುನಾಡುಗಳ ಜೀವನದಿಯಾದ ಕಾವೇರಿಯ ತೀರದಲ್ಲಿ ಆಗಿ ಹೋದ ಸಂಸ್ಕೃಇತಿ ಮತ್ತು ಇತಿಹಾಸಗಳ ದಾಖಲೆ. ಮೂಲ ಮಲೆಯಾಳ ಲೇಖಕರಾದ ಓ.ಕೆ.ಜೋಣಿ ಸ್ವತಃ ಆ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮತ್ತು ಕ್ಷೇತ್ರ ಕಾರ್ಯಗಳನ್ನು ನಡೆಸಿ ತಿಳಿದುಕೊಂಡ ಮತ್ತು ಇದು ವರೆಗೆ ಇತಿಹಾಸದಲ್ಲಿ ದಾಖಲಾಗದ ವಿಚಾರಗಳಿಗೆ ಇಲ್ಲಿ ಒತ್ತು ನೀಡುತ್ತಾರೆ. ಅವರ ಅದ್ಭುತ ಕಥನ ಕಲೆಗೆ ಒಂದಿಷ್ಟೂ ಚ್ಯುತಿಯಾಗದ ರೀತಿಯಲ್ಲಿ ಅನುವಾದಕ ವಿಕ್ರಂ ಕಾಂತಿಕೆರೆಯವರು ಅಷ್ಟೇ ಸುಂದರ ಭಾಷೆಯಲ್ಲಿ ಅದನ್ನು ನಿರೂಪಿಸುತ್ತಾರೆ.
ಎಲ್ಲರೂ ಕಾವೇರಿಯ ಉಗಮಸ್ಥಾನವೆಂದು ತಿಳಿಯುವ ತಲಕಾವೇರಿ ದೇವಸ್ಥಾನದ ಸುತ್ತಮುತ್ತಲ ಮಾನವ ನಿರ್ಮಿತ ಮಾಲಿನ್ಯದ ಪರಿಸರದಿಂದ ಅನತಿ ದೂರದಲ್ಲಿ ಕಾಡಿನ ಮಧ್ಯೆ ಇರುವ ಗಿಡಗಂಟೆಗಳೆಡೆಯಲ್ಲಿ ಜುಳುಜುಳನೆ ಚಿಮ್ಮುವ ಸ್ಫಟಿಕ ಶುದ್ಧ ಜಲವೇ ಕಾವೇರಿಯ ಜನ್ಮಸ್ಥಳವೆಂದು ಲೇಖಕರಿಗೆ ತೋರಿಸಿದವರು ಅಲ್ಲಿ ವಾಸಿಸುತ್ತಿದ್ದ ಆಧುನಿಕ ಚಿಂತಕ ಆನಂದತೀರ್ಥ ಸ್ವಾಮೀಜಿ. ಕಾವೇರಿಯ ಈ ಉಗಮಸ್ಥಾನದ ವರ್ಣನೆಯೊಂದಿಗೆ ತಮ್ಮ ಕಥನವನ್ನೂ ಆರಂಭಿಸುವ ಲೇಖಕರು ನದಿಯು ತಮಿಳುನಾಡಿನ ಪೂಂಪುಹಾರ್ ನಲ್ಲಿ ಸಮುದ್ರ ಸೇರುವ ತನಕ ಮುಂದುವರೆಸುತ್ತಾರೆ. ಕಾವೇರಿ ನೀರಿನ ಬಗ್ಗೆ ಜನರು ಬೆಳೆಸಿಕೊಂಡಿರುವ ‘ಪವಿತ್ರ ಜಲ’ ಅನ್ನುವ ನಂಬಿಕೆ, ಕಾವೇರಿಯ ಕುರಿತಾದ ಮಿಥ್‌ಗಳು, ಕಾವೇರಿ ಸಂಕ್ರಮಣದ ಸಂದರ್ಭದಲ್ಲಿ ಜನರ ಉತ್ಸಾಹ, ಭಾರತದ ಪುರಾಣಗಳಲ್ಲಿ ಕಾವೇರಿಯ ಉಲ್ಲೇಖಗಳ ಕುರಿತು ಹೇಳುತ್ತ ದಡದಲ್ಲಿರುವ ಶೈವ ಹಾಗೂ ವೈಷ್ಣವ ದೇವಸ್ಥಾನಗಳು, ದಟ್ಟವಾದ ಅರಣ್ಯ, ಹಿಂದೆ ಅಲ್ಲಿ ಹಿಂಡು ಹಿಂಡಾಗಿ ಬರುತ್ತಿದ್ದ ಆನೆಗಳ ಬಗ್ಗೆ ಹೇಳಿ, ಇಂದು ಅವೆಲ್ಲ ಮಾಯವಾಗಿ ಅಲ್ಲಿ ಅತಿಥಿ ಗೃಹಗಳು ತಲೆಯೆತ್ತಿರುವ ಕುರಿತು ಬೇಸರ ವ್ಯಕ್ತ ಪಡಿಸುತ್ತಾರೆ.
ಇದನ್ನೂ ಓದಿ : ವಿಶೇಷ ಮಗುವಿನ ತಾಯಿಯಾಗಿ ನಾನು ತಪ್ಪು ಮಾಡಿಲ್ಲ, ತನಿಖೆಗೆ ಸಿದ್ಧ: ಸಚಿವೆ ಜೊಲ್ಲೆ
ಬ್ರಹ್ಮಗಿರಿ ಬೆಟ್ಟದ ಮೇಲಿರುವ ತಲಕಾವೇರಿ ದೇವಸ್ಥಾನ, ಕಾವೇರಿ ತೀರ್ಥೋದ್ಭವದ ಕುರಿತು ಹೇಳಿ ಬೇಟೆ ಮತ್ತು ಕೃಷಿಗಳನ್ನೇ ಅವಲಂಬಿಸಿದ ಕೊಡವರು ಮತ್ತು ಜನಿವಾರಧಾರಿಗಳಾದ ಅಮ್ಮಕೊಡವರ ನಡುವಣ ವೈಷಮ್ಯ, ಭಾಗಮಂಡಲದ ಭಗಂಡೇಶ್ವರ ದೇವಾಲಯ, ಕೇರಳದ ರಾಜರುಗಳು ಭಗಂಡೇಶ್ವರ ಕ್ಷೇತ್ರದ ಜತೆಗೆ ಇಟ್ಟುಕೊಂಡ ಸಂಬಂಧ, ಕೊಡಗಿನ ಹಾಲೇರಿ ವಂಶದ ರಾಜರು ಟಿಪ್ಪು ಸುಲ್ತಾನ್ ಹಾಗೂ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಹೋರಾಡಿದ್ದು, ಟಿಪ್ಪು ಕೊಡಗಿನ ಕೋಟೆಯನ್ನು ವಶಪಡಿಸಿಕೊಂಡದ್ದು, ಟಿಪ್ಪುವಿನ ಪರಿಸರ ಕಾಳಜಿ, ಕೊಡಗಿನ ವೀರರಾಜೇಂದ್ರ ಅರಸು ಕಟ್ಟಿಸಿದ ಭವ್ಯವಾದ ನಾಲ್ಕ್ನಾಡ್ ಅರಮನೆ, ಚಿಕ್ಕವೀರರಾಜೇಂದ್ರ ಬ್ರಿಟಿಷರಿಗೆ ಟಿಪ್ಪುವಿನ ಸುಳಿವು ಕೊಟ್ಟು ಸಹಕಾರ ನೀಡಿದರೂ ಕೊನೆಗೆ ಅವರು ಅವನನ್ನು ಮೋಸದಿಂದ ಸೆರೆ ಹಿಡಿದು ಅವನನ್ನೂ ಅವನ ಮಗಳನ್ನೂ ಲಂಡನಿಗೆ ಕರೆದುಕೊಂಡು ಹೋಗಿ ಕೊಡಗನ್ನು ವಶಪಡಿಸಿಕೊಂಡದ್ದು, ಲಂಡನ್ನಿನಲ್ಲಿ ರಾಜಕುಮಾರಿ ಗೌರಮ್ಮಾಜಿ ಮತಾಂತರಗೊ0ಡು ವಿಕ್ಟೋರಿಯಾ ಆಗಿ ಅಕಾಲ ಮರಣಕ್ಕೆ ತುತ್ತಾಗಿದ್ದು-ಹೀಗೆ ಹಲವಾರು ವಿಷಯಗಳನ್ನು ನಿರೂಪಿಸುತ್ತ ಹೋಗುತ್ತಾರೆ.
ಕೊಡಗನ್ನು ಸೋಲಿಸಿದ ಟಿಪ್ಪು ಅಲ್ಲಿನ ನಾನೂರಕ್ಕೂ ಹೆಚ್ಚು ಮಹಿಳೆಯರನ್ನು ತನ್ನ ವಶದಲ್ಲಿ ಇಟ್ಟುಕೊಂಡು ಮತಾಂತರ ಮಾಡಿದ್ದು, ಆತನ ಪತನಾ ನಂತರ ವೀರರಾಜೇಂದ್ರರ ಸಹೊದರಿಯರಾದ ದೇವಮ್ಮಾಜಿ ಮತ್ತು ನೀಲಮ್ಮಾಜಿ ಮರಳಿ ಕೊಡಗಿಗೆ ಬಂದು ನಾಲ್ಕ್ನಾಡ್ ಅರಮನೆಯಲ್ಲಿ ಹೊರಗಿನ ಯಾವ ಸಂಪರ್ಕವೇ ಇಲ್ಲದೆ ಜೀವನ ಪೂರ್ತಿ ಕತ್ತಲಲ್ಲಿ ಕಳೆದಂತಹ ಕರುಣ ಕತೆಯನ್ನು ಹೇಳುತ್ತಾರೆ. ತನ್ನನ್ನು ಬಹುಕಾಲ ಆಳಿದ ಗಂಗ, ಕದಂಬ, ಚೋಳ ಮತ್ತು ವಿಜಯನಗರದ ಅರಸರ ಕಟ್ಟಳೆಗಳಿಗಾಗಲಿ, ಶೈವ, ವೈಷ್ಣವ, ಅಥವಾ ಜೈನ ಧರ್ಮಗಳ ಪ್ರಭಾವಗಳಿಗಾಗಲಿ ಒಳಗಾಗದೆ ತಮ್ಮ ಆಚಾರ, ಉಡುಗೆ-ತೊಡುಗೆ-ಭಾಷೆಗಳಲ್ಲಿ ತಮ್ಮ ಅನನ್ಯತೆಯನ್ನು ಉಳಿಸಿಕೊಂಡ ಕೊಡವರ ಬಗ್ಗೆ ಲೇಖಕರು ಅಚ್ಚರಿ ಪಡುತ್ತಾರೆ. ಕಾವೇರಿ ದಂಡೆಯಲ್ಲಿ ಜೈನ-ಬೌದ್ಧ ತತ್ವಗಳ ಕಾಲ, ಕೊಡಗಿನ ಬೈಲುಕುಪ್ಪೆ ಎಂಬಲ್ಲಿ ನೆಲೆಸಿದ ಲಕ್ಷಕ್ಕೂ ಮಿಕ್ಕಿ ಇರುವ ಟಿಬೆಟಿಯನ್ನರ ವಿಶಿಷ್ಟ ಸಂಸ್ಕೃತಿಯ ಚಿತ್ರಣವನ್ನು ನೀಡುತ್ತಾರೆ.
ಕಾವೇರಿ ತನ್ನ ಹರಿವನ್ನು ಮುಂದುವರಿಸಿ ಹಾಸನ ಜಿಲ್ಲೆಯ ರಾಮನಾಥಪುರವನ್ನು ಪ್ರವೇಶಿಸುತ್ತಾಳೆ. ನಿಧಾನವಾಗಿ ಕೃಷ್ಣರಾಜ ನಗರವನ್ನು ಪ್ರವೇಶಿಸಿ ಕನ್ನಂಬಾಡಿ ಕಟ್ಟೆಯನ್ನು ದಾಟುತ್ತಾಳೆ. ಕೇರಳದಲ್ಲಿ ಹುಟ್ಟಿ ಕೊಡಗನ್ನು ಪ್ರವೇಶಿಸುವ ಕಬಿನಿ ನದಿ ಕಾವೇರಿಯನ್ನು ಸೇರುತ್ತದೆ. ಕಬಿನಿಯ ಇಕ್ಕೆಲದಲ್ಲಿರುವ ದಟ್ಟ ಕಾಡುಗಳಲ್ಲಿ ತುಂಬಾ ಆನೆಗಳಿದ್ದು ಹಿಂದೆ ನೂರಾರು ಆನೆಗಳು ಪ್ರತಿ ವರ್ಷ ಬೇಟೆಗೆ ಬಲಿಯಾಗುತ್ತಿದ್ದವು ಎಂಬ ವಿವರ ಲೇಖಕರಿಗೆ ಸಿಗುತ್ತದೆ. ಕೃಷ್ಣರಾಜ ನಗರದ ಸಮೀಪ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಸುತ್ತಲಿನ ಗಿಡಗಂಟೆಗಳ ಮಧ್ಯೆ ಕಂಡ ಮಾಸ್ತಿಕಲ್ಲು ಲೇಖಕರಿಗೆ ಸತಿಪದ್ಧತಿಯ ಅಮಾನವೀಯತೆಯ ಬಗ್ಗೆ ಮಾತನಾಡಲು ಪ್ರೇರೇಪಿಸುತ್ತದೆ. ಕಬಿನಿ-ಕಾವೇರಿಗಳ ಸಂಗಮಸ್ಥಳ ತಿರುಮಕೂಡಲು. ನದಿಯ ಇಕ್ಕೆಲದಲ್ಲಿದ್ದ ಕೀರ್ತಿಪುರವು ಪುನ್ನಾಟ ಅರಸರ ರಾಜಧಾನಿಯಾಗಿತ್ತು. ಮುಂದೆ ಪಯಣ ಕೊಕ್ಕರೆಬೆಳ್ಳೂರಿಗೆ ಸಾಗುತ್ತದೆ. ಅಲ್ಲಿಗೆ ಹಿಂಡುಹಿಂಡಾಗಿ ಬರುತ್ತಿದ್ದ ವಲಸೆ ಹಕ್ಕಿಗಳ ಬಗ್ಗೆ ಜನರು ಬೆಳೆಸಿಕೊಂಡ ಆತ್ಮೀಯ ಬಂಧವು ಲೇಖಕರನ್ನು ಅಚ್ಚರಿಪಡಿಸುತ್ತದೆ. ಉದ್ದಕ್ಕೂ ಲೇಖಕರುಆ ಸ್ಥಳಗಳ ಐತಿಹ್ಯಗಳನ್ನು ಲೇಖಕರು ಶೋಧಿಸುತ್ತಾರೆ.
ಇದನ್ನೂ ಓದಿ : ದೇಶದಲ್ಲಿಂದು ಕೋವಿಡ್ ಸೋಂಕು ಕೊಂಚ ಇಳಿಕೆ: 24 ಗಂಟೆಯಲ್ಲಿ 36,083 ಹೊಸ ಪ್ರಕರಣಗಳು ಪತ್ತೆ..!
ಮುಂದೆ ಶ್ರೀರಂಗಪಟ್ಟಣ ಪ್ರವೇಶ. ಶ್ರೀರಂಗಪಟ್ಟಣಕ್ಕೆ ಇಡೀ ದೇಶದಲ್ಲೇ ಪ್ರಾಮುಖ್ಯ ಸಿಗಲು ಹೈದರಾಲಿ-ಟಿಪ್ಪು ಸುಲ್ತಾನರ ಶ್ರಮವೇ ಕಾರಣವೆಂಬ ಮಾಹಿತಿ ಲೇಖಕರಿಗೆ ಸಿಗುತ್ತದೆ. ಮೈಸೂರು ಒಡೆಯರ್ ಆಸ್ಥಾನದಲ್ಲಿ ಸಾಮಾನ್ಯ ಸೈನಿಕನಾಗಿದ್ದ ಹೈದರಾಲಿ ತನ್ನ ಸ್ವಸಾಮರ್ಥ್ಯದಿಮದ ಅರಸರ ಮೆಚ್ಚುಗೆ ಗಳಿಸಿ ಸಿಂಹಾಸನವೇರುತ್ತಾನೆ. ಅವನ ನಂತರ ಟಿಪ್ಪು ತನ್ನ ತಂದೆಯ ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಿ ಜನಪ್ರಿಯನಾದ. ಕೊಡಗಿನ ರಾಜರ ಆಸ್ಥಾನವಿದ್ದ ಹಾಲೇರಿಯ ಕಾಳಿಮಂದಿರದ ಆವರಣದಲ್ಲಿ ನಡೆಯುತ್ತಿದ್ದ ನರಬಲಿ, ಮೈಸೂರಿನ ಒಡೆಯರ್ ಕುಟುಂಬದವರು ಚಾಮುಂಡೇಶ್ವರಿ ಕೊಡುತ್ತಿದ್ದ ನರಬಲಿಗಳಂತಹ ಅಮಾನವೀಯ ಕಟ್ಟಳೆಗಳನ್ನು ನಿಲ್ಲಿಸಿದವನು ಟಿಪ್ಪು ಸುಲ್ತಾನನಾಗಿದ್ದ. ಅವನು ಧರ್ಮನಿರಪೇಕ್ಷನಾಗಿದ್ದು ರಾಜ್ಯದಾದ್ಯಂತ ಇರುವ ಹಿಂದೂ ದೇವಾಲಯಗಳಿಗೆ ಒಂದಿಲ್ಲೊಮದು ಕೊಡುಗೆಗಳನ್ನು ನೀಡುತ್ತಿದ್ದ ಅನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ ಅನ್ನುವುದನ್ನು ಲೇಖಕರು ಗಮನಿಸುತ್ತಾರೆ.
ತಲಕಾಡು ಹೇಗೆ ಮರಳುಗಾಡಾಯಿತು ಅನ್ನುವುದು ಇಂದಿಗೂ ನಿಗೂಢವಾಗಿಯೇ ಉಳಿದಿದೆಯಾದರೂ ಅದರ ಹಿಂದಿನ ರಹಸ್ಯವನ್ನು ಭೇದಿಸಲು ಲೇಖಕರು ಬಹಳಷ್ಟು ಪ್ರಯತ್ನಿಸುತ್ತಾರೆ. ಶತ್ರು ರಾಜನಿಂದ ಅಪಮಾನಕ್ಕೆ ಒಳಗಾಗಿದ್ದ ಅಲಮೇಲಮ್ಮ ಎಂಬ ಮಹಿಳೆಯ ಶಾಪವೇ ಇದಕ್ಕೆ ಕಾರಣವೆಂದು ಜನರು ಹೇಳುತ್ತಾರೆ. ತಲಕಾಡು ಮರಳುಗಾಡಾಗಲಿ, ಮೈಸೂರು ದೊರೆಗಳಿಗೆ ಮಕ್ಕಳಾಗದೆ ಹೋಗಲಿ ಎಂಬ ಆಕೆಯ ಶಾಪದ ಪ್ರಕಾರ ಒಡೆಯರ್ ಕುಟುಂಬ ಮಕ್ಕಳಿಲ್ಲದ ದುಃಖ ಅನುಭವಿಸಿದ್ದು ಸತ್ಯವೂ ಹೌದು.
ಶ್ರೀರಂಗಪಟ್ಟಣದಿಂದ ಸೋಮನಾಥಪುರದ ತಿರುಮಕೂಡಲು, ನರಸಿಪುರ, ತಲಕಾಡು, ಶಿವನಸಮುದ್ರಗಳನ್ನು ದಾಟಿ ಕಾವೇರಿ ಕೊಂಗುನಾಡನ್ನು ತಲುಪುತ್ತಾಳೆ. ಧರ್ಮಪುರಿ ಜಿಲ್ಲೆಯ ಹೊಗೆನಕಲ್ ಪ್ರದೇಶದಲ್ಲಿ ಕರ್ನಾಟಕ ಮತ್ತು ತಮಿಳುನಾಡುಗಳಿಗೆ ಸೇರಿದ ಅಭಯಾರಣ್ಯವಿದೆ. ದಂತಚೋರ ವೀರಪ್ಪನ್ ಇದೇ ಅರಣ್ಯದಲ್ಲಿ ಅಡಗಿಕೊಳ್ಳುತ್ತಿದ್ದ. ಕೊಂಗುನಾಡಿನ ಮೇಲೆ ಹಿಂದೆ ಪ್ರಮುಖ ಮೂರು ರಾಜವಂಶಸ್ಥರಾದ ಚೇರ, ಚೋಳ ಮತ್ತು ಪಾಂಡ್ಯರು ಅಧಿಪತ್ಯ ಸ್ಥಾಪಿಸಿದ್ದರು. ಕೊಂಗುನಾಡಿನ ಇತಿಹಾಸದ ಬಗ್ಗೆ ಮಾತನಾಡುವಾಗ ಲೇಖಕರು ಪದಿಟ್ಟುಪತ್ತ್, ಶಿಲಪ್ಪದಿಕಾರಂ, ಮತ್ತವಿಲಾಸ, ಅನುಭಾವಿ ಕವಯಿತ್ರಿ ಅಂಡಾಳ್ ರಚಿಸಿದ ತಿರುಪ್ಪಾವೈ ಮತ್ತು ನಾಚಿಯಾರ್ ತಿರುಮೊಳಿ ಮೊದಲಾದ ಸಂಘಕಾಲದ ಸಾಹಿತ್ಯ ಕೃತಿಗಳನ್ನೂ ಅಲ್ಲಿನ ವಿವಿಧ ಸ್ಥಳಗಳ ಹಳೆಯ ಹೆಸರುಗಳನ್ನೂ ಉಲ್ಲೇಖಿಸುತ್ತಾರೆ. ತಿರುಚ್ಚಿರಪಳ್ಳಿಯ ಮಲೈಕೋಟೆಯ ಗುಹಾಂತರದೇವಾಲಯಗಳು, ಶ್ರೀರಂಗAನ ಶ್ರೀರಂಗನಾಥಸ್ವಾಮಿ ದೇವಾಲಯ, ತ್ರಿಶ್ಶಿನಾಪಳ್ಳಿ, ನದೀತೀರದಲ್ಲಿನ ಶಿಲಾಶಾಸನಗಳ ಬಗ್ಗೆ ಅಧ್ಯಯನ ಮಾಡುತ್ತ ತಮಿಳುನಾಡಿನ ಬತ್ತದ ಕಣಜವೆಂದು ಕರೆಯಲ್ಪಡುವ ತಂಜಾವೂರಿಗೆ ಬಂದು ಅಲ್ಲಿರುವ ಅತಿ ಎತ್ತರದ ಶಿವಲಿಂಗವಿರುವ ಬೃಹದೇಶ್ವರ ದೇವಾಲಯವನ್ನು ವರ್ಣಿಸುತ್ತಾರೆ. ದೇವಸ್ಥಾನ ನಗರಗಳಾದ ಚಿದಂಬರ, ಕುಂಭಕೋಣ ಹಾಗೂ ಚೋಳಸಾಮ್ರಾಜ್ಯದ ಪುರಾತನ ದೇವಾಲಯ ಗಂಗೈಕೊಂಡದ ಚೋಳೇಶ್ವರ ಕ್ಷೇತ್ರಕ್ಕೆ ಬರುತ್ತಾರೆ. ಕಾವೇರಿ ಪಟ್ಟಣವೆಂಬ ಹೆಸರಿರುವ ಪೂಂಪುಹಾರ್‌ನಲ್ಲಿ ಕಾವೇರಿ ಸಮುದ್ರವನ್ನು ಸೇರುತ್ತಾಳೆ..
ತಮಿಳುನಾಡಿನ ಸ್ಥಳಗಳನ್ನು ವರ್ಣಿಸುವಾಗ ಲೇಖಕರು ಅಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಹೇಳಲು ಮರೆಯುವುದಿಲ್ಲ. ಮಹಾನ್ ರಾಮಭಕ್ತರೂ ಸಂಗೀತ ಸಾಮ್ರಾಟರೂ ಆದ ತ್ಯಾಗರಾಜರ ಜೀವನ ಚಿತ್ರಣಕ್ಕಾಗಿ ಅವರು ಹಲವು ಪುಟಗಳನ್ನೇ ಮೀಸಲಿಡುತ್ತಾರೆ. ಅವರು ಕಷ್ಟಗಳನ್ನೆದುರಿಸಿದ ಸಂದರ್ಭಗಳಲ್ಲಿ ಹಾಡಿದ ರಾಮನ ಕುರಿತಾದ ಕೀರ್ತನೆಗಳನ್ನೂ ಉಲ್ಲೇಖಿಸುತ್ತಾರೆ. ಮಹಿಳೆಯರು ಸಾರ್ವಜನಿಕವಾಗಿ ಹಾಡಕೂಡದು ಎಂಬ ಕಟ್ಟಳೆಯನ್ನು ವಿರೋಧಿಸಿ ಪ್ರತಿಭಟನೆ ತೋರಿದ ನಾಗರತ್ನಮ್ಮ ಎಂ.ಎಸ್.ಸುಬುಲಕ್ಷಿö್ಮಯವರಂತೆ ತನ್ನ ದೇವದಾಸಿ ಹಿನ್ನೆಲೆಯನ್ನು ಮುಚ್ಚಿಡದೆಯೂ ಹೇಗೆ ಸಂಗೀತಕ್ಷೇತ್ರದಲ್ಲಿ ಖ್ಯಾತಿ ಗಳಿಸಿದರು ಎಂಬುದನ್ನೂ ಹೇಳುತ್ತಾರೆ. ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಮಧ್ವಾಚಾರ್ಯರ ಪ್ರಭಾವಗಳಿಂದಾಗಿ ತಮಿಳುನಾಡಿನಲ್ಲಿ ಜೈನ-ಬೌದ್ಧ ಧರ್ಮಗಳು ಹಿಂದೆ ಸರಿದದ್ದು, ಬ್ರಾಹ್ಮಣರ ಆಚಾರಗಳಿಂದಾಗಿ ಉಲ್ಬಣಗೊಂಡ ಜಾತಿ ಪದ್ಧತಿಯ ಕ್ರೌರ್ಯ ಹಾಗೂ ದಲಿತರ ಶೋಷಣೆಯ ಬಗ್ಗೆ ಲೇಖಕರು ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಹೀಗೆ ನದೀತೀರವು ಮನುಷ್ಯನ ನಾಗರಿಕ ಬದುಕಿಗೆ ನಾಂದಿ ಹಾಡಿದ್ದನ್ನು ಚಿತ್ರಿಸಿ, ಮನುಷ್ಯನ ಇತಿಹಾಸದ ಈ ರೀತಿಯ ಉತ್ಖನನ ನಿರಂತರವಾದದ್ದು ಮತ್ತು ಅದೊಂದು ತೀರದ ಪಯಣವೆನ್ನುತ್ತ ತಮ್ಮ ಕಥನಕ್ಕೆ ತಾತ್ಕಾಲಿಕವಾಗಿ ಅಂತ್ಯ ಹಾಡುತ್ತಾರೆ.
ಇಡೀ ಕಥನದಲ್ಲಿ ಓ.ಕೆ.ಜೋಣಿಯವರು ತಾವು ಉದ್ದೇಶಿಸಿದ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ. ಪ್ರಧಾನ ವಾಹಿನಿಯ ಇತಿಹಾಸದ ದಾಖಲೆಗಳಲ್ಲಿ ಸೇರಿಕೊಳ್ಳದ ವಿಚಾರಗಳನ್ನು ಕಲೆಹಾಕಲು ಅವರು ಬಹಳ ಶ್ರಮಪಟ್ಟಿದ್ದಾರೆ.(ಕೃತಿಯ ಕೊನೆಗೆ ನೀಡಿರುವ ಟಿಪ್ಪಣಿಗಳು, ಆಕರಗ್ರಂಥಗಳು ಮತ್ತು ಗ್ರಂಥಸೂಚಿಯ ಪಟ್ಟಿಯನ್ನು ನೋಡಿದರೇ ಗೊತ್ತಾಗುತ್ತದೆ). ಕಾವೇರಿ ತೀರದ ಪ್ರದೇಶಗಳ ಬಗ್ಗೆ ಆಗಲೇ ದಾಖಲಾಗಿರುವ ಐತಿಹಾಸಿಕ ವಿವರಗಳನ್ನು ಹಲವಾರು ಪರಾಮರ್ಶನ ಗ್ರಂಥಗಳ ಮೂಲಕ ತಿಳಿದುಕೊಂಡು, ಒಮ್ಮೆಯಲ್ಲ, ಹಲವಾರು ಬಾರಿ ಆ ಸ್ಥಳಗಳಿಗೆ ಭೇಟಿಯಿತ್ತು, ಅಲ್ಲಿನ ಜನರೊಂದಿಗೆ ಮಾತನಾಡಿ, ಆರ್ಕಿಯೊಲೋಜಿಕಲ್ ವಿಭಾಗಗಳಿಗೆ ಹೋಗಿ, ವಸ್ತು ಸಂಗ್ರಹಾಲಯಗಳನ್ನು ವೀಕ್ಷಿಸಿ, ಗೆಝೆಟಿಯರ್‌ಗಳನ್ನು ನೋಡಿ ವಿಷಯಗಳನ್ನು ಖಚಿತ ಪಡಿಸಿಕೊಂಡು ಛಾಯಾಚಿತ್ರಗಳ ಸಮೇತ ಈ ಗ್ರಂಥದಲ್ಲಿ ಸೇರಿಸಿಕೊಂಡಿದ್ದಾರೆ. ಜತೆಗೆ ಅವರ ಸ್ವಂತ ಅಭಿರುಚಿ ಆಸಕ್ತಿಗಳೂ ನಡುನಡುವೆ ಕಾಣಿಸಿಕೊಳ್ಳುತ್ತವೆ. ಪರಿಸರ ಕಾಳಜಿ, ಪ್ರಕೃತಿ ಪ್ರೇಮ, ವಾಸ್ತು ಶಿಲ್ಪ, ಶಾಸ್ತ್ರೀಯ ಸಂಗೀತದ ಬಗೆಗಿನ ಜ್ಞಾನ- ಹಲವಾರು ಸಂಗತಿಗಳು ಈ ಕೃತಿಯ ವಿನ್ಯಾಸಕ್ಕೆ ಮೆರುಗನ್ನಿತ್ತಿವೆ. ಉತ್ತಮ ಪುರುಷ ನಿರೂಪಣೆ ಹಾಗೂ ವ್ಯಕ್ತಿನಿಷ್ಠ ಶೈಲಿಗಳು ವಿಷಯವನ್ನು ಹೆಚ್ಚು ಆಪ್ತವಾಗಿಸುತ್ತವೆ. ಒಂದೇ ಒಂದು ದೋಷವೆಂದರೆ ನಡುವೆ ಒಂದೆರಡು ಕಡೆ ಉದ್ವೇಗಭರಿತರಾಗಿ ನೇರವಾಗಿ ‘ಪೊಲಿಟಿಕಲ್’ ಆಗಿ ಮಾತನಾಡುವ ಅಗತ್ಯವಿರಲಿಲ್ಲ. ಯಾವುದೇ ಒಂದು ಒಳ್ಳೆಯ ಸಾಹಿತ್ಯ ಕೃತಿ ನಿಷ್ಪಕ್ಷವಾಗಿರಬೇಕು ಮತ್ತು ಒಂದು ‘ಪೊಲಿಟಿಕಲ್ ಪ್ರೊಪಗಾಂಡಾ’ ಆಗಿರಬಾರದು.
ವಿಕ್ರಂ ಅವರ ಅನುವಾದವಂತೂ ತುಂಬಾ ಸೊಗಸಾಗಿ, ಪರಿಪೂರ್ಣತೆಗೆ ಅತಿ ಸಮೀಪವಾಗಿದ್ದು, ಅತ್ಯಂತ ನವಿರಾಗಿ ಓದಿಸಿಕೊಂಡು ಹೋಗುತ್ತದೆ. ಅವರು ಒಂದೊಂದು ವಾಕ್ಯವನ್ನೂ ಅನುಭವಿಸಿ ಬರೆದಿದ್ದಾರೆ. ಪ್ರಕೃತಿಯ ವರ್ಣನೆ ಬಂದಾಗಲೆಲ್ಲ ಅವರು ಭಾವುಕರಾಗಿ ಬಳಸುವ ರಮ್ಯ ಶೈಲಿ ಕೃತಿಯ ಅಂದವನ್ನು ಹೆಚ್ಚಿಸಿದೆ.
ಪಾರ್ವತಿ ಜಿ.ಐತಾಳ್
ಕೃತಿಯ ಹೆಸರು : ಕಾವೇರಿ ತೀರದ ಪಯಣ
ಮೂಲ ಮಲೆಯಾಳ : ಓ.ಕೆ.ಜೋಣಿ ಕನ್ನಡಕ್ಕೆ : ವಿಕ್ರಂ ಕಾಂತಿಕೆರೆ
ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್
ಪ್ರಕಟಣಾ ವರ್ಷ : 2021 ಪುಟಗಳು : 240
ಬೆಲೆ : ರೂ.250
ಇದನ್ನೂ ಓದಿ : ಬೊಮ್ಮಾಯಿ ಸರ್ಕಾರದ ಪೂರ್ಣಾವಧಿ ಬಗ್ಗೆ ಅನುಮಾನಬೇಡ: ಎಸ್. ಟಿ.ಸೋಮಶೇಖರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.