ತಾಲಿಬಾನ್ ಆಕ್ರಮಣ; ಅಫ್ಘಾನ್ ಆಕ್ರಂದನ…ಭಾರತಕ್ಕೆ ತೊಂದರೆ
ಭಾರತ-ಅಫ್ಘಾನಿಸ್ಥಾನ ಸ್ನೇಹ ವೃದ್ಧಿಯಾಗಿದ್ದರಿಂದ ಭಾರತಕ್ಕೆ ಅನೇಕ ಅನುಕೂಲಗಳಾಗಿವೆ.
Team Udayavani, Aug 16, 2021, 1:00 PM IST
ನಾವಿಲ್ಲಿ ನಮ್ಮ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದರೆ, ಅತ್ತ ಅಫ್ಘಾನಿಸ್ಥಾನದ ಜನತೆ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ! ಆ ದೇಶದ ಶೇ. 90ಕ್ಕಿಂತ ಹೆಚ್ಚು ಭಾಗವನ್ನು ಹಂತಹಂತವಾಗಿ ಆಕ್ರಮಿಸಿಕೊಂಡಿರುವ ತಾಲಿಬಾನ್ ಪಡೆಗಳು, ರವಿವಾರದಂದು ರಾಜಧಾನಿ ಕಾಬೂಲನ್ನು ಸುತ್ತುವರಿದಿವೆ. ಈ ಹಿನ್ನೆಲೆಯಲ್ಲಿ, ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ತಜಕಿಸ್ಥಾನಕ್ಕೆ ಪಲಾಯನ ಮಾಡಿದ್ದಾರೆ. ಇದೀಗ ಶಾಂತಿಯುತವಾಗಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಿದೆ. ಇನ್ನು ಕೆಲವು ದಿನಗಳಲ್ಲೇ ಅಲ್ಲಿ ತಾಲಿಬಾನಿಗಳ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಇದು ಕೇವಲ ಅಫ್ಘಾನಿಸ್ಥಾನದ ಜನರಷ್ಟೇ ಅಲ್ಲ, ಇಡೀ ವಿಶ್ವವೇ ಆತಂಕಪಡುವ ವಿದ್ಯಮಾನವಾಗಿದೆ. ತಾಲಿಬಾನಿಗಳಿಗೆ ಹಸ್ತಾಂತರಗೊಂಡಿರುವ ಅಫ್ಘಾನಿಸ್ಥಾನದ ಇಂದಿನ ಪರಿಸ್ಥಿತಿಯನ್ನು ಮೂರು ಆಯಾಮಗಳಲ್ಲಿ ಅಧ್ಯಯನ ಮಾಡಬಹುದು.
ಮೊದಲನೆಯದಾಗಿ, ಈಗ ಸಣ್ಣ ಪ್ರಮಾಣದಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದ ಅಫ್ಘಾನಿಸ್ಥಾನದ ಗತಿ ಮುಂದೇನಾಗುತ್ತದೆ ಎಂಬುದು. ಎರಡನೆಯದಾಗಿ, ಅಲ್ಲಿ ಬದಲಾದ ಚಿತ್ರಣ ಅಂತಾರಾಷ್ಟ್ರೀಯ ಸಮುದಾ ಯದ ಮೇಲೆ ಉಂಟು ಮಾಡುವ ಪರಿಣಾಮವೇನು ಎಂಬುದು. ಮೂರನೆಯದಾಗಿ, ಈ ಬೆಳವಣಿಗೆ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ನಿಟ್ಟಿನಲ್ಲಿ ಅವಲೋಕನ ಮಾಡಬಹುದು.
ಕೇವಲ ಎರಡೇ ತಿಂಗಳ ಅಂತರದಲ್ಲಿ ಅಫ್ಘಾನಿಸ್ಥಾನದ ಸಾಮಾಜಿಕ, ರಾಜಕೀಯ ಸನ್ನಿವೇಶವು ದೋಸೆ ಮಗುಚಿ ಹಾಕಿದ ಹಾಗೆ ತಲೆಕೆಳಗಾಗಿದೆ. 2001ರಲ್ಲಿ ತಾಲಿಬಾನಿಗಳ ಹಿಡಿತದಿಂದ ಅಫ್ಘಾನಿಸ್ಥಾನವನ್ನು ನಿರ್ಮೂಲನೆ ಮಾಡಿ, ಆಗಿನಿಂದ ಈಗಿನವರೆಗೂ ಕಟ್ಟೆಚ್ಚರದಂತೆ ಅಲ್ಲಿ ಕಾವಲು ಕಾಯುತ್ತಿದ್ದ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಅಲ್ಲಿಂದ ಹಿಂದಕ್ಕೆ ಸರಿದ ಬೆನ್ನಲ್ಲೇ, ಇಡೀ ಅಫ್ಘಾನಿಸ್ಥಾನ ಕಾದ ಕುಲುಮೆಯಂತಾಗಿತ್ತು. ಒಂದು ಕಡೆ, ಅಮೆರಿಕ ಪಡೆಗಳು ಗಂಟು ಮೂಟೆ ಕಟ್ಟಿಕೊಂಡು ತಾವಿದ್ದ ಪ್ರದೇಶಗಳನ್ನು ಖಾಲಿ ಮಾಡುತ್ತಿದ್ದಂತೆ, ಮತ್ತೂಂದು ಕಡೆಯಿಂದ ಅಫ್ಘಾನಿಸ್ಥಾನದ ಮೂಲಭೂತವಾದಿಗಳು ಅಲ್ಲಿನ ಒಂದೊಂದೇ ಪ್ರದೇಶವನ್ನು ಆಕ್ರಮಿಸಿ ಕೊಳ್ಳಲಾರಂಭಿಸಿದ್ದರು. ಇದನ್ನು ತಡೆಯಲು ಅಫ್ಘಾನ್ ಸರಕಾರ, ಹರಸಾಹಸ ಮಾಡಿತು.
ಅದರ ಪರಿಣಾಮ, ಹಲವಾರು ಪ್ರಾಂತ್ಯಗಳಲ್ಲಿ ಅಫ್ಘಾನ್ ಪಡೆಗಳು ಹಾಗೂ ತಾಲಿಬಾನಿಗಳ ನಡುವೆ ಘರ್ಷಣೆಗಳು ನಡೆದು ನೂರಾರು ಸೈನಿಕರು ಸಾವಿಗೀಡಾದರು. ದಿನದಿಂದ ದಿನಕ್ಕೆ ತಾಲಿಬಾನಿಗಳ ಕೈ ಮೇಲಾಯಿತು.
ಶನಿವಾರದ (ಆ. 14) ಹೊತ್ತಿಗೆ ಅಫ್ಘಾನಿಸ್ಥಾನದ ಶೇ. 90ಕ್ಕಿಂತಲೂ ಭೂಭಾಗವನ್ನು ಆಕ್ರಮಿಸಿದ್ದ ತಾಲಿಬಾನಿಗಳ ಪಡೆ, ರಾಜಧಾನಿ ಕಾಬೂಲಿನ ಸಮೀಪಕ್ಕೆ ಬಂದಿತ್ತು. ಹಾಗಾಗಿ, ಸುತ್ತಲೂ ಶತ್ರುಪಾಳಯದ ಕೈ ಮೇಲಾಗುತ್ತಿ ದ್ದಂತೆಯೇ, ರವಿವಾರದಂದು ರಾಷ್ಟ್ರಾಧ್ಯಕ್ಷ ಅಶ್ರಫ್ ಘನಿ, ಅವರು ತಮ್ಮ ಅಧಿಕಾರ ತ್ಯಾಗ ಮಾಡಿದ್ದಾರೆ. ತಮ್ಮ ಜೀವನ ಹಾಗೂ ಕಾಬೂಲು ಜನರ ಜೀವನ ಉಳಿಸುವ ಸಲುವಾಗಿ, ರಕ್ತಪಾತಕ್ಕೆ ಅವಕಾಶ ಕೊಡದ ರೀತಿಯಲ್ಲಿ ಶಾಂತಿ ಯುತವಾಗಿ ಅಧಿಕಾರ ಹಸ್ತಾಂತರಿಸಿದ್ದಾರೆ.
ವಿರೋಧಕ್ಕೆ ಬಲಿಯಾದವರು!: ಒಂದೆಡೆ, ಇಡೀ ಅಫ್ಘಾನಿಸ್ಥಾನವನ್ನು ತನ್ನ ಮುಷ್ಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಜತೆಗೇ, ಸರಕಾರಕ್ಕೆ ವಿಧೇಯರಾಗಿರುವ ಅಧಿಕಾರಿಗಳನ್ನು, ದಕ್ಷ ಪೊಲೀಸ್ ಅಧಿಕಾರಿಗಳನ್ನು, ಜನಪರ ಹೋರಾಟ ಮಾಡುತ್ತಿದ್ದವರನ್ನು, ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಕಾರ್ಯಕರ್ತರನ್ನು, ಬರಹಗಾರರನ್ನು ವ್ಯವಸ್ಥಿತವಾಗಿ ಹತ್ತಿಕ್ಕಿದ್ದಾರೆ. ಕಳೆದೆರಡು ತಿಂಗಳುಗಳಲ್ಲಿ ಅಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇನ್ನು, ಸೈನಿಕರ ಸಂಕಟ ಕೇಳುವವರೇ ಇರಲಿಲ್ಲ. ಕಳೆದೆರಡು ತಿಂಗಳಲ್ಲಿ ತಾಲಿಬಾನಿಗಳ ಆಕ್ರಮಣಕ್ಕೆ ಈಗಾಗಲೇ ನೂರಾರು ಅಫ್ಘಾನ್ ಸೈನಿಕರು ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ, ಸಾವಿರಾರು ಅಫ್ಘಾನ್ ಸೈನಿಕರು ಪಕ್ಕದ ತಜಕಿಸ್ಥಾನಕ್ಕೆ ಪಾಲಾಯನ ಮಾಡಿದ್ದರು. ಇತ್ತೀಚೆಗೆ, ಶರಣಾಗಲು ಬಂದಿದ್ದ 22 ಸೈನಿಕರನ್ನು ತಾಲಿಬಾನಿಗಳು ನಿರ್ದಯವಾಗಿ ಹೊಡೆದುರುಳಿಸಿದ್ದಾರೆ. ಅಫ್ಘಾನ್-ತಾಲಿಬಾನಿಗಳ ನಡುವಿನ ಯುದ್ಧವನ್ನು ವರದಿ ಮಾಡಲು ಹೋಗಿದ್ದ ಭಾರತ ಮೂಲದ “ಫೋಟೋ ಜರ್ನಲಿಸ್ಟ್’ ಡ್ಯಾನಿಶ್ ಸಿದ್ದಿಕಿ ಹಾಗೂ ಇನ್ನಿತರರು ತಾಲಿಬಾನಿಗಳ ಕ್ರೂರತ್ವಕ್ಕೆ ಬಲಿಯಾಗಿದ್ದಾರೆ. ಜನರನ್ನು ನಕ್ಕು ನಗಿಸುತ್ತಾ ಅವರ ಆತಂಕ ದೂರಾಗಿಸುತ್ತಿದ್ದ ಅಫ್ಘಾನಿಸ್ಥಾನದ ಜನಪ್ರಿಯ ಹಾಸ್ಯಗಾರ ಹಾಗೂ ಮಾಜಿ ಪೊಲೀಸ್ ಅಧಿಕಾರಿ ನಜರ್ ಮೊಹಮ್ಮದ್ ಅವರನ್ನು ಬಿಡದೇ ಹತ್ಯೆ ಮಾಡಲಾಗಿದೆ.
ಇದೆಲ್ಲದರ ಉದ್ದೇಶ ಒಂದೇ, ಅಫ್ಘಾನಿಸ್ಥಾನ ಅಪ್ಪಟ ಇಸ್ಲಾಂ ಧರ್ಮದ ತಾಣವಾಗಬೇಕು. ಅಲ್ಲಿನ ಜನರು ಕೂತರೂ, ನಿಂತರೂ, ಓಡಾಡಿದರೂ ಇಸ್ಲಾಂ ಧರ್ಮದ ಕಟ್ಟುಪಾಡುಗಳನ್ನು ಮೀರಬಾರದು. ಒಟ್ಟಿನಲ್ಲಿ ಶೆರಿಯಾ ಕಾನೂನು ಅಲ್ಲಿನ ಜನರ ಉಸಿರಾಗಿರಬೇಕು ಎಂಬುದು ತಾಲಿಬಾನಿಗಳ ಉದ್ದೇಶವಾಗಿದೆ.
ತಲ್ಲಣಗೊಂಡಿರುವ ಜನಜೀವನ: ಅಧಿಕಾರ ಹಸ್ತಾಂತರದ ಸುಳಿವು ಕೆಲವು ದಿನಗಳ ಹಿಂದೆಯೇ ಸಿಕ್ಕಿದ್ದರಿಂದ, ಚಿಂತಾಕ್ರಾಂತರಾಗಿದ್ದ ಅಲ್ಲಿನ ಜನ, ತಮ್ಮ ಅವಿವಾಹಿತ ಹೆಣ್ಣುಮಕ್ಕಳಿಗೆ ಬೇಗನೇ ವಿವಾಹ ಮಾಡಿದ್ದಾರೆ. ಜು. 16ರಂದು ತಮ್ಮ ಅಧೀನದಲ್ಲಿರುವ ಪ್ರಾಂತ್ಯಗಳಲ್ಲಿ ಹುಕುಂ ಹೊರಡಿಸಿದ್ದ ತಾಲಿಬಾನಿಗಳು 15 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳ ಪಟ್ಟಿಯೊಂದನ್ನು ಕೊಡುವಂತೆ ಜನರನ್ನು ಆಗ್ರಹಿಸಿದ್ದವು! ಇಂಥ ರಕ್ಕಸರಿಂದ ಪಾರಾಗುವ ಉದ್ದೇಶದಿಂದ ಕೆಲವು ಕುಟುಂಬಗಳು ತರಾತುರಿಯಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡಿಸಿದ್ದವು. ಇನ್ನೂ ಕೆಲವು ಕುಟುಂಬಗಳು ರಾತ್ರೋರಾತ್ರಿ ಅಕ್ಕಪಕ್ಕದ ರಾಷ್ಟ್ರಗಳಿಗೆ, ಅದರಲ್ಲೂ ಮುಖ್ಯವಾಗಿ ಇರಾನ್‌ಗೆ ಪಲಾಯನ ಮಾಡಿದ್ದವು. ದೇಶದಲ್ಲಿರುವ ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳು ಅಪಾಯಕ್ಕೆ ಸಿಲುಕಿವೆ.
ಆಯಾಮ 2: ವಿಶ್ವದ ಮೇಲೆ ಪರಿಣಾಮ
ಅಮೆರಿಕದ ಲೆಕ್ಕಾಚಾರ ಉಲ್ಟಾ ಆಗಿದೆ. ತಾನು ಅಫ್ಘಾನಿಸ್ಥಾನದಿಂದ ಹಿಂದಕ್ಕೆ ಬಂದ ಅನಂತರ ತನ್ನ ಬೆಂಬಲಿತ ಅಶ್ರಫ್ ಘನಿ ಸರಕಾರ ಅಲ್ಲಿ ಕನಿಷ್ಟ 2 ವರ್ಷಗಳ ಕಾಲವಾದರೂ ಮುನ್ನಡೆಯುತ್ತದೆ ಎಂದು ಅಮೆರಿಕ ಭಾವಿಸಿತ್ತು. ಆದರೆ ತಾಲಿಬಾನಿ ಪಡೆಗಳು ಹೆಚ್ಚು ವೇಗವಾಗಿ ಆಫ್ಘಾನಿಸ್ಥಾನವನ್ನು ತನ್ನ ವಶಕ್ಕೆ ತೆಗೆದುಕೊಂಡಿವೆ. ಮುಂದಿನ ದಿನಗಳಲ್ಲಿ ಆಫ್ಘಾನಿಸ್ಥಾನ ಉಗ್ರವಾದಿಗಳ ಸ್ವರ್ಗವಾಗುವ ಸಾಧ್ಯತೆಯಿದೆ. ಇದು ಮುಸ್ಲಿಮೇತರ, ಪಾಶ್ಚಿಮಾತ್ಯ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಟ್ರಂಪ್, ಬೈಡನ್ ಬಗ್ಗೆ ತೀವ್ರ ಟೀಕೆ: ಅಮೆರಿಕದ ಈ ಹಿಂದಿನ ಅಧ್ಯಕ್ಷ ಟ್ರಂಪ್ ಹಾಗೂ ಈಗಿನ ಅಧ್ಯಕ್ಷ ಜೊ ಬೈಡನ್ ಅವರು ಅಫ್ಘಾನಿಸ್ಥಾನದಿಂದ ಅಮೆರಿಕ ಪಡೆ ಯನ್ನು ಹಿಂದಕ್ಕೆ ಕರೆಯಿಸಿಕೊಂಡ ನಿರ್ಧಾರ ಐತಿಹಾಸಿಕ ಪ್ರಮಾದ ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿ ದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲೂé. ಬುಷ್ ಕೂಡ ಟ್ರಂಪ್, ಬೈಡನ್‌ರನ್ನು ಟೀಕಿಸಿದ್ದರು.
ಉಗ್ರರ ಆಡಂಬೋಲ?: ಪಾಕಿಸ್ಥಾನ ಏನೇ ಹೇಳಲಿ, ಅಫ್ಘಾನಿಸ್ಥಾನ ಪೂರ್ತಿ ತಾಲಿಬಾನಿಗಳ ಹಿಡಿತಕ್ಕೆ ಬಂದರೆ ಅದು ಉಗ್ರರ ಅಂತಾರಾಷ್ಟ್ರೀಯ ಮಟ್ಟದ ಸ್ವರ್ಗವಾಗುವ ಸಾಧ್ಯತೆಯಿದೆ. ಪಾಕಿಸ್ಥಾನದಲ್ಲಿರುವ ಅಷ್ಟೂ ರಕ್ಕಸ ನೆಲೆಗಳು ಅಫ್ಘಾನಿಸ್ಥಾನಕ್ಕೆ ವರ್ಗಾವಣೆಯಾಗಿ ಅಲ್ಲಿಂದಲೇ ಮತ್ತಷ್ಟು ದಾಳಿಗಳನ್ನು ಸಂಘಟಿಸಲು ಅವು ಸಿದ್ಧ ವಾಗಬಹುದು. ಅಸಲಿಗೆ, ತಾಲಿಬಾನಿಗಳಿಗೆ ಕಾಶ್ಮೀರ ಆಧಾರಿತ ಭಯೋತ್ಪಾದನೆ ಅಷ್ಟಾಗಿ ಹಿಡಿಸಲ್ಲ. ಅವರಿಗೆ ಬೇಕಾಗಿರುವುದು ಜಿಹಾದ್ ಆಧಾರಿತ ಭಯೋತ್ಪಾದನೆ. ಆದರೆ ಪಾಕಿಸ್ಥಾನದ ಬಲವಂತದಿಂದ ಅದು ಅಲ್‌ಖೈದಾ, ಹಿಜ್ಬುಲ್ ಮುಜಾಹಿದ್ದೀನ್ ಮುಂತಾದ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳು, ಹಣಕಾಸು ನೆರವು, ಸೈನಿಕರಿಗೆ ಅಂತಾ ರಾಷ್ಟ್ರೀಯ ಮಟ್ಟದ ತರಬೇತಿ ಮುಂತಾದ ಸಹಾಯ ಮಾಡಬಹುದು. ಒಟ್ಟಾರೆಯಾಗಿ, ಪಾಕಿಸ್ಥಾನಕ್ಕೆ ಒಳ ಗೊಳಗೆ ಸಂತೋಷವೋ, ಸಂತೋಷ.
ಪಾಕಿಸ್ಥಾನದ “ಆಷಾಢಭೂತಿ’ತನ!: ನಿರೀಕ್ಷೆಯಂತೆ, ಈಗಾಗಲೇ ಪಾಕಿಸ್ಥಾನ ಪರೋಕ್ಷವಾಗಿ ತಾಲಿಬಾನಿಗಳ ಬೆಂಬಲಕ್ಕೆ ನಿಂತಿದೆ. ತಾಲಿಬಾನಿಗಳಿಗೆ ತಮ್ಮ ವಾಯು ನೆಲೆಗಳನ್ನು ಬಳಸಿಕೊಳ್ಳಲು ಪಾಕಿಸ್ಥಾನ ಅನುಮತಿ ನೀಡಿದೆ. ಕೆಲವು ದಿನಗಳ ಹಿಂದೆ, ತಾಲಿಬಾನಿಗಳ ವಿರುದ್ಧ ತೊಡೆತಟ್ಟಿದರೆ ಹುಷಾರ್ ಎನ್ನುವ ಅರ್ಥದಲ್ಲಿ ಅಫ್ಘಾನಿಸ್ಥಾನ ಯೋಧರಿಗೆ ಪಾಕಿಸ್ಥಾನ ಎಚ್ಚರಿಕೆ ಸಂದೇಶ ರವಾನಿಸಿತ್ತು.
ತಾಲಿಬಾನಿಗಳ ಕಡೆ ಕೈ ಬೀಸಿದ ಚೀನ!: ಇದೆಲ್ಲದರ ನಡುವೆ ಭಾರತಕ್ಕೆ ಹೊಸತೊಂದು ತಲೆನೋವು ಶುರುವಾಗಿದೆ. ಇತ್ತೀಚೆಗೆ, ತಾಲಿಬಾನಿಗಳ ನಿಯೋಗ ವೊಂದು ಚೀನಕ್ಕೆ ಭೇಟಿ ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಭೇಟಿ ಮಾಡಿ ಬಂದಿದ್ದಾರೆ. “ಚೀನ ನಮ್ಮ ನಂಬಿಕೆಗೆ ಅರ್ಹನಾದ ಸ್ನೇಹಿತ’ ಎಂದು ತಾಲಿಬಾನಿ ನಿಯೋಗ ಹೇಳಿದೆ.
ಆಯಾಮ 3: ಭಾರತಕ್ಕೆ ತೊಂದರೆ
ಅಫ್ಘಾನಿಸ್ಥಾನದ ಮೇಲೆ ತಾಲಿಬಾನಿಗಳು ಸಾಧಿಸಿರುವ ಹಿಡಿತದಿಂದ ಭಾರತಕ್ಕೆ ಅನುಕೂಲಕ್ಕಿಂತ ಅನಾನು ಕೂಲವೇ ಹೆಚ್ಚು ಎಂದು ತಜ್ಞರು ಈಗಾಗಲೇ ವಿಶ್ಲೇಷಿಸಿ ದ್ದಾರೆ. ಅಫ್ಘಾನಿಸ್ಥಾನ – ಭಾರತ ನಡುವೆ 2001ರಿಂದ ಈಚೆಗೆ ವೃದ್ಧಿಯಾದ ಮೈತ್ರಿಯಿಂದ ಉಭಯ ರಾಷ್ಟ್ರಗ ಳಿಗೂ ರಾಜಕೀಯವಾಗಿ, ಆರ್ಥಿಕವಾಗಿ ಹಲವಾರು ಲಾಭಗಳಾಗಿವೆ. ಅಫ್ಘಾನಿಸ್ಥಾನದ ಚಿತ್ರಣವನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ, 2010ರ ಹೊತ್ತಿಗೆ ಆ ದೇಶದಲ್ಲಿ ಮೂಲಸೌಕರ್ಯ ಗಳಿಗಾಗಿ 70,000 ಕೋಟಿ ರೂ. ಖರ್ಚು ಮಾಡಿತ್ತು.
2014ರಲ್ಲಿ ಪ್ರಧಾನಿ ಮೋದಿ ಸರಕಾರ ಬಂದ ಅನಂತರ ಎರಡೂ ದೇಶಗಳ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿ, ನೂತನ ಸಂಸತ್ ಭವನ, ಅಣೆಕಟ್ಟು ಗಳು, ಜಲವಿದ್ಯುದಾಗಾರಗಳು, ರಸ್ತೆಗಳು ಮುಂತಾದ ಸೌಕರ್ಯಗಳನ್ನು ಭಾರತ ನೀಡಿದೆ. 2019ರಲ್ಲಿ ಮತ್ತೆ ಭಾರತದ ಆಡಳಿತ ಚುಕ್ಕಾಣಿ ಹಿಡಿದ ಮೋದಿ ಸರಕಾರ, ಅಫ್ಘಾನಿಸ್ಥಾನದಲ್ಲಿ ಕೈಗೊಳ್ಳಲಾಗುವ 100ಕ್ಕೂ ವಿವಿಧ ಯೋಜನೆಗಳಿಗೆ 5.9 ಲಕ್ಷ ಕೋಟಿ ರೂ. ನೀಡುವ ಘೋಷಣೆ ಮಾಡಿದೆ. ಆದರೆ ತಾಲಿಬಾನಿಗಳು ಅಲ್ಲಿ ಅಧಿಕಾರಕ್ಕೆ ಬಂದರೆ ಭಾರತ ಈವರೆಗೆ ಮಾಡಿದ್ದೆಲ್ಲಾ ಹೊಳೆಯಲ್ಲಿ ಹೋಮ ಮಾಡಿದಂತಾಗುತ್ತದೆ.
ಭಾರತದ ಕುರುಹುಗಳನ್ನು ತಾಲಿಬಾನಿಗಳು ಧ್ವಂಸ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಭಾರತ ಕಟ್ಟಿಸಿಕೊಟ್ಟಿದ್ದ ಸಂಸತ್ ಭವನದ ಮೇಲೆ, ಎರಡೂ ದೇಶಗಳ ಸ್ನೇಹದ ಕುರುಹುಗಳಲ್ಲಿ ಪ್ರಮುಖವಾದ ಸಲ್ಮಾ ಅಣೆಕಟ್ಟನ್ನು ಒಡೆಯಲು ತಾಲಿಬಾನಿಗಳು ಕಳೆದೆರಡು ತಿಂಗಳಲ್ಲೇ ಅನೇಕ ಬಾರಿ ಪ್ರಯತ್ನಿಸಿ ವಿಫಲರಾಗಿದ್ದಾರೆ. ತಾಲಿಬಾನಿಗಳಿಂದ ಅಫ್ಘಾನ್ ಹೆಬ್ಟಾಗಿಲು ಬಂದ್ ಆದರೆ ಭಾರತಕ್ಕೆ ನಾನಾ ರೀತಿಯ ನಷ್ಟ, ತೊಂದರೆ ಆಗುತ್ತದೆ.
ಭಾರತದ ಸ್ಥಿತಿ: ಹಿಂದೆ ಹೇಗಿತ್ತು? ಮುಂದೆ ಹೇಗೆ?
ಭಾರತ-ಅಫ್ಘಾನಿಸ್ಥಾನ ಸ್ನೇಹ ವೃದ್ಧಿಯಾಗಿದ್ದರಿಂದ ಭಾರತಕ್ಕೆ ಅನೇಕ ಅನುಕೂಲಗಳಾಗಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತನ್ನ ಸರಕು ಸಾಗಣೆಗಾಗಿ ಪಾಕಿಸ್ಥಾನದ ಮೂಲಕವೇ ಇದ್ದ ಭೂಮಾರ್ಗದ ಅವಲಂಬನೆ ಯನ್ನು ತಪ್ಪಿಸಿದ ಮೋದಿ ಸರಕಾರ, ಇರಾನ್‌ನ ಚಬಾಹರ್ ಬಂದರನ್ನು ಅಭಿವೃದ್ಧಿಪಡಿಸಿ, ಭಾರತ ದಿಂದ ಇರಾನ್, ಇರಾನ್‌ನಿಂದ ಅಫ್ಘಾನಿಸ್ಥಾನ, ಅಫ್ಘಾನಿಸ್ತಾನದ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಮಗ್ರಿ ರಫ್ತು ಮಾಡುವ ಹೊಸ ಜಲ ಮತ್ತು ಭೂ ಮಾರ್ಗಗಳನ್ನು ಸೃಷ್ಟಿಸಿಕೊಂಡಿತ್ತು.
ಇನ್ನು, ಅಫ್ಘಾನಿಸ್ಥಾನದ ಅಭಿವೃದ್ಧಿಗೆ ಹೇರಳವಾಗಿ ಧನಸಹಾಯ ಮಾಡುವ ಮೂಲಕ ಮುಸ್ಲಿಂ ರಾಷ್ಟ್ರಗಳ ಪ್ರೀತಿಗೂ ಪಾತ್ರವಾಗಿದ್ದ ಭಾರತ, ಕತಾರ್, ಇರಾನ್, ಸೌದಿ ಅರೇಬಿಯಾ ರಾಷ್ಟ್ರಗಳ ಜತೆಗಿನ ಸ್ನೇಹವನ್ನು ಗಟ್ಟಿಗೊಳಿಸಿಕೊಂಡಿತ್ತು. ಈಗ, ಅಫ್ಘಾನಿಸ್ಥಾನ ತಾಲಿಬಾನಿಗಳ ಹಿಡಿತಕ್ಕೆ ಬಂದಿರುವ ಕಾರಣ, ಈ ಎಲ್ಲÉ ಅನುಕೂಲಗಳು ಬಂದ್ ಆಗಲಿವೆ. ಇನ್ನು, ಭಾರತದ ಅಭಿವೃದ್ಧಿ ಸಹಿಸದ ಪಾಕಿಸ್ಥಾನ, ಚೀನ ರಾಷ್ಟ್ರಗಳು ಈಗಾಗಲೇ ತಾಲಿಬಾನಿಗಳಿಗೆ ಉಘೇ ಉಘೇ ಎನ್ನುತ್ತಿರುವುದು, ಭಾರತಕ್ಕೆ ಹೊಸ ಸವಾಲಿನ ಸನ್ನಿವೇಶ ಸೃಷ್ಟಿಸಿದೆ. ಪಾಕಿಸ್ಥಾನ ಹಾಗೂ ಚೀನ ದೇಶಗಳು, ಭಾರತದ ಮೇಲಿರುವ ತಮ್ಮ ದಶಕಗಳ ಸೇಡನ್ನು ಇನ್ನು ಮುಂದೆ ತಾಲಿಬಾನಿಗಳ ಮೂಲಕ ತೀರಿಸಿಕೊಳ್ಳಲಿವೆಯೇ ಎಂಬ ಆತಂಕವೂ ಕಾಲಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.