ಅವರು ಬದಲಾಗರು..
Team Udayavani, Aug 19, 2021, 7:20 AM IST
ಕಾಬೂಲ್: ಎಲ್ಲೆಲ್ಲೂ ಆಕ್ರಂದನ, ಗಾಯಗೊಂಡ ಮಕ್ಕಳು, ಮಹಿಳೆಯರ ಹಾಹಾಕಾರ. “ಓ ಅಮೆರಿಕದ ಸೈನಿಕರೇ ತಾಲಿಬಾನಿಗಳು ಪ್ರವೇಶಿಸುವ ಮುನ್ನ ನಮ್ಮನ್ನು ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿ’ ಎಂದು ಆರ್ತರಾಗಿ ಮೊರೆ ಇಡುತ್ತಿರುವ ಅಫ್ಘಾನ್‌ನ ಮಹಿಳೆಯರು..
ಇದು ಅಫ್ಘಾನಿಸ್ಥಾನದಲ್ಲಿ ಕಂಡುಬರುತ್ತಿರುವ ದೃಶ್ಯ. ಹಿಂಸಾತ್ಮಕ ಧೋರಣೆ ಇಲ್ಲವೆಂದು ಭರವಸೆ ನೀಡಿದ್ದ ತಾಲಿಬಾನಿಗಳು ಇದೀಗ ಅದನ್ನು ಸುಳ್ಳು ಮಾಡಿದ್ದು, ತಮ್ಮ ಧೋರಣೆಗಳನ್ನು ವಿರೋಧಿಸುವವರನ್ನು ಮಣಿಸಲು ಕೊಲ್ಲುವುದಕ್ಕೂ ಹೇಸುತ್ತಿಲ್ಲ. ಧ್ವಜಾರೋಹಣ ವಿಚಾರದಲ್ಲಿ ತಾಲಿಬಾನಿಗಳು ಹಾರಿಸಿದ ಗುಂಡಿಗೆ ಮೂವರು ಅಸುನೀಗಿದ್ದಾರೆ. ಜತೆಗೆ ಪಾಕಿಸ್ಥಾನದಿಂದ ಅಫ್ಘಾನ್‌ಗೆ ತೆರಳಿರುವ ಉಗ್ರರೂ ಸ್ಥಳೀಯರ ಸೊತ್ತುಗಳನ್ನು ಕಿತ್ತುಕೊಳ್ಳಲು ಆರಂಭಿಸಿದ್ದಾರೆ.
ಅಫ್ಘಾನಿಸ್ಥಾನವನ್ನು ವಶಪಡಿಸಿದ ಬಳಿಕ ಮಂಗಳವಾರ ನಡೆಸಿದ್ದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಉಗ್ರ ಸಂಘಟನೆ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿದ್ದ ಅಂಶಗಳಿಗೂ ಅಜಗಜಾಂತರವಿದೆ.
ಉಗ್ರರ ಧ್ವಜ ವಿರೋಧಿಸಿದವರ ಹತ್ಯೆ :
ದೇಶದ ಪೂರ್ವ ಭಾಗ ಜಲಾಲಾಬಾದ್‌ನಲ್ಲಿ ಅಫ್ಘಾನಿಸ್ಥಾನದ ರಾಷ್ಟ್ರ ಧ್ವಜ ಹಾರಿಸಬೇಕೋ ಅಥವಾ ಉಗ್ರ ಸಂಘಟನೆಯ ಧ್ವಜ ಹಾರಿಸಬೇಕೋ ಎಂಬ ಬಗ್ಗೆ ಘರ್ಷಣೆ ನಡೆದಿದೆ. ಉಗ್ರ ಸಂಘಟನೆಯ ಧ್ವಜವನ್ನೇ ಹಾರಿಸಬೇಕು ಎಂಬ ಆಣತಿಯನ್ನು ಪಾಲಿಸದೇ ಇದ್ದುದರಿಂದ ಕ್ರುದ್ಧಗೊಂಡ ಉಗ್ರರು ಗುಂಡು ಹಾರಿಸಿದಾಗ ಕನಿಷ್ಠ ಮೂವರು ಅಸುನೀಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸ್ಥಳೀಯ ಟಿವಿವಾಹಿನಿಯ ಕೆಮರಾಮನ್ ಮತ್ತು ಸುದ್ದಿಸಂಸ್ಥೆಯೊಂದರ ಛಾಯಾಚಿತ್ರಗ್ರಾಹಕನಿಗೆ ಉಗ್ರರು ಥಳಿಸಿದ್ದಾರೆ.
ತಡೆ, ಹಲ್ಲೆ :
ದೇಶ ತೊರೆಯಲು ಮುಂದಾಗಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಬರುವ ಮಹಿಳೆಯರು ಮತ್ತು ಮಕ್ಕಳ ಮೇಲೆ ಉಗ್ರರು ಹರಿತವಾಗಿರುವ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಗೆ ತೆರಳುವಂತೆ ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದಾಗ ಹಲವು ಮಕ್ಕಳು, ಮಹಿಳೆಯರು ಅಸುನೀಗಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಗಾಯಗೊಂಡು ರಕ್ತಸಿಕ್ತ ಮಗುವನ್ನು ವ್ಯಕ್ತಿ ಎತ್ತಿಕೊಂಡು ಹೋಗುತ್ತಿರುವ ಫೋಟೋ ಪ್ರಕಟವಾಗಿದೆ.
ಗ್ರಾಮೀಣ ಪ್ರದೇಶವೊಂದರಲ್ಲಿ ಮಹಿಳೆ ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕಾಗಿ ಗುಂಡು ಹಾರಿಸಿ ಕಳೆದ ವಾರ ಕೊಲ್ಲಲಾಗಿದೆ.
ಕಂದಹಾರ್‌ನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸುದ್ದಿಸಂಸ್ಥೆಯೊಂದರ ಜತೆಗೆ ಮಾತನಾಡಿ, “ತಾಲಿಬಾನ್ ಉಗ್ರರು ಕಂದಹಾರ್ ಪ್ರಾಂತ್ಯವನ್ನು ಘೋರ ಯುದ್ಧದ ಮೂಲಕ ವಶಪಡಿಸಿಕೊಂಡರು. ಇಷ್ಟಾದರೂ ಅವರು ನಗರದಲ್ಲಿ ಮನ ಬಂದಂತೆ ಗುಂಡು ಹಾರಿಸುತ್ತಿದ್ದರು. ಹೆದರಿ ಕಾಬೂಲ್‌ಗೆ ಬಂದೆ. ಈಗ ಅವರು ಇಲ್ಲಿಗೂ ಬರಲಿದ್ದಾರೆ ಎಂದು ಆತಂಕಗೊಂಡಿದ್ದೇನೆ’ ಎಂದು ದುಃಖಿಸಿದರು.
ಕಾರು ಕಳ್ಳನಿಗೆ ಬಣ್ಣ ಸುರಿದರು :
ಕಾರು ಕಳವು ಮಾಡಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ತಾಲಿಬಾನಿಗಳು ಬಂಧಿಸಿದ್ದರು. ಆತನನ್ನು ಟ್ರಕ್ ಒಂದಕ್ಕೆ ಕಟ್ಟಿ ಹಾಕಿ ಟಾರ್ ಸುರಿಯಲಾಗಿದೆ. ಸರಕಾರಿ ನೌಕರರಿಗೆ ಕೆಲಸ ಮಾಡಲು ಅಡ್ಡಿ ಇಲ್ಲ ಎಂದು ಹೇಳಿದ್ದ ತಾಲಿಬಾನಿಗಳ ರಾಗ ಬದಲಾಗಿದೆ. ಹಿಂದಿನ ಅಫ್ಘಾನ್ ಸರಕಾರದಲ್ಲಿ ಕೆಲಸ ಮಾಡುತ್ತಿದ್ದವರ ಗುರುತು ಪತ್ತೆ ಮಾಡಿ ಮನೆಗಳಿಗೆ ನುಗ್ಗಿ ಥಳಿಸುತ್ತಿದ್ದಾರೆ.
ಅಘ್ಘನ್‌ನಲ್ಲೂ ಪಾಕ್ ತಂಟೆ :
ತಾಲಿಬಾನ್ ಪ್ರಾಬಲ್ಯ ಹೊಂದುತ್ತಿದ್ದಂತೆಯೇ ಪಾಕಿಸ್ಥಾನದ ಲಷ್ಕರ್, ಜೈಶ್‌ನ ಉಗ್ರರು ಅಫ್ಘಾನ್‌ನಲ್ಲಿ ಠಿಕಾಣಿ ಹೂಡಲು ಆರಂಭಿಸಿದ್ದು, ಜನರ ಸೊತ್ತುಗಳನ್ನು ಮತ್ತು ಹಣವನ್ನು ದತ್ತಿ ನಿಧಿ ಎಂಬ ಹೆಸರಿನಲ್ಲಿ ಕಿತ್ತುಕೊಳ್ಳಲು ಆರಂಭಿಸಿದ್ದಾರೆ.
ಯುಎಇಯಲ್ಲಿ ಘನಿ :
ಬಹುಕೋಟಿ ಮೊತ್ತದ ಜತೆಗೆ ಅಫ್ಘಾನಿಸ್ಥಾನದಿಂದ ಪರಾರಿಯಾಗಿರುವ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸಂಯುಕ್ತ ಅರಬ್ ಗಣರಾಜ್ಯದಲ್ಲಿದ್ದಾರೆ. ಈ ಬಗ್ಗೆ ಅಲ್ಲಿನ ಸರಕಾರಿ ಸುದ್ದಿಸಂಸ್ಥೆ ಡಬ್ಲ್ಯೂಎಎಂ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅವರ ಜತೆಗೆ ಕುಟುಂಬ ಸದಸ್ಯರೂ ಇದ್ದಾರೆ. ಮಾನವೀಯತೆಯ ಆಧಾರದಲ್ಲಿ ಅವರಿಗೆ ಆಶ್ರಯ ನೀಡಿರುವುದಾಗಿ ಸರಕಾರ ತಿಳಿಸಿದೆ.
ಕಾಯುತ್ತಿದ್ದಾರೆ 50 ಸಾವಿರ ಮಂದಿ :
ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸುಮಾರು 50 ಸಾವಿರ ಮಂದಿ ಅಫ್ಘಾನಿಸ್ಥಾನ ತೊರೆದು ಸುರಕ್ಷಿತ ದೇಶಕ್ಕೆ ತೆರಳಲು ಪತ್ನಿ, ಮಕ್ಕಳ ಸಮೇತ ಕಾಯುತ್ತಿದ್ದಾರೆ. ಜರ್ಮನಿ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್ ಸೇರಿದಂತೆ ಹಲವು ಸರಕಾರಗಳು ತಮ್ಮ ಪ್ರಜೆಗಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದರೂ ವಿಮಾನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತಿಲ್ಲ ಎಂಬ ಅಂಶ ಬಹಿರಂಗವಾಗಿದೆ. ವಿದೇಶಿ ಪಾಸ್‌ಪೋರ್ಟ್‌ಗಳನ್ನು ಹೊಂದಿಲ್ಲದೇ ಇರುವವರನ್ನು ತಾಲಿಬಾನಿಗಳು ತಡೆದು ನಿಲ್ಲಿಸಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ.
ಕನ್ನಡಿಗರ ಕರೆತರಲು ಅಧಿಕಾರಿ :
ಬೆಂಗಳೂರು: ಅಫ್ಘಾನಿಸ್ಥಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರಕಾರದೊಂದಿಗೆ ಸಮನ್ವಯಕ್ಕಾಗಿ ರಾಜ್ಯ ಸರಕಾರವು ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿದೆ.
ಹೆಚ್ಚಿನ ಮಾಹಿತಿಗೆ 080-2203-3254 ಮತ್ತು [email protected] ಸಂಪರ್ಕಿಸಬಹುದು ಎಂದು ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಆರ್. ಶೋಭಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.