ಕೆರೆಗೆ ಹೇಮೆ ಹರಿಸಲು ಪ್ರತಿಪಕ್ಷಗಳ ಪಟ್ಟು
ಕೆರೆಗೆ ನೀರು ಹಂಚಿಕೆ ಆಗಿಲ್ಲ ಎನ್ನುತ್ತಾರೆ ಸಚಿವರು ; ರಾಜಕೀಯ ಮುಖಂಡರ ನಡುವೆ ಜಲ ಜಗಳ ಆರಂಭ
Team Udayavani, Aug 19, 2021, 5:27 PM IST
ಮದಲೂರು ಕೆರೆ.
ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಪ್ರಮುಖ ಚುನಾವಣಾ ಅಸ್ತ್ರ ಮದಲೂರು ಕೆರೆಗೆ ನೀರು ಹರಿಸುವುದಾಗಿತ್ತು, ಅದರಂತೆ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಈಗ ಮದಲೂರುಕೆರೆಗೆ ನೀರು ಹರಿಸಲುಕಾನೂನು ತೊಡಕು ಎಂದು ಸಚಿವರು ಹೇಳುತ್ತಿರುವುದು ಶಿರಾಕ್ಷೇತ್ರದಲ್ಲಿ ಜಲದಕಿಚ್ಚು ಹೆಚ್ಚಿದೆ. ಮದಲೂರುಕೆರೆಗೆ ನುಡಿದಂತೆ ಹೇಮಾವತಿ ನೀರು ಹರಿಸಿ ಎನ್ನುವ ಹೋರಾಟ ಆರಂಭವಾಗಿದೆ. ನೀರು ಹರಿಸುವ ವಿಚಾರವಾಗಿ ಲಾಭ ಪಡೆಯಲು ಬಿಜೆಪಿ, ಜೆಡಿಎಸ್ ಮತ್ತುಕಾಂಗ್ರೆಸ್ ಪಕ್ಷಗಳು ನಾ..ಮುಂದು.. ತಾ..ಮುಂದು ಎಂದು ಪೈಪೋಟಿ ಆರಂಭಿಸಿವೆ. ಈ ಪೈಪೋಟಿ ನಡುವೆ ಹೇಮೆ ಮದಲೂರು ಸೇರುವಳೇ?
ತುಮಕೂರು:ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮುಖಂಡರ ನಡುವೆ ಜಲ ಜಗಳ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಅಲೋಕೇಟ್ ಇಲ್ಲ ಎಂದು ಹೇಳಿರುವುದು ಜಲ ಕಿಚ್ಚಿಗೆ ಕಾರಣವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬೀದಿಗೆ ಇಳಿದು ಹೋರಾಟ ಆರಂಭಿಸಿವೆ. ಬಿಜೆಪಿ ಶಾಸಕರು ಮದಲೂರು ಕೆರೆಗೆ ನೀರು ಹರಿಸುವುದು ಶತಸಿದ್ಧ ಎಂದು ಹೇಳುತ್ತಿದ್ದು, ಈಗ ಎಲ್ಲರ ಚಿತ್ತ ಮದಲೂರಿನತ್ತ ನೆಟ್ಟಿದೆ.
ಸಮರ್ಪಕವಾಗಿ ಮಳೆ ಬಾರದೆ ಸದಾ ಬರಪೀಡಿತ ಪ್ರದೇಶವಾಗಿ ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಶಿರಾ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿ ಮದಲೂರು ಕೆರೆಗೆ ನೀರು ಹರಿಸಬೇಕು ಎನ್ನುವಕೂಗು ಬಹಳ ವರ್ಷದ್ದಾಗಿದೆ. ಎಲ್ಲ ಚುನಾವಣೆ ಸಂದರ್ಭದಲ್ಲಿಯೂ ಮದಲೂರು ಕೆರೆಗೆ ನೀರು ಹರಿಸುವ ಪ್ರಸ್ತಾಪವಾಗುತ್ತಲೇ ಬಂದಿತ್ತು. ಮದಲೂರು ಕೆರೆಗೆ ನೀರು ಹರಿಸಲು 68 ಕೋಟಿಯಷ್ಟು ಹಣ ಖರ್ಚು
ಮಾಡಲಾಗಿತ್ತು. ಆದರೆ ಈ ಕೆರೆಗೆ ನೀರು ಹರಿದಿರಲಿಲ್ಲ.
ಇದನ್ನೂ ಓದಿ:ಅಫ್ಘಾನಿಸ್ಥಾನದಿಂದ ಏರ್‌ಲಿಫ್ಟ್ ತಾಯ್ನಾಡಿಗೆ ಮರಳಿದ ಉಳ್ಳಾಲದ ಮೆಲ್ವಿನ್
ಕಾಕತಾಳೀಯ ಎನ್ನುವಂತೆ ಜೆಡಿಎಸ್ ಶಾಸಕರಾಗಿದ್ದ ಬಿ.ಸತ್ಯನಾರಾಯಣ್ ಅವರ ಅಕಾಲಿಕವಾಗಿ ನಿಧನ ಹೊಂದಿದ ಪರಿಣಾಮ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯ ವೇಳೆಯಲ್ಲಿ ಮತ್ತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಮುನ್ನಲೆಗೆ ಬಂದು ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಗೆಲುವು ಸಾಧಿಸಿದರೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ ಕೆರೆ ತುಂಬಿಸಿ ಕೆರೆಗೆ ಬಾಗಿನ ಅರ್ಪಿಸಲು ನಾನೇ ಬರುತ್ತೇನೆ ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮದಲೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದರು. ಇದರ ಜೊತೆಗೆ ಅವರ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷಹಾಗೂ ಶಿರಾ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಬಿ.ವೈ ವಿಜಯೇಂದ್ರ ಕೂಡಾ ಮದಲೂರು ಕೆರೆಗೆ ನೀರು ಹರಿಸುತ್ತೇವೆ . ಶಿರಾ ವನ್ನು ಮಾದರಿ ಕ್ಷೇತ್ರ ಮಾಡುತ್ತೇವೆ ನಾವು ನುಡಿದಂತೆ ನಡೆಯುತ್ತೇವೆ ಎಂದು ಜನರಲ್ಲಿ ಭರವಸೆ ಮೂಡಿಸಿದ್ದರು.
ಮದಲೂರು ಕೆರೆಗೆ ನೀರು ಹರಿಸಿ: ಇದನ್ನೆಲ್ಲ ಕೇಳಿದ ಮತದಾರರು ಬಿಜೆಪಿಯ ಅಸ್ತಿತ್ವವೇ ಇಲ್ಲದ ಶಿರಾ ಕ್ಷೇತ್ರದಲ್ಲಿ ಕಮಲ ಅರಳಿಸಿದರು. ಡಾ.ಸಿ.ಎಂ.ರಾಜೇಶ್ ಗೌಡ ಶಾಸಕರಾಗಿ ಆಯ್ಕೆಯಾದರು, ಆಯ್ಕೆಯಾದ ತಕ್ಷಣ ಶಾಸಕ ಸಿ.ಎಂ.ರಾಜೇಶ್ ಗೌಡ ಜೆಸಿಬಿಗಳ ಮೂಲಕ ಕೆರೆ ಯಲ್ಲಿ ಬೆಳೆದಿದ್ದ ಗಿಡ ಗೆಂಟೆ ತೆಗಸಿ ನುಡಿದಂತೆ ಕಳೆದ ವರ್ಷ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 60 ದಿನಗಳ ಕಾಲ ಹೇಮಾವತಿ ನೀರಿ ಹರಿಸಿದರು. ಹಲವಾರು ವರ್ಷಗಳಿಂದ ಕೆರೆ ತುಂಬದೇ ಖಾಲಿ ಇದ್ದ ಕೆರೆಗೆ ನೀರು ಎರಡು ತಿಂಗಳು ಹರಿದರೂ ನೀರಿಲ್ಲದೇ ಒಣಗಿದ್ದ ಕೆರೆಗೆ ನೀರು ಹರಿದ ಪರಿಣಾಮ ನೀರು ನಿಲ್ಲದೇ ಒಣಗಿ ಹೋಗಿತು. ಈಗ ಮತ್ತೆ ಜಿಲ್ಲೆಗೆ ಹೇಮಾವತಿ ನೀರು ಹರಿಯುತ್ತಿದೆ. ಕಳಂಬೆಳ್ಳ ಕೆರೆಗೆ ನೀರು ಹರಿದು ಶಿರಾ ಕೆರೆಗೆ ಹೇಮಾವತಿ ನೀರು ಹರಿಯುತ್ತಿದೆ. ಮುಂದೆ ಮದಲೂರು ಕೆರೆಗೆ ನೀರು ಹರಿಸಿ ಎಂದು ಒತ್ತಡ ಕೇಳಿ ಬರುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಾದ ಶಿರಾ ಮದಲೂರು ಕೆರೆ ಕೃಷ್ಣ ಬೇಸಿನ್ ವ್ಯಾಪ್ತಿಗೆ ಬರುತ್ತದೆ. ಶಿರಾಗೆ ಕಾವೇರಿ ಬೇಸಿನ್ ನೀರು ಹರಿಸುವುದು ಕಾನೂನು ಬಾಹಿರ, ಆದಾಗ್ಯೂ ಮದಲೂರು ಕೆರೆಗೆ ನೀರು ಹರಿಸಬೇಕು ಎನ್ನುವುದು ಸಲ್ಲದ ಮಾತು ಎನ್ನುತ್ತಾರೆ. ನಾನು ಹಾಗೂ ರಾಜೇಶ್‌ಗೌಡ ಶಿರಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಾಸಕರು. ನಮಗೆ ಶಿರಾ ಭಾಗದ ರೈತರ ಸಂಕಷ್ಟ ಗೊತ್ತಿದೆ.
ಕಳೆದ ಬಾರಿ ಉಪ ಚುನಾವಣೆಯಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರು ಭರವಸೆ ನೀಡಿದಾರೆಂಬ ಕಾರಣಕ್ಕೆ ಜಿಲ್ಲೆಯ ಹಂಚಿಕೆಯಾದ ಹೇಮಾವತಿ ನೀರಿನ ಪೈಕಿ ಚಿ.ನಾ.ಹಳ್ಳಿ, ಗುಬ್ಬಿ ಹಾಗಲವಾಡಿ, ಬಿ.ಕೆಗುಡ್ಡ ತಿಪಟೂರಿನ ಎರvು ಕೆರೆಗಳಿಗೆ ಹರಿಸದೆ ಉಳಿದ ನೀರನ್ನು ಮದಲೂರು ಕೆರೆಗೆ ಹರಿಸಲಾಯಿತು. ಪ್ರತಿ ಬಾರಿಯೂ ಹೀಗೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಸಚಿವ ಜೆ.ಸಿ.ಮಾಧುಸ್ವಾಮಿ.
ಅಲೋಕೇಟ್ ಇಲ್ಲದೆ ನೀರು ಹರಿಸಿದರೆ ನೀರು ನಿರ್ವಹಣಾ ಪ್ರಾಧಿಕಾರ, ಸುಪ್ರೀಂ ಕೋರ್ಟ್ ಎದುರು ರಾಜ್ಯದ ಅಧಿಕಾರಿಗಳು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಇದೇ ಕಾರಣಕ್ಕೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಕೆಡಿಪಿ ಸಭೆಯಲ್ಲಿ ಹೇಳಿದೆ ಹೊರತು ಬೇರೆ ಅರ್ಥದಲ್ಲಿ ಅಲ್ಲ ಎನ್ನುತ್ತಾರೆ ಸಚಿವರು.
ಮಾಧುಸ್ವಾಮಿ ವಿರುದ್ಧ ಕಿಡಿ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಮದಲೂರು ಕೆರೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ತಡ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿ ಮದಲೂರುಕೆರೆಗೆ ನೀರು ಹರಿಸಲು ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ.
ಜೆಡಿಎಸ್ ಕಾರ್ಯಕರ್ತರು ಮದಲೂರಿನಿಂದ ಶಿರಾವರೆಗೆ ಪಾದಯಾತ್ರೆ ಮಾಡಿ ನೀರು ಹರಿಸಲು ಒತ್ತಾಯ ಮಾಡಿದ್ದಾರೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಆ.21ರಂದು ಮದಲೂರಿನಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿತ್ತು. ಆದರೆ ಈಗ ತಾತ್ಕಾಲಿಕವಾಗಿ ಪಾದಯಾತ್ರೆ ಮುಂದೂಡಿದ್ದಾರೆ.
ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಕಿಡಿ ಕಾರಿದ್ದರು. ಅದಕ್ಕೆ ಪ್ರತಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರು ಜಯಚಂದ್ರ ವಿರುದ್ಧ ಕಿಡಿಕಾರಿದ್ದರು.
ಇತ್ತ ಆಡಳಿತರೂಢ ಶಾಸಕ ಡಾ.ಎಂ.ಆರ್. ರಾಜೇಶ್ ಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮದಲೂರು ಕೆರೆಗೆ ನೀರು
ಹರಿಸುವುದು ಶತಸಿದ್ಧ ಎನ್ನುತ್ತಿದ್ದಾರೆ. ಮುಖಂಡರ ಈ ರಾಜಕೀಯ ಮೇಲಾಟದಲ್ಲಿ ಮದಲೂರು ಕೆರೆಗೆ ಹೇಮೆ ಹರಿಯುವಳೇ ಎನ್ನುವುದು ಇಲ್ಲಿಯ ರೈತರ ಕುತೂಹಲವಾಗಿದೆ.
ಸಿಎಂ ಆದೇಶ ಮಾಡಿದರೆ ನನ್ನ ತಕರಾರಿಲ್ಲ
ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಮಾಡಿದರೆ ನೀರು ಬಿಡಲು ನನ್ನ ತಕರಾರಿಲ್ಲ. ಆದರೆ, ಈಗಾಗಲೇ ಹಂಚಿಕೆಯಾಗಿದ ಕೆರೆಗಳಿಗೆ ಮೊದಲ ಆದ್ಯತೆ. ಕಳಂಬೆಳ್ಳ ಕೆರೆಗೆ 0.89 ಟಿಎಂಸಿ ನೀರು ಅಲೋಕೇಟ್ ಆಗಿದೆ. ಅದನ್ನು ನಾನು ಜಯಚಂದ್ರ ಹತ್ತಿರ ಹೇಳಿಸಿ ಕೊಂಡು ಬಿಟ್ಟಿಲ್ಲ.ಈವರ್ಷ ಹೇಮಾವತಿ ನೀರನ್ನು ಮೊದಲು ಕೆರೆಯಾಗಿ ಅಲ್ಲಿಗೆ ನೀರು ಹರಿಸಲಾಗಿದೆ. ಮದಲೂರು ಕೆರೆಗೆ ನೀರು ಹರಿಸಲು 2 ಟಿಎಂಸಿ ನೀರಿನ ಅವಶ್ಯಕವಿದ್ದು,11ಕೆರೆಗಳು, 12 ಬ್ಯಾರೇಜ್ ತುಂಬಿ ಮುಂದಕ್ಕೆ ಹರಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಕಾನೂನಿನಡಿ ಕೆರೆಗೆ ನೀರು ಬಿಡಲು ಸಾಧ್ಯವಿಲ್ಲ
ಕಾನೂನಿನ ಪ್ರಕಾರ ಮದಲೂರು ಕೆರೆಗೆ ಹೇಮಾವತಿ ನೀರು ಬಿಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರು ಆದೇಶ ಮಾಡಿದರೆ ಹೇಮಾವತಿ ನೀರು ಬಿಡಲು ನನ್ನ ಅಭ್ಯಂತರವಿಲ್ಲ, ಜಯಚಂದ್ರ ಮಾತಾಡ್ತಾರೆ, ಇನ್ನಾರೋ ಹೋರಾಟ ಮಾಡ್ತಾರೆ ಅನ್ನೋ ಕಾರಣಕ್ಕೆ ಮದಲೂರು ಕೆರೆಗೆ ಹೇಮೆ ನೀರು ಹರಿಸಬಹುದು ಅನ್ಕೊಂಡಿದ್ದರೆ ಖಂಡಿತಾ ಅದು ಸಾಧ್ಯವೇ ಇಲ್ಲ. ಕಾರಣ ಮದಲೂರು ಕೆರೆಗೆ ನೀರನ್ನು ಭದ್ರಾ ಮೇಲ್ದಂಡೆ, ಎತ್ತಿನ ಹೊಳೆ ಯೋಜನೆಯಡಿ ಅಲೋಕೇಟ್ ಮಾಡಲಾಗಿದ್ದು, ಕಳೆದ ಬಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಮಾಡಿದ್ದ ಹಿನ್ನೆಲೆ ನಮ್ಮ ಜಿಲ್ಲೆಯ ಪಾಲಿನ ಉಳಿಕೆ ನೀರನ್ನು ಮದಲೂರಿಗೆ ಬಿಡಲಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಶಿರಾ ಮತ್ತು ಕಳ್ಳಂಬೆಳ್ಳಾಕೆರೆಗೆ ಮಾತ್ರ ಹೇಮಾವತಿ ಅಲೋಕೇಷನ್ ಇದೆ. ಮದಲೂರು ಕೆರೆಗೆ ಕುಡಿಯುವ ನೀರಿನ ಆಧಾರದ ಮೇಲೆ ಹೇಮಾವತಿ ನೀರು ಹರಿಸಲು ಶತಸಿದ್ಧ, ಅವಧಿಗಿಂತ ಮುಂಚೆ ನೀರು ಹರಿಸಿದ್ದೇವೆ. ನುಡಿದಂತೆ ನಾವು ಹೇಮಾವತಿ ನೀರು ಹರಿಸುತ್ತೇವೆ. ಪಾದಯಾತ್ರೆ, ಧರಣಿ ಇವೆಲ್ಲ ರಾಜಕೀಯಕ್ಕಾಗಿ. ನಮ್ಮ ಉದ್ದೇಶ ಮದಲೂರು ಕೆರೆಗೆ ನೀರು ಹರಿಸುವುದು. ನುಡಿದಂತೆ ನೀರು ಹರಿಸುತ್ತೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದೇವೆ. ನೀರು ಬಿಡುತ್ತೇವೆ.
-ಡಾ.ಸಿ.ಎಂ.ರಾಜೇಶ್‌ಗೌಡ, ಶಾಸಕ
ಮದಲೂರು ಕೆರೆಗೆ ಹೇಮಾವತಿ ನೀರು ಅಲೋಕೇಷನ್ ಆಗಿದೆ. ಯೋಜನೆ ತರಲು ಪ್ರಯತ್ನ ಪಟ್ಟವನು ನಾನು. ಕೋಟ್ಯಂತರ ರೂ.ಹಣ ತಂದವನು ನಾನೇ.ಅಂದು ಯಡಿಯೂರಪ್ಪ ಅವರ ಹತ್ತಿರ ಆದೇಶ ಮಾಡಿಸಿದ್ದೆ ದುರಾದೃಷ್ಟ ವಶಾತ್ ಉಪಚುನಾವಣೆ ಬಂತು ಏನೆಲ್ಲ ಆಯಿತು ಎನ್ನುವುದು ನಿಮಗೇ ಗೊತ್ತಿದೆ. ನನ್ನ ಒತ್ತಾಯ ಅಲೋಕೇಷನ್ ಆಗಿರುವ ನೀರನ್ನು ಹರಿಸಿರಿ. ಶಿರಾ ಉಪಚುನಾವಣೆಯಲ್ಲಿ ಜನರಿಗೆ ನೀಡಿದ್ದ ಭರವಸೆಯಂತೆ ನಡೆದುಕೊಳ್ಳಿರಿ.
– ಟಿ.ಬಿ.ಜಯಚಂದ್ರ, ಮಾಜಿ ಸಚಿವ
ಶಿರಾ ತಾಲೂಕಿನ ಮದಲೂರುಕೆರೆಗೆ ನೀರು ಹರಿಸುತ್ತೇವೆ.ಕುಡಿಯುವ ನೀರಿಗಾಗಿ ನೀರು ಹರಿಸಬೇಕು ಎಂದು ನಾವು ಮುಖ್ಯಮಂತ್ರಿಗಳಲ್ಲಿ
ಮನವಿ ಮಾಡಿದ್ದೇವೆ. ಜೆಡಿಎಸ್,ಕಾಂಗ್ರೆಸ್ ಪಕ್ಷಗಳು ರಾಜಕೀಯ ಹೋರಾಟ ನಡೆಸುತ್ತಿವೆ.
-ಚಿದಾನಂದ ಎಂ.ಗೌಡ, ವಿಧಾನ ಪರಿಷತ್ ಸದಸ್ಯ
ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುತ್ತೇವೆ ಎಂದು ನೀಡಿದ್ದ ಭರವಸೆ
ಈಡೇರಿಸಬೇಕು. ಗೆದ್ದ ಮೇಲೆ ನೀರು ಬಿಡಲು ಕಾರಣ ಹೇಳುವುದು ತೆರವಲ್ಲ.ಜನರ ಮುಂದೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ಭರವಸೆಯಂತೆ ನೀರು ಹರಿಸಬೇಕು ಎನ್ನುವುದು ಜೆಡಿಎಸ್ ಒತ್ತಾಯವಾಗಿದೆ. ಅದಕ್ಕಾಗಿ ಮದಲೂರಿನಿಂದ ಶಿರಾವರೆಗೆ ಪಾದಯಾತ್ರೆ ಮಾಡಿ ನೀರು ಬಿಡಿ ಎಂದು ಒತ್ತಾಯ ಮಾಡಿದ್ದೇವೆ.
-ಮುದಿಮಡು ರಂಗಸ್ವಾಮಯ್ಯ,
ಜೆಡಿಎಸ್ ಮುಖಂಡ
-ಚಿ.ನಿ.ಪುರುಷೋತ್ತಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.