ಸ್ವಾವಲಂಬಿ, ಸಮೃದ್ಧ ಕೃಷಿ ನಮ್ಮದಾಗಲಿ
Team Udayavani, Aug 22, 2021, 6:30 AM IST
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಕೃಷಿರಂಗದಲ್ಲಿ ಬಹಳಷ್ಟು ಸುಧಾರಣೆಗಳಾಗುತ್ತ ಬಂದಿವೆ. ಸಾಕಷ್ಟು ಸಂಶೋಧನೆಗಳಾಗಿವೆ. ಹಸುರು ಕ್ರಾಂತಿ ನಡೆದಿದೆ. ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿ ಗಳಾಗುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಆಹಾರ ಧಾನ್ಯ ಬೆಳೆಯುವುದನ್ನಷ್ಟೇ ನೆಚ್ಚಿ ಕೊಂಡ ರೈತರ ಜೇಬಿನಲ್ಲಿ ಕಾಸಿಲ್ಲ ಎಂಬಂತಾಗಿದೆ. ಆರ್ಥಿಕ ಬೆಳೆಗಳ ಹಿಂದೆ ಹೋದ ವರಷ್ಟೇ ಸಮಾಧಾ ನಕರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಸ್ವಾತಂತ್ರ್ಯೋತ್ತರದ ಅವಧಿಯಲ್ಲಿ ಕೃಷಿರಂಗದಲ್ಲಿ ಕಂಡ ಸೋಲು – ಗೆಲುವುಗಳನ್ನು ಅರ್ಥೈಸಿಕೊಂಡು ಮುಂದಿನ ಇಪ್ಪ ತ್ತೈದು ವರ್ಷಗಳಲ್ಲಿ ಸಮಗ್ರ ಕೃಷಿ ರಂಗ ಸ್ವಾವಲಂಬಿ, ಸಂತೃಪ್ತ ಹಾಗೂ ಸಮೃದ್ಧವಾಗಿ ಬೆಳೆದುನಿಲ್ಲುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.
ಕೊರೊನಾ ನಮ್ಮ ಯೋಚನೆ, ಜೀವನಶೈಲಿಯಲ್ಲಿ ಬದಲಾವಣೆ ತಂದಿರುವಂತೆಯೇ ಕೃಷಿ ರಂಗವನ್ನೂ ಬಹಳಷ್ಟು ಮಟ್ಟಿಗೆ ಪ್ರಭಾವಿಸಿದೆ. ಊರಲ್ಲಿ ಕೃಷಿಗೆ ಬದುಕಿಲ್ಲ; ತಮಗೂ ಬದುಕು ಕಟ್ಟಿಕೊಳಕ್ಷೆು ಕಷ್ಟಸಾಧ್ಯ ಎಂಬ ಭಾವನೆಯಿಂದ ಹೊರ ಹೊರಟವರ ಪ್ರಮಾಣ ಹೆಚ್ಚಾಗಿ ಊರಲ್ಲಿ ಇದ್ದ ಕೃಷಿ ಭೂಮಿಯನ್ನು ಜೀವಂತವಾಗಿರಿಸಿಕೊಳ್ಳಲು ಕಷ್ಟ ಪಡುತ್ತಿರುವವರು ತಮ್ಮ ಫಲವತ್ತಾದ ಜಮೀನನ್ನು ಪಾಳು ಬಿಡದೆ ವಿಧಿ ಇಲ್ಲ ಎಂಬ ಭಾವನೆಯನ್ನು ಹೊಂದುವಂತಾಗಿದ್ದು ಕಳೆದೆರಡು ಮೂರು ದಶಕಗಳ ನೋಟ. ಈಗ, ಹೊರ ಹೋದವರು ಮರಳಿ ಮಣ್ಣಿಗೆ ಬರುವ ಮನಸ್ಸು ಮಾಡಿದ್ದಾರೆ. ಹಡಿಲು ಬಿದ್ದ ಭೂಮಿ ಮತ್ತೆ ಹಸನಾಗಿ ಆರಳಲು ಪ್ರಾರಂಭವಾಗಿದೆ. ಒಟ್ಟಾರೆ ಕೃಷಿರಂಗ ಪುನಶ್ಚೇತನಗೊಳಕ್ಷೆು ಇರುವ ಸಾಧ್ಯತೆಗಳನ್ನು ಈಗಿನ ಹೊಸ ಬೆಳವಣಿಗೆ ತೆರೆದಿಟ್ಟಿದೆ.
ತಾಂತ್ರಿಕತೆಯ ಅರಿವು, ಬಳಕೆ: ರೈತರಲ್ಲಿ ಅದರಲ್ಲೂ ಯುವಜನರಲ್ಲಿ ಕೃಷಿ ರಂಗದಲ್ಲಿ ಪರಿಚಯವಾಗುತ್ತಿರುವ ಹೊಸ ತಾಂತ್ರಿಕತೆ, ಉಪಕರಣಗಳ ಬಗ್ಗೆ ಆಸಕ್ತಿ, ಅರಿವು ಮತ್ತು ಬಳಕೆಯ ಬಗ್ಗೆ ಒಲವು ಮೂಡುತ್ತಿದೆ. ಹಳೆಯ ಕೃಷಿ ಪದ್ಧತಿಯಿಂದ ಹೊಸ ಹೊಸ ಮಾದರಿಯ ಕೃಷಿ ಚಟುವಟಿಕೆಗಳ ಬಗ್ಗೆ ಚಿಂತನೆ ನಡೆಯುತ್ತಿರುವುದು ಭಾರತದ ಭವಿಷ್ಯಕ್ಕೆ ಚೇತೋಹಾರಿಯಾಗಲಿದೆ. ಈಗಂತೂ ತೀರಾ ಸಣ್ಣ ರೈತರಿಗೆ ಸೂಕ್ತವಾದ ಯಂತ್ರೋಪ ಕರಣಗಳು ತಯಾರಾಗುತ್ತಿದ್ದು ಮುಂದಿನ ದಿನಗಳಲ್ಲಿ ಭಾರತದ ಕೃಷಿರಂಗ ಅಭಿವೃದ್ಧಿ ಹೊಂದಲು ಸಹಾಯಕವಾಗಲಿದೆ.
ಕೃಷಿ ಆಧಾರಿತ ಕೈಗಾರಿಕೆಗಳಿಗೆ ಒತ್ತು: ಕೃಷಿ ಆಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಸ್ವಯಂ ಕೃಷಿಕರೇ ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅವರಿಗೆ ಎಲ್ಲ ಮಾರ್ಗದರ್ಶನ, ಸಹಕಾರ ನೀಡಬೇಕಾಗಿದೆ. ಒಂದು ಪ್ರದೇಶದ ಸಣ್ಣ ಮಟ್ಟದ ಕೃಷಿಕರು ಸಂಘಟಿತರಾಗಿ ಈ ದಿಸೆಯಲ್ಲಿ ಪ್ರಯತ್ನ ಮಾಡುವುದು ಉತ್ತಮ.
ಔಷಧೀಯ ಸಸ್ಯಗಳು: ಜನರು ಆಯುರ್ವೇದದತ್ತ ಮತ್ತೆ ತಮ್ಮ ಒಲವು ತೋರುತ್ತಿರುವುದನ್ನು ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಲು ರೈತರು ಮುಂದಾಗಬೇಕು. ಸರಕಾರ ಅದಕ್ಕೆ ಬೇಕಾದ ಮಾರ್ಗದರ್ಶನ, ತಾಂತ್ರಿಕ ಮಾಹಿತಿ ನೀಡಿ, ಪ್ರಾಥಮಿಕ ಸಂಸ್ಕರಣೆ, ಸಂಗ್ರಹ, ಮಾರುಕಟ್ಟೆ ಮೊದಲಾದ ವಿಷಯಗಳಲ್ಲಿ ರೈತರನ್ನು ಈ ರಂಗದಲ್ಲಿ ಮುನ್ನಡೆ ಸಾಧಿಸಲು ಅವಕಾಶ ಕಲ್ಪಿಸಬೇಕು.
ಮಾರುಕಟ್ಟೆ: ಭಾರತದಲ್ಲಿ ಇತರೆಲ್ಲ ಉತ್ಪನ್ನಗಳಿಗೆ ಧಾರಣೆ ನಿರ್ಧರಿಸುವ ವ್ಯವಸ್ಥೆ ಇದ್ದರೆ ಕೃಷಿಕರು ತಮ್ಮ ಉತ್ಪನ್ನಗಳಿಗೆ ತಾವೇ ಧಾರಣೆ ನಿರ್ಧರಿಸುವ ಸ್ಥಿತಿಯಲ್ಲಿಲ್ಲ. ಈ ಚಿತ್ರಣ ಬದಲಾಗಬೇಕಿದೆ. ಕೃಷಿಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಮಧ್ಯವರ್ತಿಗಳನ್ನು ಹೆಚ್ಚು ಅವಲಂಬಿಸದೆ ಆದಷ್ಟು ಮಟ್ಟಿಗೆ ತಾವೇ ನೇರ ಮಾರಾಟ ಮಾಡುವ ಇಲ್ಲವೇ ಮಾರಾಟ ಜಾಲವನ್ನು ರೂಪಿಸಿಕೊಳ್ಳಬೇಕಾಗಿದೆ. ಇದರಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರವೂ ಹಿರಿದಾಗಿದೆ.
ಒಂದು ಉತ್ಪನ್ನಕ್ಕೆ ಒಮ್ಮೆ ಉತ್ತಮ ಬೆಲೆ ಲಭಿಸಿತೆಂದರೆ ಸಾಕು, ಎಲ್ಲರೂ ಅದನ್ನೇ ಬೆಳೆದು ಸಮಾಧಾನಕರ ಬೆಲೆ ಸಿಗದೆ ಸೋಲುವ ಕೃಷಿಕರು ನಮ್ಮ ನಡುವೆಯೇ ಇದ್ದಾರೆ. ಇದನ್ನು ಹೋಗಲಾಡಿಸಬೇಕಾಗಿದೆ. ಕೃಷಿ ಉತ್ಪನ್ನಗಳ ಮಹಾಸಮೃದ್ಧಿ ಕಂಡು ಬಂದ ಕಾಲದಲ್ಲಿ ಅದನ್ನು ಯೋಗ್ಯವಾಗಿ ಕಾಪಿಡುವ ವ್ಯವಸ್ಥೆಯನ್ನು ಸರಕಾರ ಕಲ್ಪಿಸಿಕೊಡುವುದು ಅವಶ್ಯ. ಹಾಗಾದಾಗ ಮಾತ್ರ ಬೆಳೆಗಳ ಬೆಲೆ ಪ್ರಪಾತಕ್ಕೆ ಕುಸಿದುಬೀಳುವುದನ್ನು ತಪ್ಪಿಸಬಹುದು.
ಇನ್ನೊಂದೆಡೆ ಬೆಳೆಗಳನ್ನು ಆಗಾಗ ಬದಲಾಯಿಸುವ ಮೂಲಕ, ಏಕಕಾಲದಲ್ಲಿ ಬಹುವಿಧ ಬೆಳೆಗಳನ್ನು ಬೆಳೆಸುವ ಮೂಲಕ ಮಣ್ಣಿನ ಸಾರ ಕಳೆದು ಕೊಳ್ಳದಂತೆ ನೋಡಿಕೊಳ್ಳಬಹುದಾಗಿದೆ. ಒಂದು ಬೆಳೆಯಲ್ಲಾದ ನಷ್ಟವನ್ನು ಮತ್ತೂಂದರ ಮೂಲಕ ಸರಿದೂಗಿಸಲೂ ಸಾಧ್ಯವಿದೆ. ಈ ಜಾಣನಡೆ ಯಿಂದಲೂ ಮುಂದಿನ ವರ್ಷಗಳಲ್ಲಿ ಕೃಷಿರಂಗದಲ್ಲಿ ಬದಲಾವಣೆ ಕಾಣಬಹುದು.
ರಫ್ತು ಸಾಧ್ಯತೆ: ನಮ್ಮಲ್ಲಿ ಉತ್ಪಾದನೆಯಾಗುವ ಆಹಾರ ಪದಾರ್ಥಗಳನ್ನು ಯೋಗ್ಯ ಬೆಲೆಗೆ ರಫ್ತು ಮಾಡುವ ಅವಕಾಶಗಳನ್ನು ಸರಕಾರ ಸುವ್ಯವಸ್ಥಿತವಾಗಿ ರೈತರಿಗೆ ಒದಗಿಸಿಕೊಡಬೇಕಿದೆ. ವಿಶೇಷವಾಗಿ ಹಣ್ಣು ಹಂಪಲು, ಔಷಧೀಯ ಸಸ್ಯಗಳು/ಉತ್ಪನ್ನಗಳು ರಫ್ತಾಗುವ ಮೂಲಕ ನಮ್ಮ ಕೃಷಿಕರ ಆರ್ಥಿಕ ಸುಧಾರಣೆ ಆಗುವುದು ಖಂಡಿತ.
ಕೃಷಿಗೆ ವಿಮೆ: ಭಾರತದಲ್ಲಿ ಕೃಷಿಗೆ ಈಗ ಇರುವ ವಿಮಾ ಸೌಕರ್ಯ ತೀರಾ ಅಸಮರ್ಪಕವಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ಕಾಡುಪ್ರಾಣಿ, ಪಕ್ಷಿಗಳ ಹಾವಳಿ, ಕೀಟ ಬಾಧೆ ಹೀಗೆ ಹತ್ತಾರು ಕಾರಣಗಳಿಂದ ಕೃಷಿ ಉತ್ಪನ್ನ ಕೈಗೆ ಸಿಗದೆ, ಸಿಕ್ಕಿದರೂ ಲಾಭಕರವಾಗದೆ ಕೃಷಿಕ ಸೋಲುವ ಸ್ಥಿತಿ ಭಾರತದಲ್ಲಿದೆ. ಈಗ ಕೃಷಿರಂಗದಲ್ಲಿರುವ ವಿಮಾ ಪದ್ಧತಿ ಪೂರ್ಣ ಬದಲಾಗಿ, ಸರಳವಾಗಿ ರೂಪುಗೊಂಡು ಎಲ್ಲೂ ಕೃಷಿಕ ಸೋಲದಂತೆ ನೋಡಿಕೊಳ್ಳಬೇಕಾಗಿದೆ.
ಎಚ್ಚರ: ಬಹುವಿಧ ಕೃಷಿ ನಡೆಯುವ ಭೂಮಿಯನ್ನು ನಾಶ ಮಾಡಿ ಏಕ ಸಸ್ಯ ಕೃಷಿ ಸಂಸ್ಕೃತಿ ಬೆಳೆಸುವುದು ಸಲ್ಲದು. ಕೃಷಿ ಭೂಮಿಯನ್ನು ಯಾವುದೋ ಕಂಪೆನಿಗೆ ನೀಡಿ, ಅವರು ಬಹಳ ದೊಡ್ಡ ಮಟ್ಟದಲ್ಲಿ ಕೃಷಿ ಮಾಡಲು ಅವಕಾಶ ಕಲ್ಪಿಸಿದರೆ ಸ್ಥಾನೀಯ ಸಣ್ಣ ರೈತರ ಬದುಕು ಹೈರಾಣಾಗಿ ಹೋಗುವುದು ಖಂಡಿತ. ಅದರ ಬದಲು, ಬರಡು ಭೂಮಿಯನ್ನು ಕಂಪೆನಿಗಳಿಗೆ ನೀಡಿ ಅಲ್ಲಿ ಕೃಷಿಯಲ್ಲಿ ಕ್ರಾಂತಿ ನಡೆಸಲು ಅವಕಾಶ ಕಲ್ಪಿಸುವುದು ಸೂಕ್ತ.
ಫಾರ್ಮ್ ಟೂರಿಸಂ: ಕೃಷಿರಂಗದ ಬಗ್ಗೆ ಅರಿವು, ಅಭಿಮಾನ, ಗೌರವ ಮೂಡಿಸಲು, ಈ ರಂಗಕ್ಕೆ ಮತ್ತಷ್ಟು ಮಂದಿಯನ್ನು ಸೆಳೆಯಲು ಫಾರ್ಮ್ ಟೂರಿಸಂ ಬಹಳ ಸಹಕಾರಿಯಾಗಿದೆ. ಒಂದು ಜಿಲ್ಲೆಯ ವಿವಿಧ ಕೃಷಿ, ತೋಟ ತಾಣಗಳಿಗೆ ಭೇಟಿ ನೀಡುವ ಜತೆಗೆ ಆಯಾಯ ಸ್ಥಾನೀಯ ಚಾರಿತ್ರಿಕ, ಅಧುನಿಕ ವಿಶೇಷತೆಗಳನ್ನು ಪರಿಚಯಿಸುವಂಥ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ.
ಡಾ| ಎಲ್.ಸಿ. ಸೋನ್ಸ್
ಸೋನ್ಸ್ ಫಾರ್ಮ್, ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.