3ನೇ ಅಲೆಗೆ ಸಾಲದು ಸಿದ್ಧತೆ
Team Udayavani, Aug 24, 2021, 6:30 AM IST
ಹೊಸದಿಲ್ಲಿ: ಕೊರೊನಾ ತೃತೀಯ ಅಲೆ, ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂಬ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮುನ್ನೆಚ್ಚರಿಕೆ ಕ್ರಮಗಳ ಕೈಗೊಳ್ಳುವಂತೆ ಕೇಂದ್ರ ಸರಕಾರ, ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ, ಎಲ್ಲ ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆಗಳನ್ನು ಅಧ್ಯಯನ ಮಾಡಿರುವ, ಕೇಂದ್ರ ಗೃಹ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುವ ರಾಷ್ಟ್ರೀಯ ವಿಕೋಪ ನಿರ್ವಹಣ ಸಂಸ್ಥೆ (ಎನ್‌ಐಡಿಎಂ), ಈವರೆಗೆ ಮಾಡಿಕೊಳ್ಳಲಾಗಿರುವ ಸಿದ್ಧತೆ ಸಮರ್ಪಕವಾಗಿಲ್ಲ. ಹಾಗಾಗಿ ಹೆಚ್ಚಿನ ಮಟ್ಟದಲ್ಲಿ ಸಿದ್ಧತೆ ಅಗತ್ಯ ಎಂದು ವರದಿ ನೀಡಿದೆ. ಅಕ್ಟೋಬರ್ ವೇಳೆಗೆ 3ನೇ ಅಲೆ ಉತ್ತುಂಗಕ್ಕೇರಬಹುದು ಎಂದೂ ಎನ್‌ಐಡಿಎಂ ಅಂದಾಜಿಸಿದೆ.
ಅಗತ್ಯ ಪ್ರಮಾಣದಲ್ಲಿಲ್ಲ!: ಮಕ್ಕಳಿಗೆ ವಿಶೇಷ ಚಿಕಿತ್ಸಾ ಘಟಕಗಳು ಎಲ್ಲ ಆಸ್ಪತ್ರೆಗಳಲ್ಲಿರಬೇಕು. ಅಂಥ ವ್ಯವಸ್ಥೆಯಲ್ಲಿ, ಮಕ್ಕಳ ತಜ್ಞರು, ಅಗತ್ಯ ವೈದ್ಯಕೀಯ ಉಪಕರಣಗಳು, ವೆಂಟಿಲೇಟರ್‌ಗಳು, ಆ್ಯಂಬುಲೆನ್ಸ್ ಸೇವೆಗಳು – ಇವುಗಳಲ್ಲಿ ಯಾವುದೇ ಕೊರತೆ ಇರ ಬಾರದು ಎಂಬುದು ಸರಕಾರದ ನಿರೀಕ್ಷೆ. ಆದರೆ, ಈ ವ್ಯವಸ್ಥೆ ಅಗತ್ಯ ಪ್ರಮಾಣದಲ್ಲಿ ಇಲ್ಲ ಎಂದು ವರದಿ ಹೇಳಿದೆ. ಇದೇ ವೇಳೆ, ಮೂರನೇ ಅಲೆಯ ಕೊರೊನಾಕ್ಕೆ ತುತ್ತಾಗಲಿರುವ ಮಕ್ಕಳ ಪೈಕಿ ಶೇ.60ರಿಂದ 70ರಷ್ಟು ಮಂದಿಯಲ್ಲಿ ಇತರೆ ಕಾಯಿಲೆಗಳು ಇರುವ ಸಾಧ್ಯತೆಯಿದ್ದು, ಮಕ್ಕಳಿಗೆ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ನೀಡಬೇಕೆಂದು ವರದಿ ತಿಳಿಸಿದೆ.
ಲಸಿಕೆ ಸ್ವಯಂಸೇವಕರಿಗೂ ಪ್ರಮಾಣಪತ್ರ :
ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳ ಪ್ರಯೋಗಗಳಿಗೆ ಒಳಗಾಗಿದ್ದ ದೇಶದ 11,300 ಸ್ವಯಂಸೇವಕರಿಗೆ ಲಸಿಕೆ ಪಡೆದ ಖಾತ್ರಿಗಾಗಿ ನೀಡಲಾಗುವ ಡಿಜಿ ಟಲ್ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಪ್ರಯೋಗಗಳಲ್ಲಿ ಭಾಗವಹಿಸಿದ್ದ ಯುವ ಸ್ವಯಂಸೇವಕರು, ಆರೋಗ್ಯ ಸೇತು, ಡಿಜಿಲಾಕರ್, ಉಮಂಗ್ ಆ್ಯಪ್‌ಗ್ಳ ಹೊರತಾಗಿಯೂ ಕೋ-ವಿನ್ ವೆಬ್‌ಸೈಟ್‌ನಿಂದಲೂ ತಮ್ಮ ಪ್ರಮಾಣಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದಿದೆ.
ಫೈಜರ್‌ಗೆ ಅಮೆರಿಕ ಗ್ರೀನ್‌ಸಿಗ್ನಲ್ :
ಫೈಜರ್-ಬಯೋಟೆಕ್ ಜಂಟಿ ತಯಾರಿಕೆಯ ಕೊರೊನಾ ಲಸಿಕೆಯನ್ನು ಪೂರ್ಣಪ್ರಮಾಣದಲ್ಲಿ ಬಳಸುವಂತೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿ (ಎಫ್ಡಿಎ) ಒಪ್ಪಿಗೆ ನೀಡಿದೆ. “ಕೊವಿರ್ನಟಿ’ ಎಂಬ ಹೆಸರಿನಡಿ ಇದನ್ನು ಅಮೆರಿಕದ 16 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ನೀಡಲು ಸಮ್ಮತಿ ನೀಡಲಾಗಿದೆ. ಅಲ್ಲದೆ, ತುರ್ತು ಸಂದರ್ಭ ಗಳಲ್ಲಿ 12ರಿಂದ 15 ವರ್ಷದೊಳಗಿನ ವರಿಗೂ ನೀಡಲು ಒಪ್ಪಿಗೆ ದೊರಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.