ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಬಹುತೇಕ ಹುದ್ದೆ ಖಾಲಿ
Team Udayavani, Aug 25, 2021, 3:10 AM IST
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಪಶು ವೈದ್ಯರು ಹಾಗೂ ಸಿಬಂದಿ ಕೊರತೆ ಕಾಡುತ್ತಿದೆ.
ಕೊರೊನಾ ಸಂದರ್ಭ ಮನುಷ್ಯರಿಗಷ್ಟೇ ಆಘಾತ ಆಗಿದ್ದು ಅಲ್ಲ; ಆಗ ಪಶುಗಳಿಗೆ ಲಂಪಿಸ್ಕಿನ್ ಎಂಬ ಹರಡುವ ಕಾಯಿಲೆ ಕಾಣಿಸಿಕೊಂಡಿತ್ತು. ರೋಗಪೀಡಿತ ಪಶುಗಳನ್ನು ಕ್ವಾರಂಟೈನ್ ಆಗಿ ಪ್ರತ್ಯೇಕ ಇಡದ ಹೊರತು ಇತರ ಪಶುಗಳಿಗೂ ಇದು ಹರಡುತ್ತಿತ್ತು. ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಕೂಡ ಪ್ರಕರಣಗಳು ವರದಿಯಾಗಿದ್ದವು. ಇವೆಲ್ಲಕ್ಕೂ ಔಷಧ ನೀಡಿದ್ದು ಅತಿ ಕಡಿಮೆ ಸಂಖ್ಯೆಯಲ್ಲಿ ಇರುವ ಪಶುವೈದ್ಯರು. ಕೊರೊನಾ ಲಾಕ್‌ಡೌನ್ ಅನಂತರ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಹಾಗೂ ಕೃಷಿ ಕಡೆಗೆ ಯುವಜನತೆ ಹೆಚ್ಚಿನ ಒಲವು ಹರಿಸಿದ್ದಾರೆ. ಸಕಾಲದಲ್ಲಿ ಸರಕಾರ ಇವುಗಳಿಗೆ ಪ್ರೋತ್ಸಾಹ ನೀಡುವ ಬದಲು ನಿರುತ್ಸಾಹ ಮೂಡುವಂತೆ ಸಂದರ್ಭ ಸೃಷ್ಟಿಸಿದೆ.
ಪಶು ಆಸ್ಪತ್ರೆಗಳು :
ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ 27 ಪಶು ವೈದ್ಯಕೀಯ ಸಂಸ್ಥೆಗಳಿದ್ದು, ಇದರಲ್ಲಿ ವೈದ್ಯರು, ಡಿ ಗ್ರೂಪ್, ಫಾರ್ಮಾಸಿಸ್ಟ್, ತಾಂತ್ರಿಕ ಸಹಾಯಕ ಮೊದಲಾದ ಒಟ್ಟು 106 ಹುದ್ದೆಗಳನ್ನು ಸೃಜಿಸಲಾಗಿದೆ. ಹೀಗೆ ಮಂಜೂರಾದ 106 ಹುದ್ದೆಗಳ ಪೈಕಿ ಸರಕಾರಿ ನೇಮಕದಲ್ಲಿ ರುವುದು 33 ಮಾತ್ರ. 63 ಹುದ್ದೆಗಳಲ್ಲಿ 21 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು 43 ಡಿ ದರ್ಜೆ ಹುದ್ದೆಗಳ ಪಾಲಿನಲ್ಲಿ 11 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಉಳಿದ ಹುದ್ದೆಗಳು ಖಾಲಿಯೇ ಇವೆ. ಹೀಗೆ ಒಟ್ಟು 73 ಹುದ್ದೆಗಳು ವರ್ಷಗಳಿಂದ ಖಾಲಿ ಬಿದ್ದಿವೆ.
ಖಾಲಿ:
ಅವಿಭಜಿತ ತಾಲೂಕಿನ ಪಶು ಚಿಕಿತ್ಸಾಲಯ, ಪಶು ಆಸ್ಪತ್ರೆ ಹಾಗೂ ಪ್ರಾಥಮಿಕ ಪಶು ಚಿಕಿತ್ಸೆ ಕೇಂದ್ರಗಳೆಲ್ಲ ಸೇರಿ ಒಟ್ಟು 27 ಪಶು ಪಾಲನ ಕೇಂದ್ರಗಳಲ್ಲಿ 4 ಪಶು ವೈದ್ಯಾಧಿಕಾರಿ, 7 ಹಿರಿಯ ಪಶು ಪಾಲನ ಪರಿವೀಕ್ಷಕರ ಹುದ್ದೆಗಳು ಕೂಡ ಖಾಲಿ ಇವೆ. ಈಚೆಗೆ ಕೊಲ್ಲೂರು ಪಶುವೈದ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಖಾಲಿ ಹುದ್ದೆಗೆ ಇನ್ನೊಂದು ಸೇರ್ಪಡೆಯಾಗಿದೆ.
ಹಳ್ಳಿಹೊಳೆ, ಆಜ್ರಿ, ಸಿದ್ದಾಪುರ, ಅಂಪಾರು, ಶಂಕರನಾರಾಯಣ, ಜಡ್ಕಲ್, ನಾಡ ಹೀಗೆ ಸಾಲು ಸಾಲು ಆಸ್ಪತ್ರೆಗಳಲ್ಲಿ ಪಶುವೈದ್ಯರೇ ಇಲ್ಲ. ಶಂಕರನಾರಾಯಣ ಪಶು ಅಸ್ಪತ್ರೆಯು ಇತ್ತೀಚೆಗೆ ಸಹಾಯಕ (ಪಶು ವೈದ್ಯಾಧಿಕಾರಿ) ನಿರ್ದೇಶಕರು ಹುದ್ದೆಗೆ ಮೇಲ್ದರ್ಜೆಗೇರಿದೆ.
ಆಗಸ್ಟ್ ಒಂದೇ ತಿಂಗಳಲ್ಲಿ ನಾಲ್ವರು ವೈದ್ಯರು ನಿವೃತ್ತರಾಗುತ್ತಿದ್ದಾರೆ. ಆಗ ಖಾಲಿ ಹುದ್ದೆಗಳ ಸಾಲಿಗೆ ಇನ್ನಷ್ಟು ಸೇರ್ಪಡೆಯಾಗಲಿವೆ. ಕುಂದಾ ಪುರ, ಬೈಂದೂರು ಎರಡು ತಾಲೂಕುಗಳ ಪೈಕಿ ಬೈಂದೂರಿನಲ್ಲಿ ಅತೀ ಹೆಚ್ಚು ವೈದ್ಯ ಸಿಬಂದಿಯ ಕೊರತೆ ಇದೆ. ಇವೆರಡು ತಾಲೂಕಿಗೆ ಹೋಲಿಸಿದರೆ ಕುಂದಾಪುರದಲ್ಲಿ ಕಡಿಮೆ ಕೊರತೆ ಇದೆ.
ಅಗತ್ಯ:
ಗ್ರಾಮೀಣ ಪ್ರದೇಶದ ರೈತರು ಹೈನೋದ್ಯಮದಲ್ಲಿ ಗಣನೀಯ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪಶುಗಳ ಚಿಕಿತ್ಸೆ, ಕೃತಕ ಗರ್ಭಧಾರಣೆ, ಜಾನುವಾರುಗಳ ಬ್ಯಾಂಕ್ ಲೋನ್, ಕಾಡು ಪ್ರಾಣಿಗಳಿಂದ ಜಾನುವಾರುಗಳು ಮರಣ ಹೊಂದಿದರೆ ಮರಣ ದಾಖಲಾತಿ ಪ್ರಮಾಣಪತ್ರವೆಲ್ಲದಕ್ಕೂ ಪಶು ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ವೈದ್ಯಾಧಿಕಾರಿಗಳ ಹುದ್ದೆ ವರ್ಷಗಟ್ಟಲೆ ಖಾಲಿ ಇರುವ ಕಾರಣ, ಬೇರೆ ಕಡೆಯ ವೈದ್ಯರು ವಾರಕ್ಕೊಮ್ಮೆಯೋ ಎರಡಾವರ್ತಿಯೋ ಬರುವ ಕಾರಣ ರೈತರಿಗೆ ಸಮಸ್ಯೆಯಾಗಿದೆ.
ಶಂಕರನಾರಾಯಣ ಪಶು ಆಸ್ಪತ್ರೆ ವ್ಯಾಪ್ತಿಯ ಎಲ್ಲ ಗ್ರಾ.ಪ.ಗಳ ಗ್ರಾಮಸಭೆಯಲ್ಲಿ ಈ ಕುರಿತು ರೈತರಿಂದ ಚರ್ಚೆ ಆಗಿದೆ. ಖಾಲಿ ಇರುವ ಪಶು (ಸಹಾಯಕ ನಿರ್ದೇಶಕರು) ವೈದ್ಯಾಧಿಕಾರಿ ಹುದ್ದೆಯನ್ನು ನೇಮಿಸಬೇಕೆಂದು ಹೈನೋದ್ಯಮಿಗಳ ಪರವಾಗಿ ಚಿಟ್ಟೆ ರಾಜಗೋಪಾಲ ಹೆಗ್ಡೆ ಆಗ್ರಹಿಸಿದ್ದಾರೆ.
ಸಾಕುಪ್ರಾಣಿಗಳಿಗೆ ಲಸಿಕೆ ಹಾಕಲು ಖಾಸಗಿ ವೈದ್ಯರನ್ನು ಸಂಪರ್ಕಿಸುವಂತೆ ಆಗಿದೆ. ಕಾಡು ಪ್ರಾಣಿಗಳ ಹತ್ಯೆ, ಅಸಹಜ ಸಾವು ಸಂಭವಿಸಿದಾಗಲೂ ಸರಕಾರಿ ಪಶುವೈದ್ಯರ ಅಗತ್ಯ ಇರುತ್ತದೆ.
1.30 ಲಕ್ಷ ಜಾನುವಾರು :
ಇಲಾಖಾ ಮಾಹಿತಿ ಪ್ರಕಾರ ಅವಿಭಜಿತ ಕುಂದಾಪುರ ತಾ|ನಲ್ಲಿ ಒಟ್ಟು 1.30 ಲಕ್ಷ ಜಾನುವಾರು ಗಳಿವೆ. ಇವುಗಳಲ್ಲಿ ಹಸು, ಎಮ್ಮೆ, ಹಂದಿಗಳು ಸೇರಿವೆ. ದಿನಕ್ಕೆ 85ರಿಂದ 90 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತದೆ. ವಾರ್ಷಿಕ 3 ಕೋಟಿ ಲೀ.ಗೂ ಅಧಿಕ ಪ್ರಮಾಣದ ಹಾಲು ಉತ್ಪಾದನೆಯಾಗುತ್ತದೆ. ನಿಯಮ ದಂತೆ 5 ಸಾವಿರ ಜಾನುವಾರುಗಳಿಗೆ 1 ಪಶು ಪಾಲನ ಸಂಸ್ಥೆ ಇರಬೇಕು. ಸಂಸ್ಥೆಯೇನೋ ಆಜುಬಾಜು ಸಂಖ್ಯೆಯಲ್ಲಿ ಇದೆ. ಪ್ರಮುಖವಾಗಿ ಅದರಲ್ಲಿ ಬೇಕಾದ ವೈದ್ಯರು, ಸಿಬಂದಿಯೇ ಇಲ್ಲ. ವರ್ಷಾನು ಗಟ್ಟಲೆಯಿಂದ ಭರ್ತಿಯಾಗದೆ ಬಾಕಿಯಿದೆ.
27 : ಕುಂದಾಪುರ, ಬೈಂದೂರು ತಾ|ನಲ್ಲಿರುವ ಪಶು ಆಸ್ಪತ್ರೆ
106 : ಮಂಜೂರಾದ
ಹುದ್ದೆಗಳು
32 : ಪ್ರಸ್ತುತ ಸೇವೆಯಲ್ಲಿ ಇರುವವರು
04: ಆಗಸ್ಟ್‌ನಲ್ಲಿ ನಿವೃತ್ತಿ
1.30 ಲಕ್ಷ : ಕುಂದಾಪುರ, ಬೈಂದೂರು ತಾ|ನಲ್ಲಿರುವ ರಾಸುಗಳು
ಕೊಲ್ಲೂರು, ಜಡ್ಕಲ್, ನಾಡ, ಶಂಕರನಾರಾಯಣ, ಹಳ್ಳಿಹೊಳೆ ಸೇರಿದಂತೆ 7 ಆಸ್ಪತ್ರೆಗಳಲ್ಲಿ ಪಶುವೈದ್ಯರ ನೇಮಕಕ್ಕಾಗಿ ಪಶು ಸಂಗೋಪನ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗಿದೆ. ಗ್ರಾಮಾಂತರದಲ್ಲಿ ರೈತರಿಗೆ, ಹೈನುಗಾರರಿಗೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. –ಬಿ.ಎಂ. ಸುಕುಮಾರ್ ಶೆಟ್ಟಿ,ಶಾಸಕರು, ಬೈಂದೂರು
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.