ಭಾರತ 78; ಆಪತ್ತು ಎದುರಿಗುಂಟು
Team Udayavani, Aug 26, 2021, 6:15 AM IST
ಲೀಡ್ಸ್: ಲಾರ್ಡ್ಸ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಟೀಮ್ ಇಂಡಿಯಾದ ಸಂಭ್ರಮವೆಲ್ಲ ಲೀಡ್ಸ್ ನಲ್ಲಿ ಒಂದೊಪ್ಪತ್ತಿನೊಳಗೆ ಜರ್ರನೆ ಇಳಿದು ಹೋಗಿದೆ. ಇಂಗ್ಲೆಂಡ್ ವೇಗಿಗಳ ಘಾತಕ ಬೌಲಿಂಗ್ ಆಕ್ರಮಣಕ್ಕೆ ತಮ್ಮಲ್ಲಿ ಉತ್ತರವಿಲ್ಲ ಎಂಬ ರೀತಿಯಲ್ಲಿ ಬ್ಯಾಟಿಂಗ್ ನಡೆಸಿದ ಕೊಹ್ಲಿ ಪಡೆ ಕೇವಲ 40.4 ಓವರ್‌ಗಳಲ್ಲಿ 78 ರನ್ನುಗಳ ಅಲ್ಪ ಮೊತ್ತಕ್ಕೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 86 ರನ್ ಗಳಿಸಿ ಆಟವಾಡುತ್ತಿದೆ.
ಇಂಗ್ಲೆಂಡ್‌ನಲ್ಲಿ ಮೊದಲ ಸಲ ಟಾಸ್ ಗೆದ್ದ ಖುಷಿಯಲ್ಲಿದ್ದ ವಿರಾಟ್ ಕೊಹ್ಲಿ, ಸ್ವಲ್ಪವೇ ಹೊತ್ತಿನಲ್ಲಿ ತಾನೇಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡೆ ಎಂದು ಪಶ್ಚಾತ್ತಾಪ ಪಡುವಂತಾಯಿತು. ಅಷ್ಟೊಂದು ಕ್ಷಿಪ್ರಗತಿಯಲ್ಲಿ ಭಾರತದ ವಿಕೆಟ್‌ಗಳು ಉರುಳುತ್ತ ಹೋದವು. ಆರಂಭದಲ್ಲಿ ಆ್ಯಂಡರ್ಸನ್, ನಡುವಲ್ಲಿ ರಾಬಿನ್ಸನ್, ಕೊನೆಯಲ್ಲಿ ಸ್ಯಾಮ್ ಕರನ್ ಮತ್ತು ಓವರ್ಟನ್ ಸೇರಿಕೊಂಡು ಪ್ರವಾಸಿಗರಿಗೆ ಮುಖ ಎತ್ತದಂತೆ ಮಾಡಿಬಿಟ್ಟರು.
ಮೊದಲ ಅವಧಿಯಲ್ಲೇ 56 ರನ್ನಿಗೆ 4 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದ ಭಾರತದ ಸ್ಥಿತಿ ದ್ವಿತೀಯ ಅವಧಿಯಲ್ಲಿ ಇನ್ನಷ್ಟು ಬಿಗಡಾಯಿಸಿತು. 22 ರನ್ ಒಟ್ಟುಗೂಡುವಷ್ಟರಲ್ಲಿ ಉಳಿದ 6 ವಿಕೆಟ್ ಕಣ್ಣಿಗೆ ಕಾಣದ ರೀತಿಯಲ್ಲಿ ಮಾಯವಾಗಿತ್ತು!
ಆ್ಯಂಡರ್ಸನ್ ಘಾತಕ ದಾಳಿ:
ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಮೊದಲ ಓವರ್‌ನಿಂದಲೇ ಭಾರತಕ್ಕೆ ಬಿಸಿ ಮುಟ್ಟಿಸತೊಡಗಿದರು. 5ನೇ ಎಸೆತದಲ್ಲಿ ಕೆ.ಎಲ್. ರಾಹುಲ್ ಅವರನ್ನು ಪೆವಿಲಿಯನ್ನಿಗೆ ರವಾನಿಸಿ ಕುಸಿತಕ್ಕೆ ಚಾಲನೆ ನೀಡಿದರು. ಲಾರ್ಡ್ಸ್ ಸೆಂಚುರಿ ಹೀರೋ ರಾಹುಲ್ ಇಲ್ಲಿ ಖಾತೆಯನ್ನೇ ತೆರೆಯಲಿಲ್ಲ. ಬಳಿಕ ಚೇತೇಶ್ವರ್ ಪೂಜಾರ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ “ಆ್ಯಂಡಿ’ ಮೋಡಿಗೆ ಸಿಲುಕಿದರು. ವೈಸ್ ಕ್ಯಾಪ್ಟನ್ ಅಜಿಂಕ್ಯ ರಹಾನೆಗೆ ಓಲೀ ರಾಬಿನ್ಸನ್ ಪೆವಿಲಿಯನ್ ಹಾದಿ ತೋರಿಸಿದರು. ಈ ನಾಲ್ಕೂ ಕ್ಯಾಚ್‌ಗಳು ಕೀಪರ್ ಬಟ್ಲರ್ ಅವರ ಸುರಕ್ಷಿತ ಬೊಗಸೆಯನ್ನು ಸೇರಿದ್ದವು.
ಲಂಚ್ ವೇಳೆ ಭಾರತ 56ಕ್ಕೆ 4 ವಿಕೆಟ್ ಕಳೆದುಕೊಂಡು ಚಡಪಡಿಸುತ್ತಿತ್ತು. ಆಗ ಆ್ಯಂಡರ್ಸನ್ ಬೌಲಿಂಗ್ ಇಷ್ಟೊಂದು ಆಕರ್ಷಕವಾಗಿತ್ತು: 8-5-6-3. ಅವರ ನಿಖರ ಹಾಗೂ ಅಷ್ಟೇ ಅಪಾಯಕಾರಿ ಔಟ್‌ಸ್ವಿಂಗ್ ಎಸೆತಗಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಉತ್ತರವೇ ಇರಲಿಲ್ಲ.
ತನ್ನ ಟೆಸ್ಟ್ ಬಾಳ್ವೆಯಲ್ಲೇ ಅತ್ಯಂತ ಕಳಪೆ ಫಾರ್ಮ್ ನಲ್ಲಿರುವ ಪೂಜಾರ (1) ಎದುರಿಸಿದ್ದು ಕೇವಲ 9 ಎಸೆತ. ಅವರನ್ನೂ ಆ್ಯಂಡಿಯ ಔಟ್ ಸ್ವಿಂಗರ್ ವಂಚಿಸಿತು. ಕ್ಯಾಪ್ಟನ್ ಕೊಹ್ಲಿಯ ತಾಂತ್ರಿಕತೆ ಮತ್ತು ಮನಸ್ಥಿತಿ ಎರಡೂ ಪಕ್ವವಾಗಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಯಿತು. ಕೇವಲ 7 ರನ್ ಮಾಡಿದ ಅವರು ಮತ್ತೂಮ್ಮೆ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು.
ಒಂದೆಡೆ ರೋಹಿತ್ ಕ್ರೀಸ್‌ನಲ್ಲಿ ನಿಂತಿದ್ದರೂ ಪ್ರಯೋ ಜನವಾಗಲಿಲ್ಲ. 5 ವಿಕೆಟ್ ಕಣ್ಣಾರೆ ಉರುಳಿದ್ದನ್ನು ನೋಡಿದ ಬಳಿಕ ಅವರೂ ವಾಪಸಾದರು. 105 ಎಸೆತಗಳಲ್ಲಿ 19 ರನ್ ಮಾಡಿದ ರೋಹಿತ್ ಅವರೇ ಭಾರತದ ಟಾಪ್ ಸ್ಕೋರರ್.
ಬದಲಾಗದ ಭಾರತ ತಂಡ :
ನಿರೀಕ್ಷೆಯಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ಲಾರ್ಡ್ಸ್‌ನಲ್ಲಿ ಗೆದ್ದ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸಿತು. ಇದರೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 4ನೇ ಸಲ ಸತತ ಎರಡು ಟೆಸ್ಟ್‌ಗಳಲ್ಲಿ ಒಂದೇ ತಂಡವನ್ನು ಆಡಿಸಿದಂತಾಯಿತು.
ಇದಕ್ಕೂ ಮೊದಲು 2018ರ ಇಂಗ್ಲೆಂಡ್ ಪ್ರವಾಸದ ವೇಳೆ ಟ್ರೆಂಟ್‌ಬ್ರಿಜ್ ಮತ್ತು ಸೌತಾಂಪ್ಟನ್; 2019ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ನಾರ್ತ್‌ಸೌಂಡ್ ಮತ್ತು ಕಿಂಗ್‌ಸ್ಟನ್; 2019-20ರ ಬಾಂಗ್ಲಾದೇಶ ಸರಣಿಯ ವೇಳೆ ಇಂದೋರ್ ಮತ್ತು ಕೋಲ್ಕತಾದಲ್ಲಿ ಟೀಮ್ ಇಂಡಿಯಾದಲ್ಲಿ ಯಾವುದೇ ಪರಿವರ್ತನೆ ಆಗಿರಲಿಲ್ಲ. ಇಂಗ್ಲೆಂಡ್ ತಂಡದಲ್ಲಿ ಎರಡು ಬದಲಾವಣೆ ಸಂಭವಿಸಿತು.
ಫಸ್ಟ್ ಬ್ಯಾಟಿಂಗ್ ವೇಳೆ ಕನಿಷ್ಠ ಮೊತ್ತ :
ವಿದೇಶಿ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೇಳೆ ಭಾರತ ಕನಿಷ್ಠ ಮೊತ್ತ ದಾಖಲಿಸಿತು (78). ಒಟ್ಟಾರೆಯಾಗಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಗಳಿಸಿದ 3ನೇ ಕನಿಷ್ಠ ಸ್ಕೋರ್ ಇದಾಗಿದೆ. 1978-79ರಲ್ಲಿ ವೆಸ್ಟ್ ಇಂಡೀಸ್ ಎದುರಿನ ಹೊಸದಿಲ್ಲಿ ಟೆಸ್ಟ್‌ನಲ್ಲಿ 75 ರನ್ನಿಗೆ ಆಲೌಟಾದದ್ದು ದಾಖಲೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.