ಜಾತಿಗಣತಿ ಹಿಂದಿರುವ ತಂತ್ರವಾದರೂ ಏನು?


Team Udayavani, Aug 27, 2021, 6:40 AM IST

ಜಾತಿಗಣತಿ ಹಿಂದಿರುವ ತಂತ್ರವಾದರೂ ಏನು?

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಈ ವರ್ಷ ದೇಶದ ಜನಗಣತಿಯ ಪ್ರಥಮಿಕ ವರದಿ ಬಿಡುಗಡೆಯಾಗ ಬೇಕಾಗಿತ್ತು! ಆದರೆ ಕೊರೊನಾ ಕಾರಣದಿಂದಾಗಿ ಈ ವರ್ಷ ಇಂಥ ಯಾವುದೇ ಬೆಳವಣಿಗೆಗಳು ಆಗುತ್ತಿಲ್ಲ. ಇದರ ನಡುವೆಯೇ, ದಿಢೀರನೇ ಜಾತಿಗಣತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ದಶಕದ ಹಿಂದೆಯೂ ಜಾತಿಗಣತಿ ಬಗ್ಗೆ ಚರ್ಚೆಯಾಗಿ ಯುಪಿಎ ಸರಕಾರ ಧೈರ್ಯ ಮಾಡಿ ಜಾತಿಗಣತಿ ನಡೆಸಿತ್ತು. ಆದರೆ ಇದನ್ನು ಇಲ್ಲಿವರೆಗೆ ಪ್ರಕಟಿಸಲೇ ಇಲ್ಲ. ಈಗ ಬಿಹಾರ ಸಿಎಂ ನಿತೀಶ್‌ಕುಮಾರ್‌ ಮತ್ತು ಅಲ್ಲಿನ ರಾಜಕೀಯ ಪಕ್ಷಗಳು ಜಾತಿಗಣತಿಗಾಗಿ ಒತ್ತಾಯ ಮಾಡಿ, ಪ್ರಧಾನಿ ಮೋದಿಯವರನ್ನೂ ಭೇಟಿ ಮಾಡಿವೆ. ಇತ್ತ ಕರ್ನಾಟಕದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಅವಧಿಯಲ್ಲಿ ನಡೆಸಲಾಗಿದ್ದ ಜಾತಿಗಣತಿ ವರದಿಯನ್ನು ಬಹಿರಂಗ ಮಾಡಿ ಎಂದು ರಾಜ್ಯ ಸರಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಹಾಗಾದರೆ, ಈ ಜಾತಿಗಣತಿ ಎಂದರೇನು? ಸರಕಾರಗಳೇಕೆ ಜಾತಿಗಣತಿ ನಡೆಸುತ್ತಿಲ್ಲ? ಜಾತಿಗಣತಿಗೂ ಒಬಿಸಿ ಮೀಸಲಾತಿಗೂ ಇರುವ ಸಂಬಂಧವಾದರೂ ಏನು ಎಂಬ ಬಗ್ಗೆ ತಿಳಿಯಬೇಕಿದೆ.

ಜಾತಿಗಣತಿ ಆಗಿದ್ದು ಯಾವಾಗ? :

ವಿಶೇಷವೆಂದರೆ ಸ್ವಾತಂತ್ರ್ಯಾನಂತರದಲ್ಲಿ ಸರಿಯಾಗಿ ಜಾತಿಗಣತಿಯೇ ಆಗಿಲ್ಲ. 1931ರಲ್ಲಿ ಬ್ರಿಟಿಷರ ಕಾಲದಲ್ಲಿ ದೇಶಾದ್ಯಂತ ಜಾತಿಗಣತಿಯಾಗಿತ್ತು. 1990ರಲ್ಲಿ ಮಂಡಲ್‌ ವರದಿ ಜಾರಿಗೆ ತರುವ ಸಂದರ್ಭದಲ್ಲಿ 1931ರ ವರದಿಯನ್ನು ಪರಿಗಣಿಸಿಯೇ ಒಬಿಸಿ ಮೀಸಲಾತಿ ಪ್ರಕಟ ಮಾಡಲಾಗಿತ್ತು. ಇದಾದ ಬಳಿಕ ಎರಡು ಬಾರಿ ಜಾತಿಗಣತಿ ಮಾಡಲಾಗಿದ್ದರೂ ವರದಿ ಬಹಿರಂಗ ಮಾಡಿಯೇ ಇಲ್ಲ. ಅಂದರೆ 1941 ಮತ್ತು 2011ರಲ್ಲೂ ಜಾತಿಗಣತಿ ಮಾಡಲಾಗಿತ್ತು. ಇಂದಿಗೂ ಈ ಎರಡೂ ವರದಿಗಳು ಶೀತಲಪೆಟ್ಟಿಗೆಯಲ್ಲೇ ಇವೆ.

ಜಾತಿಗಣತಿ ಎಂದರೆ ಹೆದರಿಕೆ ಏಕೆ?:

ಜಾತಿಗಣತಿ ಎಂದರೆ ಮೊದಲಿಗೆ ಹೆದರುವುದು ರಾಷ್ಟ್ರೀಯ ಪಕ್ಷಗಳು! ಇದರ ಹಿಂದೆ ಪಕ್ಕಾ ರಾಜಕೀಯ ಲೆಕ್ಕಾಚಾರವಿದೆ. ವಿಶೇಷವೆಂದರೆ ಜಾತಿಗಣತಿ ಬೇಕಾಗಿರುವುದು ಪ್ರಾದೇಶಿಕ ಪಕ್ಷಗಳಿಗೆ. ದೇಶದಲ್ಲಿ ಇದುವರೆಗೂ ಒಬಿಸಿ ಜನಸಂಖ್ಯೆ ಎಷ್ಟಿದೆ ಎಂಬ ಕುರಿತಾದ ನಿಖರ ಮಾಹಿತಿ ಇಲ್ಲ. ಒಂದು ವೇಳೆ ಕೇಂದ್ರ ಸರಕಾರವೇ ಜಾತಿಗಣತಿ ಮಾಡಿ, ಒಬಿಸಿ ಜನಸಂಖ್ಯೆ ಬಗ್ಗೆ ನಿಖರವಾದ ಮಾಹಿತಿ ನೀಡಿದರೆ, ಇಡೀ ಒಬಿಸಿ ಮೀಸಲಾತಿಯನ್ನೇ ಬದಲಾವಣೆ ಮಾಡಬೇಕಾಗುತ್ತದೆ. ಕೇಂದ್ರ ಸರಕಾರಕ್ಕೆ ಮೀಸಲಾತಿ ಬದಲಾವಣೆ ಮಾಡುವುದು ಅಥವಾ ಏರುಪೇರು ಮಾಡುವುದು ಆಗದ ಕೆಲಸ. ಆದರೂ ಒಬಿಸಿ ಜನಸಂಖ್ಯೆ ಇಂತಿಷ್ಟೇ ಇದೆ ಎಂಬ ಮಾಹಿತಿ ಸಿಕ್ಕರೆ ಇವರಿಗೆ ಮೀಸಲಾತಿ ಕೊಡಿಸುವ ಭರವಸೆಯ ಮೇಲೆ ಪ್ರಾದೇಶಿಕ ಪಕ್ಷಗಳು, ರಾಜಕೀಯವಾಡಬಹುದು. ಹೀಗಾಗಿಯೇ ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳು ಜಾತಿಗಣತಿ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ.

ಈಗಿರುವ ಗಣತಿ ಎಂಥದ್ದು?  :

ಭಾರತಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಅಂದರೆ 1951ರಿಂದ 2011ರ ವರೆಗೂ ಜನಗಣತಿ ನಡೆಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಎಷ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ ಬೇರೆ ಯಾವ ಜಾತಿಗಳಲ್ಲಿ ಎಷ್ಟು ಜನರಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿಲ್ಲ. ಹೀಗಾಗಿಯೇ ಪ್ರತೀ 10 ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಈ ಪ್ರಕ್ರಿಯೆಯನ್ನು ಜನಗಣತಿ ಎಂದೇ ಕರೆಯಲಾಗುತ್ತಿದೆ. ವಿಶೇಷವೆಂದರೆ 2011ರಲ್ಲಿ ಸಾಮಾಜಿಕ ಆರ್ಥಿಕ ಜಾತಿ ಗಣತಿ (ಎಸ್‌ಇಸಿಸಿ) ಎಂದೇ ಕರೆಯಲಾಗಿತ್ತು.

ಕೇಂದ್ರದಲ್ಲಿನ ಸರಕಾರಗಳ ನಿಲುವೇನು? :

ಯುಪಿಎ ಸರಕಾರ: ಎನ್‌ಡಿಎ ಸರಕಾರಕ್ಕೂ ಮುನ್ನ ಇದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲೇ ಜಾತಿಗಣತಿ ಬಗ್ಗೆ ಪ್ರಬಲವಾದ ಒತ್ತಡಗಳು ಕೇಳಿಬಂದಿದ್ದವು. ಅದರಲ್ಲೂ 2010ರಲ್ಲಿ ಈ ಒತ್ತಡ ಹೆಚ್ಚಾಗಿಯೇ ಇತ್ತು. 2010ರಲ್ಲಿ ಆಗಿನ ಕಾನೂನು ಸಚಿವ ವೀರಪ್ಪ ಮೊಲಿ ಅವರು, ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರಿಗೆ ಪತ್ರ ಬರೆದು, ಜಾತಿಗಣತಿಯ ಅಗತ್ಯದ ಬಗ್ಗೆ ಮನವಿ ಮಾಡಿದ್ದರು. ಬಳಿಕ ಚರ್ಚೆಗಳು ನಡೆದಿದ್ದವು. ಸದನದಲ್ಲಿ ಖುದ್ದು ಪ್ರಧಾನಿಯವರೇ ಉತ್ತರ ನೀಡಿ, ಜಾತಿಗಣತಿ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಬಳಿಕ ಆಗಿನ ಹಣಕಾಸು ಸಚಿವ ಪ್ರಣವ್‌ ಮುಖರ್ಜಿ ಅವರ ನೇತೃತ್ವದಲ್ಲಿ ಉನ್ನತ ಸಚಿವರ ಸಮಿತಿ ನೇಮಕ ಮಾಡಿ, ಕಡೆಗೆ ಜಾತಿ ಗಣತಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆಯೇ ಎಸ್‌ಸಿ-ಎಸ್‌ಟಿ ಜತೆಗೆ ಇತರ ಜಾತಿಗಳಲ್ಲಿನ ಜನಸಂಖ್ಯೆಯನ್ನೂ ಪ್ರತ್ಯೇಕವಾಗಿ ದಾಖಲು ಮಾಡಲು ನಿರ್ಧರಿಸಲಾಯಿತು. ವಿಚಿತ್ರವೆಂದರೆ, ಈ ಜಾತಿಗಣತಿಗೆ ಆದ ವೆಚ್ಚ 4,893 ಕೋಟಿ ರೂ.!

ಎನ್‌ಡಿಎ ಸರಕಾರ: ಯುಪಿಎ ಅವಧಿಯಲ್ಲಿ ಜಾತಿಗಣತಿ ಶುರುವಾಗಿದ್ದೇ ತಡವಾಗಿ. ಈ ಪ್ರಕ್ರಿಯೆ ಮುಗಿದು ಕೆಲವೇ ದಿನಗಳಾಗುವಷ್ಟರಲ್ಲಿ ಯುಪಿಎ ಸರಕಾರ ಹೋಗಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಬಂದಿತ್ತು. 2016ರಲ್ಲಿ ಜಾತಿಗಣತಿ ವರದಿಯನ್ನು ಬಹಿರಂಗ ಮಾಡಲಾಯಿತು. ಅಂದರೆ ಸಾಮಾಜಿಕ ಆರ್ಥಿಕ ಜಾತಿಗಣತಿಯನ್ನು ಬದಿಗಿರಿಸಿ, ಎಸ್‌ಸಿ-ಎಸ್‌ಟಿ ಮತ್ತು ಇತರ ಜನಸಂಖ್ಯೆಯನ್ನು ಮಾತ್ರ ಪ್ರಕಟಿಸಲಾಯಿತು. ಈ ಬಗ್ಗೆ ವಿಚಾರಿಸಿದಾಗ, ಇಡೀ ಜಾತಿಗಣತಿ ವರದಿ ತಪ್ಪುಗಳಿಲ್ಲದೇ ಇರಬೇಕು ಎಂಬುದು ನಮ್ಮ ಆಶಯವಾಗಿದೆ. ಈಗಿರುವ ವರದಿಯಲ್ಲಿ 1.34 ಕೋಟಿ ಜನರ ಬಗ್ಗೆ ತಪ್ಪು ಮಾಹಿತಿಗಳಿವೆ. ಹೀಗಾಗಿ ತಪ್ಪುಗಳನ್ನು ಇರಿಸಿಕೊಂಡು ಜಾತಿಗಣತಿ ವರದಿ ಬಹಿರಂಗ ಮಾಡುವುದು ಸರಿಯಲ್ಲ ಎಂದು ಹೇಳಿತು. ಹೀಗಾಗಿ, ಎನ್‌ಡಿಎ ಅವಧಿಯಲ್ಲೂ ಈ ವರದಿ ಶೀತಲ ಪೆಟ್ಟಿಗೆಗೆ ಹೋಯಿತು.

ಜಾತಿಗಣತಿ:  ಬಿಜೆಪಿ ಮತ್ತು ಒಬಿಸಿ :

ಜಾತಿಗಣತಿ ಮತ್ತು ಒಬಿಸಿ ಜಾತಿಗಳ ಮಾಹಿತಿಗೂ ಭಾರೀ ನಂಟಿದೆ. ಸದ್ಯ ಪ್ರತಿ 10 ವರ್ಷಗಳಿಗೊಮ್ಮೆ ಎರಡು ರೀತಿಯಲ್ಲಿ ಗಣತಿಯಲ್ಲಿ ಮಾಹಿತಿ ದಾಖಲು ಮಾಡಲಾಗುತ್ತದೆ. ಅಂದರೆ ಒಂದು ಎಸ್‌ಸಿ-ಎಸ್‌ಟಿ, ಮತ್ತೂಂದು ಇತರ ಜಾತಿಯವರ ಲೆಕ್ಕ. ಎಸ್‌ಸಿ-ಎಸ್‌ಟಿ ಮೀಸಲಾತಿ ವಿಚಾರದಲ್ಲಿ ಯಾವುದೇ ಸರಕಾರಗಳು, ಪಕ್ಷಗಳು ಸೊಲ್ಲೆತ್ತುವ ಮಾತೇ ಇಲ್ಲ. ಇದು ಸ್ವಾತಂತ್ರಾéನಂತರ ರಚಿತವಾದ ಸಂವಿಧಾನದಲ್ಲೇ ಅಡಕವಾಗಿರುವ ವಿಚಾರ. ಇದರ ಬದಲಾವಣೆಯೂ ಅಷ್ಟು ಸುಲಭವಲ್ಲ. ಆದರೆ ಒಬಿಸಿ ಮೀಸಲಾತಿ ಬಂದಿದ್ದೇ 1990ರಲ್ಲಿ. ಮಂಡಲ್‌ ವರದಿ ಅನ್ವಯ ಇತರ ಹಿಂದುಳಿದ ಜಾತಿಗಳಿಗೂ ಮೀಸಲಾತಿ ಕೊಡಬೇಕು ಎಂಬ ಕಾರಣದಿಂದಾಗಿ ಆಗಿನ ವಿ.ಪಿ.ಸಿಂಗ್‌ ನೇತೃತ್ವದ ಸರಕಾರ ಒಬಿಸಿ ಮೀಸಲಾತಿ ನೀಡಿತು. ಅಂದರೆ 1931ರ ಜಾತಿಗಣತಿ ವರದಿ ಅನ್ವಯ ಶೇ.27ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಯಿತು.

ಅತ್ತ ಆಗಷ್ಟೇ ಭಾರತೀಯ ಜನತಾಪಕ್ಷವೆಂದು ನಾಮಕರಣಗೊಂಡಿದ್ದ ಬಿಜೆಪಿಗೆ ಈ ಒಬಿಸಿ ಮೀಸಲಾತಿ ದೊಡ್ಡ ಸವಾಲಾಗಿ ಬಿಟ್ಟಿತು. ದೇಶದ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಅನ್ನು ಎದುರಿಸುತ್ತಲೇ, ಪ್ರಾದೇಶಿಕ ಮಟ್ಟದಲ್ಲಿ ಅಲ್ಲಿನ ಸ್ಥಳೀಯ ಪಕ್ಷಗಳ ವಿರುದ್ಧವೂ ಹೋರಾಡುವ ಅನಿವಾರ್ಯ  ಸೃಷ್ಟಿಯಾಯಿತು. ಅಂಥ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು, ಮಂಡಲ ವರದಿ ರಾಜಕೀಯ ಎಂಬುದು. ಆಗಿನಿಂದಲೂ ನಿಧಾನಗತಿಯಲ್ಲೇ ಒಬಿಸಿ ಸಮುದಾಯಗಳನ್ನು ಓಲೈಕೆ ಮಾಡಿಕೊಂಡು, ಅವುಗಳ ಮತಬ್ಯಾಂಕ್‌ಗೆ ಕೈಹಾಕಿರುವ ಬಿಜೆಪಿಗೆ ಸಂಪೂರ್ಣ ಯಶಸ್ಸು ಸಿಕ್ಕಿದ್ದು 2019ರಲ್ಲಿ. ಏಕೆಂದರೆ ಮೊದಲಿನಿಂದಲೂ ಒಬಿಸಿ ಮತದಾರರು ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಜತೆಗೇ ಇದ್ದವರು. ಆದರೆ ಈ ಚುನಾವಣೆಯಲ್ಲಿ ಮಾತ್ರ ಬಿಜೆಪಿಯ ಲೆಕ್ಕಾಚಾರ ಯಶಸ್ವಿಯಾಗಿ, ಶೇ.37ರಷ್ಟು ಒಬಿಸಿ ಮತಗಳನ್ನು ಪಡೆಯಿತು. ಇದೇ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ.19.5 ಮತ್ತು ಪ್ರಾದೇಶಿಕ ಪಕ್ಷಗಳಿಗೆ ಶೇ.26.4ರಷ್ಟು ಮತ ಸಿಕ್ಕಿತ್ತು.

ಇದನ್ನೇ 2014ಕ್ಕೆ ಹೋಲಿಕೆ ಮಾಡಿದರೆ ಪ್ರಾದೇಶಿಕ ಪಕ್ಷಗಳೇ ಒಬಿಸಿ ಮತದಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಅಂದರೆ ಪ್ರಾದೇಶಿಕ ಪಕ್ಷಗಳಿಗೆ ಶೇ.39, ಬಿಜೆಪಿಗೆ ಶೇ.31 ಮತ್ತು ಕಾಂಗ್ರೆಸ್‌ಗೆ ಶೇ.19.4ರಷ್ಟು ಒಬಿಸಿ ಮತ ಬಿದ್ದಿದ್ದವು.

ಬಿಜೆಪಿಗಿರುವ ಭಯವೇನು? :

ಒಂದು ವೇಳೆ ಈಗ ದೇಶಾದ್ಯಂತ ಜಾತಿಗಣತಿ ಮಾಡಿದರೆ, ಇಡೀ ಒಬಿಸಿ ಜನಸಂಖ್ಯೆಯೇ ಏರುಪೇರಾಗಬಹುದು. ಆಗ ಒಬಿಸಿ ಪಟ್ಟಿಯಲ್ಲಿರುವ ಜಾತಿಗಳೇ ಮೀಸಲಾತಿಯಲ್ಲಿ ಹೆಚ್ಚಿನ ಪ್ರಮಾಣ ಕೇಳಬಹುದು. ಒಂದು ವೇಳೆ ಜಾತಿಗಳ ಮನವಿಯಂತೆಯೇ ಮೀಸಲಾತಿಯನ್ನು ಅದಲು ಬದಲು ಮಾಡಿದರೆ, ಕಡಿಮೆ ಮೀಸಲಾತಿ ಪಡೆದ ಜಾತಿಗಳು ಸಿಟ್ಟಾಗಬಹುದು. ಇದು ಚುನಾವಣ ಲೆಕ್ಕಾಚಾರದ ಮೇಲೂ ದೊಡ್ಡ ಪರಿಣಾಮ ಬೀರಬಹುದು. ಅಷ್ಟೇ ಅಲ್ಲ, 1990ರ ಅನಂತರದಲ್ಲಿ 2019ರಲ್ಲೇ ಹೆಚ್ಚು ಒಬಿಸಿ ಮತ ಪಡೆದಿರುವ ಬಿಜೆಪಿ, ಮತ್ತೆ ಅದೇ ಸಮುದಾಯದ ಬಲ ಕಳೆದುಕೊಳ್ಳಲು ಇಷ್ಟವಿಲ್ಲ ಎಂಬ ಮಾತುಗಳಿವೆ. ಹೀಗಾಗಿಯೇ ಜಾತಿಗಣತಿ ಬಗ್ಗೆ ಕೇಂದ್ರ ಸರಕಾರಕ್ಕೆ ಮನಸ್ಸಿಲ್ಲ ಎಂದೇ ಹೇಳಲಾಗುತ್ತಿದೆ.

ಕಾಂಗ್ರೆಸ್‌ಗೆ ಆತಂಕವಿದೆಯೇ?  :

ಸದ್ಯ ಕಾಂಗ್ರೆಸ್‌ ಈ ಬಗ್ಗೆ ಹೆಚ್ಚು ಮಾತುಗಳನ್ನಾಡುತ್ತಿಲ್ಲ. ಆದರೆ ಜಾತಿಗಣತಿ ಮಾಡಬೇಕು, 2011ರ ವರದಿ ಬಿಡುಗಡೆ ಮಾಡಬೇಕು, ಕರ್ನಾಟಕದಲ್ಲಿ ಮಾಡಲಾಗಿರುವ ಜಾತಿಗಣತಿ ವರದಿ ಬಹಿರಂಗ ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಜಾತಿಗಣತಿ ವರದಿ ಬಹಿರಂಗ ಮಾಡಿದರೆ ಕಾಂಗ್ರೆಸ್‌ ಅಷ್ಟೇನೂ ಲಾಭವಾಗುವ ಹಾಗೆ ಕಾಣಿಸುತ್ತಿಲ್ಲ. ಇದು ಪ್ರಮುಖವಾಗಿ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವಿನ ಜಗಳದಂತೆಯೇ ಕಾಣಿಸುತ್ತಿದೆ.

ಪ್ರಾದೇಶಿಕ ಪಕ್ಷಗಳ ವಾದವೇನು?  :

ಇಡೀ ಜಾತಿಗಣತಿ ವರದಿಯಿಂದ ಹೆಚ್ಚು ಲಾಭವಾಗುವುದು ಪ್ರಾದೇಶಿಕ ಪಕ್ಷಗಳಿಗೇ. ಇದು ಮಂಡಲ್‌ ವರದಿ ಮತ್ತು ಒಬಿಸಿ ಮೀಸಲಾತಿ ಬಂದ ಬಳಿಕ ಪ್ರಾದೇಶಿಕ ಪಕ್ಷಗಳಿಗೆ ಆಗಿರುವ ಲಾಭದ ಉದಾಹರಣೆ ಇರಿಸಿಕೊಂಡೇ ಹೇಳಬಹುದು. ಮಂಡಲ್‌ ವರದಿ ಜಾರಿ ಬಳಿಕವೇ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ಶಕ್ತಿಯೂ ಹೆಚ್ಚಾಯಿತು. ಅಲ್ಲದೇ ಬಹುತೇಕ ಒಬಿಸಿ ಜಾತಿಗಳು ಕೆಲವೊಂದು ಸಂದರ್ಭ ಹೊರತುಪಡಿಸಿ ಇಂದಿಗೂ ಪ್ರಾದೇಶಿಕ ಪಕ್ಷಗಳ ಜತೆಯಲ್ಲೇ ಇವೆ. ಹೀಗಾಗಿಯೇ ಜಾತಿಗಣತಿಗಾಗಿ ಬಿಹಾರವೇ ಮೊದಲ ಹೆಜ್ಜೆ ಇರಿಸಿದೆ. ಅಲ್ಲಿ ಒಬಿಸಿಯವರೇ ಹೆಚ್ಚಿನ ಪ್ರಮಾಣದಲ್ಲಿದ್ದು, ಜಾತಿಗಣತಿ ಮಾಡಿದಲ್ಲಿ ನಿತೀಶ್‌ ನೇತೃತ್ವದ ಜೆಡಿಯುಗೆ ಮತ್ತು ತೇಜಸ್ವಿ ಯಾದವ್‌ ನೇತೃತ್ವದ ಆರ್‌ಜೆಡಿಗೆ ಹೆಚ್ಚು ಲಾಭವಾಗಬಹುದು.

ಕರ್ನಾಟಕದಲ್ಲಿ  ಯಾವ ಲೆಕ್ಕಾಚಾರ? :

ಸದ್ಯ ಕರ್ನಾಟಕದಲ್ಲಿ ಮೀಸಲಾತಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ. ಅದರಲ್ಲೂ ಒಬಿಸಿ ಮೀಸಲಾತಿಯಲ್ಲಿ ಬದಲಾವಣೆಯಾಗಬೇಕು ಎಂಬ ಆಗ್ರಹವಿದೆ. ಇತ್ತೀಚೆಗೆ ಲಿಂಗಾಯತ ಸಮುದಾಯದ ಪಂಚಮಸಮುದಾಯ 2ಎ ಮೀಸಲಾತಿಗೆ ಒತ್ತಾಯಿಸಿ ಹೋರಾಟವನ್ನೇ ಮಾಡಿದೆ. ಅಲ್ಲದೆ, ಒಬಿಸಿಯಲ್ಲೇ ಇರುವ ಕುರುಬರೂ, ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.

ಅಲ್ಲದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಜಾತಿಗಣತಿ ನಡೆಸಲಾಗಿತ್ತು. ಈ ಜಾತಿಗಣತಿ ಬಗ್ಗೆ ಸಾಕಷ್ಟು ವಿವಾದಗಳೂ ಎದ್ದಿದ್ದವು. ಆಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ನೇತೃತ್ವದಲ್ಲಿ ಇದು ನಡೆದಿತ್ತು. ಆದರೆ ಇದರ ವರದಿ ತಯಾರಿಸುವ ವೇಳೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಹೋಗಿ, ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಬಂದಿತ್ತು. ಈ ಸಂದರ್ಭದಲ್ಲಿ ವರದಿ ಬಿಡುಗಡೆಯಾಗಲೇ ಇಲ್ಲ. ಆದರೂ ಕೆಲವೊಂದು ಸೋರಿಕೆ ಅಂಶಗಳ ಪ್ರಕಾರ, ರಾಜ್ಯದ ಜಾತಿಗಳ ಸಂಖ್ಯೆಯಲ್ಲಿ ಅಪಾರ ಪ್ರಮಾಣದ ಬದಲಾವಣೆಯಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಕುಮಾರಸ್ವಾಮಿ ಸರಕಾರ ಪತನವಾಗಿ, ಬಿಜೆಪಿ ಸರಕಾರ ಬಂದಿದ್ದು, ಈಗಲೂ ಅದರ ವರದಿ ಬಹಿರಂಗವಾಗಿಲ್ಲ. ಈಗ ಸಿದ್ದರಾಮಯ್ಯ ಅವರೇ ಜಾತಿಗಣತಿ ವರದಿ ಬಹಿರಂಗ ಮಾಡಿ ಎಂದು ಸರಕಾರಕ್ಕೆ ಒತ್ತಡ ಹೇರುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಒಪ್ಪಿಗೆ ನೀಡುತ್ತಿಲ್ಲ.

ಟಾಪ್ ನ್ಯೂಸ್

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

school

KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.