ಪಂಚ ದ್ವಾರಗಳಿದ್ದರೂ ಕಾಪು ಪೇಟೆಯೊಳಗಿನ ಪ್ರವೇಶ ತ್ರಾಸದಾಯಕ
Team Udayavani, Sep 1, 2021, 3:20 AM IST
ಕಾಪು: ಕಾಪು ಪೇಟೆಯನ್ನು ಪ್ರವೇಶಿಸಲು 5 ಜಂಕ್ಷನ್‌ಗಳಿವೆ ಯಾದರೂ ಐದು ಜಂಕ್ಷನ್‌ಗಳಲ್ಲಿಯೂ ಭಿನ್ನ, ವಿಭಿನ್ನವಾದ ಸಮಸ್ಯೆ ಜನರನ್ನು ಕಾಡುತ್ತಿವೆ. ರಾಷಿಯ ಹೆದ್ದಾರಿ 66 ಚತುಷ್ಪಥ ರಚನೆಯದಾರೂ, ಗ್ರಾ.ಪಂ. ಪಟ್ಟಣವಾಗಿ ಅಭಿವೃದ್ಧಿಗೊಳ್ಳುತ್ತಿದ್ದರೂ, ಜಂಕ್ಷನ್ ಪ್ರದೇಶ ಮತ್ತು ಪ್ರವೇಶ ದ್ವಾರಗಳು ಇನ್ನೂ ಕೂಡ ಅಪಾಯಕಾರಿಯಾಗಿ ಉಳಿದು ಬಿಟ್ಟಿವೆ. ಇದರಿಂದಾಗಿ ಗ್ರಾಮೀಣ ಭಾಗದ ಜನತೆ ಕಾಪು ಪೇಟೆಗೆ ಬರಲು ಹಿಂಜರಿಯುವಂತಾಗಿದೆ.
ಎಲ್ಲೆಲ್ಲಿ ಜಂಕ್ಷನ್ಗಳಿವೆ ? :
ರಾ. ಹೆ. 66ರಿಂದ ವಿದ್ಯಾನಿಕೇತನ ಶಾಲೆ ಮತ್ತು ಕೆ 1 ಹೊಟೇಲ್ ಬಳಿಯ ಜಂಕ್ಷನ್, ಸರ್ವೀಸ್ ರಸ್ತೆಯಲ್ಲಿ ಬಂದು ಪೇಟೆಯನ್ನು ಸಂಪರ್ಕಿಸುವ ಶ್ರೀಲಕ್ಷ್ಮೀ ಜನಾರ್ದನ ದ್ವಾರ (ಬಸದಿ ಬಳಿ), ಉಡುಪಿ-ಕಾಪು ಹಾಗೂ ಮಂಗಳೂರು ಉಡುಪಿ ಸರ್ವೀಸ್ ರಸ್ತೆ ಮತ್ತು ಹೊಸ ಮಾರಿಗುಡಿ ಮುಂಭಾಗದ ಅಂಡರ್‌ಪಾಸ್‌ನ ಮೂಲಕವಾಗಿ ಪೇಟೆಯನ್ನು ಸಂಪರ್ಕಿಸುವ ಮಾರಿಗುಡಿ ರಸ್ತೆ, ಉಡುಪಿ-ಕಾಪು ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಮಯೂರ ಹೊಟೇಲ್ ಬಳಿಯಿಂದ ಅನಂತ ಮಹಲ್ ಮೂಲಕವಾಗಿ ಪೇಟೆಗೆ ಬರುವ ರಸ್ತೆ ಹಾಗೂ ಉಡುಪಿ-ಮಂಗಳೂರು ಹೆದ್ದಾರಿ ಮತ್ತು ಇನ್ನಂಜೆ, ಪೊಲಿಪು, ಕಲ್ಯ ಸಹಿತವಾಗಿ ಇತರೆಡೆಗಳಿಂದ ಕಾಪು ಪೇಟೆಯನ್ನು ಪ್ರವೇಶಿಸುವ ಪೊಲಿಪು ಮಸೀದಿ ಜಂಕ್ಷನ್. ಹೀಗೆ ಐದು ಜಂಕ್ಷನ್‌ಗಳ ಮೂಲಕವಾಗಿ ಕಾಪು ಪೇಟೆಗೆ ಬರಲು ಅವಕಾಶವಿದೆ.
ನಿತ್ಯ ಟ್ರಾಫಿಕ್ ಜಾಮ್, ಅಪಘಾತದ ಕಿರಿಕಿರಿ :
ಐದೂ ಜಂಕ್ಷನ್‌ಗಳು ಕೂಡಾ ಕ್ಷಣ ಕ್ಷಣಕ್ಕೂ ನೂರಾರು ವಾಹನಗಳು ಓಡಾಡುವ ಪ್ರದೇಶಗಳೇ ಆಗಿರುವುದರಿಂದ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಮಾರಿಗುಡಿ ಜಂಕ್ಷನ್‌ನಲ್ಲಿ ಕ್ಷಣ ಕ್ಷಣಕ್ಕೂ ಅಪಘಾತ, ಹೊಡೆದಾಟ, ಕಿರಿಕಿರಿ ತಪ್ಪಿದ್ದಲ್ಲ. ಪೊಲಿಪು ಜಂಕ್ಷನ್ ಮತ್ತು ಕೆ 1 ಜಂಕ್ಷನ್‌ನಲ್ಲಿ ದಿನಕ್ಕೆ ಐದಾರು ಬಾರಿಯಾದರೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.
ಸಮಸ್ಯೆ ಬಗೆಹರಿಸಲು ಪರಿಹಾರವೇನು ? :
ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಅಥವಾ ಗೃಹರಕ್ಷಕದಳದ ಸಿಬಂದಿಗಳ ನಿಯೋಜನೆ, ಹೆದ್ದಾರಿ ಇಲಾಖೆಯ ವತಿಯಿಂದ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ, ಪ್ರಮುಖ ಜಂಕ್ಷನ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆ, ಕಾಪು ಪೇಟೆಯ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಜಂಕ್ಷನ್‌ಗಳನ್ನು ನಿಗದಿಪಡಿಸುವುದೇ ಮೊದಲಾದ ವ್ಯವಸ್ಥೆಗಳನ್ನು ಮಾಡುವುದರಿಂದ ಐದೂ ಜಂಕ್ಷನ್‌ಗಳಲ್ಲಿನ ನಿತ್ಯದ ಕಿರಿಕಿರಿ ಮತ್ತು ಟ್ರಾಫಿಕ್ ಜಾಮ್‌ನಂತಹ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ.
ಇತರ ಸಮಸ್ಯೆಗಳೇನು? :
- ಜ ಹೊಸದಾಗಿ ಪೇಟೆಗೆ ಬರುವವರಿಗೆ ಪೇಟೆಯಲ್ಲಿ ಟ್ರಾಫಿಕ್ ಜಾಮ್‌ನೊಳಗೆ ಸಿಲುಕುವ ಭೀತಿ.
- ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ರಿಕ್ಷಾ ಚಾಲಕರಿಗೆ ಕಿರಿಕಿರಿ.
- ವಾರದ ಶುಕ್ರವಾರ ಸಂತೆಗೆ ಅನಾನುಕೂಲತೆ.
- ಹೆದ್ದಾರಿ ಬದಿಯಲ್ಲಿ ವ್ಯಾಪಾರ – ವಹಿವಾಟುಗಳಿಗೆ ತೊಂದರೆ.
- ಹೆದ್ದಾರಿ ಬದಿಯಲ್ಲಿ ಮತ್ತು ಜಂಕ್ಷನ್ ಪ್ರದೇಶಗಳಲ್ಲಿ ನಿತ್ಯ ಅಪಘಾತ, ಹೊಡೆದಾಟದ ಭೀತಿ.
ಸಂಚಾರ ಸುಗಮಕ್ಕೆ ಯತ್ನ :
ಕಾಪು ಪೇಟೆ ಪ್ರವೇಶಿಸುವ ಜಂಕ್ಷನ್‌ಗಳ ಅಗಲ ಕಿರಿದಾಗಿದ್ದು, ಕೆಲವೆಡೆ ರಸ್ತೆಗಳೂ ಅಗಲ ಕಿರಿದಾಗಿವೆ. ಮಾರಿಗುಡಿ ರಸ್ತೆ , ಜನಾರ್ದನ ದ್ವಾರದ ಬಳಿಯ ರಥಬೀದಿಯಲ್ಲಿ ರಸ್ತೆ ಬದಿಯಲ್ಲೇ ವಾಹನ ಪಾರ್ಕಿಂಗ್ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ಪ್ರವೇಶ ಪ್ರದೇಶಗಳಲ್ಲಿ ಟ್ರಾಫಿಕ್ ಸಿಗ್ನಲ್ ಮತ್ತು ಎಚ್ಚರಿಕೆ ಫಲಕಗಳ ಅಳವಡಿಕೆಗೆ ಹೆದ್ದಾರಿ ಇಲಾಖೆಗೆ ಮನವಿ ಮಾಡಲಾಗುವುದು. ಪೊಲಿಪು ಜಂಕ್ಷನ್ ಮತ್ತು ಕೆ 1 ಜಂಕ್ಷನ್‌ಗಳಲ್ಲಿ ದ್ವಿಪಥ ಸಂಚಾರಕ್ಕೆ ಅವಕಾಶ ನೀಡಿ, ಉಳಿದ ಮೂರು ಕಡೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಜಂಕ್ಷನ್‌ಗಳಲ್ಲಿನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಪ್ರಯತ್ನಿಸಲಾಗುವುದು. –ರಾಘವೇಂದ್ರ ಸಿ., ಎಸ್ಸೈ ಕಾಪು ಪೊಲೀಸ್ ಠಾಣೆ
-ರಾಕೇಶ್ ಕುಂಜೂರು