ಸೌಭಾಗ್ಯ ದಯಪಾಲಿಸುವ ಸ್ವರ್ಣಗೌರೀ-ಮಂಗಳಗೌರೀ
Team Udayavani, Sep 9, 2021, 6:10 AM IST
ಭಾದ್ರಪದ ಮಾಸದಲ್ಲಿ ಬರುವ ಪ್ರಮುಖ, ಸಂಭ್ರಮದ ಹಬ್ಬವೆಂದರೆ “ಗೌರೀಹಬ್ಬ’ವೆಂದು ಪ್ರಸಿದ್ಧವಾಗಿರುವ ಸ್ವರ್ಣಗೌರೀವ್ರತ. ಮರುದಿನದ ಗಣೇಶನ ಹಬ್ಬವೂ ಸೇರಿದಂತೆ “ಗೌರೀ-ಗಣೇಶ’ ಎಂಬುದಾಗಿ ಜನರ ಸಂತಸ- ಸಂಭ್ರಮಗಳಿಗೆ ವಿಷಯವಾಗಿದೆ ಇದು.
ಇದನ್ನು “ಹೆಂಗಸರ ಹಬ್ಬ’ ಎಂಬುದಾಗಿ ವ್ಯವಹರಿಸುವುದನ್ನು ಕಾಣುತ್ತೇವೆ. ಕಾರಣ, ಇಂದು ಪ್ರಧಾನವಾಗಿ ಪೂಜೆಯನ್ನು ನಡೆಸುವವರು ಹೆಂಗಸರೇ. ಆದರೂ ಹೆಂಗಸರ ಪೂಜೆಗೆ ಸಹಕಾರವನ್ನು ನೀಡುವುದಲ್ಲದೆ ಪುರುಷರೂ ಸಹ ಜಗನ್ಮಾತೆಯಾದ ಗೌರೀದೇವಿಯನ್ನು ಕುಟುಂಬ ಕ್ಷೇಮಕ್ಕಾಗಿ ನಮಿಸಿ-ಪ್ರಾರ್ಥಿಸಬೇಕಾಗಿದೆ. ಸ್ತ್ರೀಯರೂ ಸಹ ಪುರುಷರನ್ನು ಹಬ್ಬದ ಸಂಭ್ರಮದಿಂದ ದೂರವಿಡಬೇಕಾಗಿಲ್ಲ. ಗೌರಿದೇವಿಯೊಬ್ಬಳನ್ನೇ ಪೂಜಿಸಿದಾಗಲೂ, ಪರಮೇಶ್ವರ ಸಹಿತವಾಗಿ “ಪಾರ್ವತೀ-ಪರಮೇಶ್ವರರು’, ಜಗನ್ಮಾತಾಪಿತೃಗಳು ಎಂಬುದಾಗಿಯೇ ಸ್ತುತಿಸುತ್ತಾರೆ.
ಇಲ್ಲಿ ಪುರಾಣದ ಕಥೆಯೊಂದನ್ನು ಸ್ಮರಿಸಬಹುದಾಗಿದೆ. ಒಮ್ಮೆ ಕೈಲಾಸದಲ್ಲಿ ಶಿವ ಮತ್ತು ಪಾರ್ವತಿಯರಲ್ಲಿ ಯಾರು ಹೆಚ್ಚು ಶ್ರೇಷ್ಠರು ಎಂಬ ಪ್ರಶ್ನೆಯೆದ್ದಿತು. ಶಿವಗಣಗಳೆಲ್ಲರೂ ಉತ್ತರಿಸದೆ ಮೌನವನ್ನು ವಹಿಸಿದರು. ಆಗ ಭೃಂಗಿಮುನಿಯು “ಶಿವನೇ ಶ್ರೇಷ್ಠ’ ಎಂದು ಉತ್ತರಿಸಿದನಂತೆ. ಶಕ್ತಿಯ ಹಿರಿಮೆಯನ್ನು ಒಪ್ಪದೆ ಶಿವನೇ ಹೆಚ್ಚು ಎಂದು ಸಾರಿದರು. ಇದರಿಂದ ಕೋಪಗೊಂಡ ದೇವಿಯು “ನಿನ್ನಲ್ಲಿರುವ ನನ್ನ ಅಂಶವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ’ ಎಂದು ಆತನ ಶರೀರದಲ್ಲಿನ ಸಪ್ತಧಾತುಗಳನ್ನೂ ಶೋಷಿಸಿಬಿಟ್ಟಳು. ಮುನಿಯು ಬರೀ ಅಸ್ತಿಪಂಜರವಾಗಿ ಉಳಿಯಬೇಕಾಯಿತು. ಇದು ಸೂಚಿಸುವ ತತ್ವಾರ್ಥವೆಂದರೆ, ಶಿವ-ಶಕ್ತಿಯರ ಸಮಾಯೋಗದಿಂದಲೇ ಸೃಷ್ಟಿಯು ಮುಂದುವರಿದಿರುವುದು. ಆದ್ದರಿಂದ ಅವರಿಬ್ಬರ ಪಾತ್ರವೂ ಸಮಾನವಾಗಿದೆ. ಲೋಕದಲ್ಲಿ ಪತಿ-ಪತ್ನಿಯರು ಶಿವ-ಶಕ್ತಿಯರ ಪ್ರತಿನಿಧಿಗಳಾಗಿ ವರ್ತಿಸಬೇಕಾಗಿರುವುದರಿಂದ ಇಬ್ಬರೂ ಸೇರಿಯೇ ಪೂಜಿಸುವುದೆಂಬುದು ಜ್ಞಾನಿಸಮ್ಮತವಾದದ್ದು.
ಶಿವ-ಶಕ್ತಿಯರು ಸೇರಿಯೇ ಇರುವವರಾಗಿದ್ದರೆ, ಗೌರಿಯನ್ನು ಮಾತ್ರವೇ ಅಂದು ಪೂಜಿಸಬಹುದೇ? ಎಂದರೆ, ಅದಕ್ಕೆ ಜ್ಞಾನಿಗಳ ಉತ್ತರ, ಪುರುಷಾರ್ಥಗಳ ಕೆಲವು ವಿಶೇಷಭಾಗಗಳ ಪ್ರಾಪ್ತಿಗಾಗಿ ಅವುಗಳನ್ನನುಗ್ರಹಿಸುವ ದೇವಿಯನ್ನು ಪ್ರತ್ಯೇಕವಾಗಿ ಪೂಜಿಸುವುದು ಸೂಕ್ತವೇ ಆಗಿದೆ. ದೇವಿಯ ಪೂಜೆಯಿಂದ ದೇವನೂ ಸಂತುಷ್ಟನಾಗುತ್ತಾನೆ ಎಂಬ ಅಂಶವನ್ನೂ ನೆನಪಿಡಬೇಕಾಗಿದೆ.
ಯಾರು ಈ ಗೌರೀ?: ಮೇಲೆ ಗಮನಿಸಿದಂತೆ ಗೌರಿಯು ಶಿವನ ಅರ್ಧಾಂಗಿ. ಶಿವನ ಮಡದಿಯಾಗಿದ್ದ ದಾಕ್ಷಾಯಣೀ (ಸತೀದೇವಿ). ತನ್ನ ಪತಿಗಾದ ಅಪಮಾನವನ್ನು ತಾಳಲಾರದೆ ದೇಹತ್ಯಾಗವನ್ನು ಮಾಡಿದಳು. ಮುಂದೆ ಹಿಮವಂತನ ಮಗಳಾಗಿ ಜನಿಸಿದಳು. ಮಹಾದೇವನು ತಪಸ್ಸಿನಲ್ಲೇ ಮಗ್ನನಾಗಿದ್ದಾಗ ಆತನನ್ನು ತಪಸ್ಯೆಯಿಂದ ಹೊರತರಲು ಕಾಮದೇವನ ಮೂಲಕ ದೇವತೆಗಳು ಪ್ರಯತ್ನಿಸಿದಾಗ ಕುಪಿತನಾದ ಶಿವನು ಕಾಮನನ್ನು ಭಸ್ಮಮಾಡಿದ. ಹಿಮವಂತನ ಮಗಳಾದ ಗೌರಿಯು ಕಠಿನ ತಪಸ್ಯೆಯಿಂದ ಶಿವನನ್ನು ಒಲಿಸಿಕೊಂಡಳು. ಪ್ರಸನ್ನನಾದ ಶಿವನು ಲೋಕಕಲ್ಯಾಣಕ್ಕಾಗಿ ತಾನಾಗಿಯೇ ಕಾಮನನ್ನು ಬರಮಾಡಿಕೊಂಡು ಗೌರಿಯನ್ನು ವಿವಾಹವಾದ ಎಂಬುದು ಪುರಾಣಕಥೆ.
ಶ್ರೀಕೃಷ್ಣನೇ ತಾನು ದೇವಕಿಯ ಗರ್ಭದಲ್ಲಿ ಹುಟ್ಟುವಾಗ ಯೋಗಮಾಯೆಯಾದ ಗೌರಿದೇವಿಯು ಯಶೋದೆಯ ಗರ್ಭದಲ್ಲಿ ಅವತರಿಸಿದಳು. ಆತನ ಅವತಾರದಲ್ಲಿ ನೆರವಾದ ಆಕೆಯನ್ನು ಲೋಕವು ತನ್ನ (ನಾರಾಯಣನ)ಸೋದರಿಯೆಂದು ಕೊಂಡಾಡಲಿ ಎಂಬುದಾಗಿ ಶ್ರೀಕೃಷ್ಣನೇ ಹೇಳುತ್ತಾನೆ ಎನ್ನುತ್ತದೆ ಶ್ರೀಮದ್ಭಾಗವತ.
ಗೌರೀಪೂಜೆಯ ಉದ್ದೇಶ: ಪ್ರಧಾನವಾಗಿ ಗೌರೀಪೂಜೆಯನ್ನು ಮಾಡುವುದು ಒಳ್ಳೆಯ ದಾಂಪತ್ಯಸೌಭಾಗ್ಯಕ್ಕಾಗಿ. ಇದನ್ನು ಸಾರುವ ಪುರಾಣದ ಕಥಾಭಾಗಗಳಲ್ಲಿ ಪ್ರಮುಖವಾದವುಗಳೆಂದರೆ ಗೋಪಿಕೆಯರು ಕೃಷ್ಣನನ್ನೇ ಪತಿಯಾಗಿ ಪಡೆಯಲು ಮಾಡಿದ ಪೂಜೆ, ರುಕ್ಮಿಣೀದೇವಿಯು ತನ್ನ ವಿವಾಹ ಸಂದರ್ಭದಲ್ಲಿ ಆಚರಿಸಿದ ಗೌರೀಪೂಜೆ. ಇದನ್ನೇ ಆಧರಿಸಿ ಇಂದೂ ವಿವಾಹಪೂರ್ವಭಾವಿಯಾಗಿ ಗೌರೀ ಪೂಜೆಯನ್ನು ಮಾಡುವ ಪದ್ಧತಿಯಿದೆ. ದಾಂಪತ್ಯ ಸೌಖ್ಯವನ್ನಷ್ಟೇ ಅಲ್ಲದೆ ಸರ್ವ ಮಂಗಲಗಳನ್ನೂ-ಸತ್ಸಂತಾನವನ್ನೂ-ಸುಖಸಮೃದ್ಧಿ ಗಳನ್ನೂ ಕರುಣಿಸಬಲ್ಲ ಮಹಾತಾಯಿ ಈಕೆ.
ಪೂಜೆ/ವ್ರತದ ವಿಧಾನ: ಗೌರೀಪೂಜೆಯ ಆಚರಣೆಯ ಮೊದಲ ಹಂತ ಆಕೆಯನ್ನು ಹೃದಯದಲ್ಲಿ ಧ್ಯಾನ ಮಾಡುವುದೇ ಆಗಿದೆ. ಒಳಗೆ ಕಂಡ-ಧ್ಯಾನ ಮಾಡಿದ ಜಗನ್ಮಾತೆಯನ್ನು ಅನಂತರ ಹೊರಗಡೆಯೂ ಇತರ ಮಾಧ್ಯಮಗಳಿಂದ ಪೂಜಿಸುವುದು ಮಹರ್ಸಿವಿಹಿತ ಪೂಜಾಕ್ರಮ.
ಮನೆಯಲ್ಲಿ ಶುದ್ಧವಾದ ಸ್ಥಳದಲ್ಲಿ ಮಂಟಪವನ್ನು ರಚಿಸಿ, ಅಲಂಕರಿಸಿ, ಕಲಶಸ್ಥಾಪನೆಯನ್ನು ಮಾಡುತ್ತಾರೆ. ಗೌರೀದೇವಿಯ ವಿಗ್ರಹವನ್ನು ಸ್ವರ್ಣದಿಂದಲೋ, ಅರಿಶಿನದಿಂದಲೋ ಅಥವಾ ಗಂಗಾತೀರದ ಮರಳು-ಮೃತ್ತಿಕೆ ಯಿಂದ ಮಾಡುತ್ತಾರೆ. ಗಂಗೆಯ ಸಾಮೀಪ್ಯವಿಲ್ಲದವರು ಯಾವುದಾದರೂ ಜಲಾಶಯದಲ್ಲಿ ಗಂಗೆಯನ್ನು ಆವಾಹನೆ ಮಾಡಿ ಅಲ್ಲಿನ ಮಣ್ಣನ್ನು ತಂದು ಮಾಡುವುದುಂಟು. ಆವಾಹಿತಳಾದ ದೇವಿಯನ್ನು ಷೋಡಶೋಪ ಚಾರಗಳಿಂದ ಪೂಜಿಸುತ್ತಾರೆ. ಹದಿನಾರು ಗ್ರಂಥಿಗಳುಳ್ಳ ದಾರವನ್ನಿಟ್ಟು ಆ ಗ್ರಂಥಿಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಿಗೆ ಪ್ರಿಯವಾದ ಉಪಚಾರಗಳು, ಮಂತ್ರ- ತಂತ್ರಗಳಿಂದ ಪೂಜೆಯು ಸಂಪನ್ನಗೊಳ್ಳುತ್ತದೆ. ಪೂಜಾವಿಧಾನಗಳಲ್ಲಿ ಕೆಲವು ವ್ಯತ್ಯಾಸಗಳು ಕಂಡುಬಂದರೂ ಎಲ್ಲದರ ಹಿಂದಿನ ಆಶಯವೂ ದೇವಿಯನ್ನು ಪ್ರಸನ್ನಗೊಳಿಸಿ ಆಕೆಯ ಅನುಗ್ರಹವನ್ನು ಪಡೆಯುವುದೇ ಆಗಿದೆ.
ಗೌರೀಪೂಜಾ ಕ್ರಮದಲ್ಲಿನ ತತ್ವಾರ್ಥ: ಗೌರಿಯು ಹಿಮವಂತನ ಪುತ್ರಿಯೆಂಬುದು ಪುರಾಣೋಕ್ತಿ. ಆದರೆ ಪುರಾಣಕಥೆಗಳು ಕೆಲವು ಗಹನವಾದ ತಣ್ತೀಗಳನ್ನು, ಸತ್ಯಗಳನ್ನು ಮನವರಿಕೆ ಮಾಡುವ ಉದ್ದೇಶದಿಂದ ಹೊರಟಿರುವವು ಎಂಬ ಶ್ರೀರಂಗಮಹಾಗುರುಗಳ ಮಾತು ಗಮನಾರ್ಹವಾಗಿದೆ. ಮರ್ಹಗಳು ಅಂತರಂಗಸಾಧನೆಯಲ್ಲಿ ತಮ್ಮ ಬೆನ್ನುಹುರಿಯ ಉನ್ನತಸ್ಥಾನವನ್ನು ಏರಿದಾಗ ಪರಮಾನಂದಭರಿತರಾಗಿ ಇಂದ್ರಿಯ ವ್ಯಾಪಾರಗಳೆಲ್ಲವೂ ಸ್ತಬ್ಧವಾಗಿಬಿಡುತ್ತವೆ. ಮೈಮರಗಟ್ಟುತ್ತದೆ. ಈ ಅಂಶಗಳನ್ನು ಹೋಲುವ ಹಿಮ ವತ್ಪರ್ವತವನ್ನೇ ಕಥೆಯಲ್ಲಿ ಆರಿಸಿಕೊಂಡಿದ್ದಾರೆ. ಹಾಗೆ ಆನಂದತುಂದಿಲನಾದವನು ಅಲ್ಲಿಯೇ ನಿಂತುಬಿಡದೆ ಮುಂದೆ ಲೋಕದಲ್ಲಿ ತನ್ನ ಜ್ಞಾನಾನಂದಗಳನ್ನು ಬೆಳೆಸಬೇಕಾದರೆ ಆ ಸ್ಥಾನದಿಂದ ಕೆಳಗಿಳಿಯಬೇಕು. ಇಂದ್ರಿಯಗಳ ಕೆಲಸವೂ ಜರಗಬೇಕು. ಆದ್ದರಿಂದ ಆತನನ್ನು ಅಲ್ಲಿಂದ ಲೋಕಪ್ರಜ್ಞೆಗೆ ಇಳಿಸಲು ಕಾಮನ ಮೂಲಕ ಇಂದ್ರಿಯಾಧೀಶರಾದ ದೇವತೆಗಳ ಪ್ರಯತ್ನ. ಅದು ಅಕಾಲದಲ್ಲಾದರೆ ಕೆಡಕು. ಸಕಾಲವಾದರೆ ಉತ್ತುಂಗಸ್ಥಾನದಿಂದ ಪ್ರಕೃತಿಮಾತೆಯು(ಶಕ್ತಿಸ್ವರೂಪಿಣಿಯು) ತನ್ನ ಚೈತನ್ಯಕ್ಕೆ ಮೂಲನಾದ ಶಿವನೊಡನೆ ಸೇರಿ ಕೆಳಗಿಳಿದಾಗ ಅಲ್ಲಿ ಶಿವ-ಶಿವೆಯರ ಸೇರುವೆ-ವಿವಾಹ. ಅಲ್ಲಿಂದ ಮುಂದೆ ಸಂತಾನಪ್ರಾಪ್ತಿ. ಆದ್ದರಿಂದಲೇ ದಾಂಪತ್ಯಸೌಭಾಗ್ಯಕ್ಕಾಗಿ ಜಗನ್ಮಾತೆಯ ಪೂಜೆ.
ಪೂಜೆಗೆ ಸುವರ್ಣವೇ ಏಕೆ?: ಸೌಲಭ್ಯವಿಲ್ಲದಿದ್ದಾಗ ಅರಿಸಿನವೇ ಏಕೆ? ಬೆಳ್ಳಿಯಿಂದಾಗಬಾರದೇಕೆ? ಎಂಬ ಪ್ರಶ್ನೆಗಳಿಗೆ ವೈಜ್ಞಾನಿಕ ನೋಟದಿಂದಲೇ ಉತ್ತರವನ್ನು ಹುಡುಕಬೇಕಾಗಿದೆ. ಜ್ಞಾನಿಗಳ ಅನುಭವವು ಸಾರುವಂತೆ ಗೌರೀಮಾತೆಯು ಚಾಂಪೇಯ (ಸಂಪಿಗೆಹೂವಿನ) ವರ್ಣದವಳು. ಆ ವರ್ಣವನ್ನೂ, ಆಕೆಯ ಹೊಳಪನ್ನೂ ಬಹುಮಟ್ಟಿಗೆ ಹೋಲುವುದು ಸುವರ್ಣ. ಜೊತೆಗೆ ಸುವರ್ಣದ ದರ್ಷನ, ಸ್ಪಶìಗಳು ನಮ್ಮೊಳಗೆ ದೇವಿಯ ಸಾಕ್ಷಾತ್ಕಾರಕ್ಕೆ ಪೋಷಕವಾದ ಕೇಂದ್ರಗಳನ್ನು ತೆರೆಯಲು ಸಹಕರಿಸುತ್ತದೆ. ದೇವ-ದೇವಿಯರನ್ನು ತಮ್ಮೊಳಗೆ ಸ್ವತಃ ಕಂಡನುಭವಿಸಿದವರೂ, ಮಹರ್ಸಿ ಹೃದಯವನ್ನರಿತವರೂ ಆಗಿದ್ದ ಶ್ರೀರಂಗಮಹಾಗುರುಗಳು ಸುವರ್ಣದ ಧರ್ಮವು ಬಹುಮಟ್ಟಿಗೆ ಅರಿಶಿನದಲ್ಲೂ ಕಂಡುಬರುವುದನ್ನೂ ತಮ್ಮ ನಾಡೀವಿಜ್ಞಾನದ ಮೂಲಕ ನಿರೂಪಿಸಿದರು. ಆದ್ದರಿಂದಲೇ ಸುವರ್ಣದ ಸೌಲಭ್ಯವಿಲ್ಲದಿದ್ದಾಗ ಅರಿಸಿನವನ್ನು ಪಯೋಗಿಸುವ ಕ್ರಮವನ್ನು ವಿಧಿಸಿರುವುದು ಸೂಕ್ತವಾಗಿ ದೆಯೆಂಬ ವಿವರಣೆಯನ್ನೂ ನೀಡಿದರು. ಪೂಜೆಯಲ್ಲಿ ಗ್ರಂಥಿಗಳ, ಉಪಚಾರಗಳ ಸಂಖ್ಯೆ ಮುಂತಾದವುಗಳಲ್ಲಿ ಹದಿನಾರೆಂಬ ಸಂಖ್ಯೆಯು ವಿಶೇಷವಾಗಿ ಎದ್ದು ಕಾಣುತ್ತದೆ. ಇದು ಜಗನ್ಮಾತೆಯ ಷೋಡಶಕಲೆಗಳ ಸೂಚಕ.
ಸೌಭಾಗ್ಯದಾಯಿನಿಯಾದ ಜಗನ್ಮಾತೆಯನ್ನು-ಜಗದಾದಿ ದಂಪತಿಯನ್ನು ದಂಪತೀ ಸಮೇತರಾಗಿ ಈ ಶುಭಪರ್ವದಲ್ಲಿ ಪೂಜಿಸಿ ಸಕಲ ಸೌಭಾಗ್ಯಗಳನ್ನೂ ಗಳಿಸಿ ನಲಿಯೋಣ.
ಮೈಥಿಲಿ ರಾಘವನ್,
ಸಂಸ್ಕೃತಿ ಚಿಂತಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.