ಮಕ್ಕಳಿಗೆ ಅಕ್ಕನ ಅಕ್ಕರೆಯ ಮನೆ ಪಾಠ!
Team Udayavani, Sep 22, 2021, 8:00 AM IST
ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದೆಯೂ ಹಳ್ಳಿ ಪರಿಸರದ ಮಕ್ಕಳಿಗೆ ಶಿಕ್ಷಣ ದೊರಕಿದೆ. ಮಕ್ಕಳ ಕಲಿಕಾ ಸಾಮರ್ಥ್ಯಗಳನ್ನು ಪರಿಪೂರ್ಣಗೊಳಿಸಲು ಅಕ್ಕನ ಮನೆ ಪಾಠ ನೆರವಾಗಿದೆ.
ಕಾರ್ಕಳ: ಮಕ್ಕಳಿಗೂ ಓದುವ ಕನಸು. ಅವರನ್ನು ವಿದ್ಯಾವಂತರನ್ನಾಗಿಸುವ ಹಂಬಲ ಹೆತ್ತವರದ್ದು. ಇದಕ್ಕೆಲ್ಲ ತಡೆಯಾಗಿದ್ದು ಕೊರೊನಾ. ಈ ವೇಳೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯಬಾರದೆಂಬ ಉದ್ದೇಶದಿಂದ ಶಿಕ್ಷಕರು “ಅಕ್ಕನ ಮನೆ ಪಾಠ’ ಎಂಬ ಯೋಜನೆ ರೂಪಿಸಿ ಮಕ್ಕಳಿಗೆ ಭೌತಿಕ ಪಾಠ ಸಿಗುವಂತೆ ಮಾಡುತ್ತಾರೆ.
ಕಾರ್ಕಳ ತಾ|ನ ಕೆರ್ವಾಶೆ ಕಿ. ಪ್ರಾ. ಶಾಲೆ ಬಂಗ್ಲೆಗುಡ್ಡೆಯಲ್ಲಿ 1ರಿಂದ 5ನೇ ತರಗತಿವರೆಗೆ 80 ಮಕ್ಕಳಿದ್ದಾರೆ. ಅವರಿಗೆ ಶಿಕ್ಷಕರಿರುವುದು ಇಬ್ಬರೇ.
ಕೊರೊನಾ ಕಾರಣದಿಂದ ಆನ್‌ಲೈನ್ ಶಿಕ್ಷಣ ಅನಿವಾರ್ಯತೆಯಾದಾಗ ಇಲ್ಲಿನ ಮಕ್ಕಳಿಗೆ ಮೊಬೈಲ್, ನೆಟ್‌ವರ್ಕ್ ಸಮಸ್ಯೆಯಿಂದ ಕಲಿಕೆಗೆ ತೊಡಕಾಗಿತ್ತು. ಹೇಗಾದರೂ ಮಾಡಿ ಮಕ್ಕಳ ಕಲಿಕೆಗೆ ದಾರಿತೋರಬೇಕೆಂಬ ಛಲ ಹೊತ್ತ ಶಿಕ್ಷಕರಿಗೆ ಹೊಳೆದದ್ದೇ “ಅಕ್ಕನ ಮನೆ ಪಾಠ’ ಎಂಬ ವಿನೂತನ ಪ್ರಯೋಗ.
ಯಾರು ಅಕ್ಕಂದಿರು?:
ಪದವಿ ಪಡೆದಿದ್ದು, ಬೋಧನೆಯಲ್ಲಿ ಆಸಕ್ತಿ ಇರುವ 10 ಮಹಿಳೆಯರು, ಹೆತ್ತವರೇ ಅಕ್ಕಂದಿರಾಗಿರುತ್ತಾರೆ. ಅವರ ಮನೆಯ ಮಕ್ಕಳೊಂದಿಗೆ, ಆಸುಪಾಸಿನಲ್ಲಿರುವ ಮಕ್ಕಳನ್ನು 5ರಂತೆ ಗುಂಪು ಮಾಡಿ ಅವರಿಗೆ 3 ಗಂಟೆ ಶಿಕ್ಷಣ ಚಟುವಟಿಕೆ ನಡೆಸಲು ಪೂರಕ ವಾತಾವರಣ ಕಲ್ಪಿಸುತ್ತಾರೆ.
ಅಕ್ಕಂದಿರು ಸ್ವಯಂ ಸ್ಫೂರ್ತಿಯಿಂದ ಖಾಲಿ ಮನೆಗಳಲ್ಲಿ, ನಿರ್ಮಾಣ ಹಂತದ ಮನೆಗಳಲ್ಲೇ ತರಗತಿ ನಡೆಸುತ್ತಾರೆ. ಶಾಲಾ ಶಿಕ್ಷಕರು ಪ್ರತೀ ತಂಡಗಳಿಗೆ ಎರಡು ದಿನಕೊಮ್ಮೆ ಭೇಟಿ ನೀಡಿ ಮಕ್ಕಳ ಕಲಿಕಾ ಚಟುವಟಿಕೆ ಪರಿಶೀಲನೆ ಮಾಡಿ ಅಕ್ಕಂದಿರಿಗೆ ಮತ್ತು ಮಕ್ಕಳಿಗೆ ಪೂರಕ ಮಾಹಿತಿ, ಮಾರ್ಗದರ್ಶನ ನೀಡುತ್ತಾರೆ. ಅಭ್ಯಾಸದ ಹಾಳೆಗಳ ಮಾಹಿತಿ, 15 ದಿನಗಳಿಗೊಮ್ಮೆ ಮೌಲ್ಯಮಾಪನ ನಡೆಸಿ ಪ್ರಗತಿ ದಾಖಲಿಸುತ್ತಾರೆ. ನಲಿ-ಕಲಿ ಮಕ್ಕಳ ಕಲಿಕೆಗೆ ಪರಿಕರ ಗಳನ್ನು ಕಲಿಕಾ ಕೇಂದ್ರದಿಂದ ಬಳಸಲಾಗುತ್ತಿದೆ.
ಈ ಮಾದರಿಯ ಕಲಿಕೆಯಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ಸಿಕ್ಕಿದೆ. ಅಲ್ಲದೆ ಹೆತ್ತವರನ್ನು ಕೂಡ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತಾಗಿದೆ.
10 ಮಂಂದಿ ಶಿಕ್ಷಕ ಅಕ್ಕಂದಿರಿವರು:
ಅಕ್ಕ ಮನೆ ಪಾಠದಲ್ಲಿ ಸುಜಯಾ, ಶಂಕರಿ, ಪ್ರಮೋದಿನಿ, ರೂಪಾ ನಾಯ್ಕ, ಸ್ವಾತಿ, ಸುಮನಾ ನಾಯಕ್, ಶ್ವೇತಾ ಗುಡಿಗಾರ್, ರಂಜಿತಾ ಪೂಜಾರಿ, ತಸ್ವೀನ್ ಕಡ್ಪಾಲು, ಸರಿತಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಒಟ್ಟಿನಲ್ಲಿ ಅಕ್ಕನ ಮನೆ ಪಾಠ ಯೋಜನೆ ಹೆತ್ತವರು, ಎಸ್.ಡಿ.ಎಂ.ಸಿ., ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಲಹೆ, ಮಾರ್ಗದರ್ಶನದಿಂದ ಯಶಸ್ಸು ಕಂಡಿದೆ.
ಕಲಿಕೆ ವಿಧಾನ ಹೇಗೆ?:
ಅಕ್ಕನಾಗಿ ಪಾಠ ಮಾಡುವವರ 100 ಮೀ. ವ್ಯಾಪ್ತಿಯ ಮಕ್ಕಳು ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ತನ್ನ ಮಕ್ಕಳೊಂದಿಗೆ ನೆರೆಮನೆಯ ಮಕ್ಕಳಿಗೂ ಅವರು ಪ್ರೀತಿಯಿಂದ ಕಲಿಸುತ್ತಾರೆ. ಮಕ್ಕಳಿಗೂ ದಿನ ನಿತ್ಯ ನೋಡುವ ಅಕ್ಕನೇ ಆಗಿರುವುದರಿಂದ ಅವರೂ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. 2021ರ ಜೂನ್‌ನಿಂದ ಈ ಕಲಿಕಾ ಮಾದರಿ ನಡೆಯುತ್ತಿದೆ.
ಭೌತಿಕ ಶಿಕ್ಷಣ ಮಕ್ಕಳಿಗೆ ದೊರಕಿಸುವಲ್ಲಿ ಇದೊಂದು ಸಕಾರಾತ್ಮಕ ಪ್ರಯತ್ನ. ಸಮುದಾಯದ ಸಹಭಾಗಿತ್ವ, ಹೆತ್ತವರ ಸ್ಪಂದನೆ ಎಲ್ಲವೂ ದೊರಕಿದೆ. ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಪರಿಣಾಮಕಾರಿ ಮತ್ತು ಪ್ರೇರಣಾದಾಯಕವಾಗಿದೆ. – ವೆಂಕಟೇಶ್ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಕಳ
ಮಕ್ಕಳ ಶಿಕ್ಷಣ ಕುಂಠಿತವಾಗಬಾರದು ಎನ್ನುವ ತುಡಿತದ ಅಕ್ಕನ ಮನೆ ಪಾಠ ಊಹಿಸಲಾಗದ ರೀತಿಯಲ್ಲಿ ಯಶಸ್ವಿಯಾಗಿದೆ. ಮಕ್ಕಳ ಕಲಿಕೆಯಲ್ಲೂ ಪ್ರಗತಿಯಾಗಿದೆ. ಅಕ್ಕನ ಮನೆ ಪಾಠ ಎಲ್ಲರಿಗೂ ಪ್ರೇರಣೆಯಾಗಲಿ.–ಸಂಜೀವ ದೇವಾಡಿಗ, ಮುಖ್ಯ ಶಿಕ್ಷಕ
ತಾಯಿಯಾಗಿ, ಶಿಕ್ಷಕಿಯಾಗಿ ಸ್ವಯಂ ಪ್ರೇರಣೆಯಿಂದ ಅಕ್ಕನ ಮನೆ ಪಾಠದಲ್ಲಿ ತೊಡಗಿಸಿಕೊಂಡಿದ್ದೇನೆ. ಕೊರೊನಾ ಸಂದರ್ಭ ಮಕ್ಕಳು ಕಳಕೊಂಡ ಶಿಕ್ಷಣ ಮರಳಿ ಪಡೆಯುವಲ್ಲಿ ಅಕ್ಕನ ಮನೆ ಪಾಠ ಸಹಕಾರಿಯಾಗಿದೆ. ಸಫಲತೆಯೂ ಕಂಡಿದೆ. –ಪ್ರಮೋದಿನಿ, ಅಕ್ಕ ಶಿಕ್ಷಕಿ
–ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.