94 ಸರ್ಕಲ್‌ದಲ್ಲಿ ವಾಹನ ನಿಲುಗಡೆ ನಿರ್ಬಂಧ
ಬೀದಿ ಬದಿ ವ್ಯಾಪಾರಸ್ಥರು ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
Team Udayavani, Sep 22, 2021, 6:15 PM IST
ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ದೊಡ್ಡ ಮತ್ತು ಸಣ್ಣ ವೃತ್ತಗಳು ಸೇರಿ ಒಟ್ಟು 94 ಸರ್ಕಲ್‌ಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದ್ದು, ಇನ್ಮುಂದೆ ವೃತ್ತಗಳಿಂದ ನಿರ್ದಿಷ್ಟ ಪ್ರದೇಶದಲ್ಲಿ ನಿಗದಿಪಡಿಸಿದ ದೂರದಲ್ಲೇ ವಾಹನ ನಿಲ್ಲಿಸಬೇಕು. ಇಲ್ಲವಾದಲ್ಲಿ ವಾಹನ ಜಪ್ತಿಯಾಗುತ್ತದೆ.
ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ವಾಣಿಜ್ಯ ಪ್ರದೇಶಗಳಲ್ಲಿ ಜನಸಾಂದ್ರತೆ ಹಾಗೂ ವಾಹನ ಸಂಚಾರ ದಟ್ಟಣೆ ಅಧಿಕವಾಗಿದೆ. ಎಲ್ಲೆಂದರಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡಲಾಗುತ್ತಿದೆ. ಅದರಲ್ಲೂ, ಸರ್ಕಲ್‌ಗಳಲ್ಲಿ ರಸ್ತೆ ನಡುವೆಯೇ ವಾಹನ ನಿಲ್ಲಿಸಲಾಗುತ್ತದೆ. ಟ್ರಾಫಿಕ್ ಸಿಗ್ನಲ್‌ಗಳು ಬಿಟ್ಟರೂ ಮುಂದೆ ಸಾಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸುಗಮ ಸಂಚಾರ ಮತ್ತು ಸುರಕ್ಷತೆ ಹಿತದೃಷ್ಟಿಯಿಂದ ಪ್ರಮುಖ ವೃತ್ತಗಳು ಸೇರಿ 94 ಕಡೆಗಳಲ್ಲಿ ವಾಹನ ನಿಲುಗಡೆ ನಿಷೇಧ ವಲಯ ಎಂದು ಮಹಾನಗರ ಪಾಲಿಕೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಸಂಚಾರ ವ್ಯವಸ್ಥೆ, ಪಾರ್ಕಿಂಗ್ ಮತ್ತು
ವಾಹನ ಓಡಾಟವನ್ನು ಸರಿಯಾದ ದಾರಿಗೆ ತರಬೇಕೆಂಬ ಉದ್ದೇಶದಿಂದ ಮಹಾನಗರ ಪಾಲಿಕೆ, ಪೊಲೀಸ್ ಆಯುಕ್ತಾಲಯ, ಆರ್‌ಟಿಒ ಕಚೇರಿ ಅಧಿಕಾರಿಗಳು ಸಭೆ ಸೇರಿ ಈ ವೃತ್ತಗಳನ್ನು ಗುರುತಿವೆ. ಸರ್ಕಲ್‌ಗಳಿಂದ ನಿರ್ದಿಷ್ಟ ಪ್ರದೇಶದ ದೂರದಲ್ಲೇ ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಎಲ್ಲಿಲ್ಲಿ ನಿಷೇಧ ವಲಯ?: ನಗರದ ಅನೇಕ ವೃತ್ತಗಳು ಬೇರೆ-ಬೇರೆ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುತ್ತಿವೆ. ಬಹುಪಾಲು ವೃತ್ತಗಳಲ್ಲಿ ನಾಲ್ಕು ಮಾರ್ಗಗಳು ಬಂದರೆ, ಕೆಲವೆಡೆ ಐದು ಅಥವಾ ಮೂರು ಮಾರ್ಗಗಳು ಬರುತ್ತವೆ. ಇವುಗಳನ್ನು ಪ್ರದೇಶ, ಜನಸಾಂದ್ರತೆ ಮತ್ತು ವಾಹನ ಸಂಚಾರ ಆಧಾರದಡಿ ದೊಡ್ಡ ಮತ್ತು ಸಣ್ಣ ವೃತ್ತಗಳೆಂದು ಹೆಸರಿಸಲಾಗಿದೆ. ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತ, ರಾಷ್ಟ್ರಪತಿ ವೃತ್ತ, ಜಿಲ್ಲಾ ನ್ಯಾಯಾಲಯ, ಜಿಲ್ಲಾಧಿಕಾರಿಗಳ ಕಚೇರಿ, ಲಾಹೋಟಿ ಪೆಟ್ರೋಲ್ ಬಂಕ್, ಅನ್ನಪೂರ್ಣ ಕ್ರಾಸ್, ಎಸ್‌ಟಿಬಿಟಿ, ಜಿಲ್ಲಾಸ್ಪತ್ರೆ, ಹಳೆ ಆರ್‌ಟಿಒ ಕಚೇರಿ, ಜಗತ್ ಸರ್ಕಲ್, ರಾಮ ಮಂದಿರ ವೃತ್ತ, ಹೀರಾಪುರ ಸರ್ಕಲ್,
ಶಹಾಬಾದ್ ರಸ್ತೆ ವೃತ್ತ, ಆನಂದ ಹೋಟೆಲ್, ಗೋವಾ ಹೋಟೆಲ್, ಲಾಲ್‌ಗಿರಿ ಕ್ರಾಸ್, ಶಹಾಬಜಾರ್ ನಾಕಾ, ಖಾದ್ರಿ ಚೌಕ್, ಆಳಂದ ಚೆಕ್ ಪೋಸ್ಟ್, ಸಿಟಿ ಸೆಂಟರ್ ಮಾಲ್, ಕಾಮತ ಹೋಟೆಲ್ ಆಟೋ ನಿಲ್ದಾಣ, ಗಾಂಧಿ ಚೌಕ್, ಸೂಪರ್ ಮಾರ್ಕೆಟ್ ಆಟೋ ನಿಲ್ದಾಣ, ಕಿರಾಣ ಬಜಾರ್ ಚೌಕ್, ಹುಮನಾಬಾದ್ ಬೇಸ್, ಸುಲ್ತಾನಪುರ ಕ್ರಾಸ್, ಸಿಟಿ ಬಸ್ ನಿಲ್ದಾಣ, ಲಾಲ್ ಹನುಮಾನ ಮಂದಿರ, ಖರ್ಗೆ ಪೆಟ್ರೋಲ್ ಬಂಕ್, ಗಂಜ್ ವೃತ್ತ, ನ್ಯಾಷನಲ್ ಕ್ರಾಸ್, ಸತ್ರಾಸವಾಡಿ, ಹಾಗರಗ ಸರ್ಕಲ್ ಹಾಗೂ ಇತರೆ ಪ್ರಮುಖ ಪ್ರದೇಶದ ವೃತ್ತಗಳನ್ನು ದೊಡ್ಡ ವೃತ್ತಗಳೆಂದು ಗುರುತಿಸಲಾಗಿದೆ. ಈ ದೊಡ್ಡ ವೃತ್ತಗಳಿಂದ 50 ಮೀಟರ್ ದೂರದ ವರೆಗೆ ವಾಹನ ನಿಲುಗಡೆ ನಿಷೇಧ ವಲಯವೆಂದು ಘೋಷಿಸಲಾಗಿದೆ.
ಅದೇ ರೀತಿಯಾಗಿ ಗುಬ್ಬಿ ಕಾಲೋನಿ ಕ್ರಾಸ್, ಬಿಗ್ ಬಜಾರ್, ಎಂಜಿ ರಸ್ತೆ, ಜೇವರ್ಗಿ ಕ್ರಾಸ್, ಪ್ರಕಾಶ ಮಾಲ್, ಕೆಎಂಎಫ್, ದೇವಿನಗರ, ಪೂಜಾರಿ ಚೌಕ್, ಓಂ ನಗರ ಸರ್ಕಲ್, ಮಹೆಬೂಬ್ ನಗರ ಕ್ರಾಸ್, ಅಟಲ್ ಬಿಹಾರಿ ವಾಜಪೇಯಿ ಸರ್ಕಲ್ ಸೇರಿ ಹಲವೆಡೆ ಸಣ್ಣ ವೃತ್ತಗಳನ್ನು ಗುರುತಿಸಲಾಗಿದೆ. ಈ ಸಣ್ಣ ವೃತ್ತಗಳಿಂದ 25 ಮೀಟರ್ ಅಂತರವನ್ನು ವಾಹನ ನಿಲುಗಡೆ ನಿಷೇಧ ವಲಯ ಎಂದು ಪ್ರಕಟಿಸಲಾಗಿದೆ.
ಉದಾಹರಣೆಗೆ ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಬಸ್ ನಿಲ್ದಾಣ ಕಡೆ ಮಾರ್ಗದಲ್ಲಿ ಎಸ್‌ಬಿ ಮೆಡಿಕಲ್, ಜಿಲ್ಲಾ ಕೋರ್ಟ್ ರಸ್ತೆಯಲ್ಲಿ ವೆಂಕಟೇಶ್ವರ ಸ್ಟೋರ್, ಮಿನಿ ವಿಧಾನಸೌಧ ರಸ್ತೆಯಲ್ಲಿ ಕೆನರಾ ಬ್ಯಾಂಕ್, ಡಿಎ ಎಂಜಿಯರಿಂಗ್ ಕಾಲೇಜಿನ ರಸ್ತೆಯಲ್ಲಿ ಜೀಶಾನ್ ಹೋಟೆಲ್, ರೈಲ್ವೆ ನಿಲ್ದಾಣ ಮಾರ್ಗದಲ್ಲಿ ಶಿಮ್ಲಾ ಜ್ಯೂಸ್ ಸೆಂಟರ್‌ವರೆಗೆ ಯಾವುದೇ ವಾಹನ ನಿಲ್ಲಿಸುವಂತಿಲ್ಲ. ಇದೇ ಮಾದರಿಯಲ್ಲಿ ಎಲ್ಲ ವೃತ್ತಗಳಲ್ಲೂ ಪ್ರತಿ ದಿಕ್ಕಿನಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಇರಲಿದೆ ಎನ್ನುತ್ತಾರೆ ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ (ಸಿವಿಲ್) ಕೆ.ಎಸ್.ಪಾಟೀಲ.
ಆಕ್ಷೇಪಣೆಗಳಿದ್ದರೆ ಸಲ್ಲಿಸಿ: ಎಲ್ಲ 94 ವೃತ್ತಗಳಲ್ಲಿ ವಾಹನ ನಿಲುಗಡೆ ನಿಷೇಧ ವಲಯದಂತೆ ನಿಷೇ ಧಿತ ಮಾರಾಟ ವಲಯವನ್ನು ಘೋಷಿಸಲಾಗಿದೆ. ಬೀದಿ ವ್ಯಾಪಾರಿಗಳು ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಪಟ್ಟಣ ಮಾರಾಟ ಸಮಿತಿ ಸಭೆಯಲ್ಲೂ ಚರ್ಚಿಸಿ ಈ ನಿಷೇಧಿತ ಮಾರಾಟ ವಲಯವನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸೆ.23ರೊಳಗೆ ಸಾರ್ವಜನಿಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ ಫೋಟೋ ಸಾಕ್ಷ್ಯ
ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೆ ಹಾಗೂ ಪಾರ್ಕಿಂಗ್ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಂತಿದ್ದರೆ, ಅವುಗಳನ್ನು “ಟೋಯಿಂಗ್’ ವಾಹನದ ಮೂಲಕ ಟ್ರಾಫಿಕ್ ಪೊಲೀಸರು ಎತ್ತಿಕೊಂಡು ಹೋಗಿ, ಪೊಲೀಸ್ ಆಯುಕ್ತಾಲಯದ ಆವರಣದಲ್ಲಿ ಇರಿಸುವರು. ನಂತರ ವಾಹನ ಮಾಲೀಕರು ದಂಡ ಪಾವತಿಸಿ ವಾಹನವನ್ನು ಬಿಡಿಸಿಕೊಳ್ಳುವುದು ಅನಿರ್ವಾಯವಾಗಲಿದೆ.
ಪಾರ್ಕಿಂಗ್ ನಿಷೇಧಿತ ಪ್ರದೇಶ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ರೀತಿಯಲ್ಲಿ ರಸ್ತೆ ಬದಿಯಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೋಗಳನ್ನು ಪೊಲೀಸರು ಸೆರೆಹಿಡಿದು ಸಾಕ್ಷé ಸಂಗ್ರಹಿಸಲಿದ್ದಾರೆ. ಬಳಿಕ ಟೋಯಿಂಗ್ ವಾಹನದಿಂದ ವಾಹನ ಎತ್ತಿಕೊಂಡು ಹೋಗಲಿದ್ದಾರೆ. ಹೀಗಾಗಿ ಯಾರೇ ಆಗಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ನನ್ನ ವಾಹನ ನಿಲ್ಲಿಸಿರಲಿಲ್ಲ ಎಂಬ ವಾದ, ತಗಾದೆ ತೆಗೆಯಲು ಅವಕಾಶ ಇರುವುದಿಲ್ಲ ಎನ್ನುತ್ತಾರೆ
ಪೊಲೀಸ್ ಅಧಿಕಾರಿಗಳು
ಶೀಘ್ರ ಸೂಚನಾ ಫಲಕ ಅಳವಡಿಕೆ
ವಾಹನ ಸಂಚಾರದ ಅಡೆತಡೆ ನಿವಾರಿಸಲು ಹಾಗೂ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸದಂತೆ ಎಚ್ಚರ ವಹಿಸಲು ಸೂಚನಾ ಫಲಕಗಳ ಅಳವಡಿಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಈಗಾಗಲೇ ಗುರುತಿಸಿದ ಆಯಾಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕಗಳ ಅವಳಡಿಕೆ ಮಾಡಲಾಗುತ್ತದೆ ಎನ್ನುತ್ತಾರೆ ಮಹಾನಗರ ಪಾಲಿಕೆ ಅಧಿಕಾರಿಗಳು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಗಮ ಸಂಚಾರದ ಉದ್ದೇಶದಿಂದ ಸರ್ಕಲ್‌ಗಳಲ್ಲಿ ವಾಹನ ನಿಲುಗಡೆ ನಿಷೇಧ ವಲಯಗಳನ್ನು ಘೋಷಿಸಲಾಗಿದೆ. ಹೀಗಾಗಿ ಇನ್ಮುಂದೆ ವೃತ್ತಗಳಿಂದ ನಿರ್ದಿಷ್ಟ ಪ್ರದೇಶದ ದೂರದಲ್ಲೇ ಸಾರ್ವಜನಿಕರು ವಾಹನ ನಿಲ್ಲಿಸುವ ಮೂಲಕ ಸಂಚಾರ ದಟ್ಟನೆ ಹಾಗೂ ಅದರ ತೊಂದರೆಗಳನ್ನು ತಪ್ಪಿಸಲು ಸಹಕರಿಸಬೇಕು. ಸ್ನೇಹಲ್ ಸುಧಾಕರ ಲೋಖಂಡೆ, ಆಯುಕ್ತ, ಮಹಾನಗರ ಪಾಲಿಕೆ
*ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.