ಪ್ರಕೃತಿ ವಿಕೋಪ ನಿಯಮಗಳನ್ನು ತಿರುಚಿರುವ ಸರ್ಕಾರದ ಕ್ರಮ ಸರಿಯಲ್ಲ: ಸಿದ್ದರಾಮಯ್ಯ
Team Udayavani, Sep 29, 2021, 6:59 PM IST
ಬೆಂಗಳೂರು : ವಿಕೋಪಗಳಿಂದ ಮರಣ ಹೊಂದಿದ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕು ಎಂಬ ಪ್ರಕೃತಿ ವಿಕೋಪ ನಿಯಮಗಳನ್ನು ತಿರುಚಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರವು ಷರತ್ತು ರಹಿತವಾಗಿ ಪ್ರಕೃತಿ ವಿಕೋಪ ನಿಯಮಗಳಡಿ ನೀಡುವ ಪರಿಹಾರದಂತೆಯೆ, ಕೋವಿಡ್‌ನಿಂದ ಮೃತಪಟ್ಟ ಎಲ್ಲರ ವಾರಸುದಾರರಿಗೂ 5 ಲಕ್ಷ ರೂಪಾಯಿಗಳನ್ನು ಕಡ್ಡಾಯವಾಗಿ ನೀಡಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ನ ಎರಡೂ ಅಲೆಗಳಿಂದ ಕನಿಷ್ಠವೆಂದರೂ 4 ಲಕ್ಷ ಜನ ಮರಣ ಹೊಂದಿದ್ದಾರೆ. ಹಾಗಾಗಿ ಕುಟುಂಬಗಳಲ್ಲಿ ದುಡಿಯುವ ಸದಸ್ಯರುಗಳನ್ನು ಕಳೆದುಕೊಂಡು ಈ ಕುಟುಂಬಗಳು ಅನಾಥವಾಗಿವೆ. ಅಸಂಖ್ಯಾತ ಕುಟುಂಬಗಳಲ್ಲಿ ತಂದೆ ತಾಯಿಯರಿಬ್ಬರನ್ನೂ ಕಳೆದುಕೊಂಡ ಮಕ್ಕಳು ದಿಕ್ಕು ತೋಚದೆ ಕೂತಿದ್ದಾರೆ. ದುಡಿವ ಮಕ್ಕಳನ್ನು ಕಳೆದುಕೊಂಡ ವೃದ್ಧ ತಂದೆ ತಾಯಿಗಳು ತಬ್ಬಲಿಗಳಾಗಿದ್ದಾರೆ. ಹಾಗಾಗಿ ಅಸಹಾಯಕರು ಸಣ್ಣ ಮಟ್ಟದ ಬದುಕು ಕಟ್ಟಿಕೊಳ್ಳಬೇಕಾದರೆ ನಾಗರಿಕವೆನ್ನಿಸಿಕೊಂಡ ಸರ್ಕಾರಗಳು ನೊಂದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ವಿಪತ್ತು ನಿಧಿಯ ನಿಯಮಗಳ ಪ್ರಕಾರ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನಾದರೂ ಕೊಡಬೇಕು ಎಂದು ಒತ್ತಾಯಿಸಿದ್ದೆವು.
ಕೇಂದ್ರ ಸರ್ಕಾರ ದಿನಾಂಕ 14-3-2020 ರಂದು ಕೋವಿಡ್‌ನಿಂದ ಮರಣ ಹೊಂದಿದ ಪ್ರತಿ ವ್ಯಕ್ತಿಗೆ 4 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶ ಹೊರಡಿಸಿ ಅದೇ ದಿನ ಮಾರ್ಪಡಿಸಿಕೊಂಡಿದೆ.
ಸರ್ಕಾರಗಳು ಪ್ರಕೃತಿ ವಿಕೋಪದ ನಿಯಮಗಳಡಿ ಕೋವಿಡ್-19 ಸಾಂಕ್ರಾಮಿಕವನ್ನು ನಿರ್ವಹಿಸುತ್ತಿವೆ. ಪ್ರಕೃತಿ ವಿಕೋಪಗಳಾದ ಮಳೆ, ಗಾಳಿ, ಸಿಡಿಲು, ಗುಡುಗು, ಭೂ ಕುಸಿತ, ಭೂಕಂಪ ಮುಂತಾದವುಗಳಿಂದ ಮರಣ ಹೊಂದಿದವರಿಗೆ ತಲಾ 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತದೆ [ಕೇಂದ್ರ 4 ಲಕ್ಷ, ರಾಜ್ಯ ಸರ್ಕಾರ-1 ಲಕ್ಷ]. ಹಾಗಾಗಿ ಕೋವಿಡ್-19 ನಿಂದ ಮರಣ ಹೊಂದಿದವರಿಗೆ ತಲಾ 5 ಲಕ್ಷ ರೂಪಾಯಿಗಳನ್ನು ಕೊಡಲೇಬೇಕೆಂದು ಒತ್ತಾಯಿಸಿದ್ದೆವು.
ಇದನ್ನೂ ಓದಿ: ಕಲಬುರಗಿ: ಉದ್ಯಾನವನದಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು
ಆದರೆ ದಿನಾಂಕ; 28-9-2021 ರಂದು ಹೊರಡಿಸಿರುವ ಆದೇಶದಲ್ಲಿ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳ ದುಡಿಯುವ ವ್ಯಕ್ತಿ ಕೋವಿಡ್-19 ರಿಂದ ಮೃತ ಪಟ್ಟರೆ ರಾಜ್ಯದ ಸಂಧ್ಯಾ ಸುರಕ್ಷಾ ಯೋಜನೆಯಡಿ 1 ಲಕ್ಷ ರೂಪಾಯಿಗಳನ್ನು, ಕೇಂದ್ರ ಸರ್ಕಾರದಿಂದ 50 ಸಾವಿರ ರೂಪಾಯಿಗಳನ್ನು [ಬಿಪಿಎಲ್ ಅಲ್ಲದ ಕುಟುಂಬಗಳೂ ಸೇರಿದಂತೆ ಯಾರೆ ವ್ಯಕ್ತಿಯು ಕೋವಿಡ್ ನಿಂದ ಮೃತಪಟ್ಟರೆ] ನೀಡುವುದಾಗಿ ಆದೇಶ ಹೊರಡಿಸಲಾಗಿದೆ.
ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೆ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಾಮಾನ್ಯ ನಿಯಮಗಳನ್ನು ತಮಗೆ ಬೇಕಾದಂತೆ ತಿರುಚಿಕೊಂಡು ನೊಂದ ಜನರಿಗೆ ದ್ರೋಹವೆಸಗಲಾಗುತ್ತಿದೆ.
ಕೋವಿಡ್ ಬಿಕ್ಕಟ್ಟು ತುಟ್ಟತುದಿಯಲ್ಲಿದ್ದಾಗ ಸಮರ್ಪಕವಾದ ಚಿಕಿತ್ಸಾ ವ್ಯವಸ್ಥೆ ಮಾಡದೆ ಜನರು ಬೀದಿ ಬೀದಿಗಳಲ್ಲಿ ಮರಣ ಹೊಂದುವಂತಹ ಅರಾಜಕತೆಯನ್ನು ಸೃಷ್ಟಿಸಲಾಯಿತು. ಈಗ ಪರಿಹಾರ ನೀಡುವುದರಿಂದಲೂ ನುಣುಚಿಕೊಳ್ಳಲಾಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಈ ನಿಲುವು ಮಾನವೀಯವೆನ್ನಿಸುವುದಿಲ್ಲ.
ಪ್ರಕೃತಿ ವಿಕೋಪ ನಿಯಮಗಳಲ್ಲಿ ಬಿಪಿಎಲ್ ಕುಟುಂಬಗಳ ದುಡಿಯುವ ವ್ಯಕ್ತಿಗಳು ಮೃತಪಟ್ಟರೆ ಮಾತ್ರ ಪರಿಹಾರ ನೀಡಬೇಕು ಎಂಬ ಷರತ್ತು ಎಲ್ಲೂ ಇರುವುದಿಲ್ಲ, ಹಾಗಾಗಿ ಕೋವಿಡ್- 19 ಸಾಂಕ್ರಾಮಿಕದಿಂದ ಯಾರೇ ವ್ಯಕ್ತಿ ಮೃತಪಟ್ಟರೂ ಸಹ ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಗಳನ್ನು ನೀಡಬೇಕು.
ಪ್ರಕೃತಿ ವಿಕೋಪ ನಿಯಮಗಳಲ್ಲಿ, ವಿಕೋಪಗಳಿಂದ ಮರಣ ಹೊಂದಿದ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕು ಎಂದಿದೆ. ರಾಜ್ಯ ಸರ್ಕಾರ ಅದನ್ನು ತಿರುಚಿ ಯಾವುದೆ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನರು ಮರಣ ಹೊಂದಿದ್ದರೂ, ಆ ಕುಟುಂಬಕ್ಕೆ, ಅದರಲ್ಲೂ ಬಿ.ಪಿ.ಎಲ್ ಕಾರ್ಡು ಇದ್ದವರಿಗೆ ಮಾತ್ರ ಕೇವಲ 1.5 ಲಕ್ಷ [ಕೇಂದ್ರ, ರಾಜ್ಯಗಳೆರಡೂ ಸೇರಿ] ರೂಪಾಯಿಗಳನ್ನು ನೀಡಲಾಗುವುದೆಂದು ಹೇಳಲಾಗಿದೆ. ಇದು ಸರಿಯಲ್ಲ.
ರಾಜ್ಯ ಸರ್ಕಾರ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ನೀಡಲಾಗುವ ಪರಿಹಾರದ ನಿಯಮಗಳಂತೆ ಕೇಂದ್ರ ಸರ್ಕಾರವು ಹಣವನ್ನು ಬಿಡುಗಡೆ ಮಾಡಬೇಕೆಂದು ರಾಜ್ಯದಿಂದ ಆಯ್ಕೆಯಾದ ಸಂಸದರು ಮತ್ತು ರಾಜ್ಯ ಸರ್ಕಾರ ಕೇಂದ್ರವನ್ನು ಆಗ್ರಹಿಸಬೇಕು ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.