ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜು: ಕರಾವಳಿಗರು ಕೇವಲ 16 ಮಂದಿ,ಹೊರನಾಡಿಗರದ್ದೇ ಮೇಲುಗೈ
Team Udayavani, Oct 1, 2021, 3:40 AM IST
ಉಡುಪಿ: ಕರಾವಳಿ ಜಿಲ್ಲೆಗಳ ಕೃಷಿಕರ ಮಕ್ಕಳು ವೈಜ್ಞಾನಿಕ ಕೃಷಿ ಅಧ್ಯಯನ ನಡೆಸಿ ತಮ್ಮ ಜಮೀನಿನಲ್ಲಿ ಅದನ್ನು ಅಳವಡಿಸಿ ಉತ್ತಮ ಇಳುವರಿ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಸ್ಥಾಪಿಸಲಾದ ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜಿನಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. 2014ರಿಂದ ಇಲ್ಲಿಯ ವರೆಗೆ ತರಬೇತಿ ಪಡೆದ ಕರಾವಳಿ ವಿದ್ಯಾರ್ಥಿಗಳ ಸಂಖ್ಯೆ ಕೇವಲ 16 ಮಾತ್ರ.
ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಪ್ರಾರಂಭವಾಗಿಲ್ಲ. ಸರಕಾರ ಪ್ರತೀ ವರ್ಷ 35 ಸೀಟುಗಳನ್ನು ಮಂಜೂರು ಮಾಡುತ್ತಿದ್ದು, ಎಲ್ಲ ಸೀಟು ಭರ್ತಿಯಾಗುತ್ತದೆ. ಪ್ರತೀ ಶೈಕ್ಷಣಿಕ ವರ್ಷದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಸುಮಾರು 2ರಿಂದ 3 ವಿದ್ಯಾರ್ಥಿಗಳು ಮಾತ್ರ ಸೇರ್ಪಡೆಯಾಗುತ್ತಿದ್ದಾರೆ. ಕರಾವಳಿಯಲ್ಲಿ ವಿದ್ಯಾರ್ಥಿಗಳು ಕೃಷಿ ಕುಟುಂಬದಿಂದ ಬಂದವರಾಗಿದ್ದರೂ ಅವ ರನ್ನು ಕೃಷಿ ಶಿಕ್ಷಣಕ್ಕೆ ಸೇರ್ಪಡೆ ಮಾಡುವ ಹೆತ್ತ ವರ ಸಂಖ್ಯೆ ತೀರಾ ಕಡಿಮೆ ಇದೆ. ಹೆಚ್ಚಿನವರು ಐಟಿ- ಬಿಟಿ ಉದ್ಯೋಗದತ್ತ ಒಲವು ತೋರಿಸುತ್ತಿರುವು ದರಿಂದ ಕೃಷಿಯತ್ತ ಒಲವು ಕಡಿಮೆಯಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹೊರ ಜಿಲ್ಲೆಯ ಒಲವು:
ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಹೊರ ಜಿಲ್ಲೆಯವರಿಗೆ ಹಾಗೂ ಕರಾವಳಿಗರಿಗೆ ತಲಾ ಶೇ.50ರಷ್ಟು ಸೀಟು ಮೀಸಲಿಡಲಾಗಿದೆ. ಅಲ್ಲಿನ ರೈತ ಕುಟುಂಬದ ಹೆಚ್ಚಿನ ಮಕ್ಕಳು ಕೃಷಿಗೆ ಒಲವು ತೋರಿಸುತ್ತಿದ್ದು, ಕಳೆದ ವರ್ಷದಲ್ಲಿ 23 ವಿದ್ಯಾರ್ಥಿಗಳು ಯಶಸ್ವಿಯಾಗಿ ತರಬೇತಿ ಪಡೆದು ಹೋಗಿದ್ದಾರೆ.
ಎರಡು ವರ್ಷಗಳ ಕೋರ್ಸ್:
ರಾಜ್ಯ ಸರಕಾರವು 2014ರಲ್ಲಿ ಕರಾವಳಿಯ ವಿದ್ಯಾರ್ಥಿಗಳಿಗೆಂದು 4.8 ಕೋ.ರೂ. ವೆಚ್ಚದಲ್ಲಿ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ ಸ್ಥಾಪಿಸಿತ್ತು. 2 ವರ್ಷಗಳ ಕೋರ್ಸ್ ಇದಾಗಿದ್ದು, ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ವರ್ಷದಿಂದ ವರ್ಷಕ್ಕೆ ಸೀಟುಗಳನ್ನು ಏರಿಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ 35 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗಿದೆ. ಎಸೆಸೆಲ್ಸಿಯಲ್ಲಿ ಕನಿಷ್ಠ ಶೇ.45 ಅಂಕ ಗಳಿಸಿದ 19 ವರ್ಷದೊಳಗಿ ನವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಿಜ್ಞಾನಿಗಳಿಂದ ಬೋಧನೆ :
ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಬೇಸಾಯಶಾಸ್ತ್ರ, ತಳಿ ವಿಜ್ಞಾನ, ಕೀಟ ಶಾಸ್ತ್ರ, ರೋಗ ಶಾಸ್ತ್ರ, ಕೃಷಿ ಯಾಂತ್ರೀಕೃತ ವಿಷಯಗಳಿಗೆ ಸಂಬಂಧಿಸಿ 25 ವಿಜ್ಞಾನಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಂದಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪಾಠ-ಪ್ರವಚನ ನಡೆಯುತ್ತವೆ.
ಸುಸಜ್ಜಿತ ಕಟ್ಟಡ :
ಬ್ರಹ್ಮಾವರದ ಕೃಷಿ ಕೇಂದ್ರದ ಸಮೀಪದಲ್ಲಿನ ಕಾಲೇಜು 35 ಎಕರೆ ವಿಶಾಲ ಜಾಗದಲ್ಲಿದ್ದು, ಪ್ರಾಯೋಗಿಕ ಕೃಷಿ, ತೋಟಗಾರಿಕೆ ಚಟುವಟಿಕೆಗೆ ಪೂರಕವಾಗಿದೆ. ಬೃಹತ್ ಕಟ್ಟಡ, ಸುಸಜ್ಜಿತ 2 ತರಗತಿ ಕೋಣೆಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಕೃಷಿ ಲ್ಯಾಬ್‌ಗಳನ್ನೊಳಗೊಂಡಿದೆ. ದೂರದ ಮನೆಗಳಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿ ಆವರಣದಲ್ಲಿಯೇ ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್ ವ್ಯವಸ್ಥೆ ಇದೆ. ಕೇಂದ್ರವು ಉಡುಪಿಯಿಂದ 12 ಕಿ.ಮೀ. ದೂರದಲ್ಲಿ ಇದೆ.
ತರಬೇತಿ ಪಡೆದ ವಿದ್ಯಾರ್ಥಿಗಳು :
ಇಸವಿ ಕರಾವಳಿ ಹೊರ ಜಿಲ್ಲೆ
2014-15 00 50
2015-16 05 45
2016-17 01 34
2017-18 02 33
2018-19 04 31
2019-20 02 33
2020-21 02 23
ಒಟ್ಟು 16 247
ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜಿನಲ್ಲಿ ಪ್ರತೀ ವರ್ಷ 35 ವಿದ್ಯಾರ್ಥಿಗಳು ಅಧ್ಯಯನ ಮುಗಿಸುತ್ತಿದ್ದಾರೆ. ಅವರಲ್ಲಿ ಕೆಲವರು ಬಿಎಸ್ಸಿ ಅಗ್ರಿಕಲ್ಚರ್ ಪದವಿ ಪಡೆಯಲು ಸೇರ್ಪಡೆಯಾಗುತ್ತಿದ್ದಾರೆ. ಪ್ರಸಕ್ತ ಸಾಲಿನ (2021-22) ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿಲ್ಲ. – ಡಾ| ಸುಧೀರ್ ಕಾಮತ್, ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜು ಪ್ರಾಂಶುಪಾಲರು
– ತೃಪ್ತಿಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.