ಇಂದು ಗಾಂಧಿ ಜಯಂತಿ: ಜಗದೆಲ್ಲೆಡೆ ಗಾಂಧಿ
Team Udayavani, Oct 2, 2021, 6:27 AM IST
ಮಹಾತ್ಮಾ ಗಾಂಧಿ, ಇಡೀ ಜಗತ್ತಿಗೇ ಇದೊಂದು ಹೆಸರು ಕೇಳಿದರೆ ಸಾಕು, ಅಲ್ಲೊಂದು ಶಾಂತಿ ಮಂತ್ರ ನೆನಪಾಗುತ್ತದೆ. ಅಹಿಂಸೆಯೇ ಪರಮೋ ಧರ್ಮ ಎಂಬ ಧ್ಯೇಯವಾಕ್ಯ ಕಣ್ಣ ಮುಂದೆ ಹಾದು ಹೋಗುತ್ತದೆ. ಗಾಂಧಿ ಹೆಸರು ಕೇಳದ ದೇಶಗಳೇ ಇಲ್ಲ. ಹೆಚ್ಚು ಕಡಿಮೆ ಜಗತ್ತಿನ ಪ್ರತಿಯೊಂದು ದೇಶವೂ ಗಾಂಧಿಯನ್ನು ನೆನಪಿಸಿಕೊಳ್ಳುತ್ತಲೇ ಇರುತ್ತವೆ. ಇಂದು ಗಾಂಧಿ ಜಯಂತಿ. ವಿಶ್ವಸಂಸ್ಥೆ ಈ ದಿನವನ್ನು ಅಹಿಂಸಾ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬೇರೆ ಬೇರೆ ದೇಶಗಳು ಗಾಂಧೀಜಿಯನ್ನು ಹೇಗೆ ನೆನಪಿಸಿಕೊಳ್ಳುತ್ತವೆ? ಹಾಗೆಯೇ ಸ್ಮರಣೆಗಾಗಿ ಯಾವ ಕೆಲಸ ಮಾಡಿವೆ? ಗಾಂಧೀಜಿ ಮಾರ್ಗ ಅನುಸರಿಸಿ ದೊಡ್ಡ ನಾಯಕರಾಗಿ ಬೆಳೆದವರು ಯಾರ್ಯಾರು? ಎಂಬುದರ ಮೇಲೊಂದು ನೋಟ ಇಲ್ಲಿದೆ…
ಗಾಂಧೀಜಿ ಸ್ಫೂರ್ತಿ
ಗಾಂಧಿ ಎಂದರೆ, ಕೇವಲ ಪುತ್ಥಳಿಗೆ ಸೀಮಿತವಲ್ಲ, ಗಾಂಧೀಜಿ ಸ್ಫೂರ್ತಿಯಿಂದಾಗಿ ಕೆಲವು ನಾಯಕರು ಪರಿಪೂರ್ಣರಾಗಿ ಬೆಳೆದದ್ದೂ ಇದೆ. ಇವರಲ್ಲಿ ಪ್ರಮುಖರೆಂದರೆ….
ಮಾರ್ಟಿನ್ ಲೂಥರ್ ಕಿಂಗ್ ಜೂ.
ಗಾಂಧೀಜಿಯವರ ಹೋರಾಟ ಮತ್ತು ಅಹಿಂಸೆಯ ಸಿದ್ಧಾಂತಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಅಮೆರಿಕದಲ್ಲಿ ನಾಗರಿಕ ಹಕ್ಕುಗಳಿಗಾಗಿ ಅಹಿಂಸೆಯ ಮೂಲಕವೇ ಹೋರಾಟ ನಡೆಸಿದರು.
ನೆಲ್ಸನ್ ಮಂಡೇಲಾ
ಗಾಂಧೀಜಿಯವರ ಮೌಲ್ಯಗಳನ್ನು ಮುಂದಿಟ್ಟುಕೊಂಡು ದಕ್ಷಿಣ ಆಫ್ರಿಕಾದಲ್ಲಿ ವಸಾಹತುಶಾಹಿ ವಿರುದ್ಧ ಹೋರಾಟ ನಡೆಸಿದರು. ಇವರನ್ನು 20ನೇ ಶತಮಾನದ ಅತ್ಯುತ್ತಮ ನಾಯಕ ಎಂದೇ ಪರಿಗಣಿಸಲಾಗುತ್ತದೆ.
ಆಲ್ಬರ್ಟ್ ಐನ್‌ಸ್ಟೀನ್
ಮುಂದಿನ ಪೀಳಿಗೆಯವರಿಗೆ ಗಾಂಧೀಜಿಯೇ ರೋಲ್ ಮಾಡೆಲ್ ಎಂದು ಕರೆದಿದ್ದ ಜಗತ್ತಿನ ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರಿಗೆ ಗಾಂಧೀಜಿ ಸ್ಫೂರ್ತಿ. ಅಷ್ಟೇ ಅಲ್ಲ, ಗಾಂಧೀಜಿಗೂ ಐನ್‌ಸ್ಟೀನ್ ಅವರೇ ಸ್ಫೂರ್ತಿಯಾಗಿದ್ದು, ಇವರಿಬ್ಬರೂ ಪತ್ರ ಮುಖೇನ ಪರಸ್ಪರ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.
ದಲಾೖ ಲಾಮಾ
ಟಿಬೆಟ್‌ನ ಬಿಡುಗಡೆಗಾಗಿ ಈಗಲೂ ಚೀನದ ವಿರುದ್ಧ ಹೋರಾಟ ನಡೆಸುತ್ತಿರುವ ದಲಾೖ ಲಾಮಾ ಅವರಿಗೆ ಗಾಂಧೀಜಿಯವರೇ ಸ್ಫೂರ್ತಿ.
ಬರಾಕ್ ಒಬಾಮಾ
ಅಮೆರಿಕದ ಮೊದಲ ಕಪ್ಪುವರ್ಣೀಯ ಅಧ್ಯಕ್ಷ ಎಂದೇ ಖ್ಯಾತರಾಗಿರುವ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೂ ಗಾಂಧೀಜಿಯವರೇ ಸ್ಫೂರ್ತಿಯಾಗಿದ್ದರು. ಅಧ್ಯಕ್ಷರಾಗಿದ್ದಾಗ ನಿಮ್ಮ ಹೀರೋ ಯಾರು ಎಂದು ಕೇಳಿದ್ದಕ್ಕೆ, ಗಾಂಧೀಜಿ ಅವರ ಹೆಸರು ಹೇಳಿದ್ದರು. ಅಷ್ಟೇ ಅಲ್ಲ, ಗಾಂಧೀಜಿ ತವರಾದ ಭಾರತದ ಬಗ್ಗೆ ವಿಶೇಷ ಪ್ರೀತಿ ಇತ್ತು.
ಗಾಂಧೀಜಿ ಪುತ್ಥಳಿಗಳು
ಇಡೀ ಜಗತ್ತಿನಲ್ಲಿ ಪಾಕಿಸ್ಥಾನದಂಥ ಕೆಲವೊಂದು ದೇಶಗಳನ್ನು ಬಿಟ್ಟರೆ ಶಾಂತಿ ಬಯಸುವ ಎಲ್ಲ ದೇಶಗಳಲ್ಲಿ ಗಾಂಧೀಜಿ ಪುತ್ಥಳಿ ಇದೆ. ಅಂದರೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಇರುವ ಸ್ವಿಟ್ಸರ್ಲೆಂಡಿನ ಜಿನೇವಾದಿಂದ ಹಿಡಿದು, ಅಮೆರಿಕದ ವರೆಗೆ ಗಾಂಧೀಜಿಯನ್ನು ಸ್ಮರಣೆ ಮಾಡಿಕೊಳ್ಳುತ್ತಲೇ ಇವೆ. ಜಿನೇವಾದ ಅರೇನಾ ಪಾರ್ಕ್‌ನಲ್ಲಿ ರಾಷ್ಟ್ರಪಿತನ ಪುತ್ಥಳಿ ಇದೆ. 2007ರಲ್ಲಿ ಭಾರತ ಸರಕಾರವೇ ಇದನ್ನು ಕೊಡುಗೆಯಾಗಿ ನೀಡಿತ್ತು.
ಇನ್ನು ಅಮೆರಿಕದ ಕೇವಲ ಒಂದು ಕಡೆಯಲ್ಲ, ಪ್ರಮುಖ ನಗರಗಳಲ್ಲಿ ಗಾಂಧೀಜಿ ಅವರ ಪುತ್ಥಳಿಯುಂಟು. ವಾಷಿಂಗ್ಟನ್ ಡಿಸಿ, ಮಿಚಿಗನ್, ವಿಸ್‌ಕನ್ಸಿನ್, ಮ್ಯಾಸಚುಸೆಟ್ಸ್, ಮಿಸ್ಸಿಸ್ಸಿಪ್ಪಿ, ಕ್ಯಾಲಿಫೋರ್ನಿಯ, ಸ್ಯಾನ್‌ಫ್ರಾನ್ಸಿಸ್ಕೋ ಸೇರಿ ಕೆಲವೆಡೆ ಇದೆ. ಅತ್ತ ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ಟವಿಸ್ಟಾಕ್ ಸ್ಕೇರ್‌ನಲ್ಲಿ ಇರುವ ಈ ಪುತ್ಥಳಿಯಲ್ಲಿ 1968ರಲ್ಲಿ ಅನಾವರಣ ಮಾಡಲಾಗಿತ್ತು. ಡೆನ್ಮಾರ್ಕ್‌ನಲ್ಲಿ ಗಾಂಧೀಜಿ ಪ್ರತಿಮೆಯಷ್ಟೇ ಅಲ್ಲ, ಇಲ್ಲಿ ಗಾಂಧೀಜಿ ಹೆಸರಲ್ಲಿ ಒಂದು ಪಾರ್ಕ್ ಕೂಡ ಇದೆ. ಬೋರುಪ್ಸ್ ಅಲ್ಲೇ ಎಂಬಲ್ಲಿ ಗಾಂಧಿ ಪ್ಲೇಯಾನ್(ಗಾಂಧಿ ಪಾರ್ಕ್) ಇದೆ. ಹಾಗೆಯೇ ಕೋಪನ್‌ಹೆಗನ್‌ನಲ್ಲಿ ಕುಳಿತಿರುವ ಭಂಗಿಯಲ್ಲಿರುವ ಗಾಂಧೀಜಿ ಪುತ್ಥಳಿ ಇದೆ.
ಇನ್ನು ದಕ್ಷಿಣ ಆಫ್ರಿಕಾಗೂ ಗಾಂಧೀಜಿಗೂ ಅವಿನಾಭಾವ ಸಂಬಂಧ. ಇಲ್ಲೇ ವರ್ಣಭೇದ ನೀತಿ ವಿರುದ್ಧ ಹೋರಾಟ ಶುರು ಮಾಡಿ ಬಳಿಕ ಭಾರತಕ್ಕೆ ಬಂದಿದ್ದರು. ಹೀಗಾಗಿ, ಹಲವಾರು ಕಡೆಗಳಲ್ಲಿ ಗಾಂಧೀಜಿ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಪ್ರಮುಖವಾಗಿ ಪೀಟರ್ಸ್‌ಬರ್ಗ್‌ನಲ್ಲಿನ ಚರ್ಚ್ ಸ್ಟ್ರೀಟ್‌ನಲ್ಲಿ ಗಾಂಧೀಜಿ ಪುತ್ಥಳಿಯಿದೆ.
ಗಾಂಧಿ ಸ್ಮರಣೆ
ಜಗತ್ತಿನ 150 ದೇಶಗಳಲ್ಲಿ ಗಾಂಧೀಜಿ ಭಾವಚಿತ್ರ ಒಳಗೊಂಡ ಅಂಚೆ ಸ್ಟಾಂಪ್‌ಗಳಿವೆ. ಅದರಲ್ಲೂ ಬ್ರಿಟನ್‌ನಲ್ಲಿ ಅಲ್ಲಿನ ರಾಜವಂಶಸ್ಥರನ್ನು ಹೊರತುಪಡಿಸಿ, ಪೋಸ್ಟ್ ಸ್ಟಾಂಪ್‌ನಲ್ಲಿ ಕಾಣಿಸಿಕೊಂಡವರಲ್ಲಿ ಗಾಂಧೀಜಿಯವರೇ ಮೊದಲಿಗರು. ಜತೆಗೆ ಅಮೆರಿಕ, ಬಾಂಗ್ಲಾ, ಬೆಲ್ಜಿಯಂ, ಬ್ರೆಜಿಲ್, ಭೂತಾನ್, ಕ್ಯೂಬಾ, ಈಜಿಪ್ಟ್, ಜರ್ಮನಿ, ಗ್ರೀಸ್, ಇರಾನ್, ರಷ್ಯಾ, ದಕ್ಷಿಣ ಆಫ್ರಿಕಾ, ಸಿರಿಯಾ, ವಿಶ್ವಸಂಸ್ಥೆ ಸೇರಿ ಹಲವಾರು ದೇಶಗಳಲ್ಲಿ ಗಾಂಧಿಯವರ ಅಂಚೆ ಸ್ಟಾಂಪ್ ಅನ್ನು ಬಿಡುಗಡೆ ಮಾಡಿವೆ.
ಗಾಂಧೀಜಿ ಅಧ್ಯಯನ
ಗಾಂಧೀಜಿ ಎಂದರೆ, ಕೇವಲ ಪುತ್ಥಳಿ ಸ್ಥಾಪನೆಯಷ್ಟೇ ಅಲ್ಲ, ಕೆಲವೊಂದು ದೇಶಗಳು ಗಾಂಧೀಜಿ ಹೆಸರಲ್ಲಿ ಅಧ್ಯಯನ ಕೇಂದ್ರಗಳು, ಪ್ರತಿಷ್ಠಾನಗಳನ್ನೂ ತೆರೆದಿವೆ.
1. ಮಹಾತ್ಮಾ ಗಾಂಧಿ ಕೆನಡಿಯನ್ ಫೌಂಡೇಶನ್ ಫಾರ್ ವರ್ಲ್ಡ್ ಪೀಸ್
ಕೆನಡಾದ ಅಲ್ಬರ್ಟಾದಲ್ಲಿ ಎಡ್ಮೊಂಟೊನ್ ನಲ್ಲಿ ಈ ಪ್ರತಿಷ್ಠಾನವಿದೆ. ಜಗತ್ತಿನಲ್ಲಿ ಶಾಂತಿಯುತ ಸಮಾಜಕ್ಕಾಗಿ ಈ ಪ್ರತಿಷ್ಠಾನದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಈ ಪ್ರತಿಷ್ಠಾನ.
2. ಅಹಿಂಸೆ ಕುರಿತ ಸಂಶೋಧನೆ ಮತ್ತು ಶಿಕ್ಷಣ ಕ್ಕಾಗಿ ಗಾಂಧಿ ಮಾಹಿತಿ ಕೇಂದ್ರ, ಜರ್ಮನಿ
ಬರ್ಲಿನ್‌ನಲ್ಲಿರುವ ಈ ಗಾಂಧಿ ಮಾಹಿತಿ ಕೇಂದ್ರ ಕೂಡ ಅಹಿಂಸೆ ಕುರಿತಂತೆ ಜಾಗತಿಕವಾಗಿ ಅರಿವು ಮೂಡಿಸುತ್ತಿದೆ. ಜಗತ್ತಿನ ಮೂಲೆ ಮೂಲೆಗಳಿಂದ ಗಣ್ಯರನ್ನು ಕರೆಸಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುತ್ತಿದೆ.
3. ಯುಎನ್‌ಸಿ ಮಹಾತ್ಮಾಗಾಂಧಿ ಫೆಲೋಶಿಪ್(ನಾರ್ತ್ ಕೆರೋಲಿನಾ ವಿಶ್ವವಿದ್ಯಾನಿಲಯ, ಚಾಪೆಲ್ ಹಿಲ್)
ಈ ವಿಶ್ವವಿದ್ಯಾನಿಲಯದ ಕಲಾ ಮತ್ತು ವಿಜ್ಞಾನ ಕಾಲೇಜಿನ ಅಡಿಯಲ್ಲಿ ಯುಎನ್‌ಸಿ ಮಹಾತ್ಮಾ ಗಾಂಧಿ ಫೆಲೋಶಿಪ್ ನೀಡಲಾಗುತ್ತಿದೆ. ಗಾಂಧಿ ಮೌಲ್ಯಗಳನ್ನು ಸಾರುವುದೇ ಈ ಫೆಲೋಶಿಪ್ ಉದ್ದೇಶ.
4.ಗಾಂಧಿ ಸ್ಮರಣ ಕೇಂದ್ರ
ಅಮೆರಿಕದಲ್ಲಿನ ವಾಷಿಂಗ್ಟನ್ ಡಿಸಿಯಲ್ಲಿ ಈ ಕೇಂದ್ರವಿದ್ದು, ವರ್ಷವಿಡೀ ಗಾಂಧೀಜಿ ಹೆಸರಲ್ಲಿ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಅದರಲ್ಲೂ ವಿದ್ಯಾರ್ಥಿಗಳಿಗಾಗಿ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತವೆ.
5.ಮಹಾತ್ಮಾ ಗಾಂಧಿ ಪ್ರತಿಷ್ಠಾನ
ಕೊಲಂಬಿಯಾದಲ್ಲಿರುವ ಇದು ಗಾಂಧಿ ಮೌಲ್ಯಗಳು, ತಣ್ತೀಗಳನ್ನು ಯುವ ಜನತೆಗೆ ತಲುಪಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಅವರನ್ನು ಭವಿಷ್ಯದ ನಾಯಕರನ್ನಾಗಿ ಬೆಳೆಸುವ ಕೆಲಸ ಇದರದ್ದು.
6.ಜಾಗತಿಕ ಅಹಿಂಸೆ ಕುರಿತಾದ ಮಹಾತ್ಮಾ ಗಾಂಧಿ ಕೇಂದ್ರ
ಅಮೆರಿಕದ ವರ್ಜೀನಿಯಾದಲ್ಲಿರುವ ಜೇಮ್ಸ್ ಮೆಡಿಸನ್ ವಿಶ್ವವಿದ್ಯಾನಿಲಯದಲ್ಲಿ ಈ ಕೇಂದ್ರವಿದೆ. ಶಿಕ್ಷಣ, ಅಂತಾರಾಷ್ಟ್ರೀಯ ಮಾತುಕತೆ ಮತ್ತು ಯುವ ಜನತೆ ಕೇಂದ್ರಿತ ಕಾರ್ಯಕ್ರಮಗಳ ಮೂಲಕ ಗಾಂಧೀಜಿ ಸಿದ್ಧಾಂತ ಪಸರಿಸಿ, ಮನುಷ್ಯರ ನಡುವೆ ಪರಸ್ಪರ ಗೌರವ ಬೆಳೆಸುವುದು ಇದರ ಉದ್ದೇಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.