ಆಮ್ಲಜನಕ ಉತ್ಪಾದನ ಘಟಕ ಉದ್ಘಾಟನೆಗೆ ಸಿದ್ಧ
ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 1 ಕೋ.ರೂ. ವೆಚ್ಚದಲ್ಲಿ ಸ್ಥಾಪನೆ
Team Udayavani, Oct 5, 2021, 5:19 AM IST
ಪುತ್ತೂರು: ಕ್ಯಾಂಪ್ಕೋ ಪ್ರಾಯೋಜಕತ್ವದಲ್ಲಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 1 ಕೋ.ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದ ಆಕ್ಸಿಜನ್ ಉತ್ಪಾದನ ಘಟಕ ಕಾಮಗಾರಿ ಪೂರ್ಣಗೊಂಡಿದ್ದು ಅ. 6ರಂದು ಉದ್ಘಾಟನೆಗೊಳ್ಳಲಿದೆ.
ಕೋವಿಡ್ ಎರಡನೇ ಅಲೆ ಸಂದರ್ಭ ದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಬಳಕೆಯ ಪ್ರಮಾಣ ತೀವ್ರ ಗತಿಯಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಶಾಸಕರ ಮುತುವರ್ಜಿಯಿಂದ ತಾಲೂಕು ಆಸ್ಪತ್ರೆ ಯಲ್ಲಿ ಘಟಕ ನಿರ್ಮಿಸಲು ಉದ್ದೇ ಶಿಸಿತ್ತು. ಇದಕ್ಕೆ ಕ್ಯಾಂಪ್ಕೋ ಸಹಕಾರ ನೀಡಿತ್ತು.
ತಮಿಳುನಾಡಿನಿಂದ ಘಟಕ ಪೂರೈಕೆ
ತಮಿಳುನಾಡಿನ ಕೊಯಮತ್ತೂರಿನ ಸಮಿಟ್ಸ್ ಹೈಗ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಮೂಲಕ ಫ್ಲ್ಯಾಂಟ್ ತಯಾರಿ ಕೆಲಸ ನಡೆದಿದೆ. ಕಂಪೆನಿಯಲ್ಲಿಯೇ ನಿರ್ಮಾಣ ಕಾರ್ಯ ಆಗಿದ್ದು ಅಲ್ಲಿಂದ ಸೆ.1 ರಂದು ಘಟಕದ ಬಿಡಿಭಾಗಗಳನ್ನು ಪುತ್ತೂರಿಗೆ ತರಲಾಗಿತ್ತು. ಕಳೆದ ಒಂದು ತಿಂಗಳಿನಿಂದ ಸರಕಾರಿ ಆಸ್ಪತ್ರೆ ವಠಾರದಲ್ಲಿ ನಿಗದಿಪಡಿಸಲಾದ ಸ್ಥಳದಲ್ಲಿ ಅಳವಡಿಕೆ ಕಾರ್ಯ ಪ್ರಗತಿಯಲ್ಲಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡು ಬಳಕೆಗೆ ಸಿದ್ಧವಾಗಿದೆ.
ಕ್ಯಾಂಪ್ಕೋ ಕೊಡುಗೆ
ಈ ಘಟಕವನ್ನು ಕ್ಯಾಂಪ್ಕೋ ಸಂಸ್ಥೆ ನೀಡಿದೆ. ಮೇ 19 ರಂದು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಸುಮಾರು ನಾಲ್ಕು ತಿಂಗಳ ಬಳಿಕ ಘಟಕ ಲೋಕಾರ್ಪಣೆಗೆ ಸಿದ್ಧವಾಗಿದೆ.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 397 ಹೊಸ ಪ್ರಕರಣ ಪತ್ತೆ | 693 ಸೋಂಕಿತರು ಗುಣಮುಖ
ಆಮ್ಲಜನಕ ಉತ್ಪಾದನ ಸಾಮರ್ಥ್ಯ ಈ ಘಟಕದಲ್ಲಿ ಏರ್ ಕಂಪ್ರಸರ್, ಆಕ್ಸಿಜೆನ್ ಜನರೇಟರ್, ಟ್ಯಾಂಕ್ ಫಿಲ್ಟರ್ ಮತ್ತಿತರ ಸಾಮಗ್ರಿಗಳಿವೆ. ಪರಿಸರದ ಗಾಳಿಯನ್ನು ಶುದ್ಧೀಕರಿಸಿ ಶೇ. 96 ರಿಂದ ಶೇ.98 ಪರಿಶುದ್ಧತೆಯ ಆಮ್ಲಜನಕ ಒದಗಿಸುತ್ತದೆ. ಇಲ್ಲಿ ಮೆಡಿಕಲ್ ಗ್ರೇಡ್ ಪ್ರಮಾಣಪತ್ರ ಹೊಂದಿರುವ ಆಕ್ಸಿಜನ್ ದೊರೆಯಲಿದೆ. 100 ಕ್ಕಿಂತ ಅಧಿಕ ಜಂಬೋ ಸಿಲಿಂಡರ್‌ನಷ್ಟು ಗ್ಯಾಸ್ ರೂಪದ ಆಮ್ಲಜನಕವು ಇಲ್ಲಿ ದೊರೆಯಲಿದೆ. ಟ್ಯಾಂಕ್‌ನಲ್ಲಿ ಸಂಗ್ರಹಗೊಂಡ ಆಮ್ಲಜನಕವನ್ನು ರೆಡ್ನೂಸ್‌ಡ್ ಫ್ರೆಶರ್‌ನಲ್ಲಿ ಪ್ರತೀ ಬೆಡ್‌ಗೆ ಫ್ಲೋ ಮೀಟರ್ ಮೂಲಕ ಪೂರೈಸಲಾಗುತ್ತದೆ. ಪ್ರತೀ ಬೆಡ್‌ಗೆ ಅಗತ್ಯವಿರುವ ಹಾಗೆ ರೆಗ್ಯುಲೇಟರ್ ಅಳವಡಿಸಲಾಗುತ್ತದೆ. ನಿತ್ಯ ನಿರ್ವಹಣೆ ಬಗ್ಗೆ ಆಸ್ಪತ್ರೆ ಸಿಬಂದಿಗೆ ಕಂಪೆನಿ ತರಬೇತಿ ನೀಡುವ ಕಾರ್ಯ ನಡೆಯಲಿದೆ.
ನಾಳೆ ಲೋಕಾರ್ಪಣೆ
ನೂತನ ಆಕ್ಸಿಜನ್ ಉತ್ಪಾದನ ಘಟಕವನ್ನು ಸಚಿವ ಡಾ| ಕೆ.ಸುಧಾಕರ್ ಅ. 6ರಂದು ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸ ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಸಚಿವ ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಜಿಲ್ಲೆಯ ಶಾಸಕರು, ವಿವಿಧ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|ದೀಪಕ್ ರೈ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.