ಉತ್ತರಪ್ರದೇಶ: ಪ್ರಿಯಾಂಕಾ ವಾದ್ರಾ ಬಂಧನ
ಲಖೀಂಪುರ ಘರ್ಷಣೆ: ವಶದಲ್ಲಿದ್ದ ಅತಿಥಿಗೃಹವೇ ತಾತ್ಕಾಲಿಕ ಜೈಲು
Team Udayavani, Oct 6, 2021, 6:46 AM IST
ಲಕ್ನೋ/ಹೊಸದಿಲ್ಲಿ: ಉತ್ತರಪ್ರದೇಶದ ಲಖೀಂಪುರದಲ್ಲಿ ರೈತರು ಹಾಗೂ ಬಿಜೆಪಿ ನಡುವಿನ ಘರ್ಷಣೆಗೆ 9 ಮಂದಿ ಬಲಿಯಾದ ಘಟನೆಯು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾರನ್ನು ಬಂಧಿಸಲಾಗಿದೆ.
ಲಖೀಂಪುರ ಖೇರಿಗೆ ಭೇಟಿ ನೀಡಲು ಆಗಮಿಸುತ್ತಿದ್ದ ಪ್ರಿಯಾಂಕಾರನ್ನು ಉ.ಪ್ರದೇಶ ಪೊಲೀಸರು ವಶಕ್ಕೆ ಪಡೆದು ಅತಿಥಿಗೃಹದಲ್ಲಿ ಇರಿಸಿದ್ದರು. ಮಂಗಳವಾರ ಅವರ ವಿರುದ್ಧ ಪ್ರಕರಣ ದಾಖಲಿಸಿ, ಅವರಿದ್ದ ಅತಿಥಿಗೃಹವನ್ನೇ ತಾತ್ಕಾಲಿಕ ಜೈಲು ಎಂದು ಘೋಷಿಸಿ ಬಂಧಿಸಿದ್ದಾರೆ. ಶಾಂತಿಗೆ ಭಂಗ, ನಿಷೇಧಾಜ್ಞೆ ಉಲ್ಲಂಘನೆ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ.
ಪ್ರಿಯಾಂಕಾ ಮಾತ್ರವಲ್ಲದೇ ಕಾಂಗ್ರೆಸ್ ನಾಯಕರಾದ ದೀಪೇಂದ್ರ ಹೂಡಾ, ಅಜಯ್ ಕುಮಾರ್ ಲಲ್ಲು ಸೇರಿದಂತೆ 10 ಮಂದಿಯ ವಿರುದ್ಧ ಕೇಸು ದಾಖಲಾಗಿದೆ. ಇದರ ಬೆನ್ನಲ್ಲೇ ವೀಡಿಯೋ ಸಂದೇಶ ಕಳುಹಿಸಿರುವ ಪ್ರಿಯಾಂಕಾ, “ನನ್ನನ್ನು ವಶಕ್ಕೆ ಪಡೆದು 38 ಗಂಟೆಗಳು ಕಳೆದರೂ ನನಗೆ ನೋಟಿಸ್ ಆಗಲೀ, ಎಫ್ಐಆರ್ ಪ್ರತಿಯನ್ನಾಗಲೀ ನೀಡಿಲ್ಲ. ನನ್ನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿಲ್ಲ. ನನ್ನ ವಕೀಲರನ್ನು ಭೇಟಿಯಾಗಲೂ ಅವಕಾಶ ಕಲ್ಪಿಸುತ್ತಿಲ್ಲ. ನನ್ನನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ’ ಎಂದು ಆರೋಪಿಸಿದ್ದಾರೆ.
ಸಿಜೆಐಗೆ ಪತ್ರ: ಲಖೀಂಪುರ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಉತ್ತರಪ್ರದೇಶದ ವಕೀಲರು ಸುಪ್ರೀಂ ಕೋರ್ಟ್ ಸಿಜೆಐಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಕಲ್ಲಿದ್ದಲು ಕೊರತೆ: ಸಂಕಷ್ಟದಲ್ಲಿ ಇಂಧನ ಕ್ಷೇತ್ರ
2ನೇ ಬಾರಿ ಪರೀಕ್ಷೆಗೆ ಆಗ್ರಹ: ಮಂಗಳವಾರ ಮೂವರು ರೈತರ ಅಂತ್ಯಸಂಸ್ಕಾರ ನೆರವೇರಿದ್ದು, ಮತ್ತೂಬ್ಬ ರೈತರ ಮೃತದೇಹವನ್ನು 2ನೇ ಬಾರಿಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕೆಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ. ಗುರ್ವಿಂದರ್ ಸಿಂಗ್(22)ನನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಹೀಗಾಗಿ ದಿಲ್ಲಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಕುಟುಂಬ ಒತ್ತಾಯಿಸಿದೆ.
ವೀಡಿಯೋ ವೈರಲ್
ಲಖೀಂಪುರದಲ್ಲಿ ಪ್ರತಿಭಟನಕಾರ ರೈತರು ರಸ್ತೆಯಲ್ಲಿ ಸಾಗುತ್ತಿರುವಾಗ ವೇಗವಾಗಿ ಬರುವ ಕಾರು, ರೈತರ ಮೇಲೆಯೇ ಹತ್ತಿಕೊಂಡು ಹೋಗುತ್ತಿರುವ ದೃಶ್ಯವುಳ್ಳ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಕಾಂಗ್ರೆಸ್ ನಾಯಕರಾದ ರಾಹುಲ್‌ಗಾಂಧಿ, ಪ್ರಿಯಾಂಕಾ ಅವರೂ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸಂಸದ ವರುಣ್ ಗಾಂಧಿಯವರೂ ಟ್ವಿಟರ್‌ನಲ್ಲಿ ವೀಡಿಯೋ ಅಪ್‌ಲೋಡ್ ಮಾಡಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಬ್ಯುಸಿ ಇದ್ದೇವೆ, ಅದಕ್ಕೆ ಬಂಧಿಸಿಲ್ಲ!
“ನಾವು ರೈತರ ಮನವೊಲಿಸುವುದು, ಮರಣೋತ್ತರ ಪರೀಕ್ಷೆ ನಡೆಸುವುದರಲ್ಲೇ ಬ್ಯುಸಿಯಾಗಿದ್ದೇವೆ. ಹೀಗಾಗಿ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ’! ರೈತರ ಕೊಲೆ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂಬ ಪ್ರಶ್ನೆಗೆ ಉ. ಪ್ರದೇಶದ ಪೊಲೀಸ್ ಅಧಿಕಾರಿಗಳು ನೀಡಿದ ಉತ್ತರವಿದು. ನಾವು ಪ್ರತೀ ಪ್ರಕರಣದಲ್ಲೂ ಅದರದ್ದೇ ಆದ ಪ್ರಕ್ರಿಯೆಯನ್ನು ಪಾಲಿಸಬೇಕಾಗುತ್ತದೆ. ಈ ಪ್ರಕರಣದಲ್ಲೂ ಸರಿಯಾಗಿ ತನಿಖೆ ನಡೆಸುತ್ತೇವೆ ಎಂದೂ ಹೇಳಿದ್ದಾರೆ.
ನಾನು ಘಟನ ಸ್ಥಳದಲ್ಲಿ ಇರಲಿಲ್ಲ. 4 ಕಿ.ಮೀ. ದೂರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ನನ್ನ ತನಿಖೆ ನಡೆಸಲಿ, ಆಗ ಸತ್ಯ ಹೊರಬೀಳುತ್ತದೆ. ನನ್ನ ಜನರ ಮೇಲೆ ಹಲ್ಲೆಯಾಗಿದೆ. ನನ್ನ ಚಾಲಕನನ್ನು ಹೊಡೆದು ಕೊಲ್ಲಲಾಗಿದೆ.
-ಆಶಿಷ್ ಮಿಶ್ರಾ, ಕೇಂದ್ರ ಸಚಿವರ ಪುತ್ರ
ನನ್ನ ಸಹೋದರಿ ಪ್ರಿಯಾಂಕಾ ಧೈರ್ಯಗೆಡುವವಳಲ್ಲ. ಅವಳು ಸೋಲನ್ನು ಒಪ್ಪಿಕೊಳ್ಳದ ನೈಜ ಕಾಂಗ್ರೆಸಿಗಳು. ಸತ್ಯಾಗ್ರಹವು ಅಂತ್ಯವಾಗದು.
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಏರ್‌ಪೋರ್ಟ್‌ನಲ್ಲೇ ಧರಣಿ!
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಂಗಳವಾರ ಪ್ರಿಯಾಂಕಾರನ್ನು ಭೇಟಿ ಮಾಡಲೆಂದು ಆಗಮಿಸುತ್ತಿದ್ದಾಗ ಅವರನ್ನು ಪೊಲೀಸರು ಏರ್‌ಪೋರ್ಟ್‌ನಲ್ಲೇ ತಡೆದಿದ್ದಾರೆ. ನಾನು ಲಖೀಂಪುರಕ್ಕೆ ಹೋಗುತ್ತಿಲ್ಲ. ಪಕ್ಷದ ಕಚೇರಿಗೆ ತೆರಳುತ್ತಿದ್ದೇನೆ. ನನ್ನನ್ನೇಕೆ ತಡೆಯುತ್ತೀರಿ ಎಂದು ಬಘೇಲ್ ಪ್ರಶ್ನಿಸಿದ್ದಾರೆ. ಜತೆಗೆ, ಏರ್‌ಪೋರ್ಟ್‌ನೊಳಗೇ ಕುಳಿತು ಧರಣಿ ಆರಂಭಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಉತ್ತರ ಪ್ರದೇಶದ ಲಖೀಂಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.