![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 16, 2021, 4:22 PM IST
ಮಂಡ್ಯ: ನಗರದ ಸರ್ಕಾರಿ ಮಹಾವಿದ್ಯಾಲಯ ಸಂಪೂರ್ಣ ಮಂಡ್ಯ ವಿಶ್ವವಿದ್ಯಾಲಯವಾಗಿದ್ದರೂ ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿದ್ದಲ್ಲ ಎನ್ನುವಂತಾಗಿದೆ. ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ವಿಳಂಬ ಮಾಡಿ ರುವುದರಿಂದ ತೊಂದರೆ ಅನುಭವಿಸುವಂತಾಗಿದೆ. ಮಂಡ್ಯ ವಿಶ್ವವಿದ್ಯಾಲಯವಾಗಿ ಘೋಷಣೆಯಾದ ಬಳಿಕ ಸಾಕಷ್ಟು ಸಮಸ್ಯೆಗಳನ್ನು, ಅವಾಂತರಗಳು ಸೃಷ್ಟಿಯಾಗಿದ್ದವು.
ಇದರಿಂದ ವಿವಿಯಡಿಯಲ್ಲಿಯೇ ಪ್ರವೇಶ ಪಡೆದಿದ್ದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿಭಟನೆ, ಹೋರಾಟ ಮಾಡಿ ಕೊಂಡೇ ವಿದ್ಯಾಭ್ಯಾಸ ಮಾಡುವಂತಾಗಿತ್ತು. ನಂತರ ಕುಲಪತಿ ನೇಮಕ ಮಾಡಿದ್ದರೂ ಕೆಲವು ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ.
ಅಂಕಪಟ್ಟಿ ನೀಡಲು ವಿಳಂಬ: ವಿಶ್ವವಿದ್ಯಾಲಯದಡಿ ಯಲ್ಲಿಯೇ ಮೊದಲ ಬಾರಿಗೆ ಪ್ರವೇಶ ಪಡೆದಿದ್ದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮೊದಲ ಸೆಮಿ ಸ್ಟರ್ ಸೇರಿದಂತೆ ಮೂರು ಸೆಮಿಸ್ಟರ್‌ಗಳ ಪರೀಕ್ಷೆ ಬರೆದು, ಫಲಿತಾಂಶ ಬಿಡುಗಡೆಗೊಂಡು ಆರೇಳು ತಿಂಗಳು ಕಳೆದರೂ ಅಂಕಪಟ್ಟಿ ವಿತರಿಸಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆ ಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ನಾಲ್ಕನೇ ಸೆಮಿಸ್ಟರ್ ಫಲಿತಾಂಶವಿಲ್ಲ: ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ನಡೆದು ನಾಲ್ಕೈದು ತಿಂಗಳು ಕಳೆ ದರೂ ಫಲಿತಾಂಶ ಬಿಡುಗಡೆ ಮಾಡಿಲ್ಲ. ಇದು ಸಹ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದೆ. ವಿಶ್ವವಿದ್ಯಾ ಲಯವಾದಾಗಿನಿಂದಲೂ ಒಂದಲ್ಲ, ಒಂದು ಸಮಸ್ಯೆ ಯಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸು ವಂತಾ ಗಿದೆ ಎಂದು ವಿದ್ಯಾರ್ಥಿಗಳು ಉದಯವಾಣಿ ಯೊಂದಿಗೆ ಅಳಲು ತೋಡಿಕೊಂಡರು.
ವಿದ್ಯಾರ್ಥಿ ವೇತನಕ್ಕೆ ತೊಂದರೆ: ಅಂಕಪಟ್ಟಿ ನೀಡಲು ವಿಳಂಬ ಮಾಡುತ್ತಿರುವುದರಿಂದ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಬಿಎಡ್, ಪಿಎಚ್‌ಡಿ ವಿದ್ಯಾಭ್ಯಾಸಕ್ಕೆ ತೊಂದರೆ ಯಾಗಿದೆ. ಈಗಾಗಲೇ ಬಿಎಡ್ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆಯಲು ಕೊನೆಯ ದಿನಾಂಕ ಮುಗಿದಿದೆ. ಇನ್ನೂ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಕೆಗೆ ಇದೇ ತಿಂಗಳು 30ಕ್ಕೆ ಕೊನೆ ದಿನವಾಗಿದೆ. ಪಿಎಚ್‌ಡಿ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ಅ.25 ಕೊನೆ ದಿನವಾಗಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ನ.8 ಕೊನೆ ದಿನವಾಗಿದೆ.
ಆದರೆ, ಇದಕ್ಕೆಲ್ಲ ಅರ್ಜಿ ಸಲ್ಲಿಸಲು ಅಂಕಪಟ್ಟಿ ಅವಶ್ಯಕತೆಯಾಗಿದೆ. ಅಂಕಪಟ್ಟಿ ನೀಡುವಂತೆ ಆಗ್ರಹ: ಮೂರು ಸೆಮಿಸ್ಟರ್ ಗಳ ಪರೀಕ್ಷೆ ನಡೆದು ಫಲಿತಾಂಶ ಬಂದಿದ್ದರೂ ಅಂಕ ಪಟ್ಟಿ ನೀಡಲು ವಿಳಂಬ ಮಾಡುತ್ತಿರುವುದರಿಂದ ಮುಂದಿನ ವಿದ್ಯಾಭ್ಯಾಸ ಹಾಗೂ ವಿವಿಧ ಸೌಲಭ್ಯಗಳಿಗೆ ಅರ್ಜಿ ಹಾಕಲು ಅಂಕಪಟ್ಟಿ ಅವಶ್ಯಕವಾಗಿದೆ.
ಆದ್ದರಿಂದ ಕೂಡಲೇ ಅಂಕಪಟ್ಟಿ ವಿತರಿಸಬೇಕು. ಅಲ್ಲದೆ, ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಬೇಕು. ಇದರ ಬಗ್ಗೆ ಹಲವಾರು ಮನವಿ ಮಾಡಿ ದರೂ ಉಪಕುಲಪತಿ ಸೇರಿದಂತೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾ ನಿರ್ಲಕ್ಷ್ಯ ವಹಿಸುತ್ತಾರೆ. ಅಲ್ಲದೆ, ಪ್ರಶ್ನೆ ಮಾಡುವ ವಿದ್ಯಾರ್ಥಿಗಳಿಗೆ ಅಂಕ ಕಡಿತಗೊಳಿಸುವ ಬೆದರಿಕೆ ಹಾಕುತ್ತಾರೆ ಎಂದು ಹೆಸರೇಳದ ವಿದ್ಯಾರ್ಥಿಗಳು ಆರೋಪಿಸಿದರು.
ಹೋರಾಟದ ವಿದ್ಯಾಭ್ಯಾಸ-
ಮಂಡ್ಯ ವಿಶ್ವವಿದ್ಯಾಲಯವಾಗಿ ಘೋಷಣೆಯಾದ ನಂತರ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಭಾವಿಸಲಾಗಿತ್ತು. ವಿವಿಯಡಿ ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ನಾತಕ ಹಾಗೂ ಸ್ನಾತಕೋತ್ತರ ಪ್ರವೇಶ ಪಡೆದಿದ್ದರು. ನಂತರ ವಿಶೇಷಾಧಿಕಾರಿ ಎಡವಟ್ಟು ಹಾಗೂ ಅಧಿಕಾರಿಗಳು, ಉಪನ್ಯಾಸಕರ ಗುಂಪುಗಾರಿಕೆಯಿಂದ ಮೊದಲ ಸೆಮಿಸ್ಟರ್ ಪರೀಕ್ಷೆಗೆ ಅಡ್ಡಿಯುಂಟಾಯಿತು. ಸರ್ಕಾರಿ ಮಹಾವಿದ್ಯಾಲಯದಡಿಯಲ್ಲಿಯೇ ಪರೀಕ್ಷೆ ಬರೆಯುವಂತೆ ಸೂಚಿಸಲಾಗಿತ್ತು. ಆಗಲೂ ಹೋರಾಟ ಮಾಡಿ ವಿವಿಯಡಿಯಲ್ಲಿಯೇ ಪರೀಕ್ಷೆ ಬರೆಯಬೇಕಾಯಿತು. ನಂತರ ವಿದ್ಯಾರ್ಥಿ ವೇತನಕ್ಕೂ ಹೋರಾಟ ಮಾಡಬೇಕಾಯಿತು. ಈಗ ಅಂಕಪಟ್ಟಿ ಪಡೆಯಲು ಪರದಾಡಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಸಂಪೂರ್ಣವಾಗಿ ಮಂಡ್ಯ ವಿಶ್ವವಿದ್ಯಾಲಯವಾಗಿರುವುದರಿಂದ ತಮ್ಮದೇ ಆದ ವಿವಿಯ ಚಿಹ್ನೆ ಪಡೆಯಬೇಕಾಗಿದೆ. ಅದರ ವಿನ್ಯಾಸ ಪೂರ್ಣಗೊಳಿಸಿ, ನಂತರ ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿದೆ. ನಂತರ ಆ ಚಿಹ್ನೆಯಡಿ ಅಂಕಪಟ್ಟಿ ಮುದ್ರಣ ಮಾಡಿ ವಿತರಿಸಬೇಕಾಗಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ಇನ್ನೊಂದು ವಾರದೊಳಗೆ ಅಂಕಪಟ್ಟಿ ವಿತರಿಸಲು ಕ್ರಮ ವಹಿಸಲಾಗುವುದು. –ಡಾ.ಪುಟ್ಟರಾಜು, ಕುಲಪತಿ, ಮಂಡ್ಯ ವಿಶ್ವವಿದ್ಯಾಲಯ
● ಎಚ್.ಶಿವರಾಜು
You seem to have an Ad Blocker on.
To continue reading, please turn it off or whitelist Udayavani.