ಸೋಲಿಸಿದವನ ಬಳಿಯೇ ಶರಣಾಗಿದ್ದೀಯ: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್
ನೀನು ಯಾವ ಸೀಮೆ ನಾಯಕ?
Team Udayavani, Oct 25, 2021, 1:38 PM IST
ಮೈಸೂರು: ”ಬಾದಾಮಿಯಲ್ಲಿ 1600 ಓಟಿನಿಂದ ಗೆಲ್ಲದೇ ಹೋಗಿದ್ದರೆ ಸಿದ್ದರಾಮಯ್ಯ ಏನಾಗುತ್ತಿದ್ದರು, ಕಾಟೂರ್ ಫಾರಂ ಅಥವಾ ಸಿದ್ದರಾಮನ ಹುಂಡಿಗೆ ಹೋಗಿ ಹೊಲ ಉಳಬೇಕಾಗಿತ್ತು,ಇಲ್ಲವಾದರೆ ವಿಜಯನಗರ ಮನೆಯಲ್ಲಿ ಕಾಲ ಕಳೆಯಬೇಕಾಗಿತ್ತು” ಎಂದು ಸೋಮವಾರ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀನಿವಾಸ ಪ್ರಸಾದ್, ”ಸಿದ್ದರಾಮಯ್ಯ ಯಾವ ಸೀಮೆ ಯಾವ ನಾಯಕ. ಹೀನಾಯವಾಗಿ ಸೋಲಿಸಿದವನ (ಜಿ.ಟಿ.ದೇವೇಗೌಡ) ಬಳಿಯೇ ಶರಣಾಗಿದ್ದೀಯ.ಮೂಲ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಪಕ್ಷಕ್ಕೆ ಕರೆತರುತ್ತಿದ್ದೀಯ. ಅವನನ್ನೇ ನಮ್ಮ ನಾಯಕ ಅಂತ ಒಪ್ಪಿಕೊಂಡಿರುವ ನೀನು ಯಾವ ಸೀಮೆ ನಾಯಕ” ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ”ಇದು ಸಿದ್ದರಾಮಯ್ಯನ ಪಲಾಯನವಾದ. ನಂಜನಗೂಡು, ಗುಂಡ್ಲುಪೇಟೆ ಬೈ ಎಲೆಕ್ಷನ್ ನಲ್ಲಿ ಸಿದ್ದರಾಮಯ್ಯ ಸರಕಾರ ಏನು ಮಾಡಿತು ಎನ್ನುವುದು ಎಲ್ಲರಿಗೂ ಗೊತ್ತಿದೆ, ಸರಕಾರದ ಆಡಳಿತ ಯಂತ್ರವನ್ನು ಅತೀ ಹೆಚ್ಚು ದುರ್ಬಳಕೆ ಮಾಡಿಕೊಂಡರು. ನನ್ನ ವಿರುದ್ದ ಕಾಂಗ್ರೆಸ್ ಗೆ ಅಭ್ಯರ್ಥಿಯೇ ಇರಲಿಲ್ಲ. ಆಗ ಇದೇ ಜೆಡಿಎಸ್ ನವರು ನನ್ನ ವಿರುದ್ದ ಅಭ್ಯರ್ಥಿಯನ್ನೇ ಹಾಕಲಿಲ್ಲ,ಕಾಂಗ್ರೆಸ್ ಜೊತೆ ಕೈಜೋಡಿಸಿದರು. ವಿವಿಧ ನಿಗಮಗಳಿಂದ ಕ್ಷೇತ್ರದ ಮತದಾರರಿಗೆ ಕೋಟಿಗಟ್ಟಲೆ ಸಾಲದ ಆಮಿಷ ಒಡ್ಡಿದರು. ನೂರಾರು ಕೋಟಿ ರೂ. ತುಂಡು ಗುತ್ತಿಗೆ ನೀಡಿ ಕಾಮಗಾರಿ ಮಾಡಿದರು.
ಸೋತು ಸುಣ್ಣವಾಗಿರೋ ಕಾಂಗ್ರೆಸ್ಸಿಗರು ಆಡಳಿತದಲ್ಲಿದ್ದಾಗ ಏನೆಲ್ಲಾ ಮಾತನಾಡಿದರು, ಈಗ ಬಿಜೆಪಿ ವಿರುದ್ದ ಮಾತನಾಡುತ್ತಾರೆ” ಎಂದು ಕಿಡಿ ಕಾರಿದರು.
”ವಿರೋಧ ಪಕ್ಷದವರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ತಾಕತ್ತಿದ್ದರೆ, ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿ ನೋಡೋಣ. ನೀವು ಎಂದಾದರೂ ಪಕ್ಷೇತರವಾಗಿ ನಿಂತು ಗೆದ್ದಿದ್ಷೀರಾ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರಿಗೆ ಭಾಷೆ ಮೇಲೆ ಹಿಡಿತವೇ ಇಲ್ಲ. ಪ್ರಧಾನಿ ಬಗ್ಗೆ ಹಗುರ ಮಾತು, ತಾಲಿಬಾನ್ ಆಡಳಿತವನ್ನು ಹೋಲಿಸುವುದು ಇದೆಲ್ಲಾ ಎಂಥಾ ಮಾತು. ದೇಶದ ಪ್ರಧಾನಿ ಹುದ್ದೆ ಅಂದರೆ ಏನು ಅನ್ನೋದೆ ಸಿದ್ದರಾಮಯ್ಯ ಗೆ ಗೊತ್ತಿಲ್ಲ. 1984ರ ನಂತರ ಕೇಂದ್ರದಲ್ಲಿ ಸುಭದ್ರ ಸರಕಾರವೇ ಇರಲಿಲ್ಲ. ಮೋದಿ ಅವರಿಂದಾಗಿ ಕೇಂದ್ರದಲ್ಲಿ ಸುಭದ್ರ ಸರ್ಕಾರ ಬಂದಿದೆ. ಮೋದಿಯವರು ರಾಷ್ಟ್ಟ ಮಟ್ಟದ ರಾಜಕಾರಣದಲ್ಲಿ ಇರಲೇ ಇಲ್ಲ. ಅವರನ್ನು ಬಿಜೆಪಿ ಪ್ರಮೋಟ್ ಮಾಡಿ ಪ್ತಧಾನಿ ಮಾಡಿದೆ. ಅದಕ್ಕೆ ತಕ್ಕಂತೆ ಮೋದಿಯವರು ವಿಶ್ವ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಇಂತಹವರ ಬಗ್ಗೆ ಲಘು ಮಾತು ನಿಜಕ್ಕೂ ನನಗೆ ಬೇಸರ ಮೂಡಿಸಿದೆ” ಎಂದರು.
ಜೆಡಿಎಸ್ ಪಾರ್ಟಿಯಲ್ಲ, ಅದು ಕಂಪನಿ
”ಪ್ರಜ್ವಲ್, ನಿಖಿಲ್, ಭವಾನಿ, ಅನಿತಾ ನೀವೇ ಇದ್ದರೆ ಅದನ್ನು ಪಕ್ಷ ಅನ್ನುವುದಿಲ್ಲ, ಕಂಪನಿ ಅಂತಾರೆ. ಕುಮಾರಸ್ವಾಮಿ ತಮ್ಮ ಇತಿಮಿತಿ ಅರಿತು ಮಾತನಾಡಲಿ, ಯಾವಾಗವಾದರೂ ಎರಡನೇ ಸ್ಥಾನ ಬಂದಾದರೂ ಸಿಎಂ ಆಗಿದ್ದಾರಾ? ಮೂರನೇ ಸ್ಥಾನ ತೆಗೆದುಕೊಂಡು ಎರಡು ಬಾರಿ ಸಿಎಂ ಆದವರು, ಇನ್ನು ದೇವೇಗೌಡರು ರಾಜ್ಯದಲ್ಲಿ ಅತಂತ್ರ ಸರಕಾರ ಬರುವುದಕ್ಕೆ ಕಾರ್ಯ ತಂತ್ರ ರೂಪಿಸುತ್ತಲೇ ಇರುತ್ತಾರೆ” ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.