ಎಲ್ಲದಕ್ಕಿಂತ ಹೆಚ್ಚಾಗಿ ಪುನೀತ್ ಒಳ್ಳೆಯ ವ್ಯಕ್ತಿ: ನಟ ಸುದೀಪ್
Team Udayavani, Oct 31, 2021, 6:10 AM IST
ಪುನೀತ್ ಅಗಲಿಕೆ ತುಂಬಲಾರದ ನಷ್ಟ. ಚಿಕ್ಕವಯಸ್ಸಿನಲ್ಲಿಯೇ ಅವರ ಸಿನಿಮಾ ಪ್ರಯಾಣ ಶುರುವಾಗಿತ್ತು. ಶಿವಮೊಗ್ಗದಲ್ಲಿ ನಾನು ಅವರನ್ನು ಮೊದಲ ಬಾರಿಗೆ ಭೇಟಿ ಮಾಡುವ ಮೊದಲೇ ಅವರು ಸ್ಟಾರ್ ಆಗಿಬಿಟ್ಟಿದ್ದರು. ನಾನು ಅಪ್ಪುವನ್ನು ಮೊದಲಿಗೆ ನೋಡಿದ್ದು, “ಭಾಗ್ಯವಂತ’ ಸಿನಿಮಾದ ಯಶಸ್ಸಿನ ಪ್ರವಾಸಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದಾಗ. ಸಿನಿಮಾ ರಂಗದವರೊಂದಿಗೆ ನನ್ನ ತಂದೆ ಆತ್ಮೀಯರಾಗಿದ್ದರಿಂದ, ಚಿತ್ರಮಂದಿರ ಭೇಟಿ ಬಳಿಕ ನಮ್ಮ ಮನೆಗೆ ಊಟಕ್ಕೆಂದು ಪುನೀತ್ ಅವರನ್ನ ಕರೆದುಕೊಂಡು ಬರಲಾಗಿತ್ತು. ಅವರ ಜೊತೆಗೆ ಇನ್ನೂ ಕೆಲವರು ಬಂದಿದ್ದರು. ಆಗಲೇ ನಾವಿಬ್ಬರೂ ಮೊದಲ ಬಾರಿ ಭೇಟಿಯಾಗಿದ್ದೆವು.
ನಾವಿಬ್ಬರೂ ಬಹುತೇಕ ಒಂದೇ ವಯಸ್ಸಿನವರಾಗಿದ್ದರಿಂದ, ಮೊದಲ ಭೇಟಿಯಲ್ಲೇ ಆತ್ಮೀಯರಾದೆವು. ಅಪ್ಪು ನಮ್ಮ ಮನೆಗೆ ಬಂದಿದ್ದಾಗ ಊಟಕ್ಕಿಂತಲೂ ಹೆಚ್ಚಾಗಿ, ನನ್ನ ಬಳಿ ಇದ್ದ ಆಟಿಕೆಗಳ ಮೇಲೆ ಅವನ ಗಮನ ಹೆಚ್ಚಾಗಿ ಇತ್ತು. ಅಪ್ಪು ಜೊತೆಗೆ ಬಂದಿದ್ದ ಮಹಿಳೆಯಂತೂ ಅಪ್ಪು ಹಿಂದೆ ಸುತ್ತುತ್ತ ಊಟ ಮಾಡಿಸಲು ಯತ್ನಿಸುತ್ತಿದ್ದಿದ್ದು ಇಂದಿಗೂ ನನಗೆ ನೆನಪಿದೆ. ನಾವಿಬ್ಬರೂ ಅಂದು ಬಹಳ ಆಟವಾಡಿ ಖುಷಿಯಾಗಿದ್ದೆವು. ಪುನೀತ್ ನಮ್ಮ ಮನೆಗೆ ಬಂದ ದಿನ ಅಕ್ಕಪಕ್ಕದ ಮಕ್ಕಳು ಸೇರಿದಂತೆ ಸಾಕಷ್ಟು ಜನ ಅವರನ್ನು ನೋಡಲು ನಮ್ಮ ಮನೆಯ ಸುತ್ತ ಸೇರಿದ್ದರು. ಯಾಕಂದ್ರೆ, ಅವರು ಲೆಜೆಂಡ್ ಡಾ| ರಾಜ ಕುಮಾರ್ ಅವರ ಪುತ್ರ. ಪುನೀತ್ ಅದಾಗಲೇ ಸ್ಟಾರ್ ಆಗಿದ್ದವರು. ಆ ಸ್ಟಾರ್ ಹುಡುಗನನ್ನು ನೋಡಲು ಜನ ನಮ್ಮ ಮನೆಯ ಸುತ್ತಮುತ್ತ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
ಇದಾದ ನಂತರ ನಾವು ಕೆಲವು ಬಾರಿ ಭೇಟಿಯಾದೆವು. ಆ ನಂತರ ನಾವಿಬ್ಬರೂ ಒಂದೇ ಸಿನಿಮಾ ರಂಗದಲ್ಲಿ ನಟಿಸುತ್ತ ಸಹೋದ್ಯೋಗಿಗಳಾದೆವು. ಪುನೀತ್ ನನಗೆ ಒಳ್ಳೆಯ ಗೆಳೆಯ ಮಾತ್ರವಲ್ಲದೆ, ಒಳ್ಳೆಯ ಪ್ರತಿಸ್ಪರ್ಧಿಯೂ ಆಗಿದ್ದರು. ಪುನೀತ್ ನೀಡುತ್ತಿದ್ದ ಸ್ಪರ್ಧೆ ನನಗೆ ಬಹಳ ಇಷ್ಟವಾಗುತ್ತಿತ್ತು, ಅದರಿಂದಾಗಿ ನಾನೂ ಸಹ ಒಳ್ಳೆಯ ಸಿನಿಮಾಗಳನ್ನು ಮಾಡಲು ಸಾಧ್ಯವಾಯಿತು. ಪುನೀತ್ ಒಳ್ಳೆಯ ನಟ, ಅತ್ಯುತ್ತಮ ಡ್ಯಾನ್ಸರ್, ಫೈಟರ್ ಎಲ್ಲದಕ್ಕಿಂತ ಹೆಚ್ಚಾಗಿ ಒಳ್ಳೆಯ ವ್ಯಕ್ತಿ. ಪುನೀತ್ ಅವರಿದ್ದ ಕಾಲದಲ್ಲಿಯೇ ನಾನು ನಟನಾಗಿ ಬಂದಿರುವುದಕ್ಕೆ ನನಗೆ ಹೆಮ್ಮೆ ಇದೆ.
ಇದನ್ನೂ ಓದಿ:ಪುನೀತ್ ಅಂತಿಮ ನಮನ : ಪುತ್ರಿಯ ಕಂಡು ಕಂಠೀರವದಲ್ಲಿ ಕಣ್ಣೀರ ಕೋಡಿ
ಇಂದು ಅವರಿಲ್ಲದೆ ಚಿತ್ರರಂಗ ಅಪೂರ್ಣವಾಗಿದೆ. ಸಮಯ ಬಹಳ ಕ್ರೂರಿ ಎನಿಸುತ್ತಿದೆ. ಪ್ರಕೃತಿ ಕೂಡ ಸಂತಾಪ ಸೂಚಿಸಿ ಅಳುತ್ತಿದೆ. ಇಡೀ ದಿನ ಶೋಕದಿಂದ ಕೂಡಿದೆ. ಕಪ್ಪು ಮೋಡಗಳು ಕವಿದು ದಿನವನ್ನು ಖೇದ ಕರಗೊಳಿಸಿವೆ. ಬೆಂಗಳೂರಿಗೆ ಬಂದಿಳಿದು ಪುನೀತ್ ಅವರನ್ನು ಮಲಗಿಸಿದ್ದ ಕಡೆಗೆ ಹೋಗುತ್ತಿದ್ದಾಗ, ನನ್ನ ಉಸಿರಾಟ ನನಗೆ ಅರಿವಿಲ್ಲದಂತೆ ಭಾರವಾಗತೊಡಗಿತು. ನಾನು ವಾಸ್ತವದ ಕಡೆಗೆ ಸಾಗುತ್ತಿದ್ದರೂ, ಅದನ್ನು ಒಪ್ಪಿಕೊಳ್ಳಲು ಮನಸ್ಸು ತಯಾರಿರಲಿಲ್ಲ.
ಪುನೀತ್ ಹಾಗೆ ಮಲಗಿರುವುದು ನೋಡಿ ಅಲ್ಲಿದ್ದ ಎಲ್ಲರಿಗೂ ಬೆಟ್ಟವನ್ನೇ ಎದೆಯ ಮೇಲೆ ಹೊತ್ತಂತ ಅನುಭವ ಆಗುತ್ತಿತ್ತು. ಏಕೆ ಹೀಗಾಯ್ತು? ಹೇಗಾಯ್ತು ಎಂಬ ಪ್ರಶ್ನೆಗಳು ಎಲ್ಲರ ಮನದಲ್ಲಿದ್ದವು. ನನ್ನ ಗೆಳೆಯ, ನನ್ನ ಸಹೋದ್ಯೋಗಿ ಪುನೀತ್…ಆತ ಇರಬಾರದ ಸ್ಥಿತಿಯಲ್ಲಿದ್ದ. ಅವರನ್ನ ಹೆಚ್ಚು ಹೊತ್ತು ನನ್ನಿಂದ ನೋಡಲು ಸಾಧ್ಯವಾಗಲಿಲ್ಲ. ಆ ನೋಟ ನನಗಿನ್ನೂ ಕಾಡುತ್ತಲೇ ಇದೆ.
ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡಿದ್ದು ಇನ್ನೂ ನೋವಾಯಿತು. “ಪುನೀತ್ ನನಗಿಂತ 13 ವರ್ಷ ಚಿಕ್ಕವನು. ಇದೇ ತೋಳಲ್ಲಿ ಅವನನ್ನ ಎತ್ತಿ ಆಡಿಸಿದ್ದೇನೆ. ನಾನು ಇಲ್ಲಿಯವರೆಗೂ ಸಾಕಷ್ಟು ನೋಡಿದ್ದೇನೆ. ನಾನು ಇನ್ನೇನು ನೋಡೋಕೆ ಇದೆ’ ಅಂತ ಶಿವಣ್ಣ ನನಗೆ ಹೇಳಿದರು. ಆ ಮಾತು ಈಗಲೂ ನನ್ನನ್ನ ಕಾಡುತ್ತಿದೆ. ಎಲ್ಲರಿಗೂ ತೀವ್ರ ಆಘಾತವಾಗಿದೆ. ಯಾರಿಗೂ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಎಲ್ಲರಿಗೂ ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಪುನೀತ್ ಅಗಲಿಕೆಯಿಂದ ಖಾಲಿಯಾಗಿರುವ ಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವಿಲ್ಲ. ಆ ಸ್ಥಾನ ಕೇವಲ ಪುನೀತ್ ಎಂಬ ಅದ್ಭುತ ಮನುಷ್ಯನಿಗಾಗಿ ಮಾತ್ರವೇ ಮೀಸಲು. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.