![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Nov 1, 2021, 12:15 PM IST
ಬೀದರ: ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತ ನೂತನ ಸಾಧ್ಯತೆಗಳನ್ನು ಕಂಡುಕೊಳ್ಳುವ ರೈತರ ಸಂಖ್ಯೆ ಈಗ ಹೆಚ್ಚುತ್ತಿದೆ. ಹೀಗೆ ವಿಭಿನ್ನವಾಗಿ ಯೋಚನೆ ಮಾಡಿ ಕೃಷಿಯಲ್ಲಿ ಯಶಸ್ಸು ಕಂಡಿರುವ ಜಿಲ್ಲೆಯ ಪ್ರಗತಿಪರ ರೈತರೊಬ್ಬರು ರಾಜ್ಯ ಸರ್ಕಾರದ ಅತ್ಯುನ್ನತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದ ಗುರುಲಿಂಗಪ್ಪ ಮೇಲ್ಡೊಡ್ಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಪ್ರಗತಿಪರ ರೈತ. ಸಾವಯವ ಕೃಷಿ ಪದ್ಧತಿಯಡಿ ತೊಗರಿ ಬೆಳೆ ಉತ್ಪಾದನೆ (ಸಸಿ ನಾಟಿ ಪದ್ಧತಿ)ಯಲ್ಲಿನ ಸಾಧನೆಗೆ ಈ ಪ್ರಶಸ್ತಿ ಒಲಿದಿದೆ.
ಕೃಷಿಯಲ್ಲಿ ವಿಶೇಷತೆಗಳೇನು?
20 ಎಕರೆ ಜಮೀನು ಹೊಂದಿರುವ ರೈತ ಗುರುಲಿಂಗಪ್ಪ ಕಳೆದ 21 ವರ್ಷಗಳಿಂದ ನೈಸರ್ಗಿಕ ಕೃಷಿ ಅನುಸರಿಸಿ ಪ್ರಗತಿಪರ ಎನಿಸಿಕೊಂಡಿದ್ದಾರೆ. ಹತ್ತು ವರ್ಷಗಳಿಂದ ತೊಗರಿ ಬೆಳೆಯಲ್ಲಿ ಸಸಿ ನಾಟಿ ಪದ್ಧತಿ ಸೇರಿ ವಿಶೇಷ ಕ್ರಮ ಕೈಗೊಳ್ಳುವ ಮೂಲಕ ಕಡಿಮೆ ವೆಚ್ಚದಲ್ಲಿ ಅಧಿಕ ಬೆಳೆ ಉತ್ಪಾದನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೈ-ಕ ಭಾಗದಲ್ಲಿ ಎಕರೆಗೆ ಮೂರ್‍ನಾಲ್ಕು ಕೆ.ಜಿ ತೊಗರಿ ಬೀಜ ಬಿತ್ತನೆ ಮಾಡಿ ಗರಿಷ್ಠ ಎಂಟು ಕ್ವಿಂಟಲ್‌ವರೆಗೆ ತೊಗರಿ ಬೆಳೆಯಲಾಗುತ್ತಿದೆ. ಆದರೆ, ರೈತ ಗುರುಲಿಂಗಪ್ಪ ಎಕರೆಗೆ 16 ರಿಂದ 18 ಕ್ವಿಂ. ತೊಗರಿ ಬೆಳೆದಿದ್ದಾರೆ. ಇದಕ್ಕಾಗಿ ಕೇವಲ 600 ಗ್ರಾಂ. ಬೀಜ ಬಳಸುತ್ತಾರೆ. ಸಸಿ ನಾಟಿ ಪದ್ಧತಿ, ಹನಿ ನೀರಾವರಿ ಮತ್ತು “ಸಾಲದಿಂದ ಸಾಲ- ಸಸಿಯಿಂದ ಸಸಿ’ ಅಂತರ ಅನುಕರಣೆ ಮಾಡುತ್ತಿರುವುದು ಹೆಚ್ಚು ಉತ್ಪಾದನೆ ಸಾಧ್ಯವಾಗುತ್ತಿದೆ. ನಾಟಿಯಲ್ಲಿ ಅಂತರದಿಂದ ಸೂರ್ಯನ ಕಿರಣಗಳು ಗಿಡದ ಮೇಲೆ ಬಿದ್ದು ಹೆಚ್ಚು ಹೂವು, ಕಾಯಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಅನುಭವ ಮಾತು. ಇನ್ನು ಗುರುಲಿಂಗಪ್ಪ, ತೊಗರಿ ಜತೆಗೆ ಉದ್ದು, ಹೆಸರು ಹಾಗೂ ಕಬ್ಬು, ಪೆರಲ, ಲಿಂಬು, ಶುಂಠಿಯಂಥ ತೋಟಗಾರಿಕೆ ಬೆಳೆ ಸಹ ಬೆಳೆಯುತ್ತಾರೆ.
ಪಿಯುಸಿ (ವಿಜ್ಞಾನ) ಓದಿಕೊಂಡಿರುವ ಗುರುಲಿಂಗಪ್ಪ ಅವರು ಬೀದರ ಕೆವಿಕೆಯಲ್ಲಿ ನಡೆದಿದ್ದ ತೊಗರಿ ಬೆಳೆಯಲ್ಲಿ ನಾಟಿ ಪದ್ಧತಿ ಕುರಿತು ಕಾರ್ಯಾಗಾರದಲ್ಲಿ ಪ್ರಭಾವಿತರಾಗಿ, ತಮ್ಮ ಜಮೀನಿನಲ್ಲಿ ಇನ್ನಷ್ಟು ಆಧುನಿಕ ಪದ್ಧತಿ ಸೇರಿಸಿ ಅಳವಡಿಸಿಕೊಂಡಿದ್ದಾರೆ. ಅವರ ಯಶಸ್ಸಿನ ಸಾಧನೆಯನ್ನು ಕೃಷಿ ವಿವಿ ವಿಜ್ಞಾನಿಗಳು, ರಾಜ್ಯ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣದ ರೈತರು ಭೇಟಿ ನೀಡಿ ಬೆಳೆ ಪದ್ಧತಿಯನ್ನು ವೀಕ್ಷಿಸುತ್ತಾರೆ.
ಇದನ್ನೂ ಓದಿ:ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ನನ್ನದು: ತಮಿಳು ನಟ ವಿಶಾಲ್
ಕೃಷಿ ಸಾಧನೆಗಾಗಿ ರೈತ ಗುರುಲಿಂಗಪ್ಪಗೆ ಸರ್ಕಾರ, ಸಂಘ ಸಂಸ್ಥೆಗಳಿಂದ ಹಲವು ಪ್ರಶಸ್ತಿಗಳು ಅರಿಸಿ ಬಂದಿವೆ. ವಿಶೇಷವಾಗಿ ಪ್ರಗತಿಪರ ಕೃಷಿಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ವಾಮಿನಾಥನ್ ಅಧ್ಯಕ್ಷತೆಯ ಆಸ್ಪಿ ಫೌಂಡೇಶನ್ ಕೊಡ ಮಾಡುವ ರಾಷ್ಟ್ರ ಮಟ್ಟದ ಪ್ರಶಸ್ತಿ (2017) ಪಡೆದಿದ್ದಾರೆ. ಮೂರು ವಿಭಾಗದ ಈ ಪ್ರಶಸ್ತಿಯು ತಲಾ 1 ಲಕ್ಷ ರೂ. ನಗದು, ಫಲಕಗಳನ್ನ ಒಳಗೊಂಡಿದೆ. ಜತೆಗೆ ಸಾವಯವ ಕೃಷಿ ಪಂಡಿತ, ನೇಗಿಲ ಯೋಗಿ, ಕೃಷಿ ಋಷಿ, ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಗುಜರಾತನಲ್ಲಿ ಸಿಎಂ ಆಗಿದ್ದ ನರೇಂದ್ರ ಮೋದಿಯವರಿಂದ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಈಗ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ನಾನೊಬ್ಬ ಸಾಮಾನ್ಯ ಕೃಷಿಕ, ನನ್ನನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ತಂದಿದೆ. ಇದರಿಂದ ಕೃಷಿಯಲ್ಲಿ ಇನ್ನಷ್ಟು ಹೊಸತನದ ಸಾಧನೆ ಮಾಡಲು ಪ್ರೇರಣೆ ಸಿಕ್ಕಂತಾಗಿದೆ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ಸಾವಯವ ಕೃಷಿಯಡಿ “ತೊಗರಿಯಲ್ಲಿ ಸಸಿ ನಾಟಿ’ ಅಂತಹ ಪದ್ಧತಿಯನ್ನು ಪ್ರತಿಯೊಬ್ಬರು ಅನುಸರಿಸಿ ಭೂ ಒಡಲನ್ನು ರಕ್ಷಿಸಬೇಕಿದೆ. -ಗುರುಲಿಂಗಪ್ಪ ಮೇಲ್ದೊಡ್ಡಿ, ಪ್ರಗತಿಪರ ರೈತ
-ಶಶಿಕಾಂತ ಬಂಬುಳಗೆ
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
You seem to have an Ad Blocker on.
To continue reading, please turn it off or whitelist Udayavani.