ನಾಡಿನ ಶ್ರೀಮಂತಿಕೆ ಬಿಂಬಿಸುವ “ಕನ್ನಡದ ತೇರು’
15-20 ದಿನವೂ ನಾನೇ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತೇನೆ.
Team Udayavani, Nov 1, 2021, 11:33 AM IST
ಹುಬ್ಬಳ್ಳಿ: ಕರುನಾಡ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದ್ದು, ನಾಡಿನ ಪರಂಪರೆ, ಶ್ರೀಮಂತಿಕೆಯನ್ನು ನೆನಪಿಸುವ ಕನ್ನಡದ ತೇರನ್ನು ಸಿದ್ಧಪಡಿಸಿದೆ. ಇದರೊಂದಿಗೆ ಇಡೀ ಒಂದು ಬಸ್ ನಲ್ಲಿ ನಾಡಿನ ಸಾಹಿತಿಗಳನ್ನು ನೆನಪಿಸುವ ಹಾಗೂ ಅವರ ಬಗ್ಗೆ ತಿಳಿಸುವ ಕೆಲಸ ಆಗಿದೆ.
ಕರ್ನಾಟಕ ರಾಜ್ಯೋತ್ಸವವನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರಕಾರ ಮುಂದಾಗಿದೆ. ಇದಕ್ಕಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರ ಕನ್ನಡಿಗನನ್ನು ಇದರಲ್ಲಿ ತೊಡಗಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗ ರಾಜ್ಯೋತ್ಸವದ ಸಡಗರ ಸಂಭ್ರಮ ಹೆಚ್ಚಿಸುವ ಕಾರ್ಯ ಮಾಡಿದೆ. ಈ ಬಾರಿ ಸಂಸ್ಥೆಯ ಒಂದು ಲಾರಿ ಹಾಗೂ ಬಸ್ಸಿನ ಮೂಲಕ ನಾಡಿನ ಪರಂಪರೆ, ಸಾಹಿತ್ಯ, ನಾಡಿನ ಶ್ರೀಮಂತಿಕೆಯನ್ನು ಜನರಿಗೆ ಮುಟ್ಟಿಸುವ, ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಲಿದ್ದು, ವಾಹನಗಳು ಕನ್ನಡಮಯವಾಗಿ ಪರಿವರ್ತನೆಗೊಂಡಿವೆ.
ಬಸ್ಸಲ್ಲ ಕನ್ನಡದ ತೇರು: ಇದು ಬರೀ ಬಸ್ಸಲ್ಲ ಕನ್ನಡದ ತೇರು, ಕೈ ಮುಗಿದು ಏರು ಎನ್ನುವ ಬರಹದೊಂದಿಗೆ ಹಂಪಿ ವಿರುಪಾಕ್ಷನ ಕ್ಷೇತ್ರದ ಪರಿಕಲ್ಪನೆ ಸ್ತಬ್ಧಚಿತ್ರ ಸಾರುತ್ತಿದೆ. ಇಲ್ಲಿನ ವಿಭಾಗೀಯ ಕಾರ್ಯಾಗಾರದಲ್ಲಿ ಸಿಬ್ಬಂದಿ ಕಾಳಜಿ ವಹಿಸಿ ಇದನ್ನು ಸಿದ್ಧಪಡಿಸಿದ್ದು, ಕನ್ನಡದ ಸಂದೇಶಗಳೊಂದಿಗೆ ತಮ್ಮ ಸಂಸ್ಥೆಯ ಸೇವೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ವಿಭಾಗದಿಂದ ಇರುವ ಐಷಾರಾಮಿ ಸೇವೆ, ಸಾಂದರ್ಭಿಕ ಒಪ್ಪಂದ ಮೇಲೆ ಬಸ್‌ಗಳ ಲಭ್ಯತೆ, ಖಾಲಿ ವಾಣಿಜ್ಯ ಮಳಿಗೆಗಳ ವಿವರ, ಪಾರ್ಸಲ್ ಮತ್ತು ಕೋರಿಯರ್ ಸೇವೆ, ರಿಯಾಯಿತಿ ದರದಲ್ಲಿ ಪಾಸ್‌ಗಳ ಲಭ್ಯತೆ ಸೇರಿದಂತೆ ವಿವಿಧ ಸೇವೆಗಳ ಮಾಹಿತಿ ಹಾಗೂ ಅವುಗಳ ಪಡೆಯುವ ವಿಧಾನ, ಯಾರನ್ನು ಸಂಪರ್ಕಿಸಬೇಕು ಎನ್ನುವುದನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಿದೆ.
ಕೋವಿಡ್ ಜಾಗೃತಿ: ಸಂಸ್ಥೆಯ ಸೇವೆಗಳೊಂದಿಗೆ ಮಹಾಮಾರಿ ಕೋವಿಡ್ ಕುರಿತು ಜಾಗೃತಿ ಫಲಕಗಳಿವೆ. ಲಸಿಕೆ, ಕೋವಿಡ್ ಸಂದರ್ಭದಲ್ಲಿ ವಿಭಾಗದಲ್ಲಿ ಕೈಗೊಂಡ ಕಾರ್ಯಗಳ ಭಾವಚಿತ್ರಗಳು, ಸಮೂಹ ಸಾರಿಗೆ ಬಳಕೆಗೆ ಒತ್ತು, ಭವಿಷ್ಯದಲ್ಲಿ ವಿದ್ಯುತ್ ಚಾಲಿನ ಸಾರಿಗೆ ವ್ಯವಸ್ಥೆ, ಕೋವಿಡ್ ಸೋಂಕಿನಿಂದ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು, ಮೂರನೇ ಅಲೆ ತಡೆಯಲು ಒಗ್ಗಟ್ಟಿನ ಹೋರಾಟ ಹೀಗೆ ಕೋವಿಡ್ ಕುರಿತು ಜಾಗೃತಿ ಸಂದೇಶಗಳು ಈ ವಾಹನದಲ್ಲಿ ಮೇಲಿದೆ.
ಜನರ ಪ್ರದರ್ಶನಕ್ಕೆ ಲಭ್ಯ: ಸಾರಿಗೆ ಸಿಬ್ಬಂದಿ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದು, ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನಾಡಿನ ಹಬ್ಬದ ದಿನದಂದು ಸಂಭ್ರಮ ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಅಲಂಕಾರ ಮಾಡಲಾಗಿದೆ. ಸದ್ಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣಗಳಲ್ಲಿ ಪ್ರದರ್ಶನಕ್ಕೆ ಇಡುವ ಯೋಜನೆ ಇದೆ. ನಾಡಿನ ಪರಂಪರೆ ಹಾಗೂ ಕೋವಿಡ್ ಕುರಿತು ಸಂದೇಶ ಸಾರುವ ಕನ್ನಡದ ತೇರು ನಗರದ ವಿವಿಧೆಡೆ ಪ್ರದರ್ಶನಕ್ಕೆ ಜಿಲ್ಲಾಡಳಿತ ಹಾಗೂ ಪಾಲಿಕೆ ಅನುಮತಿ ನೀಡಿದರೆ ಅವರು ಸೂಚಿಸಿದ ಸ್ಥಳಗಳಿಗೆ ಕಳುಹಿಸುವ ಇಂಗಿತ ಸಂಸ್ಥೆ ಅಧಿಕಾರಿಗಳಲ್ಲಿದೆ.
ಅಧಿಕಾರಿಗಳ ಪ್ರೋತ್ಸಾಹದಿಂದ ಕಳೆದ ಎರಡು ವರ್ಷಗಳಿಂದ ರಾಜ್ಯೋತ್ಸವ ವಿಶೇಷವಾಗಿ ಆಚರಿಸಲಾಗುತ್ತಿದೆ. ನನಗೆ ನೀಡಿರುವ ಬಸ್ ಅನ್ನು ಸ್ವಂತ ಖರ್ಚಿನಲ್ಲಿ ಸಹದ್ಯೋಗಿಗಳ ನೆರವಿನಿಂದ ಕನ್ನಡದ ತೇರಾಗಿ ಪರಿವರ್ತಿಸಿದ್ದೇನೆ. ಇದೊಂದು ಬಸ್ ಎನ್ನುವ ಬದಲು ಕನ್ನಡದ ತೇರು ಎನ್ನುವ ಭಾವನೆ ಮೂಡಲಿದೆ. 15-20 ದಿನವೂ ನಾನೇ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತೇನೆ.
ಶಶಿಕುಮಾರ ಬೋಸ್ಲೆ, ನಿರ್ವಾಹಕ, ಕಲಘಟಗಿ ಘಟಕ
ಹಿಂದಿನಿಂದಲೂ ಕನ್ನಡ ನಾಡು-ನುಡಿ ಹಾಗೂ ಕರುನಾಡ ಹಬ್ಬಕ್ಕೆ ಸಂಸ್ಥೆ ಸಿಬ್ಬಂದಿ ತಮ್ಮ ಮನೆಯ ಹಬ್ಬದಂತೆ ಆಚರಿಸುತ್ತಾರೆ. ಈ ಬಾರಿ ಸಂಸ್ಥೆಯಿಂದ ಸ್ತಬ್ಧ ಚಿತ್ರ ನಾಡಿನ ಪರಂಪರೆ ತಿಳಿಸುವ ಕಾರ್ಯದ ಜತೆಗೆ ಕೋವಿಡ್ ಜಾಗೃತಿ ಮೂಡಿಸಲಿದೆ. ಸಂಸ್ಥೆಯಿಂದ ದೊರೆಯುವ ಸೇವೆ, ಪಡೆಯುವ ವಿಧಾನದ ಮಾಹಿತಿಯಿದೆ. ಇನ್ನೂ ವಿಭಾಗ ವ್ಯಾಪ್ತಿಯಲ್ಲಿ ಹಲವು ಸಿಬ್ಬಂದಿ ಸ್ವಂತ ಖರ್ಚಿನಿಂದ ರಾಜ್ಯೋತ್ಸವದ ಮೆರಗು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕ, ಉಪಾಧ್ಯಕ್ಷ, ನಿರ್ದೇಶಕರ ಪ್ರೋತ್ಸಾಹದಿಂದ ಈ ಕಾರ್ಯಕ್ಕೆ
ಮುಂದಾಗಿದ್ದೇವೆ.
ಎಚ್.ರಾಮನಗೌಡ್ರ,
ವಿಭಾಗೀಯ ನಿಯಂತ್ರಣಾಧಿಕಾರಿ,
ಹುಬ್ಬಳ್ಳಿ ಗ್ರಾಮಾಂತರ ವಿಭಾಗ
ಅಗಲಿದ ಅಪ್ಪುಗೆ ನಮನ
ಪ್ರಯಾಣಿಕರು ಬಸ್ಸಿನೊಳಗೆ ಕಾಲಿಡುತ್ತಿದ್ದಂತೆ ಕನ್ನಡದ ಲೋಕವೇ ತೆರೆದುಕೊಳ್ಳುತ್ತದೆ. ಬಸ್ಸಿನ ಶೃಂಗಾರ ಅತ್ಯಾಕಷಣೆಯಿಂದ ಕೂಡಿದ್ದು, ಸಾಹಿತಿಗಳು, ಲೇಖಕರು, ಅವರ ಸಾಹಿತ್ಯ, 31 ಜಿಲ್ಲೆಗಳ ವಿಶೇಷತೆ, ಹೀಗೆ ನಾಡಿನ ಸಾಹಿತ್ಯವನ್ನು ಪ್ರಯಾಣಿಕರಿಗೆ ಉಣಬಡಿಸುವ ಕನ್ನಡ ಸಾಹಿತಿಗಳ ತೇರಾಗಿ ರೂಪುಗೊಂಡಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಅವರ ಕಿರು ಪರಿಚಯ, ನಾಡು ನುಡಿಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳು ಛಾಯಾಚಿತ್ರಗಳು ಬಸ್‌ನಲ್ಲಿ ರಾರಾಜಿಸುತ್ತಿವೆ. ಕನ್ನಡ ಪುಸ್ತಕ ಪ್ರೇಮ ಮೂಡಿಸುವ ಕಾರಣದಿಂದ ಬಸ್‌ನಲ್ಲಿ ಒಂದಿಷ್ಟು ಕನ್ನಡದ ಪುಸ್ತಕಗಳನ್ನು ಇಡಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸಲಾಗಿದೆ. ಕಣ್ಮರೆಯಾದ ಕನ್ನಡದ ಕಂದ ಎಂದು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಹೀಗಾಗಿ ಈ ಬಸ್ ಗೆ ಕನ್ನಡದ ಕಂದ ಎಂದು ಹೆಸರಿಟ್ಟಿದ್ದಾರೆ. ಈ ಬಸ್ ಕಲಘಟಗಿ-ಹೊಸಪೇಟೆ ನಡುವೆ ಸಂಚರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.