ಗರ್ಭಧಾರಣೆಯ ಸಮಯದಲ್ಲಿ ಓಸ್ಟಿಯೋಪೊರೋಸಿಸ್ ನಿಭಾವಣೆ
Team Udayavani, Nov 7, 2021, 6:00 AM IST
ಓಸ್ಟಿಯೋಪೊರೋಸಿಸ್ ಎಂದರೆ ರಂಧ್ರಗಳಿಂದ ಕೂಡಿದ ಎಲುಬು ಎಂದರ್ಥವಾಗುತ್ತದೆ. ಎಲುಬುಗಳ ಹೊರಭಾಗದಲ್ಲಿ ಇರುವ ಜಾಲರಿಯಂತಹ ಸಂರಚನೆಗಳು ತೆಳುವಾಗುವ ಮೂಲಕ ಎಲುಬುಗಳು ದುರ್ಬಲವಾಗಿ ಸಣ್ಣ ಪುಟ್ಟ ಆಘಾತಗಳಾದ ಸಂದರ್ಭದಲ್ಲಿಯೂ ಸುಲಭವಾಗಿ ಮುರಿಯುವ ಸ್ಥಿತಿ ಇದು. ಇಂಥ ಮುರಿತಕ್ಕೊಳಗಾದ ಎಲುಬುಗಳನ್ನು ದುರ್ಬಲ ಮುರಿತ ಎನ್ನಲಾಗುತ್ತದೆ. ಮೂಳೆ ಮುರಿತ ದೇಹದ ಯಾವುದೇ ಭಾಗದಲ್ಲಿ ಉಂಟಾಗಬಹುದಾದರೂ ಮಣಿಕಟ್ಟು, ಸೊಂಟ ಮತ್ತು ಬೆನ್ನೆಲುಬುಗಳಲ್ಲಿ ಇಂತಹ ಮುರಿತಗಳು ಹೆಚ್ಚಾಗಿ ಸಂಭವಿಸುತ್ತವೆ. ಓಸ್ಟಿಯೋಪೊರೋಸಿಸ್ ಹೊಂದಿರುವವರು ಇಂತಹ ಮುರಿತಕ್ಕೊಳಗಾದ ಎಲುಬುಗಳಿಂದಾಗಿ ಅತಿಯಾದ ನೋವನ್ನು ಅನುಭವಿಸುತ್ತಾರೆ. ಬೆನ್ನೆಲುಬು ಮುರಿತದಿಂದ ಕುಬjತನ ಮತ್ತು ಬೆನ್ನು ಬಾಗುವಿಕೆ ಉಂಟಾಗಬಹುದು.
ಬಹುತೇಕ ಮಹಿಳೆಯರ ಎಲುಬುಗಳು ಅವರ ಜೀವನದ ಆರಂಭಿಕ ವರ್ಷಗಳಲ್ಲಿ ಮತ್ತು 20ನೆಯ ವಯಸ್ಸಿನೊಳಗೆ ಸಾಂದ್ರತೆ ಮತ್ತು ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಆರೋಗ್ಯಕರ ಆಹಾರಪದ್ಧತಿ, ಮದ್ಯಪಾನವನ್ನು ಕಡಿಮೆ ಮಾಡುವುದು, ಧೂಮಪಾನವನ್ನು ತ್ಯಜಿಸುವುದು ಮತ್ತು ವಾರಕ್ಕೆ ಕನಿಷ್ಠ ಮೂರು ಬಾರಿ ಭಾರ ಎತ್ತುವಂತಹ ವ್ಯಾಯಾಮಗಳನ್ನು ಮಾಡುವುದರಿಂದ ಎಲುಬುಗಳನ್ನು ಆರೋಗ್ಯಕರವಾಗಿ ಇರಿಸಲು ಸಹಾಯವಾಗುತ್ತದೆ. 30 ವರ್ಷ ವಯಸ್ಸಿನ ಹೊತ್ತಿಗೆ ಎಲುಬುಗಳು ತಮ್ಮ ಗರಿಷ್ಠ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತವೆ ಮತ್ತು 35ನೆಯ ವಯಸ್ಸಿನ ಬಳಿಕ ನಿಧಾನವಾಗಿ ಎಲುಬುಗಳ ಪ್ರಮಾಣ ಕ್ಷಯಿಸಲು ಆರಂಭವಾಗುತ್ತದೆ. ಇದು ವಯಸ್ಸಾಗುವ ಪ್ರಕ್ರಿಯೆ ಸಹಜ ಭಾಗವಾಗಿದೆ. ಮಹಿಳೆಯರಲ್ಲಿ ಋತುಚಕ್ರ ಬಂಧದ ಬಳಿಕ ಕೆಲವು ವರ್ಷಗಳ ಅವಧಿಯಲ್ಲಿ ಎಲುಬುಗಳು ವೇಗವಾಗಿ ಕ್ಷಯಿಸುತ್ತವೆ, ಈ ಸಂದರ್ಭದಲ್ಲಿ ಅವರ ಗರ್ಭಕೋಶದಲ್ಲಿ ಈಸ್ಟ್ರೋಜೆನ್ ಹಾರ್ಮೋನ್ ಉತ್ಪಾದನೆಯಾಗುವ ಪ್ರಮಾಣ ಕಡಿಮೆ ಇರುತ್ತದೆ. ವಯಸ್ಸಾಗುತ್ತಿದ್ದಂತೆ ಎಲುಬುಗಳು ಕ್ಷಯಿಸುವುದರಿಂದ ಮೂಳೆ ಮುರಿತಕ್ಕೊಳಗಾಗುವ ಸಾಧ್ಯತೆ ಹೆಚ್ಚುತ್ತದೆ.
ಗರ್ಭಧಾರಣೆಯ ಅವಧಿಯಲ್ಲಿ ಓಸ್ಟಿಯೋಪೊರೋಸಿಸ್ ಉಂಟಾಗುವುದು ಅಪರೂಪದ ಪ್ರಕ್ರಿಯೆಯಾಗಿದೆ. ಇಂತಹ ಸಂದರ್ಭದಲ್ಲಿ ಗರ್ಭ ಧಾರಣೆ, ಪ್ರಸೂತಿಯ ಸಂದರ್ಭದಲ್ಲಿ ಮಹಿಳೆಯ ಬೆನ್ನುಮೂಳೆ, ಸೊಂಟದ ಮೂಳೆ ಮುರಿತಕ್ಕೊಳಗಾಗಿ ಮಹಿಳೆ ನೋವು ಮತ್ತು ಅಂಗವೈಕಲ್ಯವನ್ನು ಅನುಭವಿಸಬೇಕಾಗುತ್ತದೆ. ಮುರಿತಕ್ಕೊಳಗಾದ ಎಲುಬುಗಳು ಸಹಜವಾಗಿ ಕೂಡಿಕೊಳ್ಳುತ್ತವೆ ಮತ್ತು ಮಹಿಳೆ ತನ್ನ ಹಿಂದಿನ ಜೀವನ ಗುಣಮಟ್ಟವನ್ನು ಗಳಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಗರ್ಭಧಾರಣೆಯ ಸಂದರ್ಭದಲ್ಲಿ ಓಸ್ಟಿಯೋಪೊರೋಸಿಸ್
ರೂಢಿಗತ ಗರ್ಭಧಾರಣೆಯ ಮುಂದುವರಿದ ಅವಧಿಗಳಲ್ಲಿ ಮೂಳೆ ಸಾಂದ್ರತೆಯು ಕಡಿಮೆಯಾಗುವುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಆದರೆ ಇದು ಶಿಶುವಿಗೆ ಜನ್ಮ ನೀಡಿದ ಕೆಲವು ತಿಂಗಳುಗಳ ಬಳಿಕ ಸಹಜ ಸ್ಥಿತಿಗೆ ಮರಳುತ್ತದೆ. ಮಹಿಳೆಯು ಶಿಶುವಿಗೆ ಹಾಲೂಡುವ ಅವಧಿಯಲ್ಲಿ ಕೂಡ ಎಲುಬಿನ ಸಾಂದ್ರತೆಯು ಕಡಿಮೆಯಾಗುತ್ತದೆಯಾದರೂ ಹಾಲೂಡಿಸುವುದನ್ನು ನಿಲ್ಲಿಸಿದ ಬಳಿಕ ಸಹಜ ಸ್ಥಿತಿಗೆ ಮರಳುತ್ತದೆ. ಗರ್ಭಧಾರಣೆಯ ಅವಧಿಯಲ್ಲಿ, ಅದರಲ್ಲೂ ಕೊನೆಯ ಅವಧಿಯಲ್ಲಿ ಈಸ್ಟ್ರೋಜೆನ್ ಪ್ರಮಾಣ ಅತೀ ಹೆಚ್ಚಿದ್ದು, ಹಾಲೂಡುವ ಅವಧಿಯಲ್ಲಿ ಕಡಿಮೆ ಇರುತ್ತದೆ. ಪ್ರೊಲ್ಯಾಕ್ಟಿನ್ ಎಂಬ ಇನ್ನೊಂದು ಹಾರ್ಮೋನ್ ಪ್ರಮಾಣ ಹಾಲೂಡುವ ಅವಧಿಯಲ್ಲಿ ಹೆಚ್ಚಿರುತ್ತದೆ. ಶಿಶುವಿಗೆ ಹಾಲೂಡುವುದು ದೀರ್ಘಕಾಲಿಕವಾಗಿ ಓಸ್ಟಿಯೋಪೊರೋಸಿಸ್‌ಗೆ ಒಳಗಾಗುವ ಅಪಾಯವನ್ನು ಹೆಚ್ಚಿಸುವುದಿಲ್ಲ. ಶಿಶುವಿಗೆ ಹಾಲೂಡಿಸಿದ ತಾಯಂದಿರಿಗೆ ಬದುಕಿನ ಮುಂದುವರಿದ ಅವಧಿಯಲ್ಲಿ ಅಂದರೆ, ವಯಸ್ಸಾದ ಬಳಿಕ ಸೊಂಟದ ಮೂಳೆ ಮುರಿತಕ್ಕೆ ಒಳಗಾಗುವ ಅಪಾಯ ಹೆಚ್ಚು ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ನಿಜ ಹೇಳಬೇಕೆಂದರೆ ಹಾಲೂಡಿದ ತಾಯಂದಿರಿಗೆ ಸೊಂಟದ ಮೂಳೆ ಮುರಿತಕ್ಕೊಳಗಾಗುವ ಅಪಾಯ ಕಡಿಮೆ ಎಂಬುದನ್ನು ಒಂದು ಅಧ್ಯಯನ ತೋರಿಸಿಕೊಟ್ಟಿದೆ. ಇದಕ್ಕೆ ಕಾರಣಗಳು ಅಸ್ಪಷ್ಟವಾಗಿವೆ.
ಗರ್ಭಧಾರಣೆಗೆ ಸಂಬಂಧಿಸಿದ ಓಸ್ಟಿಯೋಪೊರೋಸಿಸ್ ಅಂದರೆ ಗರ್ಭ ಧರಿಸಿದ ಸಂದರ್ಭದಲ್ಲಿ ಓಸ್ಟಿಯೋ ಪೊರೋಸಿಸ್‌ಗೆ ಒಳಗಾಗುವುದು ಒಂದು ಅಪರೂಪದ ಅನಾರೋಗ್ಯವಾಗಿದ್ದು, ಮಹಿಳೆಯು ಶಿಶುವಿಗೆ ಜನ್ಮ ನೀಡುತ್ತಿರುವಾಗ ಸಾಮಾನ್ಯವಾಗಿ ಬೆನ್ನುಮೂಳೆ, ಕೆಲವೊಮ್ಮೆ ಸೊಂಟದ ಮೂಳೆ ಮುರಿತಕ್ಕೆ ಒಳಗಾಗುವ ಸ್ಥಿತಿಯಾಗಿದೆ. ಇದರಿಂದ ತೀವ್ರ ನೋವು ಮತ್ತು ವೈಕಲ್ಯ ಉಂಟಾಗುತ್ತದೆ. ಮುರಿತಕ್ಕೊಳಗಾದ ಮೂಳೆಯು ಕಾಲಕ್ರಮೇಣ ಸಹಜವಾಗಿ ಕೂಡಿಕೊಳ್ಳುತ್ತದೆ ಮತ್ತು ಮಹಿಳೆ ಹಿಂದಿನ ಜೀವನ ಗುಣಮಟ್ಟಕ್ಕೆ ಮರಳುತ್ತಾಳೆ.
ಓಸ್ಟಿಯೋಪೊರೋಸಿಸ್‌ಗೆ ಸಂಬಂಧಿಸಿದ ಮೂಳೆಮುರಿತಗಳನ್ನು ಕೆಲವೊಮ್ಮೆ “ಇದುವರೆಗೆ ನಿಖರವಾದ ಯಾವುದೇ ಕಾರಣ ಕಂಡುಕೊಳ್ಳಲಾಗದ’ ಎಂಬುದಾಗಿ ವಿವರಿಸಲಾಗುತ್ತದೆ. ಎಲುಬಿನ ಕಡಿಮೆ ಸಾಂದ್ರತೆ ಮತ್ತು ಮೂಳೆಗಳ ಸಂರಚನೆಯಲ್ಲಿ ಆಗಿರುವ ಬದಲಾವಣೆಗಳು ನೋವು ಉಂಟು ಮಾಡಲು ಕಾರಣವಾಗುವುದಿಲ್ಲ. ಮುರಿತಕ್ಕೊಳಗಾದ ಎಲುಬುಗಳಿಂದ ನೋವು ಉಂಟಾಗುತ್ತದೆ. ಕೆಲವೊಮ್ಮೆ ನೋವು ಹಠಾತ್ತಾಗಿ, ತೀವ್ರವಾಗಿ ಉಂಟಾಗಬಹುದು ಅಥವಾ ಕೆಲವೊಮ್ಮೆ ನಿಧಾನವಾಗಿ ಅನುಭವಕ್ಕೆ ಬರಬಹುದು. ಗರ್ಭಧಾರಣೆಯ ಅವಧಿಯಲ್ಲಿ ಮೂಳೆಮುರಿತಕ್ಕೆ ಒಳಗಾಗುವ ಮಹಿಳೆಯರಲ್ಲಿ ಬೆನ್ನಿನ ಮೂಳೆ ಮುರಿಯುವುದರಿಂದ ಕಶೇರುಕ ಮಣಿಗಳ ಆಕಾರ ಸಂಕುಚನಗೊಳ್ಳುತ್ತದೆ ಅಥವಾ ವಕ್ರಗೊಳ್ಳುತ್ತದೆ. ಕೆಲವೊಮ್ಮೆ ಸೊಂಟದ ಮೂಳೆ ಮುರಿತಕ್ಕೊಳಗಾಗುತ್ತದೆ.
ಓಸ್ಟಿಯೋಪೊರೋಸಿಸ್ ಜತೆಗೆ ಬದುಕುವುದು
ಗರ್ಭಧಾರಣೆಗೆ ಸಂಬಂಧಿಸಿದ ಓಸ್ಟಿಯೋಪೊರೋಸಿಸ್ ಅಪರೂಪದ್ದಾಗಿರುತ್ತದೆ ಮತ್ತು ಸಾಮಾನ್ಯವಾಗಿ ಗಮನಕ್ಕೆ ಬಾರದೆ ಇರುತ್ತದೆ. ಗರ್ಭಧಾರಣೆಯ ಅವಧಿಯಲ್ಲಿ ಇತರ ಕಾರಣಗಳಿಂದ ಬೆನ್ನುನೋವು ಸಾಮಾನ್ಯವಾಗಿರುತ್ತದೆ. ಜತೆಗೆ ಈ ಸಂದರ್ಭದಲ್ಲಿ ಎಕ್ಸ್‌ರೇ ಮಾಡಿಸಿದರೆ ಅದು ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆ ಬಗ್ಗೆ ವೈದ್ಯರು ಒಲವು ಹೊಂದಿರುವುದಿಲ್ಲ. ಆದ್ದರಿಂದ ಹೆರಿಗೆಯಾಗುವ ವರೆಗೆ ಬೆನ್ನುನೋವಿನ ಕಾರಣ ಪತ್ತೆಯ ಬಗ್ಗೆ ಹೆಚ್ಚು ಪ್ರಗತಿ ಆಗುವುದಿಲ್ಲ. ಆದರೆ ನೋವಿನಿಂದ ಉಪಶಮನ ಹೊಂದುವುದು ಮುಖ್ಯವಾಗಿದ್ದು, ಔಷಧೇತರ ವಿಧಾನಗಳಾದ ವಿಶ್ರಾಂತಿ, ವಿಶ್ರಾಮ ಮತ್ತು ಬ್ರೇಸ್ ಧರಿಸುವ ಕ್ರಮಗಳನ್ನು ಅನುಸರಿಸಲಾಗುತ್ತದೆ.
ಮಗುವಿಗೆ ಎದೆಹಾಲು ಉಣಿಸುವುದು ತೀರಾ ವೈಯಕ್ತಿಕವಾದ ನಿರ್ಧಾರವಾಗಿದೆ. ಮಗು ಮತ್ತು ತಾಯಿಗೆ ಸಮರ್ಪಕ ಪ್ರಮಾಣದಲ್ಲಿ ಖನಿಜಾಂಶಗಳು ಮತ್ತು ವಿಟಮಿನ್‌ಗಳು ಸರಬರಾಜು ಆಗುವಂತೆ ತಾಯಿಯ ದೇಹವನ್ನು ಸರಿಹೊಂದಿಸಿಕೊಳ್ಳುವ ಅತ್ಯುತ್ತಮ ಸ್ವಯಂ ಸರಿಪಡಿಸಿಕೊಳ್ಳುವ ವ್ಯವಸ್ಥೆ ದೇಹದಲ್ಲಿದೆ. ತಾಯಂದಿರು ಎದೆಹಾಲೂಡುವ ಸಂದರ್ಭದಲ್ಲಿ ಅವರಿಗೆ ಹೆಚ್ಚುವರಿ ಕ್ಯಾಲ್ಸಿಯಂನ ಅಗತ್ಯ ಇರುವುದಿಲ್ಲ. ಆದರೆ ಸರಿಯಾದ ಸಮತೋಲಿತ ಆಹಾರ ಸೇವನೆಯ ಮೂಲಕ ಪೌಷ್ಟಿಕಾಂಶಗಳು ಸಮರ್ಪಕ ಪ್ರಮಾಣದಲ್ಲಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕಾಗುತ್ತದೆ.
ಸದ್ಯ ಶಿಫಾರಸು ಮಾಡಲಾಗಿರುವ ಕ್ಯಾಲ್ಸಿಯಂ ಪ್ರಮಾಣವೆಂದರೆ ದಿನಕ್ಕೆ 700 ಮಿ. ಗ್ರಾಂ (ಹೆಚ್ಚುವರಿಯಾಗಿ 550 ಮಿ.ಗ್ರಾಂ ಸೇವನೆ ಕೂಡ ಉಪಯೋಗಕಾರಿ). ಗರ್ಭಧಾರಣೆಗೆ ಸಂಬಂಧಿಸಿದ ಒಸ್ಟಿಯೋಪೊರೋಸಿಸ್ ಹೊಂದಿರುವ ಮಹಿಳೆಯರು ಸುರಕ್ಷಿತರಾಗಿರುವ ಉದ್ದೇಶದಿಂದ ಕ್ಯಾಲ್ಸಿಯಂ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತಾರೆ. ಗರ್ಭಧಾರಣೆಗೆ ಸಂಬಂಧಿಸಿದ ಒಸ್ಟಿಯೋಪೊರೋಸಿಸ್ ಹೊಂದಿರುವ ಮಹಿಳೆಯರು ಅವರ ಅನಾರೋಗ್ಯ ಸ್ಥಿತಿಗಾಗಿ ಔಷಧ ಚಿಕಿತ್ಸೆ ಪಡೆಯಬೇಕೇ ಎಂಬ ಬಗ್ಗೆ ಹೆಚ್ಚುವರಿ ಅಧ್ಯಯನದ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಅಧ್ಯಯನ ನಿರತರಾಗಿರುವ ವಿಶೇಷಜ್ಞರ ಒಮ್ಮತದ ಅಭಿಪ್ರಾಯವೆಂದರೆ, ಗರ್ಭಧಾರಣೆಗೆ ಸಂಬಂಧಿಸಿದ ಒಸ್ಟಿಯೋಪೊರೋಸಿಸ್ ಹೊಂದಿರುವ ಮಹಿಳೆಯರ ದೇಹದ ಅಸ್ಥಿಪಂಜರವು ತಾನಾಗಿ ಚೇತರಿಸಿಕೊಳ್ಳಲು ಬಿಡುವುದೇ ಉತ್ತಮ. ಚಿಕಿತ್ಸೆಯಿಂದಾಗಿ ಮೂಳೆ ಮುರಿತ ಬೇಗನೆ ಗುಣವಾಗುವುದಿಲ್ಲ ಅಥವಾ ನೋವು ಕಡಿಮೆಯಾಗುವುದಿಲ್ಲ. ಮುರಿತಕ್ಕೊಳಗಾಗಿರುವ ಎಲುಬುಗಳು ತಾವಾಗಿ ಕೂಡಿಕೊಂಡು ಗುಣ ಹೊಂದುತ್ತವೆ. ಒಸ್ಟಿಯೋಪೊರೋಸಿಸ್‌ಗೆ ಇರುವ ಚಿಕಿತ್ಸೆಗಳನ್ನು ಸಣ್ಣವಯಸ್ಸಿನ ಯುವತಿಯರಿಗೆ ಪ್ರಯೋಗಿಸಲು ಪರವಾನಿಗೆ ಇಲ್ಲ; ಅಲ್ಲದೆ ಈ ವಿಧವಾದ ಒಸ್ಟಿಯೋಪೊರೋಸಿಸ್‌ಗೆ ಅವು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ಕೂಡ ಸಾಬೀತಾಗಿಲ್ಲ.
ಮಹಿಳೆಯರ ಅಸ್ಥಿಪಂಜರವು ಕಾಲಾಂತರದಲ್ಲಿ ನೈಸರ್ಗಿಕ ಮತ್ತು ಸ್ವಯಂಸ್ಫೂರ್ತವಾಗಿ ಚೇತರಿಸಿಕೊಂಡು ಗುಣ ಹೊಂದುತ್ತವೆ ಎಂಬುದೇ ಒಂದು ಶುಭ ಸುದ್ದಿಯಾಗಿದೆ. ಸಮತೋಲಿತವಾದ, ಕ್ಯಾಲ್ಸಿಯಂ ಸಮೃದ್ಧವಾದ ಆಹಾರಾಭ್ಯಾಸವನ್ನು ರೂಢಿಸಿಕೊಳ್ಳುವುದು, ನಿಧಾನವಾಗಿ ವ್ಯಾಯಾಮವನ್ನು ಆರಂಭಿಸಿ ಹೆಚ್ಚಿಸಿಕೊಳ್ಳುವುದು ಉತ್ತಮ. ಉತ್ತಮ ಆಹಾರಾಭ್ಯಾಸದ ಜತೆಗೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ.
-ಡಾ| ಸುರೇಂದ್ರ ಯು. ಕಾಮತ್
ಪ್ರೊಫೆಸರ್ ಮತ್ತು ಆರ್ಥೋಪೆಡಿಕ್ ವಿಭಾಗ ಮುಖ್ಯಸ್ಥರು, ಕೆಎಂಸಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.