ದೇಶಿ ಭತ್ತಕ್ಕೆ ಅಕಾಲಿಕ ಮಳೆಯ ಬೆತ್ತದೇಟು
ಅರೆಮಲೆನಾಡು ಪ್ರದೇಶದಲ್ಲಿ ಮಳೆಯಿಂದ ಬೆಳೆಗೆ ತೀವ್ರ ಹಾನಿಯಾಗಿದೆ.
Team Udayavani, Nov 18, 2021, 4:33 PM IST
ಧಾರವಾಡ: ಮಳೆಯ ರಭಸಕ್ಕೆ ಹಳ್ಳದಂತಾದ ಭತ್ತದ ಗದ್ದೆಗಳು, ಹರಿಯುವ ನೀರಿನ ಗುಂಟ ತೇಲಿ ಹೋದ ಕೊಯ್ದಿಟ್ಟ ಭತ್ತದ ಪೊದೆಗಳು, ನೀರು ಕುಡಿದ ಮೇವಿನ ಬಣವಿಗಳು, ಅರ್ಧಕ್ಕೆ ನಿಂತ ಕಬ್ಬು ಕಟಾವು, ಎಣ್ಣೆಯಲ್ಲಿ ಎದ್ದಿದಂತೆಯೇ ನೀರುಂಡ ಬಿಳಿ ಬಂಗಾರ ಹತ್ತಿ ಬೆಳೆ, ಒಕ್ಕಲು ಮಾಡಲು ಕಣದಲ್ಲಿಯೇ ತೋಯ್ದು ಬಿದ್ದ ಗೋವಿನಜೋಳ. ಒಟ್ಟಿನಲ್ಲಿ ಒಂದೇ ದಿನಕ್ಕೆ ರೈತರೆಲ್ಲಾ ಹೈರಾಣು..
ಹೌದು. ಕಳೆದ ಒಂದು ವಾರದಿಂದ ಕಣ್ಣಾಮುಚ್ಚಾಲೆ ಆಡುತ್ತಲೇ ಇದ್ದ ಮಳೆರಾಯ ಕೊನೆಗೂ ಮಂಗಳವಾರ ರಾತ್ರಿ ಸಂಜೆಯಿಂದ ರಾತ್ರಿವರೆಗೂ ಧೋ ಎಂದು ಸುರಿದಿದ್ದರ ಪರಿಣಾಮ ಜಿಲ್ಲೆಯಲ್ಲಿ ಅನ್ನದಾತರು ಕಂಗಾಲಾಗುವಂತೆ ಮಾಡಿದ್ದು, ಭತ್ತ ಬೆಳೆದ ರೈತರು ತೀವ್ರ ಹಾನಿಗೊಳಗಾಗಿದ್ದಾರೆ.
ಧಾರವಾಡ, ಅಳ್ನಾವರ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಹೊಲದಲ್ಲಿ ಕೊಯ್ದು ಒಕ್ಕಲು ಮಾಡಲು ಬಿಟ್ಟಿದ್ದ ದೇಶಿ ಭತ್ತದ ತಳಿಯ ಪೊದೆಗಳು ನೀರಿನಲ್ಲಿ ತೇಲಿಕೊಂಡು ಹೋಗಿವೆ. ಕೆಲ ಹೊಲಗಳಲ್ಲಿ ಭತ್ತದ ಗದ್ದೆಗಳ ತುಂಬಾ ನೀರು ನಿಂತಿದ್ದು, ಕೈಗೆ ಬಂದ ಅನ್ನದ ತುತ್ತು ಬಾಯಿಗೆ ಬರುವ ಮುಂಚೆಯೇ ನೀರಿನ ಪಾಲಾಗಿ ಹೋದಂತಾಗಿದೆ.
ಧಾರವಾಡ ತಾಲೂಕಿನ ನಿಗದಿ, ಲಾಳಗಟ್ಟಿ, ಕಲಕೇರಿ, ಮುರಕಟ್ಟಿ, ಹೊಲ್ತಿಕೊಟೆ, ದೇವರಹುಬ್ಬಳ್ಳಿ, ಬಾಡ, ಅಳ್ನಾವರ ತಾಲೂಕಿನ ಕಡಬಗಟ್ಟಿ, ಕುಂಬಾರಕೊಪ್ಪ, ಡೋರಿ, ಬೆಣಚಿ ಮತ್ತು ನಾಗಲಾವಿ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಭತ್ತದ ಬೆಳೆ ಸಂಪೂರ್ಣ ನಾಶವಾಗಿ ಹೋಗಿದೆ. ಒಂದು ಹೊಲದಲ್ಲಿನ ಭತ್ತದ ಪೊದೆಗಳು ಅಲ್ಲಿಂದ ಕಿ.ಮೀ.ಗಟ್ಟಲೇ ತೇಲಿಕೊಂಡು ಬಂದು ಬೇರೆ ಕಡೆಗೆ ಸಾಗಿ ನಿಂತಿವೆ. ಇನ್ನು ಕೆಲ ಹೊಲಗಳಲ್ಲಿನ ಭತ್ತದ ಗದ್ದೆಗಳೇ ಒಡೆದು ಹೋಗಿದ್ದು, ಗದ್ದೆಯ ನೀರು ಗದ್ದೆಗೆ ಬಿದ್ದು ಎಲ್ಲೆಂದರಲ್ಲಿ ಭೂಮಿ ಕೊರಕಲಾಗಿ ಹೋಗಿದೆ.
ಭತ್ತದ ಬೆಳೆ ಸಾಮಾನ್ಯವಾಗಿ ಈ ಭಾಗದ ರೈತರಿಗೆ ಮನೆಯೂಟ. ಇನ್ನು ಆ ಭತ್ತದಿಂದ ಅನ್ನ ಮಾಡಲು ಬರುವುದೇ ಇಲ್ಲ. ಅದನ್ನು ಅವಲಕ್ಕಿ ತಯಾರಿಕೆಗೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕು ಅಷ್ಟೇ. ಅದೂ ಅಲ್ಲದೇ ದೇಶಿ ಭತ್ತದ ಹುಲ್ಲಿಗೆ ಮೇವು ಮತ್ತು ಬಣವಿ ಒಟ್ಟಲು ಅಗತ್ಯವಾಗಿತ್ತು. ಇದೀಗ ಅದು ಕೂಡ ಮಳೆಯಲ್ಲಿ ತೋಯ್ದಿದ್ದರಿಂದ ಆ ಹಾನಿಯನ್ನೂ ರೈತರೇ ಭರಿಸಿದಂತಾಗಿದೆ.
ಹಳ್ಳಗಳಲ್ಲಿ ಭರಪೂರ ನೀರು: ಮಂಗಳವಾರ ಸಂಜೆ 6:00 ಗಂಟೆಯಿಂದ ರಾತ್ರಿ 11:00ರವರೆಗೂ ಬಿಟ್ಟು ಬಿಡದೇ ಈ ಭಾಗದಲ್ಲಿ ಭಾರೀ ಮಳೆ ಸುರಿದಿದ್ದರಿಂದ ಹಿರಿಯುವುದನ್ನೇ ನಿಲ್ಲಿಸಿದ್ದ ಹಳ್ಳಗಳು ಮತ್ತೆ ಪ್ರವಾವ ಸ್ಥಿತಿ ಸೃಷ್ಟಿಸುವಷ್ಟರ ಮಟ್ಟಿಗೆ ಏರಿಕೆ ಕಂಡು ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿ ಹಾನಿಯನ್ನುಂಟು ಮಾಡಿದೆ. ಬೇಡ್ತಿ, ತುಪರಿ, ಸಣ್ಣಹಳ್ಳ, ಜಾತಕ್ಯಾನಹಳ್ಳಗಳಲ್ಲಿ ಭಾರಿ ನೀರು ತುಂಬಿಕೊಂಡಿದ್ದರಿಂದ ನೀರುಸಾಗರ ಕೆರೆ ಮತ್ತೆ ಕೋಡಿ ಹರಿದಿದೆ. ಧಾರವಾಡ ಸಮೀಪದ ಹೊಲ್ತಿಕೋಟೆ ಕೆರೆಯ ಕಟ್ಟೆಯೇ ಒಡೆದು ಹೋಗಿದ್ದು, ಕೆಳಗಿನ ಹೊಲಗಳಿಗೆ ನೀರು ನುಗ್ಗಿದೆ.
ಕಬ್ಬು ಕಟಾವು ಕಟ್: ಈ ವರ್ಷ ಕಬ್ಬಿನ ಗೃಹಗತಿ ಸರಿಯಿದ್ದಂತೆ ಕಾಣುತ್ತಿಲ್ಲ. ಸುಗ್ಗಿಗೂ ಮುಂಚಿತವಾಗಿಯೇ ಕಟಾವು ಆರಂಭಿಸಿ ಕಾರ್ಖಾನೆಗಳು ಗ್ಯಾಂಗ್‌ಗಳನ್ನು ನೀಡಿವೆ. ಕಟಾವು ಕೂಡ ಅಲ್ಲಲ್ಲಿ ನಡೆದಿತ್ತು. ಆದರೆ ಮೇಲಿಂದ ಮೇಲೆ ಮಳೆ ಸುರಿಯುತ್ತಿರುವುದರಿಂದ ಹೊಲಗಳಲ್ಲಿ ಲಾರಿ ಅಥವಾ ಟ್ರಾಕ್ಟರ್‌ಗಳು ಕಬ್ಬು ಸಾಗಾಟಕ್ಕೆ ತೆರಳದಂತಾಗಿದೆ. ಹೀಗಾಗಿ ಕಬ್ಬಿನ ಗ್ಯಾಂಗ್‌ಗಳು ಮರಳಿ ತಮ್ಮೂರ ಹಾದಿ ಹಿಡಿಯುತ್ತಿವೆ. ತತ್ಪರಿಣಾಮ ಅರ್ಧಂಬಂರ್ಧ ಕಬ್ಬು ಕಳಿಸಿದ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಮಂಗಳವಾರ ಸುರಿದ ಮಳೆಗೆ ಕಬ್ಬಿನ ಗದ್ದೆಗಳ ತುಂಬಾ ನೀರು ನಿಂತಿದ್ದು, ನೀರು ಇಂಗಿ ಮತ್ತೆ ಕಟಾವು ಆರಂಭಿಸಲು ಇನ್ನು ಎರಡು ವಾರಗಳ ಕಾಲ ಕಾಯಬೇಕು. ಇದು ಕಬ್ಬು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಹತ್ತಿ, ಈರುಳ್ಳಿ ಕಣ್ಣೀರು : ಸದ್ಯಕ್ಕೆ ಮಾರುಕಟ್ಟೆಗೆ ಸಾಗಾಟ ಮಾಡಲು ಉಳ್ಳಾಗಟ್ಟಿಯನ್ನು ಸಂಸ್ಕರಿಸಿ ರೈತರು ಒಣಗಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಮಳೆಯಿಂದ ಅವುಗಳ ಸಂಸ್ಕರಣೆ ಮತ್ತು ಒಣಗಿಸುವ ಪ್ರಕ್ರಿಯೆಗೂ ತೀವ್ರ ಹಿನ್ನಡೆಯುಂಟಾಗಿದೆ. ಇನ್ನು ಹತ್ತಿ ಬೆಳೆಗೆ ಸದ್ಯಕ್ಕೆ ಉತ್ತಮ ಮಾರುಕಟ್ಟೆ ದರವಿದ್ದು, ಅದನ್ನು ಬಿಡಿಸಿ ಸಾಗಾಟ ಮಾಡುತ್ತಿದ್ದ ರೈತರಿಗೆ ಮಳೆ ಆಘಾತ ನೀಡಿದೆ. ಮಳೆಯಿಂದ ತೋಯ್ದ ಹತ್ತಿ ಮತ್ತು ಮಣ್ಣಾದ ಹತ್ತಿಗೆ ದರ ಕಡಿಮೆಯಾಗಲಿದೆ. ಅಷ್ಟೇಯಲ್ಲ ಇನ್ನು ಎರಡು ವಾರ ಅದು ಒಣಗಬೇಕಿದೆ. ಅಲ್ಲದೇ ತೆನೆ ಮುರಿದು ಬಿದ್ದ ಹೊಲಗಳಲ್ಲಿನ ಗೋವಿನಜೋಳದ್ದು ಕೂಡ ಇದೇ ಹಣಬರಹ. ಗೋವಿನಜೋಳ ಒಕ್ಕಲು ಮಾಡಲು ಯಂತ್ರಗಳನ್ನು ರೈತರು ಬಳಕೆ ಮಾಡುತ್ತಿದ್ದು, ಮಳೆಯಿಂದ ಅವುಗಳ ಸಾಗಾಟ ಕೂಡ ಕಷ್ಟದಾಯಕವಾಗಿದೆ.
ಮಳೆಯಿಂದ ಬೆಳವಲು ಖುಷಿ ಖುಷಿ
ಇನ್ನು ಜಿಲ್ಲೆಯ ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶದಲ್ಲಿ ಮಳೆಯಿಂದ ಬೆಳೆಗೆ ತೀವ್ರ ಹಾನಿಯಾಗಿದೆ. ಆದರೆ ಇದೇ ಸಮಯಕ್ಕೆ ಧಾರವಾಡ ತಾಲೂಕಿನ ಪಶ್ಚಿಮ ಭಾಗ, ನವಲಗುಂದ, ಕುಂದಗೋಳ,ಹುಬ್ಬಳ್ಳಿ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮಳೆಯಿಂದ ಹಿಂಗಾರಿ ಬೆಳೆಗಳಾದ ಕಡಲೆ, ಗೋಧಿ, ಕುಸುಬಿ ಬೆಳೆಗಳಿಗೆ ಹೆಚ್ಚಿನ ಹಸಿಯಾಗಿದ್ದು, ಉತ್ತಮ ಇಳುವಳಿಗೆ ಅನುಕೂಲ ವಾತಾವರಣ ಸೃಷ್ಟಿಯಾಗಿದೆ. ಹಿಂಗಾರಿ ಸದ್ಯಕ್ಕೆ ಒಂದು ತಿಂಗಳ ಬೆಳೆಯಾಗಿದೆ. ಈ ಹಂತದಲ್ಲಿ ಎಲ್ಲಾ ಬೆಳೆಗಳು ತೀವ್ರ ಮಳೆಯ ಕೊರತೆ ಎದುರಿಸುತ್ತಿದ್ದವು. ಇದೀಗ ಮಳೆ ಸಾಕಷ್ಟು ಸುರಿದಿದ್ದರಿಂದ ಇನ್ನಷ್ಟು ಇಳುವರಿಗೆ ಅನಕೂಲವಾಗಿದೆ.
ಭತ್ತದ ಬೆಳೆ ಸಾಕಷ್ಟು ಕಸರತ್ತು ಮಾಡಿ ಬೆಳೆಯುವಂತಹದ್ದು, ಇದೀಗ ಕೈಗೆ ಬಂದಿದ್ದ ಬೆಳೆ ಬಾಯಿಗೆ ಬರುವ ಮುಂಚೆಯೇ ಮಳೆಗೆ ಹಾನಿಯಾಯಿತು. ಕೂಡಲೇ ಈ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ಕೊಟ್ಟು ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
ಈರಪ್ಪ ಕಾಳೆ, ರೈತ ಮುಖಂಡ. ಲಾಳಗಟ್ಟಿ ಗ್ರಾಮ
ನಮ್ಮ ಹೊಲದಲ್ಲಿನ 8 ಎಕರೆಯಷ್ಟು ಭೂಮಿಯಲ್ಲಿನ ಭತ್ತದ ಬೆಳೆನಾಶವಾಗಿ ಹೋಗಿದೆ. ಇದಕ್ಕೆ ಪರಿಹಾರ ನೀಡಬೇಕು. ಎರಡು ವರ್ಷದಿಂದ ಮಳೆಹಾನಿ, ಬೆಳೆವಿಮೆ ಏನು ಸರಿಯಾಗಿ ಬರುತ್ತಿಲ್ಲ. ಹೀಗಾದರೆ ಜೀವನ ಮಾಡುವುದು ಹೇಗೆ ?
ಸಿದ್ದನಗೌಡ ಗೌಡರ, ನೀರಸಾಗರ ಗ್ರಾಮಸ್ಥ.
ಡಾ|ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.