ಹಿರಿದಾದ ಹೋಬಳಿಗೆ ಕಿರಿದಾದ ನಾಡ ಗೂಡು
Team Udayavani, Nov 26, 2021, 3:50 AM IST
ಬೆಳ್ತಂಗಡಿ: ಸರಕಾರಗಳು ಬದಲಾಗುತ್ತಾ ಹೋದರೂ ಜನಸಾಮಾನ್ಯರ ಮೂಲಸೌಕರ್ಯದ ಕೊರಗು ನೀಗುತ್ತಿಲ್ಲ. ಡಿಜಿಟಿಲೀಕರಣದ ವಾತಾವರಣದಲ್ಲೂ ಕಡತ ಹೊತ್ತು ಕಚೇರಿ ಅಲೆಯುವ ಜಂಜಾಟ ಇನ್ನೂ ಮರೆಯಾಗಿಲ್ಲ. ಗ್ರಾಮಗಳ ಹೊರೆ ತಾಲೂಕು ಕೇಂದ್ರದಿಂದ ದೂರವಿರಿಸುವ ಸಲುವಾಗಿ ಹೋಬಳಿ ವಿಂಗಡಣೆಯಾಗಿದೆಯಾದರೂ ಹೋಬಳಿ ಕೇಂದ್ರಕ್ಕೆ ಇರುವ ಗ್ರಾಮದ ಹೊರೆ ಹೊತ್ತ ನಾಡ ಕಚೇರಿ ವ್ಯವಸ್ಥೆಯಲ್ಲಿ ಬಹಳ ಹಿಂದೆ ಇದೆ.
ತಾಲೂಕಿನ 27 ಗ್ರಾಮಗಳನ್ನು ಒಳ ಗೊಂಡಿರುವ ಕೊಕ್ಕಡ ಹೋಬಳಿಯ ಆವಶ್ಯಕತೆಗಳ ಪಟ್ಟಿ ದೊಡ್ಡದಾಗಿಯೇ ಇದೆ. ಹೋಬಳಿಯ ನಾಡಕಚೇರಿಗೆ ತಲುಪಲು ಪುತ್ತಿಲ, ಪಾರೆಂಕಿ, ಕುಕ್ಕಳ, ಬಂದಾರು, ಮೊಗ್ರು, ಕಣಿಯೂರು, ಇಳಂತಿಲ, ತೆಕ್ಕಾರು, ಬಾರ್ಯ ಗ್ರಾಮಗಳು 45ಕ್ಕೂ ಹೆಚ್ಚು ಕಿ.ಮೀ. ವ್ಯಾಪ್ತಿ ಬಳಸಿಕೊಂಡು ಬರುವಂತಹ ಸ್ಥಿತಿ ಎದುರಾಗುತ್ತದೆ. ಬಸ್ ಸಮಯಕ್ಕೆ ಸರಿಯಾಗಿಲ್ಲ, ಸುತ್ತುಬಳಸಿ ಎರಡೆರಡು ಬಸ್, ಖಾಸಗಿ ವಾಹನ ಅನುಸರಿಸಬೇಕಾದ ಪರಿಸ್ಥಿತಿ, ವಾಹನವಿದ್ದರೂ ಸರ್ವರ್ ಸಮಸ್ಯೆ, ಸರ್ವರ್ ಇದ್ದಾಗ ಪ್ರಭಾರ ಹು¨ªೆಯಲ್ಲಿರುವ ಉಪತಹಶೀಲ್ದಾರ್ ಲಭ್ಯವಿಲ್ಲದಿರುವುದು. ಇಂತಹ ನಾನಾ ಗೊಂದಲಗಳು ಇಲ್ಲಿನ ದಿನ ನಿತ್ಯದ ಜಂಜಾಟಗಳಾಗಿವೆ.
ಡಿಜಿಟಲ್ ವ್ಯವಸ್ಥೆ ಕಾಲ್ಪನಿಕ:
ಈ ನಾಡಕಚೇರಿ ಕಂಡಾಗ ಡಿಜಿಟಲ್ ವ್ಯವಸ್ಥೆ ಭಾರತದಲ್ಲಿ ಸಂಪೂರ್ಣವಾಗಿ ಅಳವಡಿಕೆಯಾಗಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದು ಎಂದೆನಿಸ
ದಿರದು. ಆರ್.ಟಿ.ಸಿ., ಮ್ಯುಟೇಶನ್, ಗ್ರಾಮವಾರು ರಿಜಿಸ್ಟರ್ ಫೈಲ್, ಪೆನ್ಶನ್, ಸಂಧ್ಯಾ ಸುರಕ್ಷಾ, ವಿಧವಾ, ವೃದ್ಧಾಪ್ಯ, ಅಂಗವಿಕಲ ಎಲ್ಲ ಕಡತಗಳು ರಾಶಿಬಿದ್ದಿವೆ.
1981-82ರಿಂದ 1995-96ರ ವರೆಗಿನ ಕಡತಗಳ ಡಿಜಿಟಲೀಕರಣ ಡಾಟಾ ಎಂಟ್ರಿ ನಡೆದಿಲ್ಲ. 2001-02ರ ಬಳಿಕದ ದಾಖಲೆಗಳಷ್ಟೇ ಡಿಜಿಟಲೀಕರಣಗೊಂಡಿದೆ. ಉಳಿದಂತೆ ತಾಲೂಕು ಕಚೇರಿಯಲ್ಲಿರುವ 1996-97ರ ಕಡತ ಹೊರತುಪಡಿಸಿ 1981-82ರಿಂದ 1995-96ರ ವರೆಗಿರುವ ಕೈಬರಹದ ಎಲ್ಲ ಕಡತಗಳು ಇÇÉೇ ಗಂಟುಮೂಟೆ ಕಟ್ಟಿಡಲಾಗಿದೆ. ಒಂದುವೇಳೆ ಮಳೆಗಾಳಿಗೆ ಪ್ರಸಕ್ತ ಕಟ್ಟಡ ಕುಸಿದರೆ ಅಷ್ಟೂ ದಾಖಲೆಗಳು ಸಂಪೂರ್ಣ ನಶಿಸಿಹೋದಲ್ಲಿ ಹಿಂಬರಹ ನೀಡಿ ಕಳುಹಿಸುವ ಸ್ಥಿತಿ ನಿರ್ಮಾಣವಾಗಲಿದೆ. ಸಾವಿರಾರು ಫೈಲ್‌ಗಳಿದ್ದರೂ ಸುರಕ್ಷ ಕ್ರಮವೇ ಇಲ್ಲಿಲ್ಲ.
ಡ್ರೈವರ್ ಕಮ್ ಕಂಡಕ್ಟರ್ ಹುದ್ದೆ:
ಪ್ರಮುಖವಾಗಿ ಜನರ ಭೇಟಿ ವೇಳೆ ಹೋಬಳಿಗೊಬ್ಬ ಕಂದಾಯ ನಿರೀಕ್ಷಕ, ಉಪತಹಶೀಲ್ದಾರ್ ಬೇಕು. ಆದರೆ ಇಲ್ಲಿ ಕಂದಾಯ ನಿರೀಕ್ಷಕರೇ ಉಪತಹಶೀಲ್ದಾರ್ ಹುದ್ದೆಯನ್ನು ಪ್ರಭಾರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರಕ್ಕೆ ಎರಡು ದಿನ (ಬುಧವಾರ, ಶನಿವಾರ) ಕೊಕ್ಕಡದಲ್ಲಿರ ಬೇಕು. ಆದರೆ ಕೆಲಸದ ಒತ್ತಡ ಹೆಚ್ಚಾದಾಗ ಅದು ಅನುಮಾನ. ಇಲ್ಲಿ ಖಾಯಂ ಉಪ ತಹಶೀಲ್ದಾರ್ ಅಗತ್ಯವಿದೆ. ಓರ್ವ ಗ್ರಾಮ ಸಹಾಯಕರಿದ್ದಾರೆ. ಕಚೇರಿ ಸಹಾಯಕಿ ಹೆರಿಗೆಗೆ ತೆರಳಿ ಒಂದು ವರ್ಷದಿಂದ ರಜೆಯಲ್ಲಿದ್ದಾರೆ. ಈಗಿರುವ ಗ್ರಾಮ ಕರಣಿಕ (ವಿ.ಎ.)ರಿಗೆ ನಾಲ್ಕು ಗ್ರಾಮಗಳ ಜವಾಬ್ದಾರಿ ಇದೆ. 27 ಗ್ರಾಮಕ್ಕೆ 15 ವಿ.ಎ. ಬೇಕಿದೆ. ಆದರೆ 14 ಮಂದಿ ಮಾತ್ರ ಇದ್ದು, ಎಲ್ಲರಿಗೂ ಹೆಚ್ಚುವರಿ ಜವಾಬ್ದಾರಿಗಳ ಹೊರೆಯಿದೆ.
ಕಲ್ಲೇರಿಯಲ್ಲಿ ನಾಡಕಚೇರಿ ತೆರೆಯಲಿ:
ಕೊಕ್ಕಡ ಬಹಳಷ್ಟು ದೂರವಾದ್ದರಿಂದ ಕÇÉೇರಿಯಲ್ಲಿ ಈಗಾಗಲೆ ಪೆಟ್ರೋಲ್ ಪಂಪ್, ಕೃಷಿಪತ್ತಿನ ಸಹಕಾರಿ ಸಂಘ, ಎಟಿಎಂ, 20 ನಿಮಿಷಕ್ಕೊಂದು ಬಸ್ ವ್ಯವಸ್ಥೆ ಎಲ್ಲವೂ ಇದೆ. ಕೊಕ್ಕಡ ತೆರಳಲು ಬಂದಾರು ಅಥವಾ ತೆಕ್ಕಾರು ವ್ಯಾಪ್ತಿಯವರು ಉಪ್ಪಿನಂಗಡಿ- ನೆಲ್ಯಾಡಿ ಯಾಗಿ ಸೇರಬೇಕು. ಹೀಗಾಗಿ ಹೋಗಿ ಬರುವುದೇ ದೊಡ್ಡ ಸಮಸ್ಯೆಯಾಗಿದೆ. 11 ಗ್ರಾಮಗಳಿಗೆ ಮಾತ್ರ ಕೊಕ್ಕಡ ನಾಡ ಕಚೇರಿ ಸನಿಹವಾಗಿದೆ. ಉಳಿದೆಲ್ಲವು ಬೆಳ್ತಂಗಡಿ ಪೇಟೆಗೆ ಹತ್ತಿರದ್ದಾಗಿದೆ.
ಹೋಬಳಿ ಗ್ರಾಮಗಳು :
ಕೊಕ್ಕಡ, ಪಟ್ರಮೆ, ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯಾ, ನಿಡ್ಲೆ, ಕಳೆಂಜ, ಧರ್ಮಸ್ಥಳ, ಬೆಳಾಲು, ಪುದುವೆಟ್ಟು, ಚಿಬಿದ್ರೆ, ಇಳಂತಿಲ, ಉರುವಾಲು, ಬಂದಾರು, ಮೊಗ್ರು, ಕಣಿಯೂರು, ತಣ್ಣೀರುಪಂತ, ಕರಾಯ, ಕಳಿಯ, ನ್ಯಾಯತರ್ಪು, ಮಚ್ಚಿನ, ತೆಕ್ಕಾರು, ಬಾರ್ಯ, ಪುತ್ತಿಲ, ಪಾರೆಂಕಿ, ಕುಕ್ಕಳ.
ಪ್ರತ್ಯೇಕಿಸಬೇಕೆಂದು ಬೇಡಿಕೆ ಇಟ್ಟ ಗ್ರಾಮ :
ಬೆಳ್ತಂಗಡಿ ಅಥವಾ ಕಣಿಯೂರು ಹೋಬಳಿ ರಚಿಸಿ ಕೊಕ್ಕಡದಿಂದ ಕುಕ್ಕಳ, ಪಾರೆಂಕಿ, ಬೆಳಾಲು, ಬಂದಾರು, ಕರಾಯ, ಕಳಿಯ, ನ್ಯಾಯತರ್ಪು, ಮಚ್ಚಿನ, ತೆಕ್ಕಾರು, ಬಾರ್ಯ ಪುತ್ತಿಲ ಗ್ರಾಮವನ್ನು ಬೇರ್ಪಡಿಸಲಿ ಎಂಬ ಕೂಗು ಸರಕಾರದ ಕದ ತಟ್ಟಿದೆ.
35 ವರ್ಷಗಳ ಹಳೆ ಕಟ್ಟಡವುಳ್ಳ ನಾಡ ಕಚೇರಿ :
1986ರಲ್ಲಿ ನಿರ್ಮಾಣವಾಗಿರುವ ಇಲ್ಲಿನ ನಾಡಕಚೇರಿ ಕಟ್ಟಡ ಇಂದೋ ನಾಳೆಯೋ ಎಂಬಂತಿದೆ. ಚುನಾವಣೆ ಇರಲಿ, ಸರಕಾರಿ ಕೆಲಸವಿರಲಿ ಎಲ್ಲವೂ ಇಲ್ಲಿಯೇ ನೆರವೇರುತ್ತದೆ. 36 ವರ್ಷಗಳಷ್ಟು ಹಳೆಯ ಹೆಂಚಿನ ಎರಡು ಕೊಠಡಿಯಲ್ಲೇ ಉಪತಹಶೀಲ್ದಾರ್, ಗ್ರಾಮ ಲೆಕ್ಕಿಗ, ಗ್ರಾಮ ಸಹಾಯಕರ ಕಚೇರಿ ಎಲ್ಲವೂ. ಸುತ್ತಮುತ್ತ 2 ಎಕ್ರೆ ಸ್ಥಳವಕಾಶವಿದ್ದರೂ ಸುಸಜ್ಜಿತ ನಾಡಕಚೇರಿ ನಿರ್ಮಾಣಕ್ಕೆ ಯಾರೂ ಚಿಂತಿಸಿಲ್ಲ. ಜನರ ಸಮಸ್ಯೆಯನ್ನ ಆಲಿಸಿ ಪ್ರಸ್ತುತ ತಾಲೂಕಿನಲ್ಲಿರುವ ಮೂರು ಹೋಬಳಿಗಳ ಪೈಕಿ ಕೊಕ್ಕಡವನ್ನು ರದ್ದುಪಡಿಸಿ ಕಣಿಯೂರು ಗ್ರಾಮವನ್ನು ಹೋಬಳಿಯನ್ನಾಗಿ ಮಾಡಿ ಹೆಚ್ಚುವರಿಯಾಗಿ ಧರ್ಮಸ್ಥಳ ಗ್ರಾಮವನ್ನ ಹೋಬಳಿ ಕೆಂದ್ರವನ್ನಾಗಿ ಮಾಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಚಿಂತನೆ ಮುನ್ನೆಲೆಯಲ್ಲಿದೆ. ಉಪತಹಶೀಲ್ದಾರ್, ದ್ವಿತೀಯ ದರ್ಜೆ ಸಹಾಯಕ, ಡಿಗ್ರೂಪ್, ಗ್ರಾಮ ಸಹಾಯಕ, ಬೆರಳಚ್ಚುಗಾರ ಹಾಗೂ ಕಚೇರಿ ಸಹಾಯಕ ಇಷ್ಟು ಜನರ ನಿರಂತರ ಸೇವೆ ಕೊಕ್ಕಡ ನಾಡಕಚೇರಿಗೆ ಆವಶ್ಯಕತೆಯಿದೆ.
ಹೋಬಳಿಯ ಸ್ಥೂಲ ನೋಟ :
- ಕೊಕ್ಕಡ ಹೋಬಳಿ ವ್ಯಾಪ್ತಿ ಗ್ರಾಮ: 27
- ಹೋಬಳಿ ವಿಸ್ತೀರ್ಣ: 1,29,521.86 ಎಕ್ರೆ
- ಹೋಬಳಿ ಜನಸಂಖ್ಯೆ: 1,03,303
- ಕೃಷಿ ಯೋಗ್ಯ ಪ್ರದೇಶ: 41,863.79 ಎಕ್ರೆ
- ಅರಣ್ಯ ಪ್ರದೇಶ: 44,716 ಎಕ್ರೆ
- ಕುಮ್ಕಿ: 4,101.00 ಎಕ್ರೆ
- ಸರಕಾರಿ ಭೂಮಿ: 23,603.21 ಎಕ್ರೆ
- ಧಾರ್ಮಿಕ ಸಂಸ್ಥೆ: 59
- ವಿದ್ಯಾ ಸಂಸ್ಥೆ: 84
- ಒಟ್ಟು ಮತಗಟ್ಟೆ: 61
- ಪ್ರಾ.ಆರೋಗ್ಯ ಕೇಂದ್ರ: 9
- ಒಟ್ಟು ಪಡಿತರ ಚೀಟಿದಾರರು: 19,187
- ನಿವೇಶನ ರಹಿತರು: 657
- ವಸತಿ ರಹಿತರು: 325
- ಕೃಷಿಕರು: 9,767
- ಒಟ್ಟು ಮನೆಗಳು: 20,815
- ಕೃಷಿ ಕಾರ್ಮಿಕರು: 8,767
- ಅಂಗನವಾಡಿ ಕೇಂದ್ರ: 51
- ನ್ಯಾಯ ಬೆಲೆ ಅಂಗಡಿ: 25
- ಸಂಧ್ಯಾ ಸುರಕ್ಷಾ: 4,325
- ಅಂಗವಿಕಲ ವೇತನದಾರರು: 1,603
- ವಿಧವಾ ವೇತನದಾರರು: 1898
ಮುಖ್ಯ ಬೆಳೆಗಳು:
- ಭತ್ತ (5,250 ಎಕ್ರೆ)
- ಅಡಿಕೆ (9,080 ಎಕ್ರೆ)
- ತೆಂಗು (2,560 ಎಕ್ರೆ)
- ಗೇರು (2,504 ಎಕ್ರೆ)
- ರಬ್ಬರ್(5,100 ಎಕ್ರೆ)
- ಕೊಕ್ಕೊ ಬೆಳೆ ಇದೆ
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.