ವಿಭಿನ್ನವಾಗಿರುವುದಕ್ಕೆ ಭಯ ಪಡಬೇಕೇ?
ಡಿಸೆಂಬರ್ 3: ವಿಶೇಷಚೇತನರ ಅಂತಾರಾಷ್ಟ್ರೀಯ ದಿನ 2021
Team Udayavani, Nov 28, 2021, 5:23 AM IST
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಐಸೋಲೇಶನ್‌ನಿಂದ ಉಂಟಾದ ಏಕತಾನತೆಯನ್ನು ಹೋಗಲಾಡಿಸುವುದಕ್ಕಾಗಿ ಇತರ ಅನೇಕರ ಹಾಗೆ ನಾನು ಕೂಡ ನೆಟ್‌ಫ್ಲಿಕ್ಸ್ ಮೊರೆಹೊಕ್ಕಿದ್ದೆ. ಅಲ್ಲಿ ಅನೇಕ ಸಿನೆಮಾಗಳು, ಧಾರಾವಾಹಿಗಳನ್ನು ವೀಕ್ಷಿಸಿದೆ. ಹಾಗೆ ಮಾಡುತ್ತಿರುವ ಸಂದರ್ಭದಲ್ಲಿ ನನ್ನೊಳಗಿದ್ದ ಕೆ-ಡ್ರಾಮಾ ಅಭಿಮಾನ ಎಚ್ಚತ್ತುಕೊಂಡಿತು, “ಇಟ್ ಈಸ್ ಒಕೆ ಟು ನಾಟ್ ಟು ಬಿ ಒಕೆ’ ಎಂಬ ಪ್ರಶಸ್ತಿ ವಿಜೇತ ಚಿತ್ರವನ್ನು ನಾನು ವೀಕ್ಷಿಸಿದೆ. ನಾನು ನೋಡಿದ ಇತರ ಕೆ-ಡ್ರಾಮಾಗಳಂತೆ ಅಲ್ಲದೆ ಈ ಚಿತ್ರದಲ್ಲಿ ವಿಭಿನ್ನ ಕಥೆ, ಸಿನೆಮಾ ಛಾಯಾಚಿತ್ರಗ್ರಹಣ ಮತ್ತು ಮಾನಸಿಕ ಆರೋಗ್ಯದ ಪ್ರಾಮುಖ್ಯದ ಬಗ್ಗೆ ಇತ್ತು. ಅಷ್ಟಕ್ಕೂ ಈಗ ಈ ಸಿನೆಮಾದ ಉಲ್ಲೇಖ ಏಕೆ ಎಂದು ಅಚ್ಚರಿಪಡುವಿರಾ? ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದು ಆಡುವ ನಿರ್ದಿಷ್ಟ ಸಂಭಾಷಣೆಯೊಂದಿದೆ, ಆಟಿಸಂ ಸ್ಪೆಕ್ಟ್ರಮ್ ಅನಾರೋಗ್ಯಕ್ಕೀಡಾಗಿರುವ 35 ವರ್ಷದ ವ್ಯಕ್ತಿಯೊಬ್ಬ ಆಡುವ ಆ ಮಾತು ನನ್ನ ಗಮನವನ್ನು ಸೆಳೆಯಿತು.
“”ವಿಭಿನ್ನವಾಗಿರುವುದಕ್ಕೆ ಭಯಪಡಬೇಕೇ?” ಎಂಬ ಮಾತು ಅದು. ಈ ಮಾತನ್ನು ಆಡುವ ಸಂದರ್ಭದಲ್ಲಿ ಆತನ ಕಣ್ಣುಗಳಲ್ಲಿ ಸಮಾಜದಿಂದ ತಿರಸ್ಕೃತಗೊಳ್ಳುವ ಭಯ ಮತ್ತು ಸ್ವೀಕೃತಿಗಾಗಿ ಆಶಾಭಾವ ಹೊಳೆಯುತ್ತಿತ್ತು.
ನಾನು ಅಂಥದ್ದೇ ಕಣ್ಣುಗಳನ್ನು ಕಂಡದ್ದು ಅದೇ ಮೊದಲ ಬಾರಿಗೇನೂ ಅಲ್ಲ. ಇತ್ತೀಚೆಗೆ ತನ್ನ ಒಂಬತ್ತು ವರ್ಷ ವಯಸ್ಸಿನ ಮಗನಿಗೆ ಆಕ್ಯುಪೇಶನಲ್ ಥೆರಪಿಗಾಗಿ ಬಂದಿದ್ದ ತಾಯಿಯೊಬ್ಬಳ ಕಣ್ಣುಗಳಲ್ಲಿ ಕೂಡ ನಾನು ಇಂಥದ್ದೇ ಭಾವನೆಗಳ ಮಿಶ್ರಣವನ್ನು ವೀಕ್ಷಿಸಿದ್ದೆ. ತನ್ನ ಮಗ ಹೇಗಿದ್ದಾನೆಯೋ ಹಾಗೆಯೇ ಸ್ವೀಕಾರಗೊಳ್ಳಬಹುದಾದ ಶಾಲೆಗೆ ಆತನನ್ನು ಕಳುಹಿಸಲು, ಆತ ತನ್ನ ಶಾಲಾಶಿಕ್ಷಣವನ್ನು ಪೂರ್ತಿಗೊಳಿಸುವಂತಾಗಲು, ತನ್ನ ವಿಶೇಷ ಅಗತ್ಯಗಳಿಗಾಗಿ ಸೇವೆಗಳನ್ನು ಸ್ವೀಕರಿಸಲು ಸಾಧ್ಯವಾಗಬಹುದೇ ಎಂಬ ನಿರೀಕ್ಷೆ ಆಕೆಯ ಕಣ್ಣುಗಳಲ್ಲಿತ್ತು. ಇಂತಹ ಅಗತ್ಯಗಳನ್ನು ಪೂರೈಸಬಲ್ಲ ಶಿಕ್ಷಣ ಸಂಸ್ಥೆಗಳನ್ನು ಶಿಫಾರಸು ಮಾಡುತ್ತಿರುವಾಗ ಭಾರತದಲ್ಲಿ ಅಂತಹ ಸಮಗ್ರ ಶಿಕ್ಷಣವನ್ನು ಒದಗಿಸುವ ಸಂಸ್ಥೆಗಳಿರುವುದು ತೀರಾ ಕಡಿಮೆ ಎಂಬ ನಿಜಾಂಶ ನನ್ನ ಅರಿವಿಗೆ ಬಂತು. ನಿಜ ಹೇಳಬೇಕೆಂದರೆ ನನಗೆ ಅಂಥ ಶಾಲೆ ಸಿಕ್ಕಿದ್ದು ಕೇವಲ ಒಂದೇ ಒಂದು. ವಿವಿಧ ಬಗೆಯ ವೈಕಲ್ಯಗಳನ್ನು ಹೊಂದಿರುವ ಲಕ್ಷಾಂತರ ಮಕ್ಕಳಿರುವ ಈ ವಿಶಾಲ ದೇಶದಲ್ಲಿ ಅಂಥವರನ್ನು ಕೂಡ ಸೇರ್ಪಡೆ ಮಾಡಿಕೊಂಡು ಸಮಗ್ರ ಶಿಕ್ಷಣ ಒದಗಿಸಬಲ್ಲ ವ್ಯವಸ್ಥೆಯಿರುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಅತ್ಯಲ್ಪವಾಗಿದೆ.
ಅಂಥ ಶಾಲೆಗಳ ಸಂಖ್ಯೆ ಕಡಿಮೆ ಇದ್ದರೆ ವಿವಿಧ ಬಗೆಯ ವೈಕಲ್ಯಗಳನ್ನು ಹೊಂದಿರುವ ಮಕ್ಕಳಿಗೂ ಶಿಕ್ಷಣ ಒದಗಿಸುವಂತಹ ಸಮಗ್ರ ಶಿಕ್ಷಣ ವ್ಯವಸ್ಥೆಯ ಅಗತ್ಯ ಇದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಖಂಡಿತ ಇದ್ದೇ ಇದೆ! ವಿಶೇಷ ಅಗತ್ಯ ಇರಲಿ, ಇಲ್ಲದಿರಲಿ; ಎಲ್ಲ ಮಕ್ಕಳಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡುವುದು ಎಲ್ಲರ ಜವಾಬ್ದಾರಿ. ಅಲ್ಲದೆ, ಶಾಲೆ ಎಂಬುದು ಕೇವಲ ಮಾಹಿತಿ, ಜ್ಞಾನವನ್ನು ಮಾತ್ರ ಸಂಪಾದನೆ ಮಾಡುವ ಸ್ಥಳವಲ್ಲ; ಅಲ್ಲಿ ಮಕ್ಕಳು ತಮ್ಮ ಬಗ್ಗೆಯೇ ಕಲಿಯುತ್ತಾರೆ, ಗೆಳೆಯ-ಗೆಳತಿಯರನ್ನು ಹೊಂದುತ್ತಾರೆ, ಜೀವನಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳುತ್ತಾರೆ. ಇನ್ನೂ ಮುಂದುವರಿಸಿ ಹೇಳುವುದಾದರೆ, ಸಮಗ್ರತೆಯ ಶಿಕ್ಷಣ ವ್ಯವಸ್ಥೆಯೊಂದರಲ್ಲಿ ಎಲ್ಲ ವಿದ್ಯಾರ್ಥಿಗಳು ಪ್ರತಿಯೊಬ್ಬರ ಅಪೂರ್ವ ಸಾಮರ್ಥ್ಯಗಳ ಬಗ್ಗೆ ಶ್ಲಾ ಸಲು, ಅಭಿಮಾನ ಹೊಂದಲು ಕಲಿಯುತ್ತಾರೆ. ಉದಾಹರಣೆಗೆ, ವಿಶೇಷ ಅಗತ್ಯವುಳ್ಳ ಮಕ್ಕಳು ಮಕ್ಕಳು ತಮ್ಮ ಹಿತವಲಯದಲ್ಲಿ ಗೆಳೆಯ -ಗೆಳತಿಯರನ್ನು ಮಾಡಿಕೊಳ್ಳಲು ಅವಕಾಶ ಸಿಗುತ್ತದೆ ಮತ್ತು ಸಮುದಾಯದಲ್ಲಿ ಸೇರ್ಪಡೆಯಾಗಿರುವ ಭಾವನೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ; ಇದರ ಪರಿಣಾಮವಾಗಿ ಅವರಲ್ಲಿ ಏನನ್ನೋ ಸಾಧಿಸಿದ ಆತ್ಮವಿಶ್ವಾಸದ ಬೆಳವಣಿಗೆಯಾಗುತ್ತದೆ. ಅವರೊಂದಿಗಿರುವ ಇತರ ಬೆಳೆಯುತ್ತಿರುವ ಮಕ್ಕಳು ಕೂಡ ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಧನಾತ್ಮಕವಾದ ಮತ್ತು ಉತ್ತಮ ಭಾವನೆಯನ್ನು ಹೊಂದಿ ಅವರನ್ನು ಇರುವ ಹಾಗೆಯೇ ಸ್ವೀಕರಿಸಲು ಕಲಿಯುತ್ತಾರೆ.
ಆದರೆ ಇಂತಹ ಸಮಗ್ರ ಶಿಕ್ಷಣ ವ್ಯವಸ್ಥೆಯಿರುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಭಾರತದಲ್ಲಿ ಕಡಿಮೆ ಇರುವುದಕ್ಕೆ ವಿರೋಧಾಭಾಸದ ವಿಚಾರ ಎಂದರೆ ನಮ್ಮ ದೇಶದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣದ ಬಗ್ಗೆ ಪ್ರಗತಿಪರ ಮತ್ತು ಸ್ಥಾಯೀ ಕಾನೂನುಗಳು ಇರುವುದು. ಜತೆಗೆ ಇಂತಹ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿಯ ಪ್ರಯತ್ನಗಳು 1974ರಷ್ಟು ಹಿಂದೆಯೇ ಆರಂಭವಾಗಿವೆ. ಆಗ ಅಂಗವಿಕಲ ಮಕ್ಕಳ ಸಮಗ್ರ ಶಿಕ್ಷಣ (ಐಇಡಿಸಿ)ಯನ್ನು ಕಲ್ಯಾಣ ಸಚಿವಾಲಯವು ಆರಂಭಿಸಿತ್ತು. ಅದು “ಅಷ್ಟೊಂದು ಸಮರ್ಥರಲ್ಲದ’ ಮಕ್ಕಳಿಗೆ ಶಿಕ್ಷಣದ ಅವಕಾಶಗಳು° ಒದಗಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರುವತ್ತ ಗಮನ ಹರಿಸಿತ್ತು. ಜತೆಗೆ 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೆ ತರಲಾಗಿದ್ದು, ಅದನ್ನು 1992ರಲ್ಲಿ ತಿದ್ದುಪಡಿಗೆ ಒಳಪಡಿಸಲಾಯಿತು, ಇದು ಎಲ್ಲರಿಗೂ ಸಮಾನವಾದ ಶಿಕ್ಷಣ ಅವಕಾಶಗಳು ಲಭ್ಯವಾಗುವ ಬಗ್ಗೆ ಒತ್ತು ನೀಡಿತ್ತು.
ಆ ಬಳಿಕದ ವರ್ಷಗಳಲ್ಲಿ ಇನ್ನಷ್ಟು ಉಪಕ್ರಮಗಳನ್ನು ಆರಂಭಿಸಲಾಯಿತು. ಇವುಗಳಲ್ಲಿ ಭಾರತೀಯ ಪುನರ್ವಸತಿ ಮಂಡಳಿ, ಅಂಗವಿಕಲರ ಕಾಯಿದೆ 1995, ಶಿಕ್ಷಣದ ಹಕ್ಕು ಕಾಯಿದೆ (ಆರ್‌ಟಿಇ) 2009 ಮತ್ತು ಅಂಗವಿಕಲರ ಹಕ್ಕುಗಳ ಕಾಯಿದೆ (ಆರ್‌ಪಿಡಬ್ಲ್ಯುಡಿ) 2016 ಸೇರಿವೆ. ಇವೆಲ್ಲವೂ ಎಲ್ಲ ಮಕ್ಕಳಿಗೂ ಶಿಕ್ಷಣದ ಹಕ್ಕುಗಳು ಸಮಾನವಾಗಿ ಸಿಗುವಂತೆ ನೋಡಿಕೊಳ್ಳುತ್ತವೆ. ಪ್ರಸ್ತುತ ಭಾರತವು ರಾಷ್ಟ್ರೀಯ ಶಿಕ್ಷಣ ನೀತಿ (2020)ಯನ್ನು ಜಾರಿಗೆ ತಂದಿದ್ದು, ಇದು ತನ್ನ ನಿಯಮಗಳು ಮತ್ತು ಅಧಿಕಾರಗಳ ಜತೆಗೆ ಭಾರತೀಯ ಸಮೃದ್ಧ ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವುದರೊಂದಿಗೆ ಹೊಸತನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಭಾರತೀಯ ಸರಕಾರವು ವಿಶೇಷ ಅಗತ್ಯಗಳುಳ್ಳ ಮಕ್ಕಳಿಗೆ ಸಮಗ್ರ ಶಿಕ್ಷಣವನ್ನು ಒದಗಿಸುವುದಕ್ಕೆ ಸಾಕಷ್ಟು ಪ್ರಾಧಾನ್ಯವನ್ನು ನೀಡಿದೆಯಾದರೂ ಈ ನೀತಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ನಾವು ಬಹಳ ಹಿಂದೆ ಬಿದ್ದಿದ್ದೇವೆ.
ಭಾರತದಲ್ಲಿ ವಿಶೇಷ ಅಗತ್ಯಗಳುಳ್ಳ ಮಕ್ಕಳಿಗೂ ಶಾಲೆಗಳಲ್ಲಿ ಸಮಗ್ರ ಶಿಕ್ಷಣವನ್ನು ಒದಗಿಸುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಅಡೆತಡೆಗಳಿಲ್ಲದ ವಾತಾವರಣ, ವಿಶೇಷ ಅಗತ್ಯಗಳುಳ್ಳ ಮಕ್ಕಳನ್ನು ಕೇಂದ್ರೀಕರಿಸಿದ ಶಿಕ್ಷಣ ಸಂಪನ್ಮೂಲಗಳು, ಹೆತ್ತವರು, ಪೋಷಕರು ಮತ್ತು ಸಮುದಾಯಗಳನ್ನು ಸೇರಿಸಿಕೊಳ್ಳುವುದು, ಶಾಲಾ ಸಂಸ್ಕೃತಿಯನ್ನು ಮರುನಿರ್ಮಿಸುವುದು ಹಾಗೂ ವಿಶೇಷ ಅಗತ್ಯಗಳುಳ್ಳ ಮಕ್ಕಳಿಗಾಗಿ ವಿವಿಧ ಶೈಕ್ಷಣಿಕ ಮತ್ತು ಶಿಕ್ಷಣೇತರ ಚಟುವಟಿಕೆಗಳನ್ನು ಒದಗಿಸುವ ವ್ಯವಸ್ಥೆಗಳನ್ನು ರೂಪಿಸುವ ಅಗತ್ಯವಿದೆ. ಜತೆಗೆ ನಿರ್ಬಂಧವಿಲ್ಲದ ಬೋಧಿಸುವ- ಕಲಿಯುವ ವಾತಾವರಣ ಹಾಗೂ ವಿಶೇಷ ಅಗತ್ಯಗಳುಳ್ಳ ಮಕ್ಕಳನ್ನು ಒಳಗೊಂಡಂತಹ ತರಗತಿ ಕೊಠಡಿಗಳಲ್ಲಿ ಎಲ್ಲ ಮಕ್ಕಳನ್ನು ನಿಭಾಯಿಸುವುದಕ್ಕೆ ಅಗತ್ಯವಾದ ಕೌಶಲಗಳನ್ನು ಶಿಕ್ಷಕ-ಶಿಕ್ಷಕಿಯರಿಗೆ ಒದಗಿಸಿಕೊಡುವ ಕೆಲಸವಾಗಬೇಕಾಗಿದೆ. ಅಲ್ಲದೆ, ನೆರವು ಸೇವೆಗಳನ್ನು ಸಮಗ್ರವಾಗಿ ಒದಗಿಸುವುದು ಬಹಳ ನಿರ್ಣಾಯಕವಾಗಿದೆ. ಇವುಗಳಲ್ಲಿ ಆಕ್ಯುಪೇಶನಲ್ ಥೆರಪಿ, ಫಿಸಿಯೋಥೆರಪಿ, ವಾಕ್ ಚಿಕಿತ್ಸೆ, ಬೇಗನೆ ಮಧ್ಯಪ್ರವೇಶ, ಮನೋಶಾಸ್ತ್ರೀಯ ವಿಶ್ಲೇಷಣೆ ಮತ್ತು ಆಪ್ತ ಸಮಾಲೋಚನೆಗಳು, ಸಮಗ್ರ ಶಿಕ್ಷಣವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಬೋಧಕ ವೃಂದದೊಡನೆ ಸಮನ್ವಯದಿಂದ ಕೆಲಸ ಮಾಡುವುದು ಸೇರಿವೆ.
ಶಾಲೆಗಳು ಭವಿಷ್ಯದ
ನಾಗರಿಕರ ತೊಟ್ಟಿಲು
ಶಾಲೆಗಳು ಈ ದೇಶದ ಭವಿಷ್ಯದ ನಾಗರಿಕರ ತೊಟ್ಟಿಲುಗಳಾಗಿವೆ. ನಮ್ಮ ದೇಶ ಯಶಸ್ವಿಯಾಗಬೇಕಾದರೆ ಎಲ್ಲರೂ ಉತ್ಪಾದಕ ಸಾಮರ್ಥ್ಯವುಳ್ಳ ನಾಗರಿಕರಾಗುವಂತಾಗುವ ಅಭಿಯಾನದಲ್ಲಿ ನಾವೆಲ್ಲರೂ ಭಾಗವಹಿಸಬೇಕಾಗಿದೆ. ವಿಶೇಷ ಅಗತ್ಯಗಳುಳ್ಳ ಮಕ್ಕಳನ್ನೂ ಸೇರ್ಪಡೆ ಮಾಡಿಕೊಂಡ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ಹೊಂದುವುದು ಇದನ್ನು ಸಾಧಿಸುವಲ್ಲಿ ಸ್ಪಷ್ಟ ಮಾರ್ಗವಾಗಿದೆ. ಅದರಿಂದ ನಮ್ಮ ನಾಗರಿಕರಲ್ಲಿ ಎಳೆಯ ವಯಸ್ಸಿನಿಂದಲೇ ಎಲ್ಲರ ವ್ಯಕ್ತಿತ್ವದಲ್ಲಿಯೇ ಬದಲಾವಣೆಗಳು ಮೈಗೂಡಲು ಸಾಧ್ಯ. ಇದರಿಂದ ವಿಭಿನ್ನವಾಗಿರುವುದು ಒಂದು ಸಮಸ್ಯೆಯಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬಲ್ಲರು, ವಿಭಿನ್ನವಾಗಿರುವುದನ್ನು ಸ್ವೀಕರಿಸದೆ ಇರುವುದೇ ಸಮಾಜದ ಅನೇಕ ಅನಿಷ್ಠಗಳಿಗೆ ಮೂಲ ಕಾರಣ ಎಂಬುದನ್ನು ಕಲಿತುಕೊಳ್ಳಬಲ್ಲರು. ಹೀಗಾಗಿ ಸಮಗ್ರತೆಯುಳ್ಳ ಶಿಕ್ಷಣ ವ್ಯವಸ್ಥೆಯು “ವಿಭಿನ್ನವಾಗಿರುವುದಕ್ಕೆ ಭಯ ಪಡಬೇಕೇ?’ ಎಂಬ ಪ್ರಶ್ನೆಗೆ “ನೀವು ಹೇಗಿರುವಿರೋ ಹಾಗೆಯೇ ನಿಮ್ಮನ್ನು ಅರ್ಥ ಮಾಡಿಕೊಳ್ಳುವವರು ಇರುವಾಗ ಭಿನ್ನವಾಗಿರುವುದರಿಂದ ಸಮಸ್ಯೆಯೇನಿಲ್ಲ’ ಎಂಬ ಉತ್ತರವನ್ನು ನೀಡಲು ಸಹಾಯ ಮಾಡಬಲ್ಲುದು.
ನವೊಮಿ ಜೋಸ್
ಸ್ನಾತಕೋತ್ತರ ವಿದ್ಯಾರ್ಥಿನಿ,
ಡಾ| ಸುಮಿತಾ ರೇಗೆ
ಅಸೋಸಿಯೇಟ್ ಪ್ರೊಫೆಸರ್, ಆಕ್ಯುಪೇಶನಲ್ ಥೆರಪಿ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.