ಮಳೆ-ಮಂಜಿನಿಂದ ಹಾಳಾಯ್ತು ಬೆಳೆ
Team Udayavani, Nov 29, 2021, 11:44 AM IST
ಅಫಜಲಪುರ: ಚಳಿಗಾಲದಲ್ಲೂ ಮಳೆ ಬಂದ ಪರಿಣಾಮ ಹಾಗೂ ವಿಪರೀತ ಮಂಜು ಬಿದ್ದಿದ್ದರಿಂದ ಹತ್ತಿ, ತೊಗರಿ, ಜೋಳದ ಬೆಳೆ ಹಾಳಾಗಿ ರೈತರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.
ತಾಲೂಕಿನ ಅಫಜಲಪುರ, ಕರ್ಜಗಿ, ಅತನೂರ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ತೊಗರಿ, ಹತ್ತಿ, ಜೋಳ ಪ್ರಮುಖ ಬೆಳೆಗಳಾಗಿವೆ. ಎಲ್ಲ ಕಡೆ ಮಳೆ ಬಂದು ಬಿಡಿಸಲು ಬಂದಿದ್ದ ಹತ್ತಿ ನೆನೆದು ಬಾಡಿ ಹೋಗಿದೆ. ಜೋಳಕ್ಕೆ ಸೈನಿಕ ಹುಳುವಿನ ಕಾಟ ಹೆಚ್ಚಾಗಿದೆ. ತೊಗರಿ ಹೂವು ಕಾಯಿ ಹಿಡಿಯುವ ಹಂತದಲ್ಲಿತ್ತು. ಈಗ ಕುಡಿ ಉದುರಿ ಬಿತ್ತಿದಷ್ಟು ಫಲ ನೀಡುತ್ತದೋ ಇಲ್ಲವೋ ಎನ್ನುವಂತಾಗಿದೆ.
ಬಿತ್ತನೆ ಕ್ಷೇತ್ರದ ಮಾಹಿತಿ
ಪ್ರಸಕ್ತ ಸಾಲಿನಲ್ಲಿ 1,30,479 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದೆ. ಈ ಪೈಕಿ 1,10,590 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ 4100 ಹೆಕ್ಟೇರ್ ಹತ್ತಿ, 66,400 ಹೆಕ್ಟೇರ್ ತೊಗರಿ, 29,500 ಹೆಕ್ಟೇರ್ ಕಬ್ಬು, 14,690 ಹೆಕ್ಟೇರ್ ಜೋಳ ಬಿತ್ತನೆಯಾಗಿದೆ. ಬಿತ್ತನೆಯಾದ ಬೆಳೆಗಳ ಪೈಕಿ ಅತಿಯಾದ ಮಳೆ ಮತ್ತು ಮಂಜಿನಿಂದಾಗಿ ಬೆಳೆ ಹಾಳಾಗಿದೆ.
ಜೋಳಕ್ಕೆ ಸೈನಿಕ ಹುಳುವಿನ ಕಾಟ
14,690 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಜೋಳಕ್ಕೆ ಸೈನಿಕ ಹುಳುವಿನ ಕಾಟ ಶುರುವಾಗಿದೆ. ಕಷ್ಟಪಟ್ಟು ರೈತ ಭೂಮಿಗೆ ಬೀಜ ಚೆಲ್ಲಿದರೇ ಹುಳುವಿನ ಕಾಟಕ್ಕೆ ರೈತ ಕಂಗಾಲಾಗಿದ್ದಾನೆ. ಕಾಳು ಚೀಲ ತುಂಬಿ ಮನೆ ಮಂದಿಗೆ ವರ್ಷದ ಗಂಜಿಯಾಗಲಿದೆ ಎಂದು ನಂಬಿದ್ದ ರೈತರಿಗೆ ಆಘಾತವಾದಂತಾಗಿದ್ದು ಸೈನಿಕ ಹುಳುವಿನ ಕಾಟಕ್ಕೆ ರೈತ ಬೇಸತ್ತಿದ್ದಾನೆ.
ಇದನ್ನೂ ಓದಿ:ಗಡಿಯಲ್ಲಿ ಮತ್ತೆ ಫುಲ್ ಟೈಟ್
ಹತ್ತಿ ಬಾಡಿ ರೈತರಲ್ಲಿ ಆತಂಕ
ಇನ್ನೂ 4100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಹತ್ತಿ ಬೆಳೆ ರೈತರ ಬಾಳನ್ನು ಬಂಗಾರ ಮಾಡಬೇಕಾಗಿತ್ತು. ಆದರೆ ಈ ಬಾರಿ ಮಂಜು ಮತ್ತು ಮಳೆಯಿಂದಾಗಿ ಹತ್ತಿ ನೆನೆದು, ಮುದುಡಿ ಬಾಡಿಕೊಳ್ಳುತ್ತಿದೆ. ರೈತರು ಹತ್ತಿ ಬಿಡಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಒಳ್ಳೆಯ ಬೆಲೆ ಸಿಗದಂತಾಗಿದೆ. ಹೀಗಾಗಿ ಸಾಲ ಮಾಡಿದ್ದ ರೈತರಿಗೆ ದಾರಿತೋಚದಂತಾಗಿದೆ.
ಉದುರಿದೆ ತೊಗರಿ ಕುಡಿ
ಈ ಭಾಗದ ಪ್ರಮುಖ ಬೆಳೆಯಾಗಿರುವ ತೊಗರಿ ಈ ಬಾರಿ 66,400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಳ್ಳೆಯ ಫಸಲು ಬರುವ ಸಮಯದಲ್ಲೇ ಮಳೆ, ಮಂಜು ಬಿದ್ದು ತೊಗರಿ ಕುಡಿ ಉದುರಿ, ಹೂವು ಕಾಯಿ ಕಡಿದು ಬಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ನೆಲ ಕಚ್ಚಿದ ಕಬ್ಬು
ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬು ಕೂಡ ರೈತರ ಕೈ ಹಿಡಿಯುವ ಲಕ್ಷಣ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ರೈತರು ಯಾವ ಬೆಳೆ ನಂಬಿದರೂ ಅದಕ್ಕೆ ತದ್ವಿರುದ್ಧವಾಗಿ ಪ್ರಕೃತಿ ಬದಲಾಗುತ್ತಿದೆ.
ಸರ್ಕಾರಕ್ಕೆ ಒತ್ತಾಯ
ಅಕಾಲಿಕ ಮಳೆ, ಮಂಜಿನಿಂದ ಬೆಳೆ ಹಾಳಾಗಿ ಕೈ ಸುಟ್ಟುಕೊಂಡಿದ್ದೇವೆ. ಸರ್ಕಾರ ಕಷ್ಟದಲ್ಲಿರುವ ರೈತರ ಬೆನ್ನಿಗೆ ನಿಂತು ಪರಿಹಾರ ನೀಡುವ ಕೆಲಸ ಮಾಡಲಿ ಎಂದು ಬಂದರವಾಡದ ದಾನಯ್ಯ ಹಿರೇಮಠ, ಅತನೂರಿನ ರವಿ ಬಿರಾದಾರ ಒತ್ತಾಯಿಸಿದ್ದಾರೆ.
35,990 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಪೈಕಿ 15 ಸಾವಿರ ಹೆಕ್ಟೇರ್ ಹಾನಿ ಕುರಿತು ಡಾಟಾ ಎಂಟ್ರಿ ಕೆಲಸ ನಡೆದಿದೆ. ಉಳಿದ ಸರ್ವೇಯ ಡಾಟಾ ಎಂಟ್ರಿ ಆಗಬೇಕಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಜಂಟಿಯಾಗಿ ಸರ್ವೇ ಮಾಡಿದೆ. ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. -ನಾಗಮ್ಮ ಎಂ.ಕೆ, ತಹಶೀಲ್ದಾರ್
ತಾಲೂಕು ಆಡಳಿತ ಎಚ್ಚೆತ್ತು ಸರ್ವೇ ಕಾರ್ಯ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕರ ಕೂಡಲೇ ರೈತರ ಖಾತೆಗಳಿಗೆ ಪರಿಹಾರಧನ ಹಾಕುವ ಕೆಲಸ ಮಾಡಬೇಕು. -ರಾಜೇಂದ್ರ ಪಾಟೀಲ ರೇವೂರ (ಬಿ), ಕಾಂಗ್ರೆಸ್ ಮುಖಂಡ
ಜೋಳದ ಬೆಳೆಗೆ ಸೈನಿಕ ಹುಳುವಿನ ಕಾಟವಿರುವ ಕುರಿತು ಮಾಹಿತಿ ಬಂದಿದೆ. ರೈತರು ಆತಂಕ ಪಡುವ ಬದಲಾಗಿ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಡೆಲಿಗೇಟ್ ಔಷಧ ಸಿಂಪಡಿಸಿದರೆ ಸೈನಿಕ ಹುಳುವಿನ ಕಾಟಕ್ಕೆ ಮುಕ್ತಿ ಸಿಗುತ್ತದೆ. ನಾವು ಕೂಡ ಇಲಾಖೆ ವತಿಯಿಂದ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. -ಎಚ್.ಎಸ್. ಗಡಗಿಮನಿ, ಸಹಾಯಕ ಕೃಷಿ ನಿರ್ದೇಶಕ
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.