ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ
Team Udayavani, Dec 1, 2021, 6:02 PM IST
1. ಹಣಕಾಸು ಇಲ್ಲದಿದ್ದರೆ ಹೊಸ ತಾಲೂಕು ರದ್ದುಪಡಿಸಿಬಿಡಿ
ಹೊಸದಾಗಿ ಘೋಷಿಸಿದ 50 ತಾಲೂಕುಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಸರ್ಕಾರದ ಈ ಕಾರ್ಯವೈಖರಿಗೆ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ. “ಹಣ ಒದಗಿಸಲು ಆಗುತ್ತಿಲ್ಲ ಎಂದಾದರೆ ಹೊಸ ತಾಲೂಕುಗಳನ್ನು ರದ್ದುಪಡಿಸಿ ಬಿಡಿ’ ಎಂದು ಕೋರ್ಟ್ ಸರ್ಕಾರಕ್ಕೆ ಕಟು ಮಾತಿನ ಚಾಟಿ ಬೀಸಿದೆ.
2. ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ
ಕೋವಿಡ್-19 ರೂಪಾಂತರಿ ಒಮಿಕ್ರಾನ್ ಭೀತಿಯನ್ನು ರಾಜ್ಯ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲರಿಗೂ ಇಂದಿನಿಂದ ವಿಮಾನ ನಿಲ್ದಾಣದಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಈ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಂಚಿಕೊಂಡಿದ್ದಾರೆ.
3. ಸಂಸತ್ತಿನಲ್ಲಿ ಅಗ್ನಿ ಅವಘಡ
ಚಳಿಗಾಲದ ಅಧಿವೇಶನ ನಡೆಯುತ್ತಿರುವ ವೇಳೆ ಸಂಸತ್ತಿನಲ್ಲಿ ಲಘು ಅಗ್ನಿ ಅವಘಡ ಸಂಭವಿಸಿದೆ. ಸಂಸತ್ತಿನ ಕೊಠಡಿ ಸಂಖ್ಯೆ 59ರಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
4. ಭದ್ರತಾ ಪಡೆ ಎನ್ ಕೌಂಟರ್ ಗೆ ಜೈಶ್ ಕಮಾಂಡರ್ ಬಲಿ
ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಉನ್ನತ ಕಮಾಂಡರ್ ಹತ್ಯೆಯಾಗಿದ್ದಾನೆ. ಈತನ ಜೊತೆಗೆ ಉಳಿದ ಎರಡು ಉಗ್ರರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
5. ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ..!
ಪ್ರತಿಭಟನೆ ನಡೆಸುತ್ತಿರುವ ವೇಳೆ ಸಾವನ್ನಪ್ಪಿರುವ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಧನ ನೀಡಲಿದೆಯೇ ಎಂದು ವಿಪಕ್ಷಗಳು ಅಧಿವೇಶನದಲ್ಲಿ ಪ್ರಶ್ನಿಸಿದವು. ಇಂದು ಈ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ತೋಮರ್, ರೈತರ ಸಾವಿನ ಕುರಿತು ಕೃಷಿ ಸಚಿವಾಲಯದಲ್ಲಿ ಯಾವುದೇ ಅಂಕಿ ಅಂಶಗಳಿಲ್ಲ ಎಂದು ಉತ್ತರಿಸಿದ್ದಾರೆ.
6. ಕ್ರಿಪ್ಟೋ ವಿಧೇಯಕ ಪರಿಷ್ಕರಿಸಿ ಮಂಡನೆ
ಬಿಟ್ಕಾಯಿನ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ವಿಧೇಯಕವನ್ನು ರೂಪಿಸಿದೆ. ಈ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಿದ ಬಳಿಕ ಸಂಸತ್ನಲ್ಲಿ ಕೇಂದ್ರ ಮಂಡಿಸಲಿದೆ. ಇದನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
7. ಟ್ರೆಂಡಿಂಗ್ ನಲ್ಲಿದೆ ರಾಧೆ ಶ್ಯಾಮ್ ಚಿತ್ರದ ಹೊಸ ಹಾಡು
ಭಾರೀ ನಿರೀಕ್ಷೆ ಹುಟ್ಟಿಸಿರುವ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್’ ಚಿತ್ರದ ಹೊಸ ಹಾಡೊಂದು ಇಂದು ಬಿಡುಗಡೆಯಾಗಿದೆ. ಚಿತ್ರತಂಡ ಇಂದು ‘ಆಶಿಕಿ ಆ ಗಯಿ’ ಎಂಬ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಸದ್ಯ ಇದು ಟ್ರೆಂಡಿಂಗ್ ನಲ್ಲಿದೆ.
8. ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ
ಕೆಲವು ದಿನಗಳ ಕಾಯುವಿಕೆ ಈಗ ಅಂತ್ಯವಾಗಿದೆ. ಮಂಗಳವಾರ ರಾತ್ರಿ ಐಪಿಎಲ್ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಮೋಯಿನ್ ಅಲಿ ಮತ್ತು ಋತುರಾಜ್ ಗಾಯಕ್ವಾಡ್ ರನ್ನು ಸಿಎಸ್ ಕೆ ಮುಂದಿನ ಸೀಸನ್ ಗೆ ತನ್ನಲ್ಲಿ ಉಳಿಸಿಕೊಂಡಿದೆ.