ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ
Team Udayavani, Dec 3, 2021, 11:40 AM IST
“ಆಜಾದೀ ಕಾ ಅಮೃತ್ ವರ್ಷ್’- ಇದರ ಸಂಭ್ರಮದಷ್ಟೇ, ಸ್ವತಂತ್ರ ಭಾರತದ ಪ್ರಜಾತಂತ್ರ ಮೌಲ್ಯಗಳ ಸಂರಕ್ಷಣೆಯೂ ನಮ್ಮೆಲ್ಲರ ಸಾಮಾ ಜಿಕ ಹೊಣೆಗಾರಿಕೆ. ಜನತಂತ್ರದ ಪ್ರಧಾನ ಹೆಗ್ಗುರುತು ಅಥವಾ ತಿರುಳು ಎನ್ನಿಸುವಂತಹದು ಮಹಾ ಜನ ಸಮುದಾಯದ ಪ್ರತಿನಿಧೀಕರಣ. ಏಕೆಂದರೆ ಗ್ರೀಕ್ ಭಾಷೆಯ “ಡೆಮೋ’ ಎಂದರೆ ಜನತೆ “ಕ್ರೆಟೋ’ ಎಂದರೆ ಆಡಳಿತ- ಇದರಿಂದ ಉತ್ಪತ್ತಿಯಾದ ಆಂಗ್ಲ ಶಬ್ದ ಡೆಮೊಕ್ರೆಸಿ ಅರ್ಥಾತ್ ಪ್ರಜಾಪ್ರಭುತ್ವ. ಇದಕ್ಕೆ ತನ್ನದೇ ಆದ ತೌಲಾನಿಕ ಹಿರಿಮೆಯಿದೆ.
ಪ್ರಾಚೀನ ಗ್ರೀಕ್ ನಗರ ರಾಜ್ಯಗಳಂತೆ ಅಥವಾ ಆಧುನಿಕ ಸ್ವಿಟ್ಸರ್‌ಲ್ಯಾಂಡ್‌ನಂತೆ ನೇರ ಪ್ರಜಾಪ್ರಭುತ್ವದ ಸಾಧ್ಯತೆಯೇ ಇಲ್ಲದಾಗ, ನಮ್ಮ ಸಂವಿಧಾನ ಪರೋಕ್ಷ ಪ್ರಜಾತಂತ್ರಕ್ಕೆ ಕದ ತೆರೆಯಿತು. ತತ್ಪರಿಣಾಮವಾಗಿ ಕೇಂದ್ರದ ಸಂಸತ್‌ನಿಂದ ಗ್ರಾಮದ ಪಂಚಾಯತ್ ವರೆಗೆ “ಮತ ನೀಡಿ-ಪ್ರತಿನಿಧಿ ಆರಿಸಿ’ ಎಂಬ ತಣ್ತೀಕ್ಕೆ ಮಣೆ ಹಾಕಲಾಯಿತು. ಆದರೆ ಅದರ ಸತ್ವವನ್ನು ಅರಿತು ಮತವನ್ನು ದಾನ ಮಾಡದೆ, ಅದನ್ನು ಒಪ್ಪಂದ ಎಂಬ ಸಮೀಕರಣದೊಂದಿಗೆ ಸ್ವೀಕರಿಸಲೇಬೇಕಾದ ಮಟ್ಟಕ್ಕೆ ನಮ್ಮ ಜನತಂತ್ರ ವ್ಯವಸ್ಥೆ ಮುಟ್ಟಿದೆ. ಅಂತಹ ಮಾನಸಿಕ ಸಿದ್ಧತೆ, ಅಷ್ಟೇ ಪ್ರಬುದ್ಧತೆ ಹಾಗೂ ಬದ್ಧತೆ ಒಂದೆಡೆ ಮತದಾರರಲ್ಲಿ, ಇನ್ನೊಂದೆಡೆ ಪ್ರತಿನಿಧಿ ಸಭೆಯೊಳಗೆ ಆಸೀನರಾಗುವ ಪ್ರತಿನಿಧಿಗಳಲ್ಲಿ ಆವಿಯಾದರೆ ಆಗ? ವಿಶ್ವದ ಜನ ಸಂಖ್ಯಾತ್ಮಕವಾದ ಪ್ರಪ್ರಥಮ ಪ್ರಜಾಪ್ರಭುತ್ವ ಏರುಗತಿಯಲ್ಲಿ ಇರದೆ ಜಾರುವ ದಾರಿಯಲ್ಲಿದೆ- ಎಂದೇ ಭವಿಷ್ಯದ ಇತಿಹಾಸಕಾರರು ಈ 75ನೇ ಸಂವತ್ಸರದ ಕಾಲ ಘಟ್ಟದ ಬಗೆಗೆ ವಿಶ್ಲೇಷಿಸಲೇ ಬೇಕಾಗುತ್ತದೆ.
“ಶ್ವೇತ ವಸ್ತ್ರ ತುಂಬಾ ಸುಂದರವಾಗಿದೆ; ನುಣುಪಾಗಿದೆ’ ಎಂಬ ಶ್ಲಾಘನೆ ಗೌಣವಾಗಿ, ಅದರಲ್ಲೊಂದು ಕಪ್ಪು ಕಲೆ ಕಂಡಾಗ ಅದೇ ಎದ್ದು ಕಾಣುವುದು ಲೋಕರೂಢಿ. ಅದೇ ರೀತಿ ಸಂಸತ್‌ನಲ್ಲಿ ಅಥವಾ ವಿಧಾನ ಮಂಡಲದಲ್ಲಿ ಸದಸ್ಯರು ತಮ್ಮ ನಿರರ್ಗಳ ವಾಕ³ಟುತ್ವದಿಂದ, ಜನಮನದ ಆಶಯವನ್ನು ಸಮರ್ಥವಾಗಿ ಬಿಂಬಿಸಿದರು; ಸರಕಾರೀ ಧೋರಣೆಯ ಲೋಪದೋಷಗಳನ್ನು ರಚನಾತ್ಮಕ ಟೀಕೆಗಳಿಂದ ಎತ್ತಿ ತೋರಿಸಿದರು.. ಹೀಗೆಲ್ಲ ಶಹಭಾಸ್‌ಗಿರಿಯ ಪಂಕ್ತಿಗಳು ಸುದ್ದಿ ಮಾಧ್ಯಮದ ಗ್ರಾಸ ಆಗುವುದೇ ಇಲ್ಲ! ಬದಲಾಗಿ ಸಭಾಧ್ಯಕ್ಷರ ಮೇಜಿನೆಡೆಗೆ ಪತ್ರಗಳನ್ನು ಹರಿದು ತೂರಿದರು; ಸಭಾಂಗಣದ ಬಾವಿಗೆ (Well of the House) ಧುಮುಕಿ ಘೋಷಣೆ ಕೂಗಿದರು; ಆಸನದ ಮೇಲೇರಿ ಕಿರುಚಿದರು; ಅಂಗಿ ಹರಿದುಕೊಂಡು ಬೊಬ್ಬಿರಿದರು; ಪರಸ್ಪರ ಕೈಕೈ ಮಿಲಾಯಿಸಿದರು; ಆ್ಯಂಬುಲೆನ್ಸ್‌ನಲ್ಲಿ ರವಾನಿಸಲಾಯಿತು. – ಇಂತಹ ಘಟನಾವಳಿಗಳು ನೇರ (Live)ಸುದ್ದಿಗಳಾಗಿ ಅಥವಾ Breaking News ಆಗಿ ಮನೆಮನದ ವಸ್ತು ಸ್ಥಿತಿ ಎನಿಸಿದೆ. ಅದೇ ರೀತಿ ಭಾರತದ ಪ್ರಚಲಿತ ರಾಜಕೀಯ ಸ್ಥಿತ್ಯಂತರಗಳೇ, ಮುಂಬರುವ ಶತಮಾನದ ಅಥವಾ ದ್ವಿ ಶತಮಾನದ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಮುನ್ನುಡಿ ಎನಿಸಬೇಕೇ.
ಇದನ್ನೂ ಓದಿ:ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು
ವ್ಯಕ್ತಿಗತ ಬದುಕಿನಂತೆ ರಾಷ್ಟ್ರ ಜೀವನವೂ ಸದಾ ಸರಳ ರೇಖೆಯಂತಿರುವುದಿಲ್ಲ. ಆದರೆ ನಮ್ಮ ಜನತಂತ್ರದ ಮೇಲೆರಗಬಹುದಾದ ಚಂಡಮಾರುತದ ಅಪಾಯದ ಮುನ್ಸೂಚನೆ ಯಂತೆ ಪ್ರತಿನಿಧಿತ್ವದ ಕೆಂಪು ಫಲಕದಲ್ಲಿ ಮುಂಜಾಗರೂಕತೆಯ ದಪ್ಪ ಅಕ್ಷರಗಳೂ ಸ್ಪಷ್ಟವಾಗಿ ಮೂಡಿ ಬರಲೇಬೇಕಾಗಿದೆ. “ಹಿರಿ ಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎಂಬಂತೆ ಕೇಂದ್ರದ ಮೇಲ್ಮನೆ, ಕೆಳಮನೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರಗಳ ಬಗೆಗೆ ಗಂಭೀರ, ವಿಷಯಾಧಾರಿತ ಚರ್ಚೆಗಳು ಹೃಸ್ವಗೊಳ್ಳುತ್ತಿವೆ. ಆದರೆ ಅಧಿವೇಶನಾವಧಿಯ ಖರ್ಚು ವೆಚ್ಚಗಳ ಸೂಚ್ಯಂಕ ಮಾತ್ರ ಕೋಟಿ ರೂಪಾಯಿಗಳಲ್ಲಿ ಏರುತ್ತಿವೆ. ಅದೇ ಹೆಚ್ಚುಗಾರಿಕೆ ರಾಜ್ಯಗಳ ವಿಧಾನ ಮಂಡಲ, ನಗರಸಭೆ, ಅಷ್ಟೇಕೆ ಗ್ರಾಮ ಪಂಚಾಯತ್‌ನ ಕುರ್ಚಿಗಳ ಮಧ್ಯೆಯೂ ಪ್ರದರ್ಶನಗೊಳ್ಳುತ್ತಲೇ ಸಾಗಿದೆ. ಈ ಬಗ್ಗೆ ಚಿಕಿತ್ಸಕ ಮನೋಭೂಮಿಕೆ, ಮತದಾರರ ಸಕಾರಾತ್ಮಕ ಗಂಗೋತ್ರಿಯಿಂದಲೇ ಜಿನುಗಬೇಕಾಗಿದೆ.
ಚುನಾವಣ ಪೂರ್ವದ ಮತಬೇಟೆಯ ದಿನಗಳಲ್ಲಿಯೇ ಈ ಜನಜಾಗೃತಿಯ ಪರ್ವ ಶುಭಾರಂಭಗೊಳ್ಳಬೇಕಾಗಿದೆ. ನಮ್ಮಿಂದ ಆರಿಸಿ ಹೋದ ಮೇಲೆ 1) ಶಾಸನ ಸಭೆಯ ಕುರ್ಚಿಗಳ ಮೇಲೆ ನಿಂತು ಕಿರಿಚಾಡುವುದಿಲ್ಲ.
2) ಅಸಂಸದೀಯ (unparliamentary)ಶಬ್ದಗಳನ್ನು ಪ್ರಯೋಗಿಸುವುದಿಲ್ಲ. 3) ಸಭಾಘನತೆಗೆ ಅಪಚಾರ ಎಸಗುವುದಿಲ್ಲ. 4) ಜನಮನದ ಆಶಯ ಪ್ರತಿಫಲನಕ್ಕೆ ಸೂಕ್ತ ವಿಧಾನಗಳನ್ನೇ ಪ್ರತಿನಿಧಿ ಸಭೆಯೊಳಗೆ ಬಳಸುತ್ತೇವೆ. 5) ಅಧಿವೇಶನಕ್ಕೆ ಅಡ್ಡಿ ಒಡ್ಡುವುದಿಲ್ಲ – ಹೀಗೆ ಸಾಲು ಸಾಲು ಮುಚ್ಚಳಿಕೆಯನ್ನು ಪಡೆಯಬೇಕಾದ ಘಟ್ಟ ಮುಟ್ಟಿದ್ದೇವೆ. ಇಂತಹ ವಿಚಾರಗಳು ನೂತನ ಸಂಪ್ರದಾಯ (New Conventions)ಗಳಾಗಿ ಅಥವಾ “ಸಾಂವಿಧಾನಿಕ ನಿರ್ದೇಶನ’ (Constitutional Directions)ಗಳಾಗಿ ಮೂಡಿ ಬರಲೇಬೇಕಾಗಿದೆ. ಇನ್ನು ಭೌತಿಕ ಹಾಜರಾತಿ (Physical Presence)ಅದರೊಂದಿಗೆ ನಿಗದಿಗೊಳಿಸಬಹುದು; ಆದರೆ ಮಾನಸಿಕ ಹಾಜರಾತಿ (Mental Presence) ಬಗ್ಗೆ ಯಾವುದೇ ತೆರನಾಗಿ ಕಾನೂನಿನ ಜೀವತಂತು ಹೆಣೆಯಲು ಸಾಧ್ಯವಿಲ್ಲ ತಾನೇ?
ಈ ಎಲ್ಲ ವಿಚಾರಗಳಲ್ಲಿ ರಾಜಕೀಯ ಪಕ್ಷಗಳೂ ತಮ್ಮ ಪ್ರಬುದ್ಧತೆಯನ್ನು, ಅಂತೆಯೇ ಗೆರೆಗಳೊಳಗೇ ಆಟವಾಡುವ ಸತ್ ಸಂಪ್ರದಾಯವನ್ನು ಮೈಗೂಡಿಸಿ ಕೊಳ್ಳಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ, ಅದೇ ರೀತಿ ಆರಿಸಿ ಬಂದ ಪಕ್ಷ ಪ್ರತಿನಿಧಿಗಳಿಗೆ ಅರಿವಿನ ಕೊರತೆ ನೀಗಿಸಲು ಅಗತ್ಯವಿದ್ದಾಗ “ವಿಪ್’ ಮೂಲಕ ಎಚ್ಚರಿಸಬೇಕು. ಅಂತೆಯೇ ನೈಜ ಪ್ರತಿನಿಧೀಕರಣ ಹಾಗೂ ಜಾಹೀರಾತು ರಾಜಕಾರಣದ ಮಧ್ಯೆ ಗೆರೆಯನ್ನು ಗುರುತಿಸಲು ಪ್ರಶಿಕ್ಷಣ ನೀಡಬೇಕು. ಏಕೆಂದರೆ ಸಮಗ್ರ ಪ್ರಜಾತಂತ್ರ ವ್ಯವಸ್ಥೆಯ ಮೂಲ ತಂತುವೇ, ಜನ ಮನದ ಅರಿವು, ಜನಾಶಯದ ಪ್ರತಿಫಲನ. ಆ ಮೂಲ ಧಾತುವೇ ಆವಿಯಾಗುವ ತೆರದಲ್ಲಿ ಪ್ರತಿನಿಧಿ ಸಭಾಂಗಣ ರಣಾಂಗಣವಾಗಿ ಮಾರ್ಪಾಡಾಗಬಾರದು. ಸುದ್ದಿ ಮಾಧ್ಯಮದಲ್ಲಿ ಸುಂಟರಗಾಳಿಯಂತೆ ಈ ವಿದ್ಯಮಾನಗಳೇ ಮೇಲಿಂದ ಮೇಲೆ ಅಪ್ಪಳಿಸಿದಾಗ, ಪ್ರಾಯಶಃ ಇದೇ ಜನತಂತ್ರವೇನೋ ಎಂಬ ಭ್ರಮೆ, ನೀರಸ ಪ್ರತಿಕ್ರಿಯೆ, ಮಾಮೂಲಿತನದ ನಿರ್ಲಿಪ್ತತೆ ಪ್ರಜಾ ಸಮುದಾಯದಲ್ಲಿ ಬೇರೂರುವ ಸಾಧ್ಯತೆಯಿದೆ. ಇವೆಲ್ಲವನ್ನೂ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಗಂಭೀರವಾಗಿ ಯೋಚಿಸ ಬೇಕು. ದೇಶದ ಜನತಂತ್ರದ ಉಳಿವಿಗಾಗಿ ಇದು ಇಂದಿನ ಆವಶ್ಯಕತೆ ಮತ್ತು ಅನಿವಾರ್ಯತೆ.
-ಡಾ| ಪಿ. ಅನಂತಕೃಷ್ಣ ಭಟ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.