ಧರ್ಮಸ್ಥಳ: ಕೆರೆಕಟ್ಟೆ ಉತ್ಸವವನ್ನು ನೋಡುವುದೇ ಒಂದು ಚಂದ
Team Udayavani, Dec 3, 2021, 3:23 PM IST
ಧರ್ಮಸ್ಥಳ: ಧರ್ಮಸ್ಥಳದ ಲಕ್ಷದೀಪೋತ್ಸವವನ್ನು ನೋಡಲು ಎರಡು ಕಣ್ಣುಗಳು ಸಾಲದು. ಅದರಲ್ಲಿಯೂ 5 ದಿನಗಳಕಾಲ ನೆಡೆಯುವ ಕಟ್ಟೆ ಪೂಜೆಯನ್ನು ನೋಡಿ ದೇವರ ಕೃಪೆಗೆ ಪಾತ್ರರಾಗುವುದರಲ್ಲಿಯೂ ಒಂದು ಧನ್ಯತಾ ಮನೋಭಾವವಿದೆ.
ಮೊದಲನೇ ದಿನ ಹೊಸಕಟ್ಟೆ ಉತ್ಸವ, ಎರಡನೇ ದಿನ ಕೆರೆಕಟ್ಟೆ ಉತ್ಸವ, ಮೂರನೇ ದಿನ ಲಲಿತೋದ್ಯಾನ ಉತ್ಸವ, ನಾಲ್ಕನೇ ದಿನ ಕಂಚಿಮಾರುಕಟ್ಟೆ ಉತ್ಸವ, ಐದನೇ ದಿನ ಗೌರಿಮಾರುಕಟ್ಟೆ ಉತ್ಸವ ಹೀಗೆ 5 ದಿನಗಳ ಉತ್ಸವದ ನಂತರ ಆರನೇ ದಿನ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ಜರಗುತ್ತದೆ.
ಈ ಉತ್ಸವ ಪೂಜಾ ಕಾರ್ಯಕ್ರಮವೆಲ್ಲ ರಾತ್ರಿ 9 ರ ನಂತರ ಜರಗುವುದರಿಂದ ಎಲ್ಲಿ ನೋಡಿದರಲ್ಲಿ ಒಂದೊಂದು ಬಣ್ಣದ ಬೆಳಕಿನ ಸರಗಳು ನಮ್ಮನ್ನು ಸ್ವಾಗತಿಸುತ್ತಿರುತ್ತವೆ. ಬಳೆ, ಸರ, ಕಿವಿ ಓಲೆ, ಉಂಗುರ ಇವೆಲ್ಲವೂ ತನ್ನ ಸೌಂದರ್ಯವನ್ನು ಒಂದು ಪಟ್ಟು ಹೆಚ್ಚಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿರುತ್ತವೆ.
ಇನೊಂದು ಕಡೆ ವಿವಿಧ ಖಾದ್ಯಗಳು ನಾಸಿಕಕ್ಕೆ ಬಡಿಯುವ ಹಾಗೆ ಪರಿಮಳವನ್ನು ಬೀಸುತ್ತಿರುತ್ತದೆ. ಅದರ ಮದ್ಯದಲ್ಲಿ ಎಲ್ಲಿ ನೋಡಿದರಲ್ಲಿ ಭಕ್ತಾದಿಗಳು ದೇವರ ದರ್ಶನಕ್ಕಾಗಿ ಬರಿಗಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುವ ದೃಶ್ಯ ಕಾಣಸಿಗುತ್ತಿರುತ್ತದೆ.
ಪಾದಯಾತ್ರೆಯಿಂದ ಆರಂಭವಾದ ದೀಪೋತ್ಸವದ ಎರಡನೇ ದಿನದ ಕೆರೆಕಟ್ಟೆ ಉತ್ಸವ ವಿಜೃಂಭಣೆಯಿಂದ ಸಾಗಿದೆ.
ದೇವಾಲಯದ ದೇವಳದಲ್ಲಿ ಅಷ್ಟಾವದಾನ ಸೇವೆ ಸಲ್ಲಿಸಿದ ನಂತರ ದೇವರ ಮೂರ್ತಿಯನ್ನು ದೇವಸ್ಥಾನದ ಎದುರುಗಡೆ ಇರುವ ಕೆರೆಕಟ್ಟೆಗೆ ತಂದು ಅಲ್ಲಿ ಪ್ರದಕ್ಷಿಣೆಹಾಕಿ ಪೂಜೆ ಸಲ್ಲಿಸಿದರು. ತದನಂತರ ದೇವರ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ದೇವಾಲಯದ ಸುತ್ತ ಒಂದು ಪ್ರದಕ್ಷಿಣೆಯನ್ನು ಹಾಕಲಾಯಿತು.
ದೇವರನ್ನು ಹತ್ತಿರದಿಂದ ನೋಡಿ ದೇವರ ಕೃಪೆಗೆ ಪಾತ್ರರಾಗಲು ಭಕ್ತಾದಿಗಳಿಗೆ ಇಂದೊಂದು ಸದಾವಕಾಶವಾಗಿತ್ತು. ಇದರ ಜೊತೆಗೆ ಅಲ್ಲಿ ಇದ್ದ ಆನೆ ಮತ್ತು ಬಸವ ಎಲ್ಲರ ಗಮನವನ್ನು ಸೆಳೆಯುತ್ತಿದ್ದವು.
ಆನೆಯ ಬಳಿ ಭಕ್ತರು ಆಶೀರ್ವಾದ ಪಡೆದುಕೊಳ್ಳುವ ಮೂಲಕ ಖುಷಿಪಡುತ್ತಿದ್ದರು. ಹೀಗೆ ಎರಡನೇ ದಿನದ ಉತ್ಸವ ಬಣ್ಣ ಬಣ್ಣದ ಬೆಳಕು, ದೇವರ ಪೂಜೆ, ವಿವಿಧರೀತಿಯ ವಾದ್ಯ( ಜಾಗಟೆ, ಶಂಖ, ಡ್ರಮ್ಸೆಟ್, ತಬಲ ) ಇವುಗಳಿಂದ ಕೂಡಿತ್ತು.
– ಮಧುರಾ ಎಲ್ ಭಟ್ಟ. ಎಸ್ ಡಿ ಎಂ ಕಾಲೇಜ್ ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.