ಅಜಾತಶತ್ರುವಿನ ಅಪರೂಪದ ಸಿನೆಯಾನ
Team Udayavani, Dec 5, 2021, 6:20 AM IST
ಕನ್ನಡ ಚಿತ್ರರಂಗದಲ್ಲಿ ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದ, ಮೇಕಪ್ ಸಹಾಯಕ, ಕೆಮರಾಮನ್ ಸಹಾಯಕ, ಸಹಾಯಕ ನಿರ್ದೇಶಕ, ನಿರ್ದೇಶಕ, ನಿರ್ಮಾಪಕ ಮತ್ತು ನಟನಾಗಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದ ಶಿವರಾಮ್ (84) ಇನ್ನು ನೆನಪು ಮಾತ್ರ. ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ, ಬೆಳೆದು ಬಳಿಕ ಬೆಳ್ಳಿಪರದೆಯ ಮುಂದೆ, ಹಿಂದೆ ನೂರಾರು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಶಿವರಾಮ್ ಕನ್ನಡ ಚಿತ್ರರಂಗದ ಸುದೀರ್ಘ ಬೆಳವಣಿಗೆಯಲ್ಲಿ ಜತೆಗಿದ್ದು, ಪ್ರತ್ಯಕ್ಷ ಸಾಕ್ಷಿಯಾಗಿದ್ದವರು.
1938ರಲ್ಲಿ ಆಗಿನ ಬ್ರಿಟಿಷ್ ಸರಕಾರದ ಭಾಗವಾಗಿದ್ದ ಮದ್ರಾಸ್ ಪ್ರಾಂತ್ಯದ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ್ದ ಶಿವರಾಮ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೇ ಪೂರೈಸಿ ಬಳಿಕ ತಮ್ಮ ಹಿರಿಯ ಸೋದರನೊಂದಿಗೆ ಬೆಂಗಳೂರಿಗೆ ಬಂದರು. ಬಾಲ್ಯದಲ್ಲಿಯೇ ಗುಬ್ಬಿ ವೀರಣ್ಣ ಅವರ ವೃತ್ತಿ ರಂಗಭೂಮಿ (ನಾಟಕ ಕಂಪೆನಿ)ಯ ನಾಟಕ ಗಳಿಂದ ಸಾಕಷ್ಟು ಪ್ರೇರಿತರಾಗಿದ್ದ ಶಿವರಾಮ್, ಗುಬ್ಬಿ ವೀರಣ್ಣ ಅವರ ನಾಟಕ ಕಂಪೆನಿ ಮೂಲಕವೇ ಬಣ್ಣದ ಬದುಕಿಗೆ ಕಾಲಿಟ್ಟರು. ಆರಂಭದಲ್ಲಿ ಮೇಕಪ್ ಸಹಾಯಕ ನಾಗಿ, ತೆರೆಹಿಂದೆ ಕೆಲಸ ಮಾಡಿದ್ದ ಶಿವರಾಮ್, ಅನಂತರ ನಾಟಕಗಳಲ್ಲಿ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿನಯದಲ್ಲೂ ಸೈ ಎನಿಸಿಕೊಂಡರು. ಬಳಿಕ ಅಲ್ಲಿಂದ ಚಿತ್ರರಂಗವನ್ನು ಪ್ರವೇಶಿಸಿದ ಶಿವರಾಮ್, ಮೊದಲಿಗೆ ಕೆಮರಾಮನ್ ಸಹಾಯಕ, ಸಹಾಯಕ ನಿರ್ದೇಶಕನಾಗಿ ಚಿತ್ರರಂಗದಲ್ಲಿ ತೆರೆಹಿಂದೆ ಮತ್ತು ತಾಂತ್ರಿಕ ವಿಭಾಗದಲ್ಲಿ ಕೆಲವು ವರ್ಷ ಅನುಭವ ಪಡೆದುಕೊಂಡರು. 1958ರಲ್ಲಿ ಅವರು ಕು.ರಾ ಸೀತಾರಾಮಶಾಸಿŒ ಅವರ ಜತೆಗೆ ಸಹಾಯಕ ನಿರ್ದೇಶಕನಾಗಿ ಮೊದಲ ಬಾರಿಗೆ ಕೆಲಸ ಮಾಡಿದ ಶಿವರಾಮ್, 1965ರಲ್ಲಿ ತೆರೆಕಂಡ “ಬೆರೆತ ಜೀವ’ ಚಿತ್ರದ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ನಿಧಾನವಾಗಿ ನಟನಾಗಿ ಮುನ್ನೆಲೆಗೆ ಬಂದ ಶಿವರಾಮ್, ಅನಂತರದ ವರ್ಷಗಳಲ್ಲಿ ನೂರಾರು ವಿಭಿನ್ನ ಪಾತ್ರಗಳಿಗೆ ತಮ್ಮನ್ನು ತೆರೆದುಕೊಂಡರು.
ವಿಭಿನ್ನ ಪಾತ್ರಗಳಲ್ಲಿ ನಟನೆ :
ಹಿರಿಯ ನಟ ಶಿವರಾಮಣ್ಣ ತಮ್ಮ ಸಿನೆಮಾ ಕೆರಿಯರ್‌ನಲ್ಲಿ ಸಾಕಷ್ಟು ವಿಭಿನ್ನ ಪಾತ್ರ ಹಾಗೂ ಜನಪ್ರಿಯ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವರ ಅನೇಕ ಚಿತ್ರಗಳು, ಪಾತ್ರಗಳು ಇಂದಿಗೂ ಕಣ್ಣಮುಂದೆ ಬರುತ್ತವೆ. ಅದರಲ್ಲಿ ಕೆಲವು ಪಾತ್ರಗಳನ್ನು ಉದಾಹರಿಸುವುದಾದರೆ “ಶರಪಂಜರ’ದ ಅಡುಗೆ ಭಟ್ಟನ ಪಾತ್ರ, “ನಾಗರಹಾವು’ ಚಿತ್ರದ ವರದನ ಪಾತ್ರಗಳನ್ನು ಇಂದಿಗೂ ಸಿನೆಮಾ ಪ್ರೇಮಿಗಳು ಮರೆತಿಲ್ಲ. ಇದರ ಜತೆಗೆ “ಲಗ್ನಪತ್ರಿಕೆ’, “ಎಡಕಲ್ಲು ಗುಡ್ಡದ ಮೇಲೆ’, “ಹೊಂಬಿಸಿಲು’, “ಶುಭಮಂಗಳ’, “ಬಂಗಾರದ ಪಂಜರ’, “ಹೊಸ ಬೆಳಕು’, “ಯಜಮಾನ’, ಗಣೇಶನ ಮದುವೆ’, “ಸಿಪಾಯಿ ರಾಮು’, “ಗುರು ಶಿಷ್ಯರು’, “ಆಪ್ತಮಿತ್ರ’, “ಬಂಗಾರ ಸನ್‌ಆಫ್ ಬಂಗಾರದ ಮನುಷ್ಯ’… ಹೀಗೆ ಸಾಕಷ್ಟು ಸಿನೆಮಾಗಳಲ್ಲಿ ಶಿವರಾಮಣ್ಣ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಉತ್ತಮ ಸಂಘಟಕ :
ಶಿವರಾಮ್ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ ಆರು ದಶಕಗಳ ಕಾಲ ಸಿನೆಮಾದ ಬೇರೆ ಬೇರೆ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವುದರ ಜತೆಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗುವಂತಹ ಹಲವು ಕಾರ್ಯಕ್ರಮಗಳನ್ನು ಮುಂಚೂಣಿಯಲ್ಲಿ ನಿಂತು ನಡೆಸಿದ ಖ್ಯಾತಿ ಕೂಡಾ ಶಿವರಾಮ್ ಅವರದು. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಾರ್ಯ ಕಾರಿ ಸಮಿತಿಯಲ್ಲಿ ಹಲವು ವರ್ಷಗಳ ಕಾಲ ಕಾರ್ಯದರ್ಶಿ ಯಾಗಿ ಶಿವರಾಮ್ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜತೆಗೆ ಹಲವು ಸಂಘ ಸಂಸ್ಥೆಗಳ ಸದಸ್ಯರಾಗಿಯೂ ತೊಡಗಿಸಿಕೊಂಡಿದ್ದ ಅವರು, ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಸಮರ್ಥನಂ ಸಂಸ್ಥೆಗಾಗಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿ, ಅದರಿಂದ ಬಂದ ಹಣವನ್ನು ಸಂಸ್ಥೆಗೆ ನೀಡಿದ್ದರು. ಹೀಗೆ ಕೇವಲ ನಟನಾಗಿಯಷ್ಟೇ ಉಳಿಯದೇ ಹಲವು ಸಮಾಜ ಮುಖೀ ಕಾರ್ಯಗಳ ಮೂಲಕ ಅನೇಕರಿಗೆ ಸಹಾಯವಾದವರು ಶಿವರಾಮ್.
ಅಯ್ಯಪ್ಪನ ಪರಮಭಕ್ತ : ಶಿವರಾಮ್ ಅವರು ಅಯ್ಯಪ್ಪನ ಪರಮಭಕ್ತರಾಗಿದ್ದರು. ಹಲವು ವರ್ಷಗಳಿಂದ ಮಾಲಾಧಾರಣೆ ಮಾಡಿ, ಶಬರಿಮಲೆಗೆ ಹೋಗಿಬರುತ್ತಿದ್ದ ಶಿವರಾಮ್, ಕನ್ನಡ ಚಿತ್ರರಂಗದ ಅನೇಕರು ಶಬರಿ ಮಲೆ ಮಾಲಾಧಾರಣೆ ಮಾಡಲು ಪ್ರೇರಣೆಯಾಗಿದ್ದರು. ಜತೆಗೆ ಗುರುಸ್ವಾಮಿಯಾಗಿ ಅನೇಕರಿಗೆ ಅಯ್ಯಪ್ಪನ ಮಾಲಾಧಾರಣೆ ಕೂಡಾ ಮಾಡಿದ್ದರು. ನಟ ಶಿವರಾಜ್‌ಕುಮಾರ್ ಸೇರಿದಂತೆ ಅನೇಕ ನಟರು ಶಿವರಾಮ್ ಅವರ ಜತೆ ಶಬರಿ ಮಲೆಗೆ ಹೋಗಿ ಬಂದಿದ್ದರು. ಅಯ್ಯಪ್ಪನ ಪೂಜೆಗಾಗಿಯೇ ಮನೆಯ ಟೆರೇಸ್ ಮೇಲೆ ಪ್ರತ್ಯೇಕ ಜಾಗ ಮಾಡಿಕೊಂಡಿದ್ದ ಶಿವರಾಮ್, ಬಹುತೇಕ ಸಮಯವನ್ನು ಪೂಜೆಯಲ್ಲಿ ಕಳೆಯುತ್ತಿದ್ದರು. ಇತ್ತೀಚೆಗೆ ಅಯ್ಯಪ್ಪನ ಪೂಜೆ ಮಾಡುವಾಗಲೇ ಕುಸಿದು ಬಿದ್ದಿದ್ದ ಶಿವರಾಮ್ ಅವರನ್ನು ಅನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿರ್ಮಾಪಕರಾಗಿ ಹಲವು ಸಿನೆಮಾ :
ಶಿವರಾಮ್ ಅವರು ಕೇವಲ ನಟರಾಗಿಯಷ್ಟೇ ಗುರುತಿಸಿಕೊಂಡವರಲ್ಲ. ನಿರ್ದೇಶನ, ನಿರ್ಮಾಣ ವಿಭಾಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಸಹೋದರ ರಾಮನಾಥ್ ಅವರೊಂದಿಗೆ ಸೇರಿ ಚಿತ್ರಜ್ಯೋತಿ ಕಂಬೈನ್ಸ್ ಆರಂಭಿಸಿದ್ದ ಇವರು, ಅನಂತರ ರಾಶಿ ಪಿಕ್ಚರ್ ಶುರು ಮಾಡಿದರು. ಆ ಬ್ಯಾನರ್‌ನಡಿ ಹಲವು ಸಿನೆಮಾಗಳನ್ನು ನಿರ್ಮಿಸಿದ್ದರು. ನಿರ್ಮಾಪಕರಾಗಿ ಪುಟ್ಟಣ್ಣ ಕಣಗಾಲ್ ಅವರ “ಗೆಜ್ಜೆಪೂಜೆ’, “ಉಪಾಸನೆ’, “ನಾನೊಬ್ಬ ಕಳ್ಳ’, “ಡ್ರೈವರ್ ಹನುಮಂತು’, “ಧರ್ಮದೊರೈ
, “ಬಹಳ ಚೆನ್ನಾಗಿದೆ’ ಚಿತ್ರಗಳನ್ನು ನಿರ್ಮಿಸಿ ಯಶಸ್ವಿ ಎನಿಸಿಕೊಂಡಿದ್ದರು. ಶಿವರಾಮ್ ಅವರು, ತಮ್ಮ ಸಹೋದರ ರಾಮ್‌ನಾಥ್ ಅವರೊಂದಿಗೆ ಸೇರಿಕೊಂಡು ಡಾ| ರಾಜ್- ಭಾರತಿ ನಟನೆಯ “ಹೃದಯ ಸಂಗಮ’ ಚಿತ್ರವನ್ನು ನಿರ್ದೇಶಿಸಿದ್ದರು. ಕಾಮಿಡಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿವರಾಮ್, “ಡ್ರೈವರ್ ಹನುಮಂತು’ ಚಿತ್ರದಲ್ಲಿ ನಾಯಕ ನಟರಾಗಿಯೂ ನಟಿಸಿದ್ದರು. ನಟನೆಗೆ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ರಾಜ್ಯೋತ್ಸವ ಪ್ರಶಸ್ತಿ, “ತಾಯಿ ಸಾಹೇಬ’ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗಳು ಬಂದಿವೆ.
ಕನ್ನಡ ಚಿತ್ರರಂಗದ ಹಿರಿ-ಕಿರಿಯರೊಂದಿಗೆ ಅವಿನಾಭಾವ ನಂಟು :
ಕನ್ನಡ ಚಿತ್ರರಂಗದಲ್ಲಿ ತೆರೆಮುಂದೆ ಮತ್ತು ತೆರೆಹಿಂದೆ ಎರಡೂ ಕಡೆ ಗುರುತಿಸಿಕೊಂಡಿದ್ದ ಶಿವರಾಮ್, ಕನ್ನಡ ವರನಟ ಡಾ| ರಾಜಕುಮಾರ್, ಪುಟ್ಟಣ್ಣ ಕಣಗಾಲ…, ವಿಷ್ಣುವರ್ಧನ್, ಶಂಕರನಾಗ್, ಅಂಬರೀಶ್, ಭಾರತಿ, ಬಿ. ಸರೋಜಾದೇವಿ, ಲೀಲಾವತಿ ಅವರಿಂದ ಈಗಿನ ನಟರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಸುದೀಪ್… ಹೀಗೆ ಬಹುತೇಕ ಎಲ್ಲ ಕಲಾವಿದರು, ನಿರ್ಮಾಪಕರು, ನಿರ್ದೇಶಕರ ಜತೆ ಆತ್ಮೀಯ ಒಡನಾಟ ಮತ್ತು ನಂಟು ಹೊಂದಿದ್ದರು.
ನಮ್ಮ ಕುಟುಂಬದೊಂದಿಗೆ ಮೊದಲಿನಿಂದಲೂ ಅತ್ಯಂತ ಆತ್ಮೀಯ ನಂಟು ಹೊಂದಿದ್ದವರು. ನಮ್ಮ ಕುಟುಂಬದ ಏನೇ ಕಾರ್ಯಕ್ರಮಗಳಾಗಲಿ, ಅವರು ಮನೆಯ ಹಿರಿಯ ಸದಸ್ಯನಂತೆ ಎದುರಿಗೆ ನಿಂತು ಅದನ್ನು ಮುನ್ನಡೆಸಿಕೊಡುತ್ತಿದ್ದರು. ಅಪ್ಪ, ಅಮ್ಮನಿಗೂ ಅವರು ಬಹಳ ಆತ್ಮೀಯರಾಗಿದ್ದರು. ನಮ್ಮ ಕುಟುಂಬದ ಬಗ್ಗೆ ಅವರಿಗಿದ್ದ ಪ್ರೀತಿ, ಗೌರವ ಮಾತುಗಳಲ್ಲಿ ಹೇಳಲಾಗದು. ಅವರ ನಿಧನ ನಮ್ಮ ಕುಟುಂಬದ ಮತ್ತೂಬ್ಬರನ್ನು ಕಳೆದುಕೊಂಡಿದ್ದೇವೆ ಎನ್ನುವಷ್ಟೇ ದುಃಖ ನೀಡುತ್ತಿದೆ.–ಶಿವರಾಜಕುಮಾರ್, ನಟ
ಶಿವರಾಮ್ ಅವರ ನಿಧನದ ಸುದ್ದಿ ತಿಳಿದು ವಿಷಾದವಾಯಿತು. ಅವರು ಧರ್ಮಸ್ಥಳದ ಅಭಿಮಾನಿ ಭಕ್ತರಾಗಿದ್ದು ಅನೇಕ ಬಾರಿ ಕ್ಷೇತ್ರಕ್ಕೆ ಬಂದಿದ್ದರು. ಅವರ ಮನೆಯಲ್ಲಿದ್ದ ಬೃಹತ್ ಗ್ರಂಥಾಲಯ ನೋಡಿ ಅವರ ಸಾಹಿತ್ಯಾಸಕ್ತಿ ಹಾಗೂ ಪುಸ್ತಕ ಪ್ರೀತಿ ಬಗ್ಗೆ ನನಗೆ ಅಭಿಮಾನ ಮೂಡಿತ್ತು. ಸರಳ ಸಜ್ಜನಿಕೆಯ ಕಲಾವಿದರನ್ನು ಕಳೆದುಕೊಂಡು ನಾಡು ಬಡವಾಗಿದೆ.-ಡಾ| ಡಿ. ವೀರೇಂದ್ರ ಹೆಗ್ಗಡೆ,ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ
ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ಕಲಾವಿದ ಶಿವರಾಮ್ ಅವರ ನಿಧನ ತುಂಬಾ ದುಃಖದ ವಿಷಯ. ಶಿವರಾಮ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ದಶಕಗಳ ಕಾಲ ತಮ್ಮ ಅಮೋಘ ನಟನೆಯ ಮೂಲಕ ಕಲಾಸೇವೆಗೈದ ಶಿವರಾಮ್ ಅವರ ನೆನಪು ನಮ್ಮೊಂದಿಗೆ ಸದಾ ಜೀವಂತವಾಗಿರಲಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಅಗಲಿಕೆ ದುಃಖ ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.–ಸಿದ್ದರಾಮಯ್ಯ, ವಿಪಕ್ಷ ನಾಯಕ
ಶಿವರಾಮ್ ನಿಧನದಿಂದ ನಾಡು ಹಿರಿಯ ಕಲಾವಿದರನ್ನು ಕಳೆದುಕೊಂಡಂತಾಗಿದೆ. ಅನೇಕ ಸಂದರ್ಭಗಳಲ್ಲಿ ಅವರನ್ನು ಭೇಟಿ ಮಾಡಿದ್ದು, ಅವರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಅತೀವ ನೋವನ್ನು ತಂದಿದೆ. ಕುಟುಂಬ, ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ.–ಬಿ. ಎಸ್ ಯಡಿಯೂರಪ್ಪ, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.