ಕರಾವಳಿಯ ವಾಜಪೇಯಿ ಖ್ಯಾತಿಯ ರಾಮ ಭಟ್
Team Udayavani, Dec 7, 2021, 6:40 AM IST
ಪುತ್ತೂರು: ಪುತ್ತೂರಿನ ಪ್ರಸಿದ್ಧ ಉರಿಮಜಲು ಮನೆತನಕ್ಕೆ ಸೇರಿದ ರಾಮ ಭಟ್ ರಾಷ್ಟ್ರ ಮಟ್ಟದ ನಾಯಕರಾಗಿ ಗಮನ ಸೆಳೆದವರು. 1929ರಲ್ಲಿ ಜನಿಸಿದ ಅವರು ಬೆಳಗಾವಿಯಲ್ಲಿ ಕಾನೂನು ಪದವಿ ಪಡೆದು ಮಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದರು. ಹೆಂಚಿನ ಕಾರ್ಖಾನೆ ಕಾರ್ಮಿಕರ ಸಮಸ್ಯೆ ವಿರುದ್ಧ ಹೋರಾಟಕ್ಕೆ ಇಳಿದು ಸಾರ್ವಜನಿಕ ಜೀವನಕ್ಕೆ ಧುಮುಕಿದ್ದರು. 1951ರಲ್ಲಿ ಭಾರತೀಯ ಜನಸಂಘ ಸ್ಥಾಪನೆಯಾದಾಗ ಅದರಲ್ಲಿ ಸಕ್ರಿಯವಾಗಿ ತೊಡಗಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರಿ ಸುಮಾರು 60 ವರ್ಷಗಳ ಕಾಲ ಜನಸಂಘ, ಬಿಜೆಪಿ ಪಕ್ಷದ ನೇತರರಾಗಿ ಕರಾವಳಿಯ ವಾಜಪೇಯಿ ಎಂದೇ ಜನಜನಿತರಾಗಿದ್ದರು.
ವಿಧಾನಸಭೆಗೆ ಸ್ಪರ್ಧೆ
1957ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರ ಒತ್ತಾಸೆಯಂತೆ ಪುತ್ತೂರಿನಲ್ಲಿ ಕಣಕ್ಕಿಳಿದ ರಾಮ ಭಟ್ ಮೊದಲ ಚುನಾವಣೆಯಲ್ಲಿ 11,684 ಮತ ಗಳಿಸಿ ಪರಾಜಿತರಾದರು. ಅನಂತರ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾದ ಅವರು 1962, 1967 ಮತ್ತು 1972ರಲ್ಲೂ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.
ಪ್ರಥಮ ಬಿಜೆಪಿ ಶಾಸಕ
1980ರಲ್ಲಿ ಜನಸಂಘದ ಉತ್ತರಾಧಿಕಾರಿ ಯಾಗಿ ಬಿಜೆಪಿ ಸ್ಥಾಪನೆಯಾದಾಗ ರಾಮ ಭಟ್ ಬಿಜೆಪಿ ನಾಯಕರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡರು. 1983ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕಾಂಗ್ರೆಸ್‌ನ ಬಿ. ಸಂಕಪ್ಪ ರೈ ಅವರನ್ನು ಸೋಲಿಸಿ 2ನೇ ಬಾರಿ ಶಾಸಕರಾದರು. ತನ್ಮೂಲಕ ಬಿಜೆಪಿಯ ಮೊದಲ ಶಾಸಕ ಎಂಬ ಹಿರಿಮೆಗೆ ಪಾತ್ರರಾದರು. 1985ರಲ್ಲಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ ರಾಮ್ ಭಟ್ ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆ ಎದುರು ಪರಾಜಯಗೊಂಡರು. ಅನಂತರ ಚುನಾವಣ ರಾಜಕೀಯದಿಂದ ಹಿಂದೆ ಸರಿದರು. ಡಿ.ವಿ. ಸದಾನಂದ ಗೌಡ ಅವರನ್ನು ಅಖಾಡಕ್ಕೆ ಇಳಿಸಿದರು. 1989ರಲ್ಲಿ ರಾಮ ಭಟ್ಟರ ಶಿಷ್ಯರಾದ ಸದಾನಂದ ಗೌಡ ಮೊದಲ ಯತ್ನದಲ್ಲಿ ಸೋತರೂ 1994ರಲ್ಲಿ 2ನೇ ಪ್ರಯತ್ನದಲ್ಲಿ ಗೆಲುವು ಸಾಧಿಸಿದರು.
ಕ್ಯಾಂಪ್ಕೋ ಅಧ್ಯಕ್ಷರಾಗಿ ಸೇವೆ
ಕ್ಯಾಂಪ್ಕೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಮ ಭಟ್, ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿ ಜೈಲು ಸೇರಿ ದ್ದರು. ರಾಜಕೀಯ ಸಿದ್ಧಾಂತವಾದಿ ಎಂದೇ ಹೆಸರಾಗಿದ್ದ ಅವರು ಶುದ್ಧ ಹಸ್ತ ರಾಜಕಾರಣಿ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದರು.
ಸ್ವಾಭಿಮಾನಿ ಬಳಗದಲ್ಲಿ ರಾಮ ಭಟ್
ಡಿ.ವಿ. ಸದಾನಂದ ಗೌಡರು ಸಂಸದರಾದ ಮೇಲೆ ತನ್ನ ಶಿಷ್ಯೆ ಶಕುಂತಳಾ ಶೆಟ್ಟಿ ಅವರನ್ನು 2004ರಲ್ಲಿ ಪುತ್ತೂರು ಶಾಸಕರನ್ನಾಗಿ ಮಾಡಿದ ಕೀರ್ತಿ ರಾಮ ಭಟ್ ಅವರದ್ದು. ಶಕುಂತಳಾಗೆ 2008ರಲ್ಲಿ 2ನೇ ಬಾರಿ ಬಿಜೆಪಿ ಟಿಕೆಟ್ ಸಿಗದೇ ಹೋದಾಗ ಪಕ್ಷದ ವಿರುದ್ಧವೇ ಬಂಡಾಯ ವೆದ್ದ ರಾಮ ಭಟ್ ಸ್ವಾಭಿಮಾನಿ ವೇದಿಕೆ ಹುಟ್ಟುಹಾಕಿದರು. ಈ ಮೂಲಕ ಶಕುಂತಳಾ ಶೆಟ್ಟಿ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಿ 20 ಸಾವಿರಕ್ಕೂ ಅಧಿಕ ಮತ ಪಡೆದು ತನ್ನ ಸಾಮರ್ಥ್ಯ ತೋರ್ಪಡಿಸಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಸ್ವತಃ ರಾಮ ಭಟ್ ಬಿಜೆಪಿ ಅಭ್ಯರ್ಥಿ ನಳಿನ್ ವಿರುದ್ಧವೇ ಪಕ್ಷೇತರರಾಗಿ ಕಣಕ್ಕಿಳಿದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮತ್ತೆ ಬಿಜೆಪಿ ಜತೆ ಗುರುತಿಸಿಕೊಂಡರು.
ಪುತ್ತೂರು ಪುರಸಭೆ ರಚನೆಯಾದಾಗ ಮೊದಲ ಚುನಾಯಿತ ಆಡಳಿತ ಜನಸಂಘಕ್ಕೆ ಪ್ರಾಪ್ತವಾಗಿದ್ದು, ಆಗ ರಾಮ ಭಟ್ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಇದನ್ನೂ ಓದಿ:ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ ರಾಮ್ ಭಟ್ ವಿಧಿವಶ
ಆಡ್ವಾಣಿಗೆ ಕನ್ನಡ ಕಲಿಸಿದ್ದ ರಾಮ ಭಟ್
1975-76ರ ಕಾಲಘಟ್ಟದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿದ ರಾಮ ಭಟ್ ಬೆಂಗಳೂರಿನಲ್ಲಿ ಜೈಲಿನಲ್ಲಿದ್ದಾಗ ಹಿರಿಯ ಬಿಜೆಪಿ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಕೂಡ ಅದೇ ಸೆಲ್ ನಲ್ಲಿದ್ದರು. ಆಗ ರಾಮ ಭಟ್ಟರು ಆಡ್ವಾಣಿಯವರಿಗೆ ಕನ್ನಡ ಕಲಿಸಿದ್ದರು. ಜೈಲಿನಲ್ಲಿದ್ದಷ್ಟು ಸಮಯ ಕನ್ನಡ ಓದುವಷ್ಟು ಕಲಿತಿದ್ದರು ಆಡ್ವಾಣಿ. ಈ ವಿಷಯವನ್ನು ಸ್ವತಃ ಆಡ್ವಾಣಿ ಯವರೇ ಬಳಿಕ ಹಂಚಿಕೊಂಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಜತೆಗೂ ನಿಕಟ ಸಂಪರ್ಕ ಹೊಂದಿದ್ದ ರಾಮ ಭಟ್, 1996ರಲ್ಲಿ ವಾಜಪೇಯಿ ಪ್ರಧಾನಿಯಾಗುವ ಕೆಲ ಸಮಯದ ಮೊದಲು ಪುತ್ತೂರಿಗೆ ಬಂದಿದ್ದರು.ಆಗ ವಾಜಪೇಯಿ ಅವರ ಬಗ್ಗೆ ಮಾತನಾಡಿದ ರಾಮ ಭಟ್, ಭಾರತೀಯರ ಹೃದಯ ವಿಹಾರಿ.. ಅಟಲ ಬಿಹಾರಿ.. ಅಟಲ ಬಿಹಾರಿ..ಎಂಬ ಕವನ ವಾಚಿಸಿ ಗಮನ ಸೆಳೆದಿದ್ದರು.
ಆಂದೋಲನದಲ್ಲೂ
ಪ್ರಮುಖ ಪಾತ್ರ: ಪೇಜಾವರ ಶ್ರೀ
ಉಡುಪಿ: ರಾಜಕೀಯ ಮುತ್ಸದ್ದಿ, ಮಾಜಿ ಶಾಸಕ ಉರಿಮಜಲು ರಾಮ ಭಟ್ಟರ ನಿಧನಕ್ಕೆ ಪೇಜಾವರ ಶ್ರೀಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ನಿಷ್ಠೆ ಸಿದ್ಧಾಂತಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದ ಶ್ರೀಯುತರು ಅಯೋಧ್ಯೆ ರಾಮಜನ್ಮಭೂಮಿ ಆಂದೋಲನದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಪುತ್ತೂರಿನಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸ್ಥಾಪನೆ ಪ್ರಮುಖರಲ್ಲಿ ಒಬ್ಬರಾಗಿ ಆ ಭಾಗದಲ್ಲಿ ಮೌಲಿಕ ಶಿಕ್ಷಣದ ಪ್ರವರ್ಧನೆಯಲ್ಲಿ ಮುಂಚೂಣಿ ಯಲ್ಲಿದ್ದರು. ಸಾಮಾಜಿಕ, ಸಾಂಸ್ಕೃತಿಕವಾಗಿಯೂ ಅವರ ಸೇವೆ ನಾಡಿಗೆ ಸಂದಿದೆ. ಮೌಲಿಕ ರಾಜಕಾರಣದ ಪ್ರತಿನಿಧಿಯಾಗಿದ್ದು ಅನೇಕರನ್ನು ಆ ದಾರಿಯಲ್ಲಿ ಬೆಳೆಯಲು ಮಾರ್ಗದರ್ಶನ ಮಾಡಿರುವ ಭಟ್ಟರು ಶ್ರೀ ಮಠ ಹಾಗೂ ಗುರುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸೋತಿದ್ದು ದೀನದಯಾಳರ ಮಾತಿನ ಮೋಡಿಗೆ;
ಅಖಾಡಕ್ಕೆ ಇಳಿದದ್ದು ಮೌಲ್ಯಗಳ ಪ್ರತಿಪಾದನೆಗೆ
ಉರಿಮಜಲು ರಾಮ ಭಟ್ ಮೊದಲು ಮನ ಸೋತದ್ದು ಭಾರತೀಯ ಜನಸಂಘದ ಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಮಾತಿನ ಪ್ರಖರತೆಗೆ.
ರಾಮ ಭಟ್ ಅವರೇ ಈ ಹಿಂದೆ ಮಾಧ್ಯಮವೊಂದರಲ್ಲಿ ಹಂಚಿಕೊಂಡ ಅಭಿಪ್ರಾಯದಂತೆ, “ಮಂಗಳೂರಿನ ಟೌನ್ ಹಾಲ್‌ನಲ್ಲಿ ಚುನಾವಣೆ ಯಲ್ಲಿ ಸ್ಪರ್ಧೆಯತ್ತ ಆಸಕ್ತಿ ಹೊಂದಿದ್ದ ಯುವ ಜನರನ್ನು ಉದ್ದೇಶಿಸಿ ದೀನ್ ದಯಾಳ ಉಪಾಧ್ಯಾಯರು ಮಾತನಾಡಿದರು. ಅದನ್ನು ಕೇಳಿದ ನನಗೆ ಮಾತೇ ಹೊರಡಲಿಲ್ಲ, ಮೂಕವಿಸ್ಮಿತನಾಗಿ ಕೇಳುತ್ತಾ ಹೋದೆ. ಅದು ನನ್ನೊಳಗೆ ಸ್ಫೂರ್ತಿಯ ಕಿಡಿಯನ್ನು ಹೊತ್ತಿಸಿತು’.
ಆಗ ಜನಸಂಘವು ಚುನಾವಣೆಯಲ್ಲಿ ಸ್ಪರ್ಧೆಗೆ ನಿಲ್ಲಲು ಆಸಕ್ತಿ ತೋರುವ ಯುವಜನರನ್ನು ಕಲೆ ಹಾಕುತ್ತಿತ್ತು. ಹಾಗೆಂದು ಬರಿಯ ನಾಯಕರು ಬೇಕಿರಲಿಲ್ಲ. ಬದಲಾಗಿ ತಳ ಮಟ್ಟದಲ್ಲೂ ಜನರ ಸಂಪರ್ಕ ಹೊಂದಿರುವ, ಪ್ರಾಮಾಣಿಕ ಹಾಗೂ ಪರಿಶ್ರಮ ಪಡುವಂಥ ಯುವ ಪಡೆಯೇ ಬೇಕಿತ್ತು. ಜತೆಗೆ ಚುನಾವಣೆಯಲ್ಲೂ ಪ್ರಸ್ತುತವಾಗಿರಬೇಕೆಂಬುದು ಸಂಘದ ಲೆಕ್ಕಾಚಾರವಾಗಿತ್ತು. ಆ ಹೊತ್ತಿಗೆ ಜನಸಂಘದ ನಾಯಕರ ಕಣ್ಣಿಗೆ ಬಿದ್ದದ್ದು ರಾಮ ಭಟ್.
ಪ್ರಬಲ ರಾಷ್ಟ್ರೀಯವಾದಿಯಾಗಿದ್ದ ರಾಮ ಭಟ್, ಇಂದಲ್ಲ ನಾಳೆ ನಾವು ಯಶಸ್ಸು ಕಂಡೇ ಕಾಣುತ್ತೇವೆ (ಜನಸಂಘ) ಎಂದು ಅಚಲ ಆತ್ಮವಿಶ್ವಾಸ ಹೊಂದಿದ್ದವರು. 1957ರ ಚುನಾವಣೆಯಲ್ಲಿ ಚುನಾವಣೆಗೆ ಸ್ಫರ್ಧಿಸಿ ಸೋತರು. ಆದರೆ ಠೇವಣಿ ಉಳಿಸಿಕೊಂಡ ಜನಸಂಘ ಮೂಲದ ಏಕೈಕ ಅಭ್ಯರ್ಥಿ ರಾಮ ಭಟ್ ಆಗಿದ್ದರಂತೆ.
“ಮೊದಲ ಬಾರಿಗೆ ನಾವು ಸೋತಿರಬಹುದು. ಮುಂದೊಂದು ದಿನ ಗೆದ್ದೇ ಗೆಲ್ಲುತ್ತೇವೆ’ ಎಂದು ವಿಶ್ವಾಸ ತೋರ್ಪಡಿಸಿದ್ದರು. ಅದು ನಿಜವಾದದ್ದು 1977ರಲ್ಲಿ. ಪುತ್ತೂರಿನಿಂದ ವಿಧಾನಸಭೆಗೆ ಆಯ್ಕೆಯಾದರು.
ನಿಷ್ಠುರವಾದಿ ಮತ್ತು ಮೌಲ್ಯಗಳ ಪ್ರತಿಪಾದಕ. ತಾವು ನಂಬಿದ್ದ ಮೌಲ್ಯಗಳನ್ನು ಪಾಲಿಸಿಕೊಂಡು, ಎಲ್ಲೂ ಹೊಂದಾಣಿಕೆಯ ರಾಜಕಾರಣಕ್ಕೆ ಸಿಲುಕದೆ, ಮೌಲ್ಯಾಧಾರಿತ ರಾಜಕಾರಣವನ್ನು ಮಾಡಿದವರು ರಾಮ ಭಟ್. ಎಂದೂ ಗಾಳಿ ಬಂದ ಕಡೆ ತೂರಿಕೊಂಡವರೂ ಅಲ್ಲ, ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡವರೂ ಅಲ್ಲ.
ಒಳ್ಳೆಯ ರಾಜಕಾರಣಕ್ಕೆ ಮುನ್ನುಡಿ ಬರೆದವರು. ಅನಂತರದ ಸನ್ನಿವೇಶ ಗಳಲ್ಲಿ ಬಿಜೆಪಿ ಬಿಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ತಮ್ಮ ಮೌಲ್ಯ ಪ್ರತಿಪಾದನೆಯನ್ನು ಮಾಡಿದವರು. ಯಾವ ಸೋಲೂ ಸಹ ರಾಮ ಭಟ್ ಅವರೊಳಗಿನ ಮೌಲ್ಯವನ್ನು ಕೊಲ್ಲಲಿಕ್ಕೆ ಅವಕಾಶವೇ ಕೊಡಲಿಲ್ಲ. ಸ್ವಾಭಿಮಾನಿ ವೇದಿಕೆ ರಚಿಸಿದ್ದೂ ಸಹ ಮೌಲ್ಯಗಳ ಸಂರಕ್ಷಣೆಗಾಗಿಯೇ ಹೊರತು ಅವಕಾಶವಾದಿತನಕ್ಕಲ್ಲ ಎಂಬುದು ಆ ಬಳಿಕ ಕೆಲವೇ ತಿಂಗಳುಗಳಲ್ಲಿ ಸಾಬೀತಾಯಿತು.
ತಮ್ಮ ರಾಜಕೀಯ ಗರಡಿಯಲ್ಲಿ ಹಲವರನ್ನು ತಯಾರು ಮಾಡಿದ ಕೀರ್ತಿಯೂ ಇವರಿಗೆ ಸಲ್ಲುವಂಥದ್ದು. ಒಟ್ಟಿನಲ್ಲಿ ಮೌಲ್ಯವನ್ನೂ ಉಳಿಸಿಕೊಂಡು ರಾಜಕಾರಣ ಮಾಡಬಹುದೆಂದು ಸಾಬೀತು ಪಡಿಸಿದ ಹಿರಿಯ ವ್ಯಕ್ತಿ ರಾಮ ಭಟ್ ಅವರು.
ಗಣ್ಯರ ಕಂಬನಿ
ಬಿಜೆಪಿಯ ಹಿರಿಯ ನಾಯಕ, ಪುತ್ತೂರಿನ ಮಾಜಿ ಶಾಸಕ ರಾಮಭಟ್ ಅವರ ನಿಧನ ದುಃಖ ತಂದಿದೆ. ಜನಸಂಘ, ಬಳಿಕ ಬಿಜೆಪಿಯ ಪ್ರಭಾವಿ ನಾಯಕರಾಗಿ, ಶಾಸಕರಾಗಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ್ದರು. ಅವರು ಪಕ್ಷಕ್ಕಾಗಿ ಮಾಡಿರುವ ತ್ಯಾಗವನ್ನು ಎಂದೂ ಮರೆಯಲು ಅಸಾಧ್ಯ.
-ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ
ದಿಟ್ಟ ನಾಯಕ: ನಳಿನ್ ಕುಮಾರ್ ಕಟೀಲು
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಉರಿಮಜಲು ರಾಮ ಭಟ್ ಅವರ ನಿಧನದಿಂದ ಪಕ್ಷ ಓರ್ವ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಸಂತಾಪ ಸೂಚಿಸಿದ್ದಾರೆ. ಜನಸಂಘದ ಕಾಲದಿಂದಲೂ ರಾಜಕೀಯದಲ್ಲಿ ಅದರ್ಶಯುತ ಮೌಲ್ಯವನ್ನು ಪ್ರತಿಪಾದಿಸುತ್ತ ಸಾವಿರಾರು ಕಾರ್ಯಕರ್ತರಿಗೆ ಸ್ಫೂರ್ತಿಯ ಶಕ್ತಿಯಾಗಿದ್ದ ರಾಮ ಭಟ್ ಅವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ದಿಟ್ಟ ನಾಯಕ. ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಿದ ರಾಮ ಭಟ್ ಅವರು ಪಕ್ಷದ ಜತೆಗೆ ಕಾರ್ಯಕರ್ತರನ್ನು ಬೆಳೆಸಿದವರು. ರಾಮ ಭಟ್ ಅವರ ಆದರ್ಶ, ಜನಸೇವೆ, ಬಿಜೆಪಿಗೆ ಅವರು ನೀಡಿದ ಕೊಡುಗೆ ಚಿರಕಾಲ ಉಳಿಯಲಿದೆ ಎಂದು ನಳಿನ್ ಹೇಳಿದರು.
ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎನ್ನುವ ನುಡಿಯಂತೆ ತಮ್ಮ ಜೀವನವನ್ನು ಸದಾ ದೇಶ, ಧರ್ಮದ ಸೇವೆಗೆ ಅವರು ಮುಡಿಪಾಗಿಟ್ಟಿದ್ದರು. ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದ ರಾಮ ಭಟ್ ಅವರ ನಿಧನದಿಂದ ಆಘಾತವಾಗಿದೆ.
-ಅಂಗಾರ ಎಸ್., ಸಚಿವ
ಬಿಜೆಪಿ ಇನ್ನೂ ಅಂಬೆಗಾಲಿಡುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರ ನಿರ್ಮಾಣದ ತತ್ವ ಸಿದ್ಧಾಂತಗಳ ಮಾರ್ಗದರ್ಶನ ನೀಡಿ ತಾಯಿ ಭಾರತಾಂಬೆಯ ಸೇವೆಗೆ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ ಭದ್ರ ಅಡಿಪಾಯ ಹಾಕಿದ ಮಹಾನ್ ನಾಯಕ ರಾಮ ಭಟ್. ಬಿಜೆಪಿ ಇಂದು ವಿಶ್ವದ ಅತೀ ದೊಡ್ಡ ಪಕ್ಷವಾಗಿ ರೂಪುಗೊಳ್ಳಲು ರಾಮ ಭಟ್ ಅವರಂತಹ ಅನೇಕರ ಸೇವೆಯೇ ಕಾರಣ.
-ತೇಜಸ್ವೀ ಸೂರ್ಯ, ಸಂಸದ
ಗಣ್ಯರ ಸಂತಾಪ
ಮಾಜಿ ಶಾಸಕ ಉರಿಮಜಲು ರಾಮ ಭಟ್ ಅವರ ನಿಧನಕ್ಕೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ರಾಜೇಶ್ ನಾೖಕ್, ಉಮಾನಾಥ ಕೋಟ್ಯಾನ್, ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಎ. ಸುವರ್ಣ, ಮಾಜಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಮೋದಿ ಕರೆ ಮಾಡಿದ್ದರು
ಮೋದಿ 2ನೇ ಬಾರಿ ಪ್ರಧಾನಿಯಾದ ಬಳಿಕ ರಾಮ ಭಟ್ಟರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ವಯಸ್ಸು 90 ದಾಟಿದ ಬಳಿಕವೂ ರಾಜಕೀಯ ವಿಚಾರಗಳನ್ನು ನೆನಪಿಸುತ್ತಿದ್ದರು.
ಆತ್ಮಚರಿತ್ರೆ
ರಾಮ ಭಟ್ ಅವರ ಆತ್ಮಚರಿತ್ರೆ “ಸತ್ವರಜ’ 6 ವರ್ಷಗಳ ಹಿಂದೆ ಬಿಡುಗಡೆ
ಯಾಗಿತ್ತು.
ಇಂದು ಅಂತ್ಯ ಸಂಸ್ಕಾರ
ರಾಮ ಭಟ್ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಮಂಗಳವಾರ ಮಧ್ಯಾಹ್ನ ಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ ನಡೆಯ ಲಿದೆ. ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಂಗಳದಲ್ಲಿ ಬೆಳಗ್ಗೆ 11 ಗಂಟೆಯ ವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಇದಾದ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.