ಪತ್ರಿಕೋದ್ಯಮ ಶಿಕ್ಷಣ: ಬದಲಾವಣೆ ಅನಿವಾರ್ಯ
Team Udayavani, Dec 8, 2021, 6:00 AM IST
ಬದಲಾಗುತ್ತಿರುವ ಪತ್ರಿಕೋದ್ಯಮ ಕ್ಷೇತ್ರ, ವೃತ್ತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ಮತ್ತು ನವಮಾಧ್ಯಮಗಳ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ಕೋರ್ಸ್‌ಗೆ ಕಾಯಕಲ್ಪ ನೀಡುವ ಅನಿವಾರ್ಯತೆಯನ್ನು ಶಿಕ್ಷಣ ಕ್ಷೇತ್ರದ ನೀತಿ ರೂಪಕರು ಅರಿಯಬೇಕಾಗಿದೆ. ಮಾಧ್ಯಮ ಅಧ್ಯಯನ ಮಾಡಿದ ವಿದ್ಯಾರ್ಥಿ, ಯಾವುದೇ ಕ್ಷೇತ್ರಕ್ಕೂ ಹೊಂದಬಲ್ಲ ಮತ್ತು ಬರಹ, ವರದಿಗಾರಿಕೆಯಿಂದಾಚೆಗೂ ಬದುಕು ಕಟ್ಟಿಕೊಳ್ಳಬಹುದಾದ ಶಿಕ್ಷಣ ಪಡೆಯಬೇಕು ಹಾಗೂ ಮನೋಭಾವವೂ ಬದಲಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ವಿಶ್ವವಿದ್ಯಾನಿಲಯಗಳೂ ಗಮನಹರಿಸಬೇಕಾಗಿದೆ.
ಪತ್ರಿಕೋದ್ಯಮ ಎಂಬ ಕೋರ್ಸ್ ಅನ್ನು ಮಾಧ್ಯಮ ವಿಜ್ಞಾನ, ಮಾಧ್ಯಮ ಕೌಶಲ ಅಥವಾ ಮಾಧ್ಯಮ ತಂತ್ರಜ್ಞಾನ ಎಂದು ಬದಲಾಯಿಸುವುದು ಸೂಕ್ತ. ಸಾಂಪ್ರದಾಯಿಕ ಮಾಧ್ಯಮ ಕೌಶಲ ಶಿಕ್ಷಣವನ್ನು ಮೀರಿದ ಹೊಸ ವಿಷಯಗಳಿಗೆ ಒತ್ತು ನೀಡಬೇಕು. ಸ್ಥಳೀಯ ಭಾಷೆಯ ಜತೆ ಇಂಗ್ಲಿಷ್ ಭಾಷಾ ಪರಿಣತಿ ಪಡೆಯುವುದು ಕಡ್ಡಾಯ. ಇದರಲ್ಲಿ ಅತ್ಯುತ್ತಮ ಪರಿಣತಿ ಪಡೆದವರಷ್ಟೇ ಮುಂದಿನ ಹಂತಕ್ಕೆ ಹೋಗಲು ಅರ್ಹರು. ಭಾಷಾ ಸ್ಪಷ್ಟತೆ, ವ್ಯಾಕರಣ, ಸಮಯಪ್ರಜ್ಞೆಯ ವಿಶೇಷ ತರಬೇತಿ ಅಗತ್ಯ. ಮಾಧ್ಯಮ ಶಿಕ್ಷಣ ಬೋಧಕರು ಕನಿಷ್ಠ 1-3 ವರ್ಷಗಳ ಸಾಂಸ್ಥಿಕ ಅನುಭವ ಹೊಂದಿರಲೇಬೇಕು.
ಸ್ವಾವಲಂಬಿ ಬದುಕಿಗೆ ಶಿಕ್ಷಣ: ನೂತನ ಶಿಕ್ಷಣ ನೀತಿಯ ಆಧಾರದಲ್ಲಿ ನೋಡುವುದಾದರೆ ಮಾಧ್ಯಮ ವಿಜ್ಞಾನ ಓದಿದವರು ಕೋರ್ಸ್ ಮುಗಿಸಿದ ತತ್‌ಕ್ಷಣ ಸ್ವಂತ ಉದ್ಯೋಗ, ಉದ್ಯಮ ಕಟ್ಟಿಕೊಳ್ಳುವ ಕೌಶಲ ಹೊಂದುವ ರೀತಿಯಲ್ಲಿ ಕೋರ್ಸ್ ಅನ್ನು ಮರುವಿನ್ಯಾಸಗೊಳಿಸಬೇಕು. ಮಾಧ್ಯಮ ಶಿಕ್ಷಣ ಪಡೆದವರು ಮಾಧ್ಯಮದಲ್ಲೇ ಉದ್ಯೋಗಿಗಳಾಗಬೇಕು ಎನ್ನುವ ಮನೋಭಾವ ಬದಲಾಗಬೇಕು. ಇದೊಂದು ವೃತ್ತಿ, ಉದ್ಯಮ, ಕೌಶಲ ಮತ್ತು ಆರ್ಥಿಕ ಶಕ್ತಿಯಾಗಿ ಪರಿವರ್ತಿಸುವ ಮನೋಭೂಮಿಕೆ ಸಿದ್ಧಗೊಳ್ಳಬೇಕು. ಪದವಿ ಹಂತದಿಂದಲೇ ಈ ಪ್ರಕ್ರಿಯೆ ಆರಂಭವಾಗಬೇಕು. ಮಾನಸಿಕ ಸಾಮರ್ಥ್ಯ ವೃದ್ಧಿಯ ಅಧ್ಯಯನವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ವಿದ್ಯಾರ್ಥಿ ಹಂತದಲ್ಲಿಯೇ ಬಹುಕೌಶಲ ಕಲಿಸಿಯೇ ಅವರನ್ನು ಸಿದ್ಧಪಡಿಸುವ ವ್ಯವಸ್ಥೆ ಆಗಬೇಕು.
ಆರ್ಥಿಕ ಮಾರ್ಗವಾಗಿ ಮಾಧ್ಯಮ ಕೌಶಲದ ಬಗ್ಗೆ ಒತ್ತು ನೀಡಬೇಕು. ಮಾರ್ಕೆಟಿಂಗ್ ಕಮ್ಯೂನಿಕೇಶನ್ ಎನ್ನುವುದನ್ನು ಯಾವುದಾದರೂ ಉದ್ಯಮದ/ಸಂಸ್ಥೆಯ ಮಾರುಕಟ್ಟೆ ವಿಭಾಗದಲ್ಲಿ ಪ್ರಾಯೋಗಿಕ ಶಿಕ್ಷಣವಾಗಿ ಪಡೆಯಬೇಕು. ಅಲ್ಲಿ ಆ ಕಂಪೆನಿಯವರು ಮಾಡಿದ ಮೌಲ್ಯಮಾಪನ ಮತ್ತು ವಿಶ್ವವಿದ್ಯಾನಿಲಯದ ಅಧ್ಯಯನ ವಿಷಯಗಳೆರಡನ್ನೂ ಒಟ್ಟು ಸೇರಿಸಿ ಮೌಲ್ಯಮಾಪನ ನಡೆಸಬೇಕು. ಹಾಗೆಯೇ ಆಡಳಿತ ನಿರ್ವಹಣೆ/ ಮೀಡಿಯಾ ಮ್ಯಾನೇಜ್‌ಮೆಂಟ್ ವಿಷಯವನ್ನು ಇದರಲ್ಲಿ ಅಂತರ್ಗತಗೊಳಿಸಬೇಕು. ಆಡಳಿತ ನಿರ್ವಹಣೆ ಕೋರ್ಸ್ ಅನ್ನು ಬೋಧಿಸುವವರು ಮ್ಯಾನೇಜ್‌ಮೆಂಟ್ ಶಿಕ್ಷಣ ವಿಭಾಗದವರಾಗಿರಬೇಕು. ಇಲ್ಲಿಯೂ ಪ್ರಾಯೋಗಿಕ ಅನುಭವಕ್ಕೆ ಆದ್ಯತೆ ಸಿಗಬೇಕು. ಹಾಗೆಯೇ ಮಾನವ ಸಂಪನ್ಮೂಲ ನಿರ್ವಹಣೆಯನ್ನೂ ಸೇರಿಸಬೇಕು. ಆಗ ಮಾಧ್ಯಮ ವಿಜ್ಞಾನ ಓದಿದ ವ್ಯಕ್ತಿ ಯಾವುದೇ ಸಂಸ್ಥೆಗೂ ಅಥವಾ ಯಾವುದೇ ನೀತಿ-ನಿರ್ಧಾರಕ ಹುದ್ದೆಗೂ ಆರಂಭದಲ್ಲಿಯೇ ಅರ್ಹತೆ ಪಡೆಯುತ್ತಾನೆ. ಈ ಎಲ್ಲ ವಿಷಯ ಬೋಧನೆಗೆ ಅನುಭವಿ, ವೃತ್ತಿಪರ ಅತಿಥಿ ಉಪನ್ಯಾಸಕರನ್ನೇ ನೇಮಿಸಿದಲ್ಲಿ ವಿದ್ಯಾರ್ಥಿಗಳು ಬದುಕಲು ಕಲಿಯಬಹುದು.
ಮಾಧ್ಯಮ ಕಾನೂನು ಶಿಕ್ಷಣಕ್ಕೊಂದು ಮಾನ್ಯತೆ: ಮಾಧ್ಯಮ ಕಾನೂನು ಓದಿದ ವಿದ್ಯಾರ್ಥಿ ಅದರಲ್ಲಿ ಪೂರ್ಣ ಪರಿಣತಿ ಪಡೆದು ಮಾನನಷ್ಟ ಪ್ರಕರಣದಲ್ಲಿ ನೇರವಾಗಿ ಒಬ್ಬ ವಕೀಲನಂತೆ ಕಾರ್ಯನಿರ್ವಹಿಸಬಲ್ಲವನಾಗಬೇಕು. ಈ ವಿದ್ಯಾರ್ಥಿಗೆ ಬೇರೆ ಬೇರೆ ಕಾನೂನುಗಳ ಅರಿವು, ಐಪಿಸಿ, ಸಂವಿಧಾನ ಮತ್ತು ಸಾಂವಿಧಾನಿಕ ಹುದ್ದೆಗಳ ಅರಿವು ಇರಬೇಕು. ಅದರಲ್ಲಿ ವಿಶೇಷ ಪರಿಣತಿ ಇದ್ದು ಹೆಚ್ಚುವರಿಯಾಗಿ ಕಾನೂನು ಪದವಿ (ಡಿಪ್ಲೊಮಾ ಮಾದರಿ) ಸಿಗಬೇಕು. ಪದವಿ ಹಂತದಲ್ಲೇ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಬೇಕು. ಸ್ನಾತಕೋತ್ತರ ಶಿಕ್ಷಣಕ್ಕೆ ಬಂದಾಗ ಆತನಿಗೆ 4 ವರ್ಷಗಳ ಕಾನೂನು ಶಿಕ್ಷಣ ದೊರೆತಂತಾಗುತ್ತದೆ. ಆತ ಮಾಧ್ಯಮ ಸಂಸ್ಥೆಗಳಿಗೆ ಮಾತ್ರ ಕಾನೂನು ಸಲಹೆಗಾರನಾಗಿ ಅಥವಾ ವಕೀಲನಾಗಿ ನೇಮಕಗೊಳ್ಳುವಂತಾಗಬೇಕು. ಈ ಕೋರ್ಸ್ ಅನ್ನು ಕಾನೂನು ಉಪನ್ಯಾಸಕರೇ ಬೋಧಿಸಬೇಕು. ಇದನ್ನು ಪ್ರತ್ಯೇಕ ಕೋರ್ಸ್ ಆಗಿ ಬೋಧಿಸಿದರೆ ಸ್ಪೆಷಲೈಸೇಶನ್ ಎಂದೇ ಪರಿಗಣಿಸಿ ಕಾನೂನು ಸಂಸ್ಥೆಗಳಲ್ಲಿ ಈ ಕೋರ್ಸ್ ಓದಿದವರಿಗೆ ಮಾನ್ಯತೆ ಇರಬೇಕು. ಮಾನನಷ್ಟ ಪ್ರಕರಣಗಳ ನಿರ್ವಹಣೆ ಬಗ್ಗೆ ಪ್ರತ್ಯೇಕ ಕೋರ್ಸ್‌ನ ಅಗತ್ಯವಿದೆ.
ಪತ್ರಿಕೋದ್ಯಮಕ್ಕೊಂದು ಮಾನ್ಯತಾ ಏಜೆನ್ಸಿ: ಪತ್ರಿಕೋದ್ಯಮ ಓದಿದವರಿಗೆ ಕಾನೂನುಬದ್ಧ ಪ್ರಮಾಣೀಕರಣ ವ್ಯವಸ್ಥೆ ಬರಬೇಕು. ಪತ್ರಕರ್ತನಾಗ ಬೇಕಾದವನು ಯಾವುದೇ ಕೋರ್ಸ್ ಓದಲಿ. ಆದರೆ ಕನಿಷ್ಠ ಆರು ತಿಂಗಳ ಅರ್ಹತಾ ಕೋರ್ಸ್‌ಗೆ ಹಾಜರಾಗಿ ಅಲ್ಲಿನ ಕಠಿನ ಪರೀಕ್ಷೆಯಲ್ಲಿ ತೇರ್ಗಡೆ ಆದವನಿಗೆ ಮಾತ್ರ ಈ ಮಾನ್ಯತಾ ಪತ್ರ ಲಭಿಸಿ ಪತ್ರಿಕೋದ್ಯಮಕ್ಕೆ ಅಧಿಕೃತ ಪ್ರವೇಶ ಇರುವಂತಾಗಬೇಕು. ಹೀಗಾದಲ್ಲಿ..
-ಪತ್ರಕರ್ತರಿಗೆ ಗೌರವಯುತವಾದ ಶಿಕ್ಷಣ ಇದೆ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗುತ್ತದೆ.
-ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಿಗೆ ತಮ್ಮ ಉದ್ಯೋಗಿಯ ಮಾನ್ಯತೆ ಮತ್ತು ಮೌಲ್ಯದ ಮೇಲೆ ಆ ಸಂಸ್ಥೆಯ ಗೌರವವೂ ವೃದ್ಧಿಯಾಗುತ್ತದೆ.
-ವಿಶ್ವವಿದ್ಯಾನಿಲಯ ಅಥವಾ ಮಾನ್ಯತಾ ಏಜೆನ್ಸಿಯ ಪರವಾನಿಗೆ ಸಹಿತ ಬಂದವನ ವೇತನ ಮತ್ತು ಆರ್ಥಿಕ ಸೌಲಭ್ಯಗಳು ಇತರರಿಗಿಂತ ಚೆನ್ನಾಗಿರುತ್ತವೆ.
-ಸರಕಾರದ ಯೋಜನೆಗಳಲ್ಲಿ ಭಾಗಿಯಾಗಲು ಅಥವಾ ಆರ್ಥಿಕ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಈ ಮಾನ್ಯತೆ ಹೊಂದಿದವರಿಗೆ ಆದ್ಯತೆ ಕೊಡಬಹುದು.
-ಮುಖ್ಯವಾಗಿ ಮಾಧ್ಯಮ ಕ್ಷೇತ್ರಕ್ಕೆ ಬರುವವರು ಮೌಲ್ಯಗಳನ್ನು ಹೊಂದುವ, ಪ್ರತಿಪಾದಿಸುವ ಮತ್ತು ಮಾಧ್ಯಮ ಕ್ಷೇತ್ರದ ಪಾವಿತ್ರ್ಯವನ್ನು ಉಳಿಸುವ ದೃಷ್ಟಿಯಿಂದ ಇಂಥ ಅರ್ಹ ವ್ಯಕ್ತಿಗಳು ಮಾತ್ರ ಮಾಧ್ಯಮ ಕ್ಷೇತ್ರ ಪ್ರವೇಶಿಸುವುದು ಸಮಾಜದ ದೃಷ್ಟಿಯಿಂದಲೂ ಒಳ್ಳೆಯದು.
-ಮಾಧ್ಯಮ ವಿಜ್ಞಾನ ಶಿಕ್ಷಣಕ್ಕೊಂದು ವಿಶಿಷ್ಟ ಗುರುತಿಸುವಿಕೆ ಸಿಗುತ್ತದೆ.
-ಒಳ್ಳೆಯ ಪತ್ರಕರ್ತರನ್ನು ಸಮಾಜಕ್ಕೆ ಕೊಟ್ಟ ಗೌರವ ವಿಶ್ವವಿದ್ಯಾನಿಲಯಕ್ಕೂ ಸಲ್ಲುತ್ತದೆ.
ಬಹುಕಾರ್ಯನಿರ್ವಹಣೆ ಕೌಶಲ: ಹಾಲಿ ಪತ್ರಿಕೋದ್ಯಮ ಶಿಕ್ಷಣ ಬಹು ಮಾಧ್ಯಮ ನಿರ್ಮಾಣದ ಬಗ್ಗೆ ಒತ್ತು ಕೊಡುವುದಿಲ್ಲ. ಸಾಮಾನ್ಯ ವೀಡಿಯೋ ಗ್ರಾಫರ್‌ಗೆ ಅಥವಾ ಧ್ವನಿವರ್ಧಕ ನಿರ್ವಾಹಕನಿಗೆ ಇರುವ ಜ್ಞಾನವೂ ಮಾಧ್ಯಮ ಶಿಕ್ಷಣ ಪದವೀಧರರಿಗೆ ಇಲ್ಲವಾಗಿದೆ. ಈ ಕೋರ್ಸ್‌ನ ಮರು ವಿನ್ಯಾಸದಲ್ಲಿ ಅದು ಆಗಬೇಕು. ಡಿಜಿಟಲ್ ಮಾಧ್ಯಮ ಶಿಕ್ಷಣಕ್ಕೂ ಒತ್ತು ಕೊಡಬೇಕು. ಇಲ್ಲಿ ಬಹುಕಾರ್ಯನಿರ್ವಹಣೆ ಕೌಶಲ ಅಗತ್ಯ.
ವಿಶೇಷ ಪರಿಣತಿ: ವಿಶೇಷ ಪರಿಣತಿ ಎನ್ನುವುದನ್ನು ಕೋರ್ಸ್ ಹಂತದಲ್ಲೇ ತರಬೇಕು. ರಾಜಕೀಯ ವರದಿಗಾರಿಕೆ, ಚುನಾವಣ ಸಮೀಕ್ಷೆಗಳು, ಸಂಕಷ್ಟದ ಸಮಯದಲ್ಲಿ ಪತ್ರಿಕೋದ್ಯಮ, ವಾಣಿಜ್ಯೋದ್ಯಮ/ ಕೈಗಾರಿಕೆ/ ಕಾರ್ಪೋರೆಟ್ ಪತ್ರಿಕೋದ್ಯಮ..
ಮೊದಲಾದ ಬದಲಾದ ವಿಷಯಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಕಲಿಸಬೇಕು. ಈಗ ಕೋರ್ಸ್ ವಿನಿಮಯ ವ್ಯವಸ್ಥೆಯಂತೆ ಅದೇ ಮಾದರಿಯನ್ನು ಇಲ್ಲಿ ತರಬೇಕು. ಈ ಪರಿಣತರು ಮುಂದೆ ವಿವಿಧ ಇಲಾಖೆಗಳ ವಕ್ತಾರರಾಗಿ, ಆಡಳಿತದ ಸಲಹೆಗಾರರಾಗಿ, ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಲು ಸಾಧ್ಯ.
ಪತ್ರಿಕೋದ್ಯಮ ಓದಿದವರು ನಗರಮುಖಿಗಳಾಗುತ್ತಿದ್ದಾರೆ. ಆದರೆ ಅದೇ ಕೋರ್ಸನ್ನು ಓದಿ ಸ್ಥಳೀಯಮಟ್ಟದಲ್ಲೇ ತಮ್ಮದೇ ಆದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕೌಶಲ ಈ ಕೋರ್ಸ್ ನಿಂದ ಸಿಗಬಹುದು. ಪತ್ರಕರ್ತರು ವೃತ್ತಿ ಬದುಕಿನ ಮಧ್ಯಭಾಗದಲ್ಲಿ ಅತಂತ್ರರಾಗಬಾರದು. ಯಾವುದೇ ಪರಿಸ್ಥಿತಿ ಎದುರಿಸುವ ಸ್ಥೈರ್ಯ ಅವರಲ್ಲಿ ಮೂಡಬೇಕು. ಯಾವುದೇ ಕೆಲಸವನ್ನು ನಿರ್ವಹಿಸುವ ಕೌಶಲ ಅವರಲ್ಲಿ ಇರಬೇಕು. ಅದಕ್ಕಾಗಿ ಶಿಕ್ಷಣದ ಮೂಲದಲ್ಲಿಯೇ ಆ ಮಾನಸಿಕತೆಯನ್ನು ಬೆಳೆಸಬೇಕಾದ ಅಗತ್ಯವಿದೆ.
– ವೇಣು ಶರ್ಮಾ, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.