ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ
ತಮ್ಮನ್ನು ಬಿಟ್ಟು ಬಿಡಿ ಎಂದು ಜನರಲ್ಲಿ ಅಂಗಲಾಚುತ್ತಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ
Team Udayavani, Dec 8, 2021, 10:51 AM IST
ಲಾಹೋರ್: ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಗುಂಪೊಂದು ಅಪ್ರಾಪ್ತಾ ಬಾಲಕಿ ಸೇರಿದಂತೆ ನಾಲ್ವರು ಯುವತಿಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಈ ಘಟನೆ ಸೋಮವಾರ ಲಾಹೋರ್ ನಿಂದ 180 ಕಿಲೋ ಮೀಟರ್ ದೂರದಲ್ಲಿರುವ ಫೈಸಲಾಬಾದ್ ಎಂಬಲ್ಲಿ ನಡೆದಿದೆ. ನಾಲ್ವರು ಯುವತಿಯರನ್ನು ನಗ್ನಗೊಳಿಸಿ, ಥಳಿಸಿದ ನಂತರ ಸುತ್ತಲೂ ನೆರೆದಿದ್ದ ಜನರ ಬಳಿ ಮಾನ ಮುಚ್ಚಿಕೊಳ್ಳಲು ಬಟ್ಟೆಯ ತುಂಡನ್ನು ಕೊಡಿ ಎಂದು ಅಲವತ್ತುಕೊಂಡಿರುವ ದೃಶ್ಯ ವೈರಲ್ ಆದ ವಿಡಿಯೋದಲ್ಲಿ ಕಂಡುಬಂದಿರುವುದಾಗಿ ವರದಿ ಹೇಳಿದೆ.
ಯುವತಿಯವರು ತಮ್ಮನ್ನು ಬಿಟ್ಟು ಬಿಡಿ ಎಂದು ಜನರಲ್ಲಿ ಅಂಗಲಾಚುತ್ತಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ, ನಂತರ ಸುಮಾರು ಒಂದು ಗಂಟೆಗಳ ಕಾಲ ಯುವತಿಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಯುವತಿಯರನ್ನು ನಗ್ನಗೊಳಿಸಿ ಥಳಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪಾಕಿಸ್ತಾನದ ಪಂಜಾಬ್ ಪೊಲೀಸರು ತನಿಖೆ ನಡೆಸಿದ್ದು, ಐವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ವಕ್ತಾರ ಮಂಗಳವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಈ ನಾಲ್ವರು ಫೈಸಲಾಬಾದ್ ನ ಬಾವಾ ಚಾಕ್ ಮಾರುಕಟ್ಟೆ ಪ್ರದೇಶದಲ್ಲಿ ತ್ಯಾಜ್ಯ ವಸ್ತು ಸಂಗ್ರಹಕ್ಕೆ ತೆರಳಿದ್ದರು. ಬಾಯಾರಿಕೆಯಿಂದಾಗಿ ಇವರು ಉಸ್ಮಾನ್ ಎಲೆಕ್ಟ್ರಿಕ್ ಸ್ಟೋರ್ ಗೆ ತೆರಳಿ ಒಂದು ಬಾಟಲು ನೀರು ಕೇಳಿದ್ದರು. ಆದರೆ ಅಂಗಡಿ ಮಾಲೀಕ ಸದ್ದಾಂ, ನೀವೆಲ್ಲಾ ಕಳವು ಮಾಡಲು ಬಂದಿದ್ದೀರಿ ಎಂದು ಆರೋಪಿಸಿ ಹಿಗ್ಗಾಮುಗ್ಗಾ ಹೊಡೆಯಲು ಆರಂಭಿಸಿದ್ದ. ಬಳಿಕ ಯುವತಿಯರನ್ನು ನಗ್ನಗೊಳಿಸಿ, ಎಳೆದೊಯ್ದು ಹಲ್ಲೆ ನಡೆಸಿರುವುದಾಗಿ ಪೊಲೀಸ್ ವಕ್ತಾರ ಮಾಹಿತಿ ನೀಡಿದ್ದಾರೆ.