ನೇಯ್ಗೆ ಉದ್ಯಮಕ್ಕೆ ಜಿಎಸ್‌ಟಿ ಹೊಡೆತ
Team Udayavani, Dec 14, 2021, 1:19 PM IST
ದೊಡ್ಡಬಳ್ಳಾಪುರ: ಕೋವಿಡ್ ಲಾಕ್‌ಡೌನ್‌ನಿಂದ ನಷ್ಟ ಕ್ಕೊಳಗಾಗಿದ್ದ ನೇಯ್ಗೆ ಉದ್ಯಮ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿಯೇ ಕೇಂದ್ರ ಸರ್ಕಾರ ಬಟ್ಟೆಗಳ ಮೇಲಿದ್ದ ಶೇ.5 ಜಿಎಸ್‌ಟಿಯನ್ನು ಶೇ.12ಕ್ಕೇರಿಸಿದ್ದು ನೇಯ್ಗೆ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಂಕಷ್ಟದಲ್ಲಿ ಉದ್ಯಮ: ದೊಡ್ಡಬಳ್ಳಾಪುರ ನಗರ ಹಾಗೂ ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಊರುಗಳಲ್ಲಿ ಸುಮಾರು 25 ಸಾವಿರ ಮಗ್ಗಗಳಿದ್ದು, 35 ಸಾವಿರಕ್ಕೂ ಹೆಚ್ಚು ಮಂದಿ ನೇಯ್ಗೆ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ, ಕಾರ್ಮಿಕರ ಸಮಸ್ಯೆ, ಮಾರುಕಟ್ಟೆ ಸಮಸ್ಯೆ ಮೊದಲಾದ ಸಮಸ್ಯೆಗಳಿರುವ ನೇಕಾರಿಕೆಗೆ ಈಗ ಜಿಎಸ್‌ಟಿ ಹೊರೆಯಾಗಿದ್ದು, ನೇಕಾರರನ್ನು ಕಂಗಾಲಾಗಿಸಿದೆ.
ಬಂಡವಾಳ ಹೆಚ್ಚು ಲಾಭ ಕಡಿಮೆ: ಹೆಚ್ಚುತ್ತಿರುವ ಇಂದಿನ ಬೆಲೆಗಳಲ್ಲಿ ವಿದ್ಯುತ್ ಚಾಲಿತ ಮಗ್ಗ ಹಾಗೂ ನೇಕಾರಿಕೆಯ ಇತರೆ ಯಂತ್ರಗಳಿಗೆ ಹಾಕುವ ಬಂಡವಾಳವೇ ಲಕ್ಷಾಂತರ ರೂ.ಆಗುತ್ತಿದೆ. ಇದರೊಂ ದಿಗೆ ಬಟ್ಟೆ ನೇಯಲು ಬಳಸುವ ರೇಷ್ಮೆ ಬೆಲೆ 5 ಸಾವಿರ ರೂ. ದಾಟಿದೆ. ಪಾಲಿಸ್ಟರ್, ಜರಿ ಮೊದಲಾದ ನೂಲುಗಳ ಬೆಲೆ ಹೆಚ್ಚಾಗಿವೆ. ಆದರೆ, ನೇಯ್ದ ಸೀರೆಗೆ ಸೂಕ್ತ ಬೆಲೆ ಇಲ್ಲದೇ ಅತಿ ಕಡಿಮೆ ಲಾಭ ಅಥವಾ ಬಂಡವಾಳಕ್ಕಿಂತ ಕಡಿಮೆ ಬೆಲೆಗೆ ಮಾರಿ ನಷ್ಟ ಮಾಡಿಕೊಳ್ಳುತ್ತಿರುವ ಉದಾಹರಣೆಗಳಿವೆ.
ಮಾರುಕಟ್ಟೆ ಸಮಸ್ಯೆ: ನೇಕಾರರು ತಾವು ನೇಯ್ದ ಬಟ್ಟೆಗಳನ್ನು ಮಧ್ಯವರ್ತಿಗಳಿಗೆ ಮಾರುತ್ತಿದ್ದು, ಬೆಲೆ ನಿಗದಿ ಪಡಿಸುವ ಮಧ್ಯವರ್ತಿಗಳು ವ್ಯಾಪಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಈ ಮಧ್ಯವರ್ತಿ ಗಳಿಂದಾಗಿ ಸಣ್ಣ ನೇಕಾರರು ಬಟ್ಟೆಗೆ ಸೂಕ್ತ ಬೆಲೆ ಸಿಗದೇ ಸಾಲ ಮಾಡುವ ಪರಿಸ್ಥಿತಿ ಉದ್ಭವಿಸುತ್ತಿದೆ. ಹೊಸದಾಗಿ ನೇಯ್ಗೆ ಕೆಲಸ ಕಲಿಯುತ್ತಿರುವ ಕಾರ್ಮಿ ಕರ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವುದು ಸಹ ಆತಂಕಕಾರಿಯಾಗಿದೆ.
ಹಿರಿಯರು ಹಾಕಿಕೊಟ್ಟ ಆಲದ ಮರಕ್ಕೆ ನಾವು ನೇಣು ಹಾಕಿಕೊಳ್ಳುವಂತಾಗಿರುವ ಸ್ಥಿತಿ ಮುಂದಿನವರಿಗೆ ಬೇಡ. ಅದಕ್ಕೇ ನಮ್ಮ ಮಕ್ಕಳನ್ನು ಈ ಕಸುಬಿನಿಂದಲೇ ದೂರ ಉಳಿಸಿಕೊಂಡು ಬೇರೆ ಉದ್ಯೋಗಕ್ಕೆ ತೆರಳುವಂತೆ ಮಾಡಿದ್ದೇವೆ. ಸರಿಯಾಗಿ ನಡೆದರೆ ನಮ್ಮ ನೇಕಾರಿಕೆ ಉದ್ಯೋಗದ ಮುಂದೆ ಇನ್ನೊಂದಿಲ್ಲ. ಆದರೆ, ಕೈ ಕೊಟ್ಟರೆ ಈ ಉದ್ಯೋಗದಷ್ಟು ಹೊಡೆತ ಇನ್ನೊಂದಿಲ್ಲ. ಮನೆಮಂದಿಯೆಲ್ಲಾ ದುಡಿದರೂ ಬೆಲೆ ಏರಿಕೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸಂಸಾರ ಸಾಗಿಸಲು ಕಷ್ಟವಾಗುತ್ತಿದೆ ಎಂದು ಹಲವಾರು ನೇಕಾರರು ನೋವಿನಿಂದ ಹೇಳುತ್ತಾರೆ.
ಜಿಎಸ್‌ಟಿ ಸಮಸ್ಯೆ: 80ರ ದಶಕದಲ್ಲಿ ನೇಕಾರರು ನೇಯ್ದ ಸೀರೆಗಳಿಗೆ ಮಾರಾಟ ತೆರಿಗೆ ವಿಧಿಸಲಾಗು ತ್ತಿತ್ತು. ಗೃಹ ಕೈಗಾರಿಕೆಗಳಿಗೆ ಮಾರಾಟ ತೆರಿಗೆಯಿಂದ ವಿನಾಯ್ತಿ ನೀಡಬೇಕೆಂದು ನೇಕಾರರ ಮನವಿಗೆ ಸ್ಪಂದಿಸಿದ ಅಂದಿನ ಸರ್ಕಾರಗಳು ಮಾರಾಟ ತೆರಿಗೆ ಯಿಂದ ವಿನಾಯಿತಿ ನೀಡಿ, ವಹಿವಾಟು ತೆರಿಗೆ ಹಾಕಿತ್ತು. ನಂತರ ವ್ಯಾಟ್ ಹೇರಲಾಯಿತು. ಪ್ರತಿ ತೆರಿಗೆ ಪದ್ಧತಿಯಿಂದಲೂ ನೇಕಾರರು ತಮಗೆ ಕಷ್ಟವಾಗುತ್ತಿದೆ ಎಂದು ಸರ್ಕಾರದ ಮುಂದೆ ಪರಿತಪಿಸುವುದು ಸಾಮಾನ್ಯವಾಗಿದೆಜಿಎಸ್‌ಟಿಯಿಂದ ಮುಕ್ತಿ ನೀಡಲು ಮಾಲಿಕರ ಆಗ್ರಹ.
ಜಿಎಸ್‌ಟಿಯಿಂದ ಮುಕ್ತಿ ನೀಡಲು ಮಾಲಿಕರ ಆಗ್ರಹ
ಕೇಂದ್ರ ಸರ್ಕಾರ ನೇಕಾರರು ತಯಾರಿಸಿರುವ ಬಟ್ಟೆಗಳ ಮೇಲಿದ್ದ ಶೇ.5 ಜಿಎಸ್‌ಟಿಯನ್ನು ಶೇ.12ಕ್ಕೆ ಹೆಚ್ಚಿಸಿರುವುದು ನೇಕಾರರಿಗೆ ಮುಳುವಾಗಿದೆ. ಕೋವಿಡ್-19 ಹೊಡೆತದಿಂದ ಕಂಗಾಲಾಗಿರುವ ನೇಕಾರರಿಗೆ ಈ ತೆರಿಗೆಯಿಂದಾಗಿ ಹೆಚ್ಚು ನಷ್ಟ ಅನುಭವಿಸುವಂತಾಗುತ್ತಿದೆ. ನೇಕಾರಿಕೆ ಗೃಹ ಕೈಗಾರಿಕೆ ಯಾಗಿದೆ.
ಇಲ್ಲಿ ತಯಾರಿಸುವ ಸೀರೆಗಳು ಹಬ್ಬ, ಹರಿದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಧರಿಸು ವಂತಾಗಿದ್ದು, ಉಳಿದ 6 ತಿಂಗಳು ಸೀರೆಗಳನ್ನು ದಾಸ್ತಾನು ಮಾಡಬೇಕಾದ ಪರಿಸ್ಥಿತಿಯಿದೆ. ಜಿಎಸ್‌ಟಿ ಏರಿಸಿರುವುದರಿಂದ ಅನಿವಾರ್ಯವಾಗಿ ಸೀರೆಗಳ ಬೆಲೆ ಹೆಚ್ಚು ಮಾಡಬೇಕಾಗಿದೆ. ಈಗಾಗಲೇ ಬಂಡವಾಳ ಹೆಚ್ಚು ಲಾಭ ಕಡಿಮೆ ಎನ್ನುವ ಪರಿಸ್ಥಿತಿಯಲ್ಲಿ ಹೆಚ್ಚು ಬೆಲೆ ಮಾಡಿದರೆ ಬೇಡಿಕೆ ಕುಸಿದು ಉದ್ಯಮ ನಷ್ಟ ಅನುಭವಿಸಬೇಕಾಗುತ್ತದೆ.
ಇದನ್ನೂ ಓದಿ;- ಮಗು ಕೊಂದು ಆತ್ಮ ಹತ್ಯೆಗೆ ಶರಣಾದ ತಂದೆ
ಆದ್ದರಿಂದ ಕೇಂದ್ರ ಸರ್ಕಾರ ನೇಕಾರಿಕೆ ಮೇಲಿರುವ ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕಿದೆ ಎಂದು ಮುಖ್ಯಮಂತ್ರಿಗಳು ಹಾಗೂ ಜಿಎಸ್‌ಟಿ ಮಂಡಳಿ ಸದಸ್ಯರಾದ ಬಸವರಾಜ ಬೊಮ್ಮಾಯಿ, ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಟಿ.ಬಿ.ನಾಗರಾಜ್ ಹಾಗೂ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ದೊಡ್ಡಬಳ್ಳಾಪುರ ನೇಕಾರರ ವೇದಿಕೆ ಸಂಚಾಲಕರಾದ ಎಸ್.ವೇಣುಗೋಪಾಲ್, ಎನ್.ನರಸಿಂಹಮೂರ್ತಿ ತಿಳಿಸಿದ್ದಾರೆ.
ಜ.1ರ 2022ಕ್ಕೆ ಜಿಎಸ್‌ಟಿ ಹೆಚ್ಚಳ ನಿರ್ಧಾರ
ನೇಕಾರರು ತಯಾರಿಸಿರುವ ಬಟ್ಟೆಗಳ ಮೇಲೆ ಈಗಾಗಲೇ ಶೇ.5 ಜಿಎಸ್‌ಟಿ ಇದೆ. ಆದರೆ ಜ.1 , 2022ರಿಂದ ಇದನ್ನು ಶೇ.12ಕ್ಕೇರಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಂಡಿದೆ. ಜಿಎಸ್‌ಟಿ ತೆರಿಗೆ ಸಹ ನೇಕಾರರ ಪಾಲಿಗೆ ತೊಡಕಾಗಿದ್ದು, 20 ಲಕ್ಷ ರೂ.ಕಡಿಮೆ ವಹಿವಾಟು ಇರುವ ನೇಕಾರರು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದರೂ ತಮ್ಮ ವ್ಯಾಪಾರಕ್ಕೆ ಜಿಎಸ್‌ಟಿಗೆ ನೋಂದಾಯಿಸಿಕೊಳ್ಳುವ ಅನಿವಾರ್ಯತೆಯಿದೆ.
ಪ್ರಸ್ತುತ ಕಚ್ಚಾ ಮಾಲುಗಳ ಮೇಲೆ ಶೇ.12 ಜಿಎಸ್‌ಟಿ ಇದ್ದು, ಬಟ್ಟೆಗಳಿಗೆ ಶೇ.5 ಇರುವುದರಿಂದ, ಕಚ್ಚಾ ಮಾಲುಗಳ ಜಿಎಸ್‌ಟಿ ನೇಕಾರರಿಗೆ ಮರುಪಾವತಿಯಾಗಿ ಜಿಎಸ್‌ಟಿಯಲ್ಲಿ ಉಳಿತಾಯವಾಗುತ್ತಿತ್ತು. ಆದರೆ, ನೇಕಾರರ ಉಪ ಕಸುಬುಗಳಾದ ವಾರ್ಪು ಹಾಕುವುದು, ಅಚ್ಚು ಕೆಚ್ಚುವುದು, ಬಣ್ಣ ಮಾಡುವುದು, ಹುರಿ ಮಿಷನ್ ಮೊದಲಾಗಿ ಎಲ್ಲವೂ ಗೃಹ ಕೈಗಾರಿಕೆಗಳಾಗಿರುವುದ ರಿಂದ ಜಿಎಸ್‌ಟಿಯಿಂದ ವಿನಾಯ್ತಿ ಪಡೆಯಲಾಗಿದೆ.
ಇದರಿಂದ ಮಗ್ಗದ ಮಾಲಿಕರಿಗೆ ತಾವು ಮಾರಾಟ ಮಾಡಿದ ಬಟ್ಟೆಗಳಿಗೆ ಉಪ ಕಸುಬುದಾರರಿಂದ ಜಿಎಸ್‌ಟಿ ಬಿಲ್ ಪಡೆಯದೇ ತಮ್ಮ ತೆರಿಗೆ ಹಣದ ಮರು ಪಾವತಿ ಸಾಧ್ಯವಾಗುವುದಿಲ್ಲ. ಇದರಿಂದ ಈ ಮೊತ್ತವನ್ನು ಪಡೆಯಲಾಗದೇ ನೇಕಾರರಿಗೆ ಜಿಎಸ್‌ಟಿ ಹೊರೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಮಗ್ಗಗಳ ಘಟಕದ ಮಾಲಿಕರು.
– ಡಿ.ಶ್ರೀ ಕಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.