ಹುಬ್ಬಳ್ಳಿ: ಗೆಲುವು ಕಂಡರೂ ಕೇಸರಿ ಪಾಳಯಕ್ಕೆ ನೈತಿಕ ಸೋಲು
ಅಬ್ಬರವಿಲ್ಲದೇ ಪೆಟ್ಟು ನೀಡಿದ ಕೈ
Team Udayavani, Dec 15, 2021, 5:56 PM IST
ಹುಬ್ಬಳ್ಳಿ: ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ಗೆಲುವು ಸಾಧಿಸಿವೆ. ಆದರೆ, ಬಿಜೆಪಿ ಗೆಲುವು ಸಾಧಿಸಿದ್ದರೂ ನೈತಿಕ ದೃಷ್ಟಿಯಿಂದ ಸೋಲು ಕಂಡಿದೆ. ಗೆಲುವಿನ ಸಂಭ್ರಮದ ಜತೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರಕಾರ, ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯದ್ದೇ ಅಧಿಕ ಶಾಸಕರು, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರ ಕ್ಷೇತ್ರ, ಎರಡನೇ ಬಾರಿಗೆ ಸ್ಪರ್ಧಿಸಿದ ಅಭ್ಯರ್ಥಿ ಇಷ್ಟೆಲ್ಲಾ ಇದ್ದರೂ ಬಿಜೆಪಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ವಿಪಕ್ಷದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಥಮ ಪ್ರಾಶಸ್ತ್ಯ ಮತಗಳ ಅಂತರದೊಂದಿಗೆ ಗೆಲುವು ಸಾಧಿಸುವ ಮೂಲಕ ಬಿಜೆಪಿ ವಿರುದ್ಧ ಮೇಲುಗೈ ಸಾಧಿಸಿದ್ದರೆ, ಬಿಜೆಪಿ ಎರಡನೇ ಸ್ಥಾನದೊಂದಿಗೆ ಆಯ್ಕೆಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ ಅವರು ಸುಮಾರು 5,000 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗುತ್ತೇನೆ ಎಂದಿದ್ದರೆ, ಬಿಜೆಪಿ ನಾಯಕರು ಅತ್ಯಧಿಕ ಹಾಗೂ ದಾಖಲೆ ಮತಗಳೊಂದಿಗೆ ಪಕ್ಷದ ಅಭ್ಯರ್ಥಿ ಪ್ರಥಮ ಪ್ರಾಶಸ್ತ್ಯದಲ್ಲೇ ಆಯ್ಕೆಯಾಗುತ್ತಾರೆ ಎಂದೇ ಹೇಳಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವರಾದ ಕೆ.ಎಸ್.ಈಶ್ವರಪ್ಪ, ಬಿ.ಸಿ. ಪಾಟೀಲ,
ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಅನೇಕ ನಾಯಕರು ಸಭೆ-ಪ್ರಚಾರ ಕೈಗೊಂಡಿದ್ದರು.
ಆದರೆ, ಕಾಂಗ್ರೆಸ್ ಹಿಂದಿಕ್ಕಿ ಅತಿ ಹೆಚ್ಚಿನ ಪ್ರಾಶಸ್ತ್ಯ ಮತಗಳೊಂದಿಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷದಿಂದ ರಾಜ್ಯಮಟ್ಟದ ನಾಯಕರು ಹೆಚ್ಚಿನ ರೀತಿಯಲ್ಲಿ ಪ್ರಚಾರಕ್ಕೆ ಆಗಮಿಸಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಒಂದೆರಡು ಆಂತರಿಕ ಸಭೆಗಳನ್ನು ನಡೆಸಿದ್ದು ಬಿಟ್ಟರೆ, ಉಳಿದೆಲ್ಲ ಚುನಾವಣೆ ಉಸ್ತುವಾರಿಯನ್ನು ಸ್ಥಳೀಯ ಮುಖಂಡರೇ ನಿರ್ವಹಿಸಿದ್ದರು. ಮುಖ್ಯಮಂತ್ರಿಗಳ ತವರು ಜಿಲ್ಲೆ, ಬಿಜೆಪಿ ಪ್ರಾಬಲ್ಯದ ತಾಣದಲ್ಲಿಯೇ ಕಾಂಗ್ರೆಸ್ ಹೆಚ್ಚಿನ ಪ್ರಥಮ ಪ್ರಾಶಸ್ತ್ಯ ಮತಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಾಂಗ್ರೆಸ್ ಅಭ್ಯರ್ಥಿ 200-300, ಪಕ್ಷೇತರ ಅಭ್ಯರ್ಥಿ 100 ಮತ ಹೆಚ್ಚು ಪಡೆದಿದ್ದರೆ ಎರಡನೇ ಸ್ಥಾನದ ಫಲಿತಾಂಶಕ್ಕೆ ಎರಡನೇ ಸುತ್ತಿನ ಮತ ಎಣಿಕೆಗೆ ಹೋಗುತ್ತಿತ್ತು. ಹಾಗೇನಾದರೂ ಆಗಿದ್ದರೆ ಪರಿಸ್ಥಿತಿ ಇನ್ನಷ್ಟು ರೋಚಕವಾಗುತ್ತಿತ್ತು.
ಬಿಜೆಪಿ ಎಡವಿದೆಲ್ದಿ ?
ಕ್ಷೇತ್ರ ವ್ಯಾಪ್ತಿಯಲ್ಲಿ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಸುಮಾರು 17 ವಿಧಾನಸಭಾ ಕ್ಷೇತ್ರಗಳು, ಎರಡು ಲೋಕಸಭಾ ಕ್ಷೇತ್ರಗಳು ಬರುತ್ತಿದ್ದು, ಇದರಲ್ಲಿ 13 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ, ಇಬ್ಬರು ಸಂಸದರೂ ಬಿಜೆಪಿಯವರೇ ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿಯೂ ತಮ್ಮದೇ ಬೆಂಬಲಿತ ಸದಸ್ಯರು ಅಧಿಕವಾಗಿದ್ದಾರೆ ಎಂದು ಬಿಜೆಪಿಗರು ಹೇಳುತ್ತಿದ್ದರೂ “ನಿರೀಕ್ಷಿತ’ ಜಯ ದಾಖಲಾಗದಿರುವುದು ನೈತಿಕ ಬಲ ಕುಗ್ಗಿಸುವಂತೆ ಮಾಡಿದೆ. ಬಿಜೆಪಿಗೆ ಯಾಕೆ ನಿರೀಕ್ಷಿತ ಗೆಲುವು ಸಿಗಲಿಲ್ಲ? ಪಕ್ಷ ಎಡವಿದ್ದೆಲ್ಲಿ? ಎಂದು ನೋಡುತ್ತಾ ಹೋದರೆ ಹಲವು ಅಂಶಗಳು ಕಾಣ ಸಿಗುತ್ತವೆ.
ಕೆಲಸ ಮಾಡದ ಧರ್ಮ-ಜಾತಿ: ಕಾಂಗ್ರೆಸ್ ಅಭ್ಯರ್ಥಿ ಅಲ್ಪಸಂಖ್ಯಾತ ಸಮಾಜಕ್ಕೆ ಸೇರಿದ್ದು, ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನವಿದೆ. ಸಹಜವಾಗಿ ಸ್ಥಳೀಯ ಸಂಸ್ಥೆಗಳ ಹಿಂದೂ, ಲಿಂಗಾಯತ ಮತಗಳು ಒಗ್ಗೂಡುತ್ತವೆ ಎಂಬ ಭಾವನೆ ಬಿಜೆಪಿಯವರಲ್ಲಿ ದಟ್ಟವಾಗಿತ್ತು. ಈ ಕಾರಣದಿಂದಲೇ ಸುಮಾರು 5,000 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲ್ಲುವುದಾಗಿ ಹೇಳುತ್ತಿದ್ದರು. ಆದರೆ, ವಾಸ್ತವವೇ ಬೇರೆ ಆಗಿತ್ತು. ಬಿಜೆಪಿಯವರು ಅಂದುಕೊಂಡಂತೆ ಧರ್ಮ-ಜಾತಿ ಹೆಚ್ಚಿನ ಕೆಲಸ ಮಾಡಿಲ್ಲ.
ಮುಳುವಾದ ಅತಿಯಾದ ಆತ್ಮವಿಶ್ವಾಸ: ಪರಿಷತ್ ಕ್ಷೇತ್ರದಲ್ಲಿ ನಮ್ಮವರೇ ಹೆಚ್ಚು ಶಾಸಕರು, ಸಂಸದರಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಸಂಖ್ಯಾಬಲ ಅಧಿಕವಿದೆ ಎಂಬ ಭಾವನೆ ಮೇಲೆ ಹೆಚ್ಚಿನ ಅವಲಂಬನೆ, ಕಾಂಗ್ರೆಸ್‌ಗೆ ಹೋಲಿಸಿದರೆ ಸಂಘಟಿತ ಕಾರ್ಯಕರ್ತರ ಪಡೆ, ಪೇಜ್ ಪ್ರಮುಖರು, ಗ್ರಾಪಂ ಮಟ್ಟದಲ್ಲಿ ಸಮಿತಿಗಳು ಸಂಘಟಿತ ಕಾರ್ಯನಿರ್ವಹಣೆ ಸಹಜವಾಗಿಯೇ ಹೆಚ್ಚಿನ ಲಾಭ ತಂದು ಕೊಡಲಿವೆ ಎಂಬ ಭಾವನೆ ಬಿಜೆಪಿಗೆ ಮುಳುವಾಯಿತು ಎನ್ನಲಾಗುತ್ತಿದೆ.
ಪಕ್ಷೇತರ ಅಭ್ಯರ್ಥಿಯತ್ತ ಉದಾಸೀನತೆ: ಬಿಜೆಪಿಯೊಂದಿಗೆ ನಂಟು ಹೊಂದಿದ್ದರೂ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಹಾವೇರಿ ಎಪಿಎಂಸಿಯಲ್ಲಿ ಅಧ್ಯಕ್ಷ ಸ್ಥಾನ ಹಿಡಿದಿರುವ ಮಲ್ಲಿಕಾರ್ಜುನ ಹಾವೇರಿ ಪಕ್ಷೇತರರಾಗಿ ಸ್ಪರ್ಧಿಸಿದ್ದನ್ನು ಬಿಜೆಪಿ ನಾಯಕರು ಲಘುವಾಗಿ ಪರಿಗಣಿಸಿದ್ದರು. ಆದರೆ, ಪಕ್ಷೇತರ ಅಭ್ಯರ್ಥಿ ಪಡೆದ ಮತಗಳು, ವಿಶೇಷವಾಗಿ ಬಿಜೆಪಿ ಮತಬುಟ್ಟಿಗೆ ಕೈ ಹಾಕಿರುವುದು ಇದೀಗ ಬಿಜೆಪಿಯವರ ಗಮನಕ್ಕೆ ಬರತೊಡಗಿದೆ. ಕೆಲ ಬಿಜೆಪಿ ಮುಖಂಡರ ಅನಿಸಿಕೆಯಂತೆ ಮಲ್ಲಿಕಾರ್ಜುನ ಹಾವೇರಿ ಪಡೆದಿರುವ 1,217 ಮತಗಳಲ್ಲಿ ಸುಮಾರು 1,000 ಮತಗಳು ಬಿಜೆಪಿಯ ಮತಗಳಾಗಿವೆ. ಇದು ನಿಜವಾಗಿದ್ದರೆ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಹಿಂದಿಕ್ಕಿ ಹೆಚ್ಚಿನ ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವು ಸಾಧಿಸಬಹುದಾಗಿತ್ತು.
ಗದಗ-ಹಾವೇರಿ ಉಪೇಕ್ಷೆ:ಬಿಜೆಪಿ ಪಕ್ಷದೊಳಗೆ ಗುಪ್ತಗಾಮಿನಿಯಂತೆ ಪಸರಿಸಿದ ವಿವಿಧ ರೂಪದ ಅಸಮಾಧಾನ, ಜಾತಿ ಮೋಹವೂ ತನ್ನದೇ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಹಾಗೂ ವಿಧಾನಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ ಅವರು ಗದಗ ಹಾಗೂ ಹಾವೇರಿ ಜಿಲ್ಲೆಗಳಿಗೆ ಹೆಚ್ಚಿನ ರೀತಿ ಗಮನ ನೀಡಿಲ್ಲ, ಸದಸ್ಯರ ಭೇಟಿ, ಸಭೆಗಳಿಗೆ ಗೈರು ಹಾಜರಾಗುತ್ತಿದ್ದರು ಎಂಬ ಹಲವರ ಅಸಮಾಧಾನವೂ ತನ್ನದೇ ಕೊಡುಗೆ ನೀಡಿರಬಹುದಾಗಿದೆ.
ಅಬ್ಬರವಿಲ್ಲದೇ ಪೆಟ್ಟು ನೀಡಿದ ಕೈ
ಬಿಜೆಪಿಗೆ ಹೋಲಿಸಿದರೆ ಅಬ್ಬರದ ಪ್ರಚಾರ ಇಲ್ಲದೆಯೇ ಕಾಂಗ್ರೆಸ್ ಗೆದ್ದಿದೆ. ಟಿಕೆಟ್ ವಿಚಾರದಲ್ಲಿ ಎದ್ದ ಅಸಮಾಧಾನ ಮೆಟ್ಟಿ ನಿಂತು ಸಂಘಟಿತ ಯತ್ನ ತೋರಿದೆ. ಬಿಜೆಪಿ ಸರಕಾರ, ಮುಖ್ಯಮಂತ್ರಿ ಸ್ವಕ್ಷೇತ್ರ ಹಾಗೂ ಬಿಜೆಪಿಗೆ ಹೆಚ್ಚಿನ ಬಲ ನೀಡುವ ನೆಲದಲ್ಲಿಯೇ ಹೆಚ್ಚಿನ ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದಿದೆ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇದ್ದದ್ದು ಕೇವಲ ನಾಲ್ವರು ಮಾತ್ರ. ಇತ್ತೀಚೆಗೆ ನಡೆದ ಹಾನಗಲ್ಲ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕ್ಷೇತ್ರ ಕಿತ್ತುಕೊಂಡ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಒಬ್ಬರೇ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರೆ, ಧಾರವಾಡ ಜಿಲ್ಲೆಯಲ್ಲಿ
ಹು-ಧಾ ಪೂರ್ವ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಗದಗ ಜಿಲ್ಲೆ ಗದಗ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ.
ವಿರೋಧಿ ಅಲೆ ಸಮರ್ಪಕ ಬಳಕೆ: ಬೆಲೆ ಏರಿಕೆ, ಆಡಳಿತ ವಿರೋಧಿ ಅಲೆಯನ್ನು ಸಮರ್ಪಕವಾಗಿ ಬಳಸಿಕೊಂಡ ಕಾಂಗ್ರೆಸ್ ಪ್ರಥಮ ಪ್ರಾಶಸ್ತ್ಯದ ಹೆಚ್ಚಿನ ಮತಗಳ ಅಂತರದ ಗೆಲುವು ಪಡೆದಿದೆ. ಸುಮಾರು 3,500 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದು ಆಯ್ಕೆಯಾಗುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಸೇರಿದಂತೆ ಕೈ ಮುಖಂಡರು ಹೇಳುತ್ತಲೇ ಬಂದಿದ್ದರೂ, ಅವರ ನಿರೀಕ್ಷೆಗೆ ಸಮೀಪ ಎನ್ನುವಂತೆ ಸುಮಾರು 3,334 ಮತಗಳನ್ನು ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಎಲ್ಲಿಯೂ ಮುಂದೆ ಬಾರದ ಬಿಜೆಪಿ:ಪ್ರಥಮ ಪ್ರಾಶಸ್ತ್ಯ ಮತಗಳ ಎಣಿಕೆಗೆ ಒಟ್ಟು 14 ಟೇಬಲ್‌ಗಳಿಗೆ ಮತಗಳನ್ನು ಹಂಚಿಕೆ ಮಾಡಿ ಒಟ್ಟು ಐದು ಸುತ್ತುಗಳಲ್ಲಿ ಮತ ಎಣಿಕೆ ಮಾಡಲಾಯಿತು. 1-14ನೇ ಟೇಬಲ್ ವರೆಗೂ ಬಂದ ಮತಗಳ ವಿವರ ನೋಡಿದರೆ, ಒಂದೇ ಒಂದು ಟೇಬಲ್‌ನಲ್ಲಿಯೂ ಬಿಜೆಪಿ ಕಾಂಗ್ರೆಸ್‌ಗಿಂತ ಹೆಚ್ಚಿನ ಮತ ಪಡೆದಿರುವುದು ಗೋಚರಿಸಿತು. ಹಾನಗಲ್ಲ ವಿಧಾನಸಭೆ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಕಸರತ್ತುಗಳನ್ನು ಮೆಟ್ಟಿ ನಿಂತು ಹೊಡೆತ ಕೊಟ್ಟಿದ್ದ ಕಾಂಗ್ರೆಸ್ ಇದೀಗ, ಪರಿಷತ್ತು ಚುನವಾಣೆಯಲ್ಲಿಯೂ ಬಿಜೆಪಿಗೆ ಪೆಟ್ಟು ನೀಡುವ ಕೆಲಸ ಮಾಡಿದೆ.
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.