ಉದ್ದೇಶ ಈಡೇರಲಿಲ್ಲ; ಸದನದಲ್ಲಿ ಸಿದ್ದರಾಮಯ್ಯ ಸುದೀರ್ಘ ಮಾತು
Team Udayavani, Dec 24, 2021, 5:19 PM IST
ಸುವರ್ಣ ಸೌಧ: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತಾದ ವಿಷಯದ ಕುರಿತು ಇಂದಿನ(ಶುಕ್ರವಾರ) ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸುದೀರ್ಘವಾಗಿ ಹಲವು ವಿಚಾರಗಳನ್ನು ಪ್ರಸ್ತಾವಿಸಿ ಸರಕಾರದ ವಿರುದ್ಧ ಕಿಡಿ ಕಾರಿದರು.
ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಿದ ಉದ್ದೇಶವೇ ಉತ್ತರ ಕರ್ನಾಟಕ ಭಾಗದ ಜನರಿಗೆ ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕೆ. ಬಿಜೆಪಿ ಸರ್ಕಾರದ ಅಲಕ್ಷ್ಯ ಧೋರಣೆಯಿಂದಾಗಿ ಇಂದು ಆ ಉದ್ದೇಶದ ಈಡೇರಿಕೆ ಆಗುತ್ತಿಲ್ಲ ಎಂಬುದು ದುರದೃಷ್ಟಕರ ಎಂದರು.
ಉತ್ತರ ಕರ್ನಾಟಕ ಭಾಗದ ವಿಚಾರ ಬಂದಾಗ ಈ ಭಾಗದ ಎಲ್ಲಾ ಶಾಸಕರಿಗೂ ಮಾತನಾಡಬೇಕು ಎಂಬ ಸಹಜ ಆಸೆ ಇರುತ್ತದೆ. ಸರ್ಕಾರ ಸದನವನ್ನು ಇಂದೇ ಮುಗಿಸಬೇಕು ಎಂಬ ಹಠಕ್ಕೆ ಬಿದ್ದಿರುವುದರಿಂದ ಸಾಕಷ್ಟು ಶಾಸಕರಿಗೆ ಅವಕಾಶವೇ ಇಲ್ಲವಾಗಿದೆ ಎಂದರು.
ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಡಾ. ನಂಜುಂಡಪ್ಪನವರ ನೇತೃತ್ವದಲ್ಲಿ ಉನ್ನತಾಧಿಕಾರದ ಸಮಿತಿ ರಚನೆ ಮಾಡಿದ್ದರು. ಆ ಸಮಿತಿ 2002 ರಲ್ಲಿ ಸರ್ಕಾರಕ್ಕೆ ತನ್ನ ವರದಿ ನೀಡಿತ್ತು. ವರದಿಯ ಪ್ರಮುಖ ಸಲಹೆ ಎಂದರೆ ಮುಂದಿನ ಎಂಟು ವರ್ಷಗಳಲ್ಲಿ ರಾಜ್ಯದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 31 ಸಾವಿರ ಕೋಟಿ ಹಣವನ್ನು ಖರ್ಚು ಮಾಡಬೇಕು. ಹಣದಲ್ಲಿ 15 ಸಾವಿರ ಕೋಟಿ ವಿವಿಧ ಅಭಿವೃದ್ಧಿ ಯೋಜನೆಗಳ ರೂಪದಲ್ಲಿ ಬರುತ್ತದೆ, ಇನ್ನುಳಿದ 16 ಸಾವಿರ ಕೋಟಿಯನ್ನು ಪ್ರತೀ ವರ್ಷ ಎರಡು ಸಾವಿರ ಕೋಟಿಯಂತೆ ಮುಂದಿನ ಎಂಟು ವರ್ಷಗಳ ಕಾಲ ಖರ್ಚು ಮಾಡಬೇಕು ಎಂದು ವರದಿ ನೀಡಿದ್ದರು. ಅವರ ಈ ವರದಿ ಜಾರಿಯಾಗಿದ್ದು 2007 – 08 ರಲ್ಲಿ. ಅಲ್ಲಿಂದ ಪ್ರತಿ ವರ್ಷ 2000 ಕೋಟಿ ರೂ. ಹಣವನ್ನು 2016 ರ ವರೆಗೆ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆಗಿದ್ದಾಗ ಎಂಟು ವರ್ಷದ ಗಡುವು ಮುಗಿದು ಹೋದರೂ ಅದನ್ನು ಮತ್ತೆ ಐದು ವರ್ಷ ಮುಂದುವರೆಸಬೇಕು ಎಂದು ಆದೇಶಿಸಿ, ಪ್ರತೀ ವರ್ಷ ರೂ. 3,000 ಕೋಟಿ ಅನುದಾನ ನೀಡಿದ್ದೆ. ನಂಜುಡಪ್ಪನವರ ವರದಿ ಆಧರಿಸಿ ಈ ವರೆಗೆ ಬಿಡುಗಡೆ ಯಾಗಿರುವ ಹಣ ರೂ. 29,942 ಕೋಟಿ, ಖರ್ಚಾದದ್ದು ರೂ. 28,080 ಕೋಟಿ ಎಂದು ವಿವರ ನೀಡಿದರು.
ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದರು, ಆಗ ರಾಜ್ಯದಲ್ಲಿ ಎಸ್.ಎಂ ಕೃಷ್ಣ ಮುಖ್ಯಮಂತ್ರಿಗಳಾಗಿದ್ದರು. ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಂವಿಧಾನ ತಿದ್ದುಪಡಿ ಮಾಡಿ 371(J) ಕಲಂನಡಿ ವಿಶೇಷ ಸ್ಥಾನಮಾನ ನೀಡಬೇಕು ಎಂದು ಎಸ್.ಎಂ ಕೃಷ್ಣ ಪತ್ರ ಬರೆದರು, ಆ ಪತ್ರಕ್ಕೆ ಅಂದಿನ ಉಪ ಪ್ರಧಾನಿಗಳು ಹಾಗೂ ಗೃಹ ಸಚಿವರು ಆಗಿದ್ದ ಅಡ್ವಾಣಿಯವರು ಸಾಧ್ಯವಿಲ್ಲ ಎಂದು ಉತ್ತರ ನೀಡಿದ್ದರು.ಕೊನೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ಸಂವಿಧಾನದ 370 ನೇ ವಿಧಿಗೆ ತಿದ್ದುಪಡಿ ತಂದು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದರು ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಬಿಟ್ಟರೆ ಆ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಕಳೆದ ಎರಡೂವರೆ ವರ್ಷದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸದಸ್ಯರು, ಅಧ್ಯಕ್ಷರ ನೇಮಕವಾಗಿಲ್ಲ. ಹೀಗಿದ್ದಾಗ ಅನುದಾನದ ಸದ್ಬಳಕೆಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ನಮ್ಮ ಐದು ವರ್ಷಗಳ ಆಡಳಿತದಲ್ಲಿ ಹೈದರಾಬಾದ್ ಕರ್ನಾಟಕ ವಿಶೇಷ ಮೀಸಲಾತಿ ಸೌಲಭ್ಯದಡಿ 30,000 ಹುದ್ದೆಗಳ ಭರ್ತಿ ಮಾಡಿದ್ದೆವು. ಬಿಜೆಪಿ ಸರ್ಕಾರ ಬಂದಮೇಲೆ ಒಂದೇ ಒಂದು ಹುದ್ದೆ ಭರ್ತಿಯಾದ ಉದಾಹರಣೆ ಇದೆಯಾ? ಎಂದರು.
2021-22 ನೇ ಸಾಲಿಗೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಘೋಷಣೆಯಾದ ಅನುದಾನ ರೂ. 1,500 ಕೋಟಿ. ಇದರಲ್ಲಿ ಬಿಡುಗಡೆ ಯಾಗಿರುವುದು ರೂ. 378 ಕೋಟಿ. ಇನ್ನು ಉಳಿದಿರೋದು ಕೇವಲ ಎರಡು ತಿಂಗಳು? ಹೆಚ್ಚೆಂದರೆ ರೂ. 200 ಕೋಟಿ ಹಣ ಖರ್ಚಾಗಬಹುದು.
ಮುಖ್ಯಮಂತ್ರಿಗಳು ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿ, ವೀರಾವೇಶದಿಂದ ನೀವು ಅನುದಾನ ಅಷ್ಟನ್ನೂ ಖರ್ಚು ಮಾಡಿ ಈ ವರ್ಷ ರೂ. 3,000 ಕೋಟಿ ಅನುದಾನ ಕೊಡುತ್ತೇನೆ ಎಂದರು. ಎಲ್ಲಿದೆ ಹಣ? ಎಂದು ಪ್ರಶ್ನಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿ, ತಾವು ಅಧಿಕಾರಕ್ಕೆ ಬಂದರೆ ಕೃಷ್ಣ ಮೇಲ್ದಂಡೆ ಯೋಜನೆಗೆ ರೂ. 10,000 ಕೋಟಿ ಅನುದಾನ ನೀಡುವುದಾಗಿ ಹೇಳಿ, ಅನುದಾನ ನೀಡದೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಗೋವಿಂದ ಕಾರಜೋಳ ಹಲವು ಬಾರಿ ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. 2013 ರ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಕೃಷ್ಣ ಹಾಗೂ ಕಾವೇರಿ ನದಿ ಕಣಿವೆ ಪ್ರದೇಶದ ಅಭಿವೃದ್ಧಿ, ಆಧುನೀಕರಣ ಹಾಗೂ ನೀರಾವರಿ ಯೋಜನೆಗಳಿಗಾಗಿ ವಾರ್ಷಿಕ ರೂ. 10,000 ಕೋಟಿ ಅನುದಾನ ನೀಡುತ್ತೇವೆ ಎಂಬ ಭರವಸೆ ನೀಡಿದ್ದೆವು. ನಮ್ಮ ಐದು ವರ್ಷಗಳ ಅವಧಿಯಲ್ಲಿ ರೂ. 52,000 ಕೋಟಿ ಅನುದಾನವನ್ನು ನೀರಾವರಿ ಉದ್ದೇಶಕ್ಕಾಗಿ ಖರ್ಚು ಮಾಡಿದ್ದೇವೆ. ಬಿಜೆಪಿಯವರು 2018ರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸುಜಲಾಂ, ಸುಫಲಾಂ ಯೋಜನೆಯಡಿ 1.5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಯಡಿಯೂರಪ್ಪ ಅವರು ಸದನದಲ್ಲಿ ಮಾತನಾಡುತ್ತಾ ತಕ್ಷಣ ಆಲಮಟ್ಟಿ ಜಲಾಶಯವನ್ನು 519 ಮೀಟರ್ ನಿಂದ 524 ಮೀಟರ್ ಗೆ ಏರಿಸಿ, ಭೂಮಿ ಕಳೆದುಕೊಂಡವರಿಗೆ 25 – 30 ಲಕ್ಷ ಪರಿಹಾರ ನೀಡಲು ಸುಮಾರು 1.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬೇಕೆಂದು ಸಂಕಲ್ಪ ಮಾಡಿದ್ದೇನೆ ಎಂದಿದ್ದರು.
ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಾ ಬಂದಿದೆ, ಅವರ ಪ್ರಣಾಳಿಕೆಯ ಭರವಸೆ ಪ್ರಕಾರ ಈಗ ಕನಿಷ್ಠ 90,000 ಕೋಟಿ ಹಣ ಖರ್ಚು ಮಾಡಬೇಕಿತ್ತಲ್ಲವಾ? ಆದರೆ ಖರ್ಚಾದ ಒಟ್ಟು ಹಣ ರೂ. 33,835 ಕೋಟಿ ಮಾತ್ರ.ಬಿಜೆಪಿ ಸರ್ಕಾರ 2008 ರಿಂದ 2013 ರ ವರೆಗೆ ನೀರಾವರಿ ಉದ್ದೇಶಕ್ಕಾಗಿ ಖರ್ಚು ಮಾಡಿರುವ ಅನುದಾನ ರೂ. 17,734 ಕೋಟಿ. ಬಿಜೆಪಿ ಅವಧಿಯಲ್ಲಿ ಖರ್ಚಾದ ಮೂರು ಪಟ್ಟು ಹಣವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ನೀರಾವರಿ ಉದ್ದೇಶಕ್ಕೆ ಖರ್ಚು ಮಾಡಿದೆ.ನಮ್ಮ ಐದು ವರ್ಷಗಳ ಆಡಳಿತದಲ್ಲಿ ನೀರಾವರಿ ಸೃಜನೆಗೊಳಪಟ್ಟ ಪ್ರದೇಶ ಒಟ್ಟು 6.54 ಲಕ್ಷ ಎಕರೆ. ನಾವು ನುಡಿದಂತೆ ನಡೆದಿದ್ದೇವೆ, ಬಿಜೆಪಿ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸದ ವಚನ ಭ್ರಷ್ಟ ಸರ್ಕಾರವಾಗಿದೆ ಎಂದು ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.