ರಾಜ್ಯ ಸರಕಾರದ ಹಿಡಿತದಿಂದ ದೇಗುಲಗಳಿಗೆ ಮುಕ್ತಿ ಸ್ವಾಗತಾರ್ಹ
Team Udayavani, Dec 31, 2021, 6:00 AM IST
ರಾಜ್ಯ ಸರಕಾರದ ಹಿಡಿತದಲ್ಲಿರುವ ದೇವಸ್ಥಾನಗಳನ್ನು ಸ್ವತಂತ್ರಗೊಳಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಬುಧವಾರವಷ್ಟೇ ಘೋಷಣೆ ಮಾಡಿದ್ದಾರೆ. ಬಹುಹಿಂದಿನಿಂದಲೂ ಇಂಥದ್ದೊಂದು ಬೇಡಿಕೆ ಇದ್ದು, ಇದನ್ನು ನಮ್ಮ ಸರಕಾರ ಈಡೇರಿಸುತ್ತಿದೆ. ಬಜೆಟ್ ಅಧಿವೇಶನ ಆರಂಭವಾಗುವ ಮುನ್ನವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಈ ಹೇಳಿಕೆಯಿಂದಾಗಿ ರಾಜ್ಯದಲ್ಲಿರುವ ಪ್ರಮುಖ ಮತ್ತು ಖ್ಯಾತ ದೇವಾಲಯಗಳು ಸರಕಾರದ ಹಿಡಿತದಿಂದ ಮುಕ್ತಿಗೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ. ಜತೆಗೆ ಚರ್ಚ್‌ಗಳು ಮತ್ತು ಮಸೀದಿಗಳಿಗೆ ಇಲ್ಲದ ನಿಯಂತ್ರಣ ದೇವಸ್ಥಾನಗಳಿಗೆ ಮಾತ್ರ ಏಕೆ ಎಂಬ ಪ್ರಶ್ನೆಯನ್ನೂ ಮುಖ್ಯಮಂತ್ರಿಗಳು ಇದೇ ಸಮಯದಲ್ಲಿ ಕೇಳಿದ್ದಾರೆ.
ಮುಖ್ಯಮಂತ್ರಿಗಳ ಈ ಹೇಳಿಕೆ ರಾಜ್ಯದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿದೆ. ರಾಜ್ಯದಲ್ಲಿರುವ ದೇವಸ್ಥಾನಗಳನ್ನು ಸರಕಾರದ ವ್ಯಾಪ್ತಿಯಿಂದ ಹೊರತರುವುದು ಸಾಧ್ಯವೇ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದಕ್ಕೆ ಕಾರಣವೂ ಇದೆ. ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ತಪ್ಪಿಸಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟವೂ ನಡೆಯುತ್ತಿದ್ದು, ಇದರಲ್ಲಿ ಹೆಚ್ಚಿನವರು ಸಫಲರಾಗಿಲ್ಲ.
ಇತ್ತೀಚೆಗಷ್ಟೇ ಅಂದರೆ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಸದ್ಗುರು ಜಗ್ಗಿ ವಾಸುದೇವ್ ಅವರು ಆ ರಾಜ್ಯದಲ್ಲಿ ಸರಕಾರದ ಹಿಡಿತದಿಂದ ದೇವಾಲಯಗಳನ್ನು ಮುಕ್ತಿಗೊಳಿಸಬೇಕು ಎಂಬ ಆಂದೋಲನ ಶುರು ಮಾಡಿದ್ದರು. ಇದಕ್ಕೆ ಬಿಜೆಪಿಯೂ ಬೆಂಬಲ ನೀಡಿತ್ತು. ದೇವಸ್ಥಾನಗಳ ಆಡಳಿತವನ್ನು ದೈವತ್ವದಲ್ಲಿ ನಂಬಿಕೆ ಇದ್ದವರು ನೋಡಿಕೊಳ್ಳಬೇಕೇ ವಿನಾ ಇದರ ಬಗ್ಗೆ ಯಾವುದೇ ಭಾವನೆಗಳೇ ಇಲ್ಲದವರು ಏಕೆ ನೋಡಿಕೊಳ್ಳಬೇಕು ಎಂಬುದು ಅವರ ವಾದವಾಗಿತ್ತು. ಆದರೆ ವಿಧಾನಸಭೆ ಚುನಾವಣೆ ಮುಗಿದು ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ವಾದವನ್ನೇ ತಳ್ಳಿಹಾಕಿ ಯಾವುದೇ ಕಾರಣಕ್ಕೂ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಿಗೊಳಿಸುವುದಿಲ್ಲ ಎಂದು ಹೇಳಿದ್ದರು.
ಅಲ್ಲಿ ಈ ವಾದ ಸದ್ಯ ತಣ್ಣಗಾಗಿದ್ದು, ಈಗ ಕರ್ನಾಟಕದಲ್ಲಿ ದಿಢೀರನೇ ಎದ್ದುಕೂತಿದೆ. ಸ್ವತಃ ಸರಕಾರವೇ ದೇವಸ್ಥಾನಗಳನ್ನು ತಮ್ಮ ಹಿಡಿತದಿಂದ ಮುಕ್ತಿ ಮಾಡುವುದಾಗಿ ಹೇಳಿರುವುದು ವಿಶೇಷ. ದೇವಸ್ಥಾನಗಳು ಏಕೆ ಸರಕಾರದ ಹಿಡಿತದಲ್ಲಿ ಇರಬಾರದು ಎಂಬುದಕ್ಕೆ ಹಲವಾರು ಮಂದಿ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಪ್ರಮುಖವಾಗಿ ದೇವಸ್ಥಾನಗಳಿಂದ ಸಂಗ್ರಹವಾದ ಹಣವನ್ನು ಆಯಾ ದೇಗುಲಗಳ ಅಭಿವೃದ್ಧಿಗೇ ವೆಚ್ಚ ಮಾಡಬೇಕು, ಇದನ್ನು ಸರಕಾರ ತೆಗೆದುಕೊಂಡು ಬೇರೆ ಕಾರ್ಯಗಳಿಗೆ ಏಕೆ ಖರ್ಚು ಮಾಡಬೇಕು ಎಂಬ ಪ್ರಶ್ನೆ ಇದೆ. ಸದ್ಯ ಸರಕಾರ ತೆಗೆದುಕೊಂಡಿರುವ ತೀರ್ಮಾನ ಉತ್ತಮವಾಗಿದೆ ಎಂದೇ ಹೇಳಬಹುದು.
ಆದರೂ ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಭಾರೀ ಪ್ರಮಾಣದಲ್ಲಿ ಕಾಣಿಕೆ ಮತ್ತು ಕೊಡುಗೆ ರೂಪದಲ್ಲಿ ಹಣ ಬರುತ್ತಿದೆ. ಒಮ್ಮೆ ಖಾಸಗಿಯಾಗಿ ದೇವಸ್ಥಾನ ನೋಡಿಕೊಳ್ಳಲು ಅವಕಾಶ ಕೊಟ್ಟ ಮೇಲೆ, ಸರಕಾರ ಈ ಕಡೆ ತಿರುಗಿ ನೋಡದಂತೆ ಇರಬಾರದು. ಸಂಗ್ರಹವಾಗುವ ಹಣದ ಮೇಲೆ ಕಣ್ಣು ಇಟ್ಟಿರಬೇಕು. ಜತೆಗೆ ಕಾಲಕಾಲಕ್ಕೆ ಲೆಕ್ಕಪರಿಶೋಧನೆ ನಡೆಸಬೇಕು. ಖರ್ಚು ಮತ್ತು ವೆಚ್ಚದ ಮೇಲೆ ನಿಗಾ ಇಡುವ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.