ಮುಗಿದ ವರ್ಷ; ಮುಗಿಯದ ಆತಂಕ
2022ರ ಜೀವನ ಸಂಕಲ್ಪ ಹೇಗಿರಬೇಕು?
Team Udayavani, Jan 1, 2022, 7:05 AM IST
2020ರ ಹೊಸ ವರ್ಷಕ್ಕೆ ನಿರ್ಣಯಗಳನ್ನು ಮಾಡಿ, ಇನ್ನೇನು ಅವುಗಳನ್ನು ಜಾರಿಗೆ ತರೋಣ ಎಂದು ಪ್ರತಿಯೊಬ್ಬರೂ ಯೋಚಿಸುತ್ತಿರುವಾಗಲೇ ಹೊಸ ವರ್ಷದ ಹೊಸ ಕಾಯಿಲೆಯಾಗಿ ಕೊರೊನಾ ಕಾಲಿಟ್ಟಿದ್ದು ನೆನಪಿದೆ ತಾನೆ? ಇಡೀ ಜೀವನಕ್ಕಾಗುವಷ್ಟು ಬದಲಾವಣೆಗಳು ಪ್ರತಿಯೊಬ್ಬರ ಬದುಕಿನಲ್ಲೂ ಹಠಾತ್ ಆಗಿಬಿಟ್ಟವು. ಈಗ ಬೂಸ್ಟರ್ ಕಾಲ ಬಂದಿದೆ. ಕೊರೊನಾ ಹೊಡೆದೋಡಿಸಲು ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕಾದದ್ದು ಅತ್ಯಗತ್ಯ. ಹಾಗೆಯೇ ನಮ್ಮ ಹೊಸ ವರ್ಷದ ಸಂಕಲ್ಪ ಏನಿರಬೇಕು ಎಂಬುದರ ಕುರಿತು ವಿವಿಧ ಕ್ಷೇತ್ರದ ತಜ್ಞರ ಬೂಸ್ಟರ್ ಕಿವಿಮಾತುಗಳು ಇಲ್ಲಿವೆ..
ನಮ್ಮೊಳಗನ್ನು ತಿಳಿಯುವ ಕೆಲಸ ಮೊದಲಾಗಬೇಕು!
“ಸ್ವಭಾವಕ್ಕೆ ಔಷಧ ಇಲ್ಲ!’ ಬಾಲ್ಯದ ನನ್ನ ತುಂಟತನಕ್ಕೆ ಕುರಿತಂತೆ ಅಮ್ಮ ಹೇಳುತ್ತಿದ್ದ ಮಾತಿದು. ಅದರ ಹಿಂದಿನ ಕಾಣ್ಕೆ ಆಕೆಗೆ ಗೊತ್ತಿದ್ದರೂ ಈ ಸಾಲು ಜನಪದರಲ್ಲಿ ಹೇಗೆ ಬಂತು ಅಂತ ಆಕೆಗೆ ಗೊತ್ತಿಲ್ಲ. ಸಾಮಾನ್ಯವಾಗಿ ರೋಗ ಎಲ್ಲಿದೆಯೋ ಅಲ್ಲಿ ಔಷಧ ಬಂದೇ ಬರುತ್ತದೆ. ಅದೇ ರೀತಿ, ಪ್ರಶ್ನೆ ಎಲ್ಲಿದೆಯೋ ಅಲ್ಲಿ ಉತ್ತರ ಬಂದೇ ಬರುತ್ತದೆ. ಇಲ್ಲಿ “ಸ್ವಭಾವ’ ಅನ್ನುವುದನ್ನು ಪ್ರಶ್ನೆ ಅಂತ ಭಾವಿಸುವುದಾದರೆ “ಔಷಧ’ ಅನ್ನುವುದು ಅದಕ್ಕೆ ಉತ್ತರವಾಗುತ್ತದೆ. ಹೀಗಿರುವಾಗ, “ಶಾಂಕರ ಭಾಷ್ಯ’ದಲ್ಲಿ ಆದಿಶಂಕರರು ಸೂತ್ರವೊಂದನ್ನು ಪ್ರಚುರಪಡಿಸುತ್ತಾರೆ: ಸ್ವಭಾವಕ್ಕೆ ಕುರಿತಂತೆ ಪ್ರಶ್ನಾರ್ಥಕ ಚಿಹ್ನೆಯು ಎಂದಿಗೂ ಉದ್ಭವವಾಗುವುದಿಲ್ಲ!
ಅಂದರೆ ಯಾವುದು ತನ್ನ ಮೂಲಭಾವದಲ್ಲಿ ಸ್ಥಿತವಾಗಿದೆಯೋ ಅದೇ ಅದರ ಸ್ವ-ಭಾವ. ಹಾಗೇನಾದರೂ ಪರರ ಭಾವದಿಂದ ಅದು ಕಲುಷಿತಗೊಂಡರೆ, ಅದು ಪ್ರಭಾವ. ಹೀಗಿರುವಾಗ ಯಾವುದೇ ವಸ್ತುವಿನ ಸ್ವಭಾವದ ಕುರಿತಂತೆ ಪ್ರಶ್ನೆ ಎಂದಿಗೂ ಏಳುವುದಿಲ್ಲ. ಉದಾಹರಣೆಗೆ, ಸುಡುವುದು ಬೆಂಕಿಯ ಸ್ವಭಾವ. ಬೆಂಕಿ ಯಾಕೆ ಸುಡುತ್ತಲಿದೆ? ಎಂದು ಪ್ರಶ್ನಿಸಲಾಗದು. ಚಂದನ ಯಾಕೆ ಪರಿಮಳ ಸೂಸುತ್ತಲಿದೆ? ನೀರು ಯಾಕೆ ಶೀತಲವಾಗಿದೆ? ಎಂದು ಕೇಳಿದರೆ ಅದು ಅರ್ಥಹೀನ. ಅದೇ ರೀತಿಯಾಗಿ “ನೀವು ಯಾಕೆ ಕಾಯಿಲೆ ಬಿದ್ದಿದ್ದೀರಿ?’ ಎಂದು ಪ್ರಶ್ನಿಸಬಹುದೇ ಹೊರತು, “ನೀವ್ಯಾಕೆ ಆರೋಗ್ಯದಿಂದಿದ್ದೀರಿ?’ ಎಂದು ಯಾರನ್ನೂ ಪ್ರಶ್ನಿಸಲಾಗದು. ಯಾಕೆಂದರೆ, ಪ್ರತೀ ಜೀವಿಯೂ ಸ್ವಸ್ಥತೆಯಿಂದ ಕೂಡಿರುವುದೇ ಅದರ ಸ್ವಭಾವವಾಗಿದೆ. ತಮಾಷೆಯೆಂದರೆ, ನಾವು ಬಳಸುವ ಪ್ರತೀ ಪದಗಳ “ಎಟಿಮಾಲಜಿ’ ಬಗ್ಗೆ ನಾವು ಪಂಡಿತರಾಗಿ ಹುಡುಕಬಯಸುತ್ತೇವೆಯೇ ಹೊರತು ವಿನೀತರಾಗಿ ಅಧ್ಯಾತ್ಮದತ್ತ ನೋಡುವುದಿಲ್ಲ. ಕಾರಣ, ನಮ್ಮೊಳಗಿರುವ ಅಹಂಕಾರ. ಕೇವಲ ಕೊಬ್ಬು, ಮದ, ಸೊಕ್ಕು, ಗರ್ವ, ಪ್ರತಿಷ್ಠೆಗಳ ರೂಪವನ್ನೇ ಅಹಂಕಾರ ಎಂಬಂತೆ ನಮಗೆ ಸಂಕುಚಿತವಾಗಿ ಹೇಳಿಕೊಟ್ಟವರು ಸಾಧಕರಲ್ಲದ ಆಂಗ್ಲ ತರ್ಜುಮೆಕಾರರು. ಇದರಿಂದಾಗಿ ಅಹಂಕಾರದ ಮೂಲ ಬೇರಾದ ಅಸ್ಮಿತೆಯನ್ನು ನಾವು ಲೆಕ್ಕಕ್ಕೇ ಪರಿಗಣಿಸಲಿಲ್ಲ. ಅಸಲಿಗೆ, ನಾನು/ನನ್ನದು ಎಂಬ ಅಸ್ಮಿತೆಯೇ ಅಹಂಕಾರದ ಮೂಲದ್ರವ್ಯ.
ಪ್ರಸ್ತುತದಲ್ಲಿ, ಸದಾ ಆರೋಗ್ಯದಿಂದಿರಬೇಕಾಗಿದ್ದ ಮನುಷ್ಯನ ಸ್ವಭಾವ ಯಾರ್ಯಾರದೋ ಪ್ರಚೋದನೆಗಳಿಂದ ಪ್ರಭಾವಕ್ಕೊಳಗಾಗುತ್ತಲಿದೆ. ಕೊರೊನಾ ಎಂಬುದು ಒಂದು ನೆಪ ಮಾತ್ರ. ದೈಹಿಕ ಕಸರತ್ತು ಮತ್ತು ಒಳ್ಳೆಯ ಆಹಾರಕ್ಕಷ್ಟೇ ಸೀಮಿತವಾಗಿರುವ ನಮ್ಮ ಜೀವಶೈಲಿಗೆ “ಅನ್ನ’ ಅನ್ನುವುದೆಲ್ಲ ಕೇವಲ ರೊಟ್ಟಿ, ಪೂರಿ, ಸಾಗು ಮಾತ್ರ ಅಲ್ಲ ಎಂದೆನ್ನುವುದು ಗೊತ್ತಾಗಬೇಕಿದೆ. ಉಣ್ಣುವುದು, ಕೇಳುವುದು, ನೋಡುವುದು, ಸ್ಪರ್ಶಿಸುವುದು- ಎಲ್ಲವೂ ದೇಹಕ್ಕೆ ಉಣಬಡಿಸಬಲ್ಲ ಅನ್ನವೇ ಆಗಿವೆ. ಅವು ಹೇಗೆಲ್ಲ ನಮ್ಮೊಳಗೆ ಸೇರಿ ನಮ್ಮನ್ನು ರೋಗಗ್ರಸ್ಥರನ್ನಾಗಿಸುತ್ತಿವೆ ಎಂದು ನಾವು ಯೋಚಿಸಲೂ ಹೋಗುವುದಿಲ್ಲ. ನಿಷಿದ್ಧವಾದುದನ್ನು ಕೇಳುವುದಿಲ್ಲ-ನೋಡುವುದಿಲ್ಲ-
ಮಾತನಾಡುವುದಿಲ್ಲ ಎಂದೆನ್ನುವ ಮೂರು
ಮಂಗಗಳ ರಹಸ್ಯ ಇಷ್ಟೇ.
ಎಲ್ಲಕ್ಕಿಂತ ಮೊದಲಿಗೆ ನಾವು ಇಲ್ಲಿಯವರೆಗೆ ಕಲಿತ ಜ್ಞಾನವನ್ನು ಗುಮಾನಿಯಿಂದ ನೋಡುವುದನ್ನು ಕಲಿಯಬೇಕಿದೆ. ಪತಂಜಲಿ ಮಹರ್ಷಿ ಹೇಳುವಂತೆ, ಅದು ಬರೀ ಶಬ್ದಜ್ಞಾನಾನುಪಾತಿ. ಅಂದರೆ, ಕೇವಲ ಶಬ್ದಗಳಿಂದ ಜನಿತಗೊಂಡ ಜ್ಞಾನ. ವಾಸ್ತವದಲ್ಲಿ ಅದು ಶೂನ್ಯಕ್ಕೆ ಸಮ. ಯಾವುದು ಅನುಭವ-ಅನುಭೂತಿಯ ಮೂಲಕ ನಮ್ಮೊಳಗೆ ಇಳಿಯುತ್ತದೆಯೋ ಅದು ಮಾತ್ರ ನಿಜದ ಜ್ಞಾನ. ಅಂಥದೊಂದು ನೈಜಜ್ಞಾನ ಗಳಿಸುವಿಕೆಯ ಬಗ್ಗೆ ನಮ್ಮನ್ನು ನಾವು ಎಷ್ಟರಮಟ್ಟಿಗೆ ತೆರೆದುಕೊಳ್ಳ ಬಲ್ಲೆವು? ನನ್ನ ಪಾಲಿಗೆ ಹೊಸವರ್ಷದ ಸಂಕಲ್ಪವೆಂದರೆ ಇದೇ!
-ರಾಘವೇಂದ್ರ ಜೋಶಿ
ಅಧ್ಯಾತ್ಮ ಚಿಂತಕರು
ಧನಾತ್ಮಕ ಚಿಂತನೆಯೇ ಬದುಕಿನ ಭಾಗವಾಗಲಿ
ಆತಂಕ ತುಂಬಿದ ಮತ್ತೂಂದು ವರ್ಷ ಉರುಳಿತು. ಆದರೆ ಹರುಷ ತುಂಬುವ ದಿನಗಳು ಇನ್ನೂ ಕಾಣುತ್ತಿಲ್ಲ. ಹೊಸ ವರ್ಷವೇನೋ ಬರುತ್ತಿದೆ. ಆದರೆ ಅಲ್ಲೇನು ಹೊಸದು ಎಂಬುದನ್ನು ಗಮನಿಸಿದರೆ ಅದು ಹೊಸ ತಳಿಯ ವೈರಸ್ ಎಂಬ ನಿರಾಶಾಭಾವ ಮೂಡುವಂತಿದೆ. ಎರಡು ವರ್ಷಗಳಿಂದ ಸತತವಾಗಿ ಇಡೀ ಜಗದ ಮಾನವಕುಲವನ್ನು ಬಿಡದೆ ಕಾಡುತ್ತಿರುವ ಕೋವಿಡ್ ಎಂಬ ಮಾರಿ, ಮತ್ತೆ ಹೊಸ ರೂಪದಲ್ಲಿ ಕಾಡಲು ರೂಪಾಂತರಗೊಂಡು ಸಿದ್ಧವಾಗುತ್ತಿದೆ. ಒಮಿಕ್ರಾನ್‌ನ ವಿರಾಟ್ ರೂಪದ ನಿಜ ದರ್ಶನ ಭಾರತೀಯರಿಗೆ ಇನ್ನೂ ಆಗಿಲ್ಲ. ಆದರೆ ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಗಹಗಹಿಸಲು ಸಿದ್ಧವಾಗುತ್ತಿದೆ. ಅತ್ತ ಬಂದ ರೋಗಗಳನ್ನೆಲ್ಲ ಜಯಿಸಲು ಪಣತೊಟ್ಟು ನಿಂತ ವೈದ್ಯ ವಿಜ್ಞಾನಿಗಳೂ ಹಿಮ್ಮೆಟ್ಟಿಲ್ಲ. ರೋಗದ ರೂಪಾಂತರಗಳನ್ನು ಥಟ್ಟನೆ ಗುರುತಿಸಿ, ಅದರ ಲಕ್ಷಣಗಳನ್ನೂ, ಎದುರಿಸುವ ಉಪಾಯಗಳನ್ನೂ ಶೋಧಿಸುವಲ್ಲಿ ಹಗಲಿರುಳೂ ತಮ್ಮನ್ನು ತೊಡಗಿಸಿಕೊಂಡಿದ್ದಾ ರೆ. ಭಾಗಶಃ ಯಶಸ್ವಿಯೂ ಆಗಿದ್ದಾರೆ. ಲಸಿಕೆಯ ಆವಿಷ್ಕಾರವಂತೂ ಈ ಶತಮಾನದ ಉತ್ಕೃಷ್ಟ ಸಿದ್ಧಿ. ಕೋಟಿಗಟ್ಟಲೆ ಜನರ ಲಸಿಕಾಕರಣ ನಮ್ಮ ದೇಶದ ಹೆಗ್ಗಳಿಕೆ.
ವೈದ್ಯರೇನೋ ತಮ್ಮ ಕರ್ತವ್ಯದಲ್ಲಿ ತಾವು ತೊಡಗಿಕೊಂಡರು. ಆದರೆ ಸಾಮಾನ್ಯ ನಾಗರಿಕರಾದ ನಾವು ನಮ್ಮ ನಾಗರಿಕ ಪ್ರಜ್ಞೆಗೆ ನ್ಯಾಯ ಒದಗಿಸುತ್ತಿದ್ದೇವೆಯೇ ಎಂಬುದು ಎಲ್ಲರೂ ಗಂಭೀರವಾಗಿ ಚಿಂತಿಸಬೇಕಾದ ವಿಷಯ. ಅಲ್ಲದೆ ಮುಂದಿನ ದಿನಗಳಲ್ಲಿ ನಮ್ಮ ನಡೆ ಹೇಗಿರಬೇಕೆಂಬುದನ್ನು ನಿರ್ಧರಿಸಿ ಮುನ್ನಡಿಯಿಡಬೇಕಾದ ದಿನ, ಆ ನಿಟ್ಟಿನಲ್ಲಿ ಶಪಥಗೈದು ಎಚ್ಚರದ ನಡೆಗೆ ನಮ್ಮನ್ನು ತರಬೇತಿಗೊಳಿಸಿಕೊಳ್ಳಬೇಕಿದೆ.
ಮಾನಸಿಕ ಧೃಡತೆ, ನಮ್ಮ ಮೊದಲ ಆವಶ್ಯಕತೆ. ಎಲ್ಲೋ ಕೇಳಿದ ಸುದ್ದಿಗಳಿಂದ ವಿಚಲಿತಗೊಳ್ಳದ ಮನಸ್ಸು ನಮ್ಮದಾಗಬೇಕು. ಯಾವುದೂ ನಾವು ಊಹಿಸಿದಷ್ಟು ಕೆಟ್ಟದ್ದೂ ಆಗಿರುವುದಿಲ್ಲ. ಅಥವಾ ನಾವು ಉಡಾಫೆ ಮಾಡುವಷ್ಟು ಸರಳವೂ ಆಗಿರುವುದಿಲ್ಲ. ವಸ್ತುನಿಷ್ಠ ಸಂಗತಿಗಳನ್ನು ನಿಮ್ಮ ಕುಟುಂಬ ವೈದ್ಯರಿಂದ ಕೇಳಿ ತಿಳಿಯಿರಿ. ಈ ವಿಷಯದಲ್ಲಿ ಕುಟುಂಬ ವೈದ್ಯರಂಥ ಮಾರ್ಗದರ್ಶಕ ಇನ್ನೊಬ್ಬರಿಲ್ಲ. ವಿಚಲಿತಗೊಳ್ಳದ, ಅನಾವಶ್ಯಕ ಆತಂಕಗೊಳ್ಳದ ಮನಃಸ್ಥಿತಿ ಈ ದಿನದ ಮುಖ್ಯ ಆವಶ್ಯಕತೆ.
ಮಾರ್ಗದರ್ಶಿ ಸೂತ್ರಗಳ ಪಾಲನೆ, ನಾಗರಿಕ ಪ್ರಜ್ಞೆಯ ಅತ್ಯಂತ ಮಹತ್ವದ ಸಂಗತಿ. ಅನೇಕ ಆವಿಷ್ಕಾರಗಳ, ಸಂಶೋಧನೆಗಳ ಫಲವಾಗಿ ಕಂಡುಕೊಂಡ ಮಾರ್ಗದರ್ಶಿ ಸೂತ್ರಗಳನ್ನು ನಮ್ಮ ಜನ ಮುರಿದಷ್ಟು ಜಗತ್ತಿನ ಯಾವ ದೇಶದ ಜನರೂ ಮುರಿದಿರಲಿಕ್ಕಿಲ್ಲ ಎನ್ನುವುದು ವಿಷಾದನೀಯ ಸತ್ಯ. ಅದರಿಂದ ಕಷ್ಟಕ್ಕೊಳಗಾದವರು ಸಾಮಾನ್ಯ ನಾಗರಿಕರು ಮತ್ತು ವ್ಯವಸ್ಥೆ. ಹೊರೆಯಾಗಿದ್ದು ಆರೋಗ್ಯ ಸಿಬಂದಿಗೆ ಮತ್ತು ಸರಕಾರಕ್ಕೆ. ಒಂದಿಷ್ಟು ಎಚ್ಚರದ ನಡೆಯಿಂದ ಈ ಎಲ್ಲ ಸಂಕಷ್ಟವನ್ನು ತಪ್ಪಿಸಬಹುದಿತ್ತು. ಹೊಸವರ್ಷಕ್ಕೊಂದು ದೃಢ ಸಂಕಲ್ಪ ಮಾಡುವುದು ಇಂದಿನ ಅಗತ್ಯ. ಶಾರೀರಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಪ್ರಥಮ ಆದ್ಯತೆಯಾಗಬೇಕು. ಆರೋಗ್ಯವಂತ ದೇಹಕ್ಕೆ ವೈರಸ್ ನುಗ್ಗುವುದು ಕಷ್ಟ. ಹಾಳು ಮೂಳುಗಳನ್ನೆಲ್ಲ ತಿಂದು, ಚಟಗಳ ದಾಸನಾಗಿ ಬದುಕುವ ಮನುಷ್ಯ ರೋಗಗ್ರಸ್ತನಾಗುವುದು ಶತಃಸಿದ್ಧ. ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು, ಲಸಿಕೆಗಳನ್ನು ಪಡೆಯುವುದು ಎಲ್ಲರ ಕರ್ತವ್ಯ. ಇದರೊಂದಿಗೆ ಈ ರೋಗವನ್ನು ಖಂಡಿತ ಜಯಿಸುತ್ತೇವೆಂಬ ಧನಾತ್ಮಕ ಚಿಂತನೆ ಆವಶ್ಯಕ.
-ಡಾ| ಶಿವಾನಂದ ಕುಬಸದ
ತಜ್ಞ ವೈದ್ಯರು
ಸಹಾಯ ದೊರೆತಾಗ ಮಾತ್ರ ಸಂಕಲ್ಪ ಗುರಿ ಮುಟ್ಟುವುದು..
ಜನವರಿ 1ರಿಂದ ಎಟಿಎಂ ಉಚಿತವಾಗಿ ಬಳಸುವ ಅವಕಾಶಗಳು ಮುಗಿದ ಅನಂತರ ಬಳಸಿದರೆ ಹೆಚ್ಚುವರಿ ಸೇವಾಶುಲ್ಕ ನೀಡಬೇಕಾಗುತ್ತದೆ ಎನ್ನುವುದ ರೊಂದಿಗೆ 2022 ಪ್ರಾರಂಭವಾಗು ತ್ತಿದೆ. ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ನೀಡುವ ವಿವಿಧ ಸೇವೆಗಳಿಗಾಗಿ ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕಗಳು ಕೂಡಾ ಪರಿಷ್ಕರಣೆಯಾಗಬಹುದು.
ಜನಸಾಮಾನ್ಯರ ಆರ್ಥಿಕ ದೃಷ್ಟಿಯಿಂದ 2022 ಹೇಗಿರಬಹುದು ಎನ್ನುವುದನ್ನು ತಿಳಿಯಲು 2021ರಲ್ಲಿ ನಡೆದ ಕೆಲವು ಪ್ರಮುಖ ಬೆಳವಣಿಗೆಗಳನ್ನು ನೋಡಬಹುದು. ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಶೀನ್ ಮೊದಲಾದ ಗೃಹಬಳಕೆಯ ಉಪಕರಣಗಳ ಬೆಲೆಯನ್ನು ಮೂರು ಬಾರಿ ಹೆಚ್ಚಿಸಿದರೂ ಏರಿಕೆಯಾದ ಉತ್ಪಾದನ ವೆಚ್ಚವನ್ನು ಸರಿದೂಗಿಸಲು ಕಂಪೆನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ 2022ರಲ್ಲಿ ಗೃಹೋಪಯೋಗಿ ಉಪಕರಣಗಳ ಬೆಲೆ ಏರಿಕೆಯನ್ನು ನಿರೀಕ್ಷಿಸಬಹುದು.
ವಿದೇಶದಿಂದ ಅಮದು ಮಾಡಿಕೊಳ್ಳುವ ಕಚ್ಚಾವಸ್ತು, ಬಿಡಿಭಾಗಗಳು, ಪರಿಕರಗಳನ್ನು ಅವಲಂಬಿಸಿರುವ ಎಲ್ಲ ಉದ್ಯಮಗಳ ಪರಿಸ್ಥಿತಿ ಹೆಚ್ಚು ಭಿನ್ನವಾಗಿಲ್ಲ. ಕೊರೊನಾಪೂರ್ವದ ದಿನಗಳಿಗಿಂತ ಈಗ ವಿದೇಶದಿಂದ ಹೆಚ್ಚು ಹಣ ಕೊಟ್ಟು ಖರೀದಿಸಬೇಕು, ಸರಕು ಸಾಗಾಣಿಕೆ, ವಿಮೆ ಮತ್ತು ನಿರ್ವಹಣ ವೆಚ್ಚಗಳು ಮೊದಲಿಗಿಂತ ಹೆಚ್ಚಾಗಿದೆ.ಇದರ ಜತೆ ಅಗತ್ಯ ಕಚ್ಚಾವಸ್ತು, ಬಿಡಿಭಾಗಗಳು ಮತ್ತು ಪರಿಕರಗಳು ಸುಲಭವಾಗಿ ದೊರೆಯುತ್ತಿಲ್ಲ. ಬೇಡಿಕೆ ಹೆಚ್ಚಾಗುತ್ತಿದೆ, ಆದರೆ ಪೂರೈಕೆ ನಿರೀಕ್ಷೆಯಷ್ಟು ಹೆಚ್ಚಾಗುತ್ತಿಲ್ಲ. ರಾಜ್ಯದಲ್ಲಿ ಎಸ್ಕಾಂಗಳು ಸಲ್ಲಿಸಿರುವ ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಯನ್ನು ಯಥಾವತ್ತಾಗಿ ಸರಕಾರ ಅನುಷ್ಠಾನಗೊಳಿಸಿದರೆ ಗೃಹಬಳಕೆ, ವಾಣಿಜ್ಯ ಮತ್ತು ಉದ್ಯಮದ ವಿದ್ಯುತ್ ದರ ಬಹಳ ಹೆಚ್ಚಾಗಲಿದೆ. ವಿಶೇಷವಾಗಿ ಕೋವಿಡ್-19ರಿಂದ ತೀವ್ರ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಗಳು, ವಿದ್ಯುತ್ ದರ ಏರಿಕೆಯ ಹೊರೆಯನ್ನು ಎಷ್ಟರ ಮಟ್ಟಿಗೆ ತಾಳಿಕೊಳ್ಳುತ್ತವೆ ಎನ್ನುವುದನ್ನು ನೋಡಬೇಕು. ಉದ್ಯಮಗಳು, ಸಂಸ್ಥೆಗಳು ಮುಚ್ಚಿದಷ್ಟೂ ನಿರುದ್ಯೋಗ ಹೆಚ್ಚಾಗಲಿದೆ.
ಇಂಥ ಸಂದರ್ಭದಲ್ಲಿ ನೆಮ್ಮದಿಯಿಂದ ಬದುಕಲು ಶ್ರೀಸಾಮಾನ್ಯರು ಏನೆಲ್ಲ ನಿರ್ಣಯಗಳನ್ನು ಕೈಗೊಳ್ಳಬಹುದು. ಆದರೆ ಅವೆಲ್ಲ ಸಾಧ್ಯವಾಗಬೇಕಾದರೆ ಜನಸಾಮಾನ್ಯರ ಅನುಕೂಲಕ್ಕೆ ಆಗಿಬರುವಂಥ ನಿಯಮಗಳನ್ನು ಸರಕಾರಗಳು ರೂಪಿಸಬೇಕು. ಹೀಗೆ ಮಾಡದೇ ಹೋದರೆ ಯಾವುದೇ ಸಂಕಲ್ಪದಿಂದಲೂ ಏನನ್ನೂ ಸಾಧಿಸಲು ಆಗುವುದಿಲ್ಲ.
-ಉದಯ ಶಂಕರ ಪುರಾಣಿಕ
ಆರ್ಥಿಕ ತಜ್ಞರು
ಸಾಲ ಮಾಡಿ ತುಪ್ಪ ತಿನ್ನುವ ಮನಃಸ್ಥಿತಿ ಬೇಡ
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕೊರೊನಾ-ಕೋವಿಡ್ ಕಳೆದ ಎರಡು ವರ್ಷಗಳಿಂದ ದುಷ್ಪರಿಣಾಮ ಬೀರದ ರಂಗಗಳಿಲ್ಲ. ಉದ್ಯೋಗ, ವ್ಯವಹಾರ, ಶಿಕ್ಷಣ, ಅರೋಗ್ಯ, ಪ್ರವಾಸೋದ್ಯಮ..ಹೀಗೆ ಎಲ್ಲದರ ಮೇಲೂ ಕೊರೊನಾದ ಕಾಕದೃಷ್ಟಿ ಬಿತ್ತು. ಕೊರೊನಾ ಹಾವಳಿ ಕೊನೆಯಾಯಿತು ಎನ್ನುವಷ್ಟರಲ್ಲೇ ಒಮಿಕ್ರಾನ್ ಹೆಸರಲ್ಲಿ ಆ ಮಹಾಮಾರಿ ಮರಳಿ ಬಂದಿದೆ. ಈ ಸಂದರ್ಭದಲ್ಲಿ ಜನತೆಯ ಮುಂದೆ ಎರಡು ಮುಖ್ಯ ಸವಾಲುಗಳಿವೆ. ಒಂದು: ಹಳಿ ತಪ್ಪಿದ ಶಿಕ್ಷಣ ವ್ಯವಸ್ಥೆಯನ್ನು ಹಳಿಗೆ ಏರಿಸುವುದು ಮತ್ತು ಮೂರಾಬಟ್ಟೆಯಾಗಿರುವ ಉದ್ಯಮ- ವ್ಯವಹಾರವನ್ನು ಸರಿದಾರಿಗೆ ತರುವುದು.
ಕೊರೊನಾದಿಂದ ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿದಿದೆ. ಆನ್‌ಲೈನ್ ಪಾಠದ ವ್ಯವಸ್ಥೆಯಲ್ಲಿ ಕಲಿಸುವಿಕೆ ಮುಂದುವರಿದರೂ ಅದು ಕಾಟಾಚಾರದ ವ್ಯವಸ್ಥೆ ಎನ್ನುವ ದೂರಿನಲ್ಲಿ ಅರ್ಥವಿದೆ. ತರಗತಿಯಲ್ಲಿ ಶಿಕ್ಷಕರು ನಡೆಸುವ ಪಾಠಕ್ಕೆ ಸಾಟಿಯಲ್ಲ. ಬಹುತೇಕ ಮಕ್ಕಳಿಗೆ ಕೈಬರವಣಿಗೆ ಮರೆತುಹೋಗಿದೆ ಅಥವಾ ಕಲಿಸಲಾಗುತ್ತಿಲ್ಲ. ಕಾಲೇಜುಗಳಲ್ಲಿ ಅನ್‌ಲೈನ್ ಶಿಕ್ಷಣ ಅಷ್ಟು ಸರಿ ಅಲ್ಲದಿದ್ದರೂ ಅನಿವಾರ್ಯತೆಗಾಗಿ ಓಕೆ ಎನ್ನಬಹುದು. ಅದರೆ ಮುಂದಿನ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕುವ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿನ ತರಗತಿಯಲ್ಲಿ ಪಾಠದ ವ್ಯವಸ್ಥೆ ತುರ್ತಾಗಿ ಆಗಬೇಕಾಗಿದೆ. ಇದು ಆದ್ಯತೆಯ ಮೇಲೆ ಆಗಬೇಕಾದ ಕೆಲಸ. ಮಕ್ಕಳ ಮುಂದಿನ ಭವಿಷ್ಯವನ್ನು ಆದ್ಯತೆಯ ಮೇಲೆ ನೋಡಬೇಕಾಗಿದೆ.
ದೇಶದಲ್ಲಿ ಇರುವ ನೂರೆಂಟು ರೋಗಗಳಂತೆ ಕೊರೊನಾ ಕೂಡಾ ಒಂದು ರೋಗ ಎಂದು ತಿಳಿದು ವರ್ತಿಸಿದ್ದರೆ, ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ. ವಿಷಾದವೆಂದರೆ, ಈ ನಿಟ್ಟಿನಲ್ಲಿ ತಜ್ಞರು ಎನ್ನುವ ಒಂದು ಸಮೂಹ ಪರಿಸ್ಥಿತಿಯನ್ನು ಕೆಡಿಸಿದ್ದು. ಇದೇ ಕಾರಣದಿಂದ ಯಾರನ್ನೂ ನಂಬದ ಸ್ಥಿತಿಯಲ್ಲಿ ಜನಸಾಮಾನ್ಯರಿದ್ದಾರೆ.
ಬದುಕು ನಿಂತ ನೀರಲ್ಲ. ನಿರಂತರ ಬದಲಾವಣೆ ಜಗದ ನಿಯಮ. ಅಜ್ಜ ನೆಟ್ಟ ಆಲದ ಗಿಡಕ್ಕೆ ಅಂಟಿಕೊಂಡಿರಲು ಸಾಧ್ಯವಿಲ್ಲ. ಆವಶ್ಯಕತೆ, ಅನಿವಾರ್ಯತೆಗೆ ಹೊಂದಿಕೊಂಡು ಬದುಕಿನ ಶೈಲಿಯನ್ನು ಬದಲಿಸಕೊಳ್ಳಬೇಕು. ಈ ಬದಲಾವಣೆ ನಮ್ಮ ಇತಿಮಿತಿಯೊಳಗೆ ಇರಬೇಕು. ಬೆಲೆ ಏರಿಕೆ ಅಥವಾ ಹಣದುಬ್ಬರ ಇಂದು ನಾಗಾಲೋಟದಲ್ಲಿ ಇರುವುದರಿಂದ ದಿನನಿತ್ಯದ ಜೀವನದಲ್ಲಿ ಅರ್ಥಿಕ ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯ. ಸಾಲ ಮಾಡಿ ತುಪ್ಪ ತಿನ್ನುವುದಕ್ಕಿಂತ ಇದ್ದಿದ್ದರಲ್ಲಿ ತೃಪ್ತಿ ಪಡುವ ಮನಃಸ್ಥಿತಿ ಬೆಳೆಸಿಕೊಳ್ಳುವುದು ಮಂತ್ರವಾಗಬೇಕು.
-ರಮಾನಂದ ಶರ್ಮಾ
ಆರ್ಥಿಕ ತಜ್ಞರು
ಏನು ಬಂದರೂ ಎದುರಿಸಬಲ್ಲೆ ಎನ್ನುವುದೇ ಸಂಕಲ್ಪವಾಗಲಿ..
ಮನೋವೈದ್ಯೆಯಾಗಿ, ಹಲವು ಮೆದುಳು- ಮನಸ್ಸುಗಳ ಸಂವಹನದ ಸಂಗತಿಗಳನ್ನು ಪ್ರತಿನಿತ್ಯ ತಿಳಿಯುವ – ನೋಡುವ ಪ್ರಯತ್ನದಲ್ಲಿರುವ ನಾನು, ಹೊಸ ವರ್ಷ ಆರೋಗ್ಯಕರವಾಗಿರಲು-ಆನಂದದಾಯಕವಾಗಿರಲು ಏನೇನು ಪಾಲಿಸಬಹುದು ಎಂಬುದನ್ನು ಸೂಚಿಸುತ್ತಿದ್ದೇನೆ. ಪಾಲಿಸಿ ನೋಡಿ!
-ಅನಿಶ್ಚಿತತೆಯನ್ನು ಜೀವನದ ಭಾಗವಾಗಿ ಸ್ವೀಕರಿಸಿ! ಈ ಹೊಸ ವರ್ಷದ ಮೊದಲನೇ ನಿರ್ಣಯ- ಖಚಿತತೆಗೆ ಕಾಯದೆ, ಅನಿಶ್ಚಿತತೆಯನ್ನು ಸ್ವೀಕರಿಸುವುದು. ಕುತೂಹಲದಿಂದ “”ಮುಂದೆ ಏನಾಗಬಹುದು?” ಎಂದು ಸಿನೆಮಾದಲ್ಲಿ ಹೊಸ ತಿರುವಿಗಾಗಿ ಕಾಯುವಂತೆ ನಾಳೆಯನ್ನು ಎದುರು ನೋಡುವುದು.
– “ಶಾಲೆಯನ್ನು ಮತ್ತೆ ಮುಚ್ಚಬಹುದು’ ಎಂದು ಗಾಬರಿ ಪಡುವ ಬದಲು ಮನೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡುವ ಮಾರ್ಗವನ್ನು ಹುಡುಕಿಕೊಳ್ಳಿ. ಮಕ್ಕಳ ಜೊತೆ ಪೋಷಕರೂ ಕಲಿಯಬಹುದಾದ ಚಟುವಟಿಕೆಗಳೂ ಇವೆ. ಹಾಗಾಗಿ ಆತಂಕ ಬೇಡ. ದೊಡ್ಡ ಪರದೆಯ ಡೆಸ್ಕ್ ಟಾಪ್ ಕಂಪ್ಯೂಟರ್‌ಖರೀದಿಸಿ. ಮಕ್ಕಳ ಆನ್‌ಲೈನ್ ಕಲಿಕೆಗೆ ಈ ಸಾಧನ ಸ್ಮಾರ್ಟ್ ಫೋನ್‌ಗಿಂತ ಬಹು ಉಪಯುಕ್ತ.
-ಕೊರೋನಾದಂತಹ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ರೋಗ ನಿರೋಧಕ ಶಕ್ತಿಗಾಗಿ ವ್ಯಾಕ್ಸೀನ್-ಲಸಿಕೆ ಹಾಕಿಸಿಕೊಳ್ಳುವುದು. ಇತರರೂ ಹಾಕಿಸಿಕೊಳ್ಳುವಂತೆ ಪ್ರೇರೇಪಿಸು ವುದು. ಮಕ್ಕಳಿಗೆ ಮುಂದೆ ಬರಲಿರುವ ಲಸಿಕೆ ಹಾಕಿಸಲು ನಾವು ಸಿದ್ಧರಾಗಿರುವುದು.
– ಇವುಗಳಷ್ಟೇ ಮುಖ್ಯವಾದದ್ದು, ಮಧ್ಯೆ ಮಧ್ಯೆ ಮೊಬೈಲ್‌ನಿಂದ “ಬ್ರೇಕ್’ ತೆಗೆದುಕೊಳ್ಳುವುದು, ಸೋಶಿಯಲ್ ಮೀಡಿಯಾಗಳನ್ನು ಇಂತಿಷ್ಟು ಗಂಟೆಗಳ ಕಾಲ “ಕ್ಲೋಸ್’ ಮಾಡುವುದು ಈ ಹೊಸ ವರ್ಷಕ್ಕೆ ನಾವು ಮಾಡಬಹುದಾದ ಮಹತ್ವದ ನಿರ್ಣಯಗಳು.
ಹೊಸ ವರ್ಷದ ನಿರ್ಣಯವಾಗಿ, ಹಿತಮಿತ ವಾದ, ಅತಿಯಲ್ಲದ ವ್ಯಾಯಾಮವನ್ನು ರೂಢಿಸಿಕೊಳ್ಳಿ. ಹಾಗೆಯೇ ಕುಟುಂಬದೊಂದಿಗೆ ಕಲಹ-ತಮಾಷೆ- ಸಂತಸ-ನಗುವಿನ ಜತೆ ಕಾಲ ಕಳೆಯಲು ಆಗುವಂತೆ ಪ್ರತಿದಿನ “ಇಂತಿಷ್ಟು ಸಮಯ’ ವನ್ನು ಹೊಂದಿಸಿಕೊಳ್ಳಿ.
-ಡಾ| ಕೆ.ಎಸ್. ಪವಿತ್ರ
ಮನೋವೈದ್ಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.